ಆಶ್ವಯುಜ ಪೌರ್ಣಮಿಯ ದಿನದಂದು (26-10-2026) ಭಾರತೀಭವನದಲ್ಲಿ ಆಗ್ರಯಣೇಷ್ಟಿಯು ಶಿವಗುರುಕುಲದ ಪ್ರಾಚಾರ್ಯರೂ, ನಿತ್ಯಾಗ್ನಿಹೋತ್ರಿಗಳೂ ಆದ ಘನಪಾಠೀ ಮಂಜುನಾಥ ಭಟ್ಟ ದಂಪತಿಗಳ ಯಜಮಾನತ್ವದಲ್ಲಿ ಸಂಪನ್ನಗೊಂಡಿತು. ಇದು ಪ್ರತಿ ವರ್ಷದ ಆಶ್ವಯುಜ ಪೌರ್ಣಮಿಯಂದು ಅನುಷ್ಠಾನಗೊಳ್ಳಬೇಕಾದಂತಹ ನಿತ್ಯಕರ್ಮವಾಗಿದೆ.
‘ಶರದಿ ವ್ರೀಹ್ಯಾಗ್ರಯಣಮ್, ವಸಂತೇ ಯವಾಗ್ರಯಣಮ್, ವರ್ಷಾಸು ಶ್ಯಾಮಾಕಾಗ್ರಯಣಮ್’ ಎಂಬುದಾಗಿ ಬೋಧಾಯನ ಸೂತ್ರಾನುಸಾರಿಗಳಿಗೆ ಕಲ್ಪಿಸಿದ್ದಾಗಿದೆ. ಇದು ಪ್ರತ್ಯಕ್ಷವಾದ ಶ್ರುತಿಚೋದಿತ ಕರ್ಮವಾಗಿದೆ.
ಶರದೃತುವಿನಲ್ಲಿ ಹೊಸ ಅಕ್ಕಿಯನ್ನೂ, ವಸಂತಋತುವಿನಲ್ಲಿ ಯವವೆಂಬ ಜವೆಗೋಧಿಯನ್ನೂ, ವರ್ಷಾ ಋತುವಿನಲ್ಲಿ ಶ್ಯಾಮಾಕವೆಂಬ ಸೀಮೆಅಕ್ಕಿಯನ್ನೂ, ಹೀಗೆ ಆಯಾ ಪ್ರದೇಶಗಳಲ್ಲಿ ಆಯಾ ಕಾಲಕ್ಕೆ ಫಲಿಸುವ ಧಾನ್ಯಗಳನ್ನು ಅಗ್ನಿಹೋತ್ರಿಗಳು ಶ್ರೌತಾಗ್ನಿಯಲ್ಲಿ ಇಂದ್ರಾಗ್ನೀ-ವಿಶ್ವೇದೇವರು-ದ್ಯಾವಾಪೃಥಿವೀ ದೇವತೆಗಳಿಗೆ ಸಮರ್ಪಿಸಿ ಅನಂತರ ಮನುಷ್ಯರು ಉಪಯೋಗಿಸಬೇಕು.
ಅಗ್ನಿಹೋತ್ರಿಗಳ ಹೊರತಾಗಿ ಪ್ರತಿ ಗೃಹಸ್ಥನೂ ಸಪತ್ನೀಕನಾಗಿ ಆಯಾ ಋತುವಿನಲ್ಲಿ ಫಸಲಿಗೆ ಬರುವ ಧಾನ್ಯಗಳನ್ನು ತನ್ನ ಗೃಹ್ಯಾಗ್ನಿಯಲ್ಲಿ ಆಗ್ರಯಣ ಸ್ಥಾಲೀಪಾಕ ಎಂಬ ಹೆಸರಿನಲ್ಲಿ ಹೋಮಿಸಿ, ಯಜಮಾನ ದಂಪತಿಗಳು ಹವಿಶ್ಶೇಷವನ್ನು ಪ್ರಾಶನ ಮಾಡಿ ಬ್ರಾಹ್ಮಣಭೋಜನ ಮಾಡಿಸಿ ನಂತರ ಆ ಧಾನ್ಯಗಳನ್ನು ಉಪಯೋಗಿಸಬೇಕು.
ಅದಲ್ಲದೇ ಈ ಆಶ್ವಯುಜ ಪೌರ್ಣಮಿಯನ್ನು ನಮ್ಮ ಹವ್ಯಕರಲ್ಲಿ ಭೂಮಿಹುಣ್ಣಿಮೆ ಎಂಬುದಾಗಿ ಪ್ರತಿಯೊಬ್ಬರ ಮನೆಯ ತೋಟದಲ್ಲಿ ಗದ್ದೆಯಲ್ಲಿ ಅಡಿಕೆಮರ-ಬಾಳೆಮರಗಳಿಗೆ ಮಂಟಪದ ರೀತಿಯಲ್ಲಿ ಸಜ್ಜುಗೊಳಿಸಿ ಭೂತಾಯಿಯನ್ನು ಪೂಜಿಸಿ ಕಡುಬು-ಅಮಟೆಕಾಯಿಯ ವಿಶೇಷ ಪದಾರ್ಥ ಇನ್ನಿತರ ನೈವೇದ್ಯ ಮಾಡಿ ಅಲ್ಲಿಯೇ ಭೋಜನ ಮಾಡಲಾಗುತ್ತದೆ.
ದ್ರಾವಿಡ ದೇಶದಲ್ಲಿ ಹಗಲಿನಲ್ಲಿ ಆಗ್ರಯಣೇಷ್ಟಿ-ಅಗ್ರಯಣಸ್ಥಾಲೀಪಾಕವು ನಡೆದು ಪ್ರದೋಷಕಾಲದಲ್ಲಿ ಪ್ರತಿ ಶಿವಾಲಯದಲ್ಲೂ ಅನ್ನಾಭಿಷೇಕ ವು ನಡೆಯುತ್ತದೆ. ಅಂದರೆ ಅನ್ನದಿಂದಲೇ ಅಭಿಷೇಕ. ಶಿವಲಿಂಗವು ಪೂರ್ತಿಯಾಗಿ ಆವರಿಸುವಷ್ಟು ಅನ್ನವನ್ನು ಅಭಿಷೇಕದ ರೀತಿಯಲ್ಲಿ ಮಾಡಿ ಷೋಡಶೋಪಚಾರ ಪೂಜೆ ಮಾಡಿ ಅದೇ ಅನ್ನವನ್ನು ಪ್ರಸಾದರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುತ್ತದೆ.
ಈ ಆಗ್ರಯಣೇಷ್ಟಿ ಅಥವಾ ಆಗ್ರಯಣಸ್ಥಾಲೀಪಾಕವನ್ನು ಆಶ್ವಯುಜ ಪೌರ್ಣಮಿಯಂದು ಅನುಷ್ಠಾನ ಸಾಧ್ಯವಾಗದಿದ್ದ ಪಕ್ಷದಲ್ಲಿ ಕಾರ್ತಿಕ ಪೌರ್ಣಮಿಯಂದು ಅಥವಾ ರೇವತೀ ನಕ್ಷತ್ರದ ದಿನದಂದು ಆಚರಣೆ ಮಾಡಬೇಕು.
ಪ್ರತ್ಯಕ್ಷವಾಗಿ ಇಷ್ಟಿಯನ್ನೋ ಸ್ಥಾಲೀಪಾಕವನ್ನೋ ಮಾಡಲು ಸಾಧ್ಯವಾಗದಿದ್ದಲ್ಲಿ ಹೊಸಧಾನ್ಯವನ್ನು ಗೋವಿಗೆ ನೀಡಿ ಅದರ ಹಾಲಿನಿಂದ ಸಾಯಂಪ್ರಾತಃ ಔಪಾಸನವನ್ನು ಮಾಡಬೇಕು. ಅದೂ ಸಾಧ್ಯವಾಗದಿದ್ದಲ್ಲಿ ಹೊಸಧಾನ್ಯದಿಂದ ವೈಶ್ವದೇವ ಹೋಮವನ್ನು ಮಾಡಿ ಹತ್ತು ಬ್ರಾಹ್ಮಣರಿಗಾದರೂ ಭೋಜನ ಮಾಡಿಸಿ ನಂತರ ಉಪಯೋಗಿಸಬೇಕು.
ಒಟ್ಟಾರೆಯಾಗಿ ಯಾವುದೋ ಒಂದು ವಿಧಾನದಿಂದ ನವಧಾನ್ಯವನ್ನು ದೇವತೆಗಳಿಗೆ ಸಮರ್ಪಿಸಿಯೇ ಮನುಷ್ಯನು ಉಪಯೋಗಿಸಬೇಕು.
ನೀವು ಗಮನಿಸಿರಬಹುದು, ಬೇರೆ ಬೇರೆ ಜನಾಂಗದವರೂ ಸಹ ತಮ್ಮ ಮನೆಯಲ್ಲೋ ತೋಟದಲ್ಲೋ ಬೆಳೆದ ಹೊಸ ಫಸಲನ್ನು ಅಂದರೆ ಅಕ್ಕಿ-ಬೆಲ್ಲ-ಕಬ್ಬು-ಕಾಯಿ-ಹಣ್ಣುಗಳನ್ನು ದೇವಸ್ಥಾನಕ್ಕೆ ಮತ್ತು ಬ್ರಾಹ್ಮಣರ ಮನೆಗೆ ಕೊಟ್ಟಮೇಲೆಯೇ ಅವರು ಉಪಯೋಗಿಸುತ್ತಾರೆ. ಅವರಲ್ಲೂ ವಿಶಿಷ್ಟ ಸಂಪ್ರದಾಯವಿದೆ.
ಇಂದಿನ ಕಾಲದಲ್ಲಿ ಇದೆಲ್ಲಾ ಸಾಧ್ಯವಾಗದೇ ಹೋದರೂ ನಮ್ಮ ಭವ್ಯಪರಂಪರೆಯ ವಿಶೇಷತೆಯನ್ನಾದರೂ ತಿಳಿದುಕೊಂಡಿರಬೇಕು, ತಿಳಿಯದವರಿಗೆ ತಿಳಿಸಿಕೊಡಬೇಕು.
ಈ ದಿನ ಶ್ರೌತಾಗ್ನಿಯಲ್ಲಿ ಸಾಕ್ಷಾತ್ತಾಗಿ ವೇದೋಕ್ತ ಆಗ್ರಯಣೇಷ್ಟಿಯು ನಮ್ಮ ಮಠದ ಪರಿಸರದಲ್ಲಿ ಅನುಷ್ಠಾನಗೊಂಡಿದ್ದು ಅತ್ಯಂತ ಹೆಮ್ಮೆಯ-ಸಂತೋಷದ ವಿಷಯ.
ಅಯಂ ಧರ್ಮಃ ಉತ್ತರೋತ್ತರಾಭಿವೃದ್ಧಿರಸ್ತು
-ಘನಪಾಠೀ ಸುಚೇತನ ಭಟ್ಟರು ಜಡ್ಡಿನಬೈಲು

