ದೀಪಾವಳಿ ಆಚರಣೆ ಪ್ರಾತ್ಯಕ್ಷಿಕೆ

ಸುದ್ದಿ

ಮಂಗಳೂರು: ಕಳೆದ ಭಾನುವಾರದಂದು (10-05-2026) ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾಗಿತ್ತು. ಈಗಿನ್ನೂ ವೈಶಾಖದ ಶಾಖ, ಇದೇನಪ್ಪಾ ದೀಪಾವಳಿ- ಎಂಬ ಪ್ರಶ್ನೆಯೇ? ನಮ್ಮ ಭಾರತೀಯ ಸಂಸ್ಕೃತಿ-ಸಂಸ್ಕಾರಗಳಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಬೇರೂರಿರುವ ಶ್ರೇಷ್ಠ ಜೀವನ ಮೌಲ್ಯಗಳನ್ನು ಹಾಗೂ ನೈಜ ಆನಂದವನ್ನು ಹಬ್ಬದ ಆಚರಣೆಯ ವಿವಿಧ ಚಟುವಟಿಕೆಗಳ ಮೂಲಕ ಶ್ರೀಶಂಕರ ವೇದಪಾಠಶಾಲೆಯ ವಟುಗಳಿಗೆ ಹಾಗೂ ಶ್ರೀಶಂಕರ ಪರಂಪರಾ ಶಿಬಿರದ ಹೆಣ್ಣುಮಕ್ಕಳಿಗೆ ತೋರಿಸಿ ಕಲಿಸುವುದು ಈ ದಿನದ ಉದ್ದೇಶವಾಗಿತ್ತು.

ಮುಂಚಿನ ದಿನವೇ ತಿಳಿಸಿದಂತೆ ಶಿಬಿರಾರ್ಥಿಗಳೆಲ್ಲರೂ ತಮ್ಮ ಮನೆಯಲ್ಲಿಯೇ ಬೆಳಗ್ಗೆ ಎಣ್ಣೆ ಸ್ನಾನ (ತೈಲಾಭ್ಯಂಜನ) ಮಾಡಿ, ದೇವರಿಗೆ ಮತ್ತು ಹಿರಿಯರಿಗೆ ನಮಸ್ಕರಿಸಿ ಸಾಂಪ್ರದಾಯಿಕ ಸುಂದರ ಉಡುಪುಗಳನ್ನು ಉಟ್ಟು ಬಂದರು. ಶಂಕರಶ್ರೀಯಲ್ಲಿ ತಂಗಿದ್ದ ಇಪ್ಪತ್ತಕ್ಕೂ ಮಿಕ್ಕಿದ ವಟುಗಳಿಗೆ ವೇದ ಗುರುಗಳಾದ ಶ್ರೀ ಶಿವಪ್ರಸಾದ ಭಟ್ಟ ಅಮೈ ಅವರೇ ಸ್ವತಃ ಕೈಯಾರೆ ಎಣ್ಣೆ ಹಚ್ಚಿ ಗುರು ವಾತ್ಸಲ್ಯ ಮೆರೆದರು.

ಪರಂಪರಾ ಶಿಬಿರದ ವಿದ್ಯಾರ್ಥಿನಿಯರು ಸುಮನ ನಂದೋಡಿಯವರಿಂದ ದೈನಂದಿನ ಹಾಗೂ ವಿಶೇಷ ದಿನಗಳಲ್ಲಿ ರಂಗೋಲಿಯ ಮಹತ್ತ್ವವನ್ನು ತಿಳಿದು-ಕಲಿತು ‘ಅನಂತಶ್ರೀ ಗೋಶಾಲೆ’ಯ ಮುಂಭಾಗದಲ್ಲಿ ತಾವೇ ಬಣ್ಣದ ಸರಳ ರಂಗೋಲಿಗಳನ್ನು ಹಾಕಿದರು. ಮಾತೆಯರಾದ ಸುಮಾ ರಮೇಶ್ ಮತ್ತು ಅನುಪಮಾ ಕಾಶೀಮಠ ಇವರುಗಳಿಂದ ಹೂವಿನ ಮಾಲೆ ಕಟ್ಟುವುದನ್ನು ಕಲಿತು ಸಾಯಂಕಾಲದ ಗೋಪೂಜೆಗೆ ಬೇಕಾಗುವಷ್ಟು ಹೂಮಾಲೆಗಳನ್ನು ತಯಾರಿಸಿದರು. ವಿಶೇಷವೇನೆಂದರೆ ಮಕ್ಕಳು ತಮ್ಮ ಮನೆಯಂಗಳದಲ್ಲಿಯೇ ಬೆಳೆದ ವಿವಿಧ ಹೂಗಳನ್ನು ತಂದು ಮಾಲೆಗೆ ಉಪಯೋಗಿಸಿದ್ದು! ಇದಲ್ಲದೆ ಹತ್ತಿಯ ಬತ್ತಿಗಳನ್ನು ಇಟ್ಟು ಎಣ್ಣೆ ಹಾಕಿ ನೂರಾರು ಹಣತೆಗಳನ್ನು ತಯಾರಾಗಿ ಇರಿಸಿದರು.

ಖ್ಯಾತ ವಿದ್ವಾಂಸ ಡಾ. ವಿನಾಯಕ ಭಟ್ಟ ಗಾಳಿಮನೆ ಇವರು ಶಿಬಿರದ ಮಕ್ಕಳಿಗೆ ಜಂಟಿ ತರಗತಿ ತೆಗೆದುಕೊಂಡು ಸಂಸ್ಕಾರ-ಸಂಸ್ಕೃತಿಗಳ ಹಿನ್ನೆಲೆ ಹಾಗೂ ಅವುಗಳ ಆಚರಣೆಗಳ ಮಹತ್ತ್ವವನ್ನು ತಿಳಿಸಿದರು. ಸಾಯಂಕಾಲ ಗಂಟೆ 4 ರಿಂದ 6 ರ ತನಕ ರಾಮಾಯಣದ ‘ಪಾದುಕಾ ಪ್ರದಾನ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಈ ಮೂಲಕ ಮಕ್ಕಳಿಗೆ ಕರಾವಳಿಯ ವಿಶಿಷ್ಟ ಪಾರಂಪರಿಕ ಕಲೆಯ ಪರಿಚಯ ಹಾಗೂ ಬೌದ್ಧಿಕ ರಂಜನೆ ಜೊತೆಜೊತೆಗೆ ಆದವು. ಭರತ-ರಾಮರ ಸಂವಾದದಲ್ಲಿ ಅವರ ನಡುವಿನ ಶ್ರೇಷ್ಠ ಭ್ರಾತೃ ಸಂಬಂಧ, ಧರ್ಮ ಜಿಜ್ಞಾಸೆ, ಕುಟುಂಬದ ಜೀವನ ಮೌಲ್ಯಗಳು, ಪಾದುಕೆಗಳ ಮಹತ್ತ್ವ ಇತ್ಯಾದಿ ಅನೇಕ ವಿಷಯಗಳ ಅರಿವು ಪುಟಾಣಿಗಳಿಗೆ ಮೂಡುವಂತಾಯಿತು.

ಮುಸ್ಸಂಜೆಯ ಹೊತ್ತಿಗೆ ಗೋಶಾಲೆ ಹಾಗೂ ಸುತ್ತಲಿನ ಪರಿಸರವನ್ನು ಶಿಬಿರದ ಮಕ್ಕಳು ಸ್ಥಳೀಯ ಗೋಪಾಲಕರೊಂದಿಗೆ ಸಹಕರಿಸಿ ಸಂಪೂರ್ಣ ಸ್ವಚ್ಛಗೊಳಿಸಿ ಅಲಂಕರಿಸಿದ್ದರು. ಅನಂತರ ಶಿಬಿರದ ಗುರುಗಳ ನೇತೃತ್ವದಲ್ಲಿ ವಟುಗಳ ಗೋಸೂಕ್ತ ಹಾಗೂ ಇತರ ಮಂತ್ರಗಳ ಉದ್ಘೋಷಗಳೊಂದಿಗೆ ವಿಧಿವತ್ತಾಗಿ ಗೋಪೂಜೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರು ಭಜನೆ ಹಾಡಿದರು. ಹಣತೆಗಳನ್ನು ಹಚ್ಚಿ ಸಾಲಾಗಿ ಸುಂದರವಾಗಿ ಇರಿಸಲಾಯಿತು. ಅದ್ದೂರಿಯ ಮಂಗಳ ಗೋ ಆರತಿಯೂ ಸಂಪನ್ನಗೊಂಡಿತು. ಮಕ್ಕಳು ಮತ್ತು ಮಾತೆಯರು ಗೋವುಗಳಿಗೆ ಅರಿಶಿನ ಕುಂಕುಮ ಹಚ್ಚಿದರು, ಹೂಮಾಲೆ ಹಾಕಿದರು, ವಿಶೇಷವಾಗಿ ತಯಾರಿಸಿದ ಸೌತೆಕಾಯಿ ಕೊಟ್ಟಿಗೆ (ಕಡುಬು) ಸಹಿತ ತಿಂಡಿಗಳನ್ನು ಗೋವುಗಳಿಗೆ ತಿನ್ನಿಸಿದರು. ಉಪಸ್ಥಿತರಿದ್ದ ಸರ್ವರೂ ಗೋಮಾತೆಗೆ ಭಕ್ತಿ ಹಾಗೂ ಕೃತಜ್ಞತಾ ಭಾವದಿಂದ ನಮಸ್ಕರಿಸಿದರು. ಇತಿಮಿತಿಯಲ್ಲಿ ಜಾಗ್ರತೆಯಿಂದ ಹಿತವಾಗಿ ಪಟಾಕಿಗಳನ್ನು ಸಿಡಿಸಿದಾಗ ಸಂಭ್ರಮಿಸಿದ ಮಕ್ಕಳ ಸಂತೋಷ ಮಾಧವನನ್ನು ತಲಪಿತ್ತು. ಕೊನೆಯಲ್ಲಿ ಎಲ್ಲರೂ ಭಕ್ಷ್ಯ ರಸಾಯನ ಸಹಿತ ಹೊಟ್ಟೆ ತುಂಬ ರುಚಿಯಾದ ಉಪಾಹಾರವನ್ನು ಸವಿದರು. ಜೊತೆಗೆ ಗಂಟಲಿಗೆ ಆರೋಗ್ಯಕರ ಕಾಳುಮೆಣಸಿನ ಬೆಲ್ಲದ ಪಾನಕವನ್ನು ಎಲ್ಲರೂ ಕುಡಿದದ್ದೇ ಕುಡಿದದ್ದು!

ಮರುದಿನ ಶಿಬಿರದ ತರಗತಿಯಲ್ಲಿ ಹಿಂದಿನ ದಿನದ ದೀಪಾವಳಿಯ ಆಚರಣೆಯ ಮುಖ್ಯ ಕಲಿಕೆಗಳನ್ನು ಮೆಲುಕು ಹಾಕಿ, ಹಬ್ಬಕ್ಕೆ ಸಂಬಂಧಿಸಿದ ನರಕಾಸುರ ವಧೆ, ಶ್ರೀರಾಮ ಪಟ್ಟಾಭಿಷೇಕ, ಸಮುದ್ರ ಮಂಥನ- ಲಕ್ಷ್ಮೀ ಅವತರಣ, ಬಲಿ ಚಕ್ರವರ್ತಿ, ಗೋವರ್ಧನ ಗಿರಿಧಾರಿ ಇತ್ಯಾದಿ ಪುರಾಣ ಕಥೆಗಳನ್ನು ಹೇಳಿ ಅವುಗಳ ಸಂದೇಶಗಳು ಇಂದಿನ ಆಧುನಿಕ ಜೀವನಕ್ಕೂ ಎಷ್ಟು ಪ್ರಸ್ತುತ ಎಂಬುದನ್ನು ಮಕ್ಕಳಿಗೆ ವಿವರಿಸಲಾಯಿತು.

Leave a Reply

Your email address will not be published. Required fields are marked *