|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಪ್ರೇರಣ ಕಾರ್ಯಾಗಾರ

ಪೆರಾಜೆ: ಹವ್ಯಕ ಮಹಾಮಂಡಲಾಂತರ್ಗತ ಉಪ್ಪಿನಂಗಡಿ ಹವ್ಯಕ ಮಂಡಲ ನೇತೃತ್ವದಲ್ಲಿ ಮಾಣಿಮಠ ಕ್ರಿಯಾಸಮಿತಿಯ ಸಹಕಾರದೊಂದಿಗೆ ಶ್ರೀಮಠದ ಪೆರಾಜೆ ಶಾಖೆಯಲ್ಲಿ ವಿದ್ಯಾರ್ಥಿಗಳಿಗೆ ‘ಪ್ರೇರಣ 2026’ ಕಾರ್ಯಾಗಾರವು ಆಶ್ವಯುಜ ಶುಕ್ಲ ಚತುರ್ದಶಿಯಂದು (ಅ. ೨೫) ನಡೆಯಿತು.

ಸಭಾಧ್ಯಕ್ಷರಾಗಿ ಉಪ್ಪಿನಂಗಡಿ ಹವ್ಯಕ ಮಂಡಲದ ಅಧ್ಯಕ್ಷ ಅರವಿಂದ ದರ್ಭೆ ನಿರ್ವಹಿಸಿದರು. ಮಾಣಿಮಠ ಕ್ರಿಯಾಸಮಿತಿಯ ಅಧ್ಯಕ್ಷ ನಾರಾಯಣ ಭಟ್ ಹಾರಕರೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮಹಾಮಂಡಲ ಮಾತೃ ಪ್ರಧಾನೆ ದೇವಿಕಾ ಶಾಸ್ತ್ರಿ ಉಪಸ್ಥಿತರಿದ್ದರು.

ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರಾದ ಶ್ರೀಶಭಟ್ ಅವರು ‘ಏ.ಐ ಯುಗದಲ್ಲಿ ಯಶಸ್ಸಿಗೆ ಬೇಕಾದ ಪ್ರಮುಖ ಕೌಶಲ್ಯಗಳು’ ಎಂಬ ವಿಷಯದಲ್ಲಿ, ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ‘ಭವಿಷ್ಯದತ್ತ ಹೆಜ್ಜೆ ಅವಕಾಶಗಳು ಮತ್ತು ಸಿದ್ಧತೆ’ ಎಂಬ ವಿಷಯದಲ್ಲಿ, ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ವಿ. ಜಿ. ಭಟ್ ‘ನಮ್ಮ ಪರಂಪರೆ ಮತ್ತು ಮೌಲ್ಯಗಳು’ ವಿಷಯದಲ್ಲಿ ತರಬೇತಿ ನೀಡಿದರು. ಮಹಾಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ವೈ. ವಿ. ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು. ೯೪ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದರು.