ಪೆರ್ಲ: ಬಜಕ್ಕೂಡ್ಲಿನ ಅಮೃತಧಾರಾ ಗೋಶಾಲೆಯಲ್ಲಿ ವೈಶಾಖ ಅಮಾವಾಸ್ಯೆಯಂದು (16-05-2026) ‘ಶನಿನಮನ -ತಾಪಶಮನ’ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು. ಅಮಾವಾಸ್ಯೆ-ಶನಿವಾರಗಳ ಸಂಗಮವಾದ ಈ ಶನಿಜಯಂತಿಯ ಕಾಲ ಅಪರೂಪದಲ್ಲಿ ಅಪರೂಪ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ-ಆಶೀರ್ವಾದಗಳೊಂದಿಗೆ ಶನೈಶ್ಚರನ ಈ ಮಹೋಪಾಸನೆ ನೆರವೇರಿತು.

ಗುರುವಂದನೆಯೊಂದಿಗೆ ಆರಂಭಗೊಂಡು ಸ್ವಸ್ತಿ ಪುಣ್ಯಾಹ, ಬಾಲಗಣಪತಿ ಹವನ ನಡೆದವು. ಬೆಳಗ್ಗೆ 6:06 ಗಂಟೆಯಿಂದ ಗಣಪತಿ ಅಥರ್ವಶಿರ್ಷ ಪಾರಾಯಣ ಪ್ರಾರಂಭಗೊಂಡಿತು. 24 ಗಂಟೆಗಳ ನಿರಂತರ ಪಾರಾಯಣ ಮರುದಿನದ ಬೆಳಗ್ಗೆ ಸೂರ್ಯೋದಯಕ್ಕೆ ಸಮಾಪನಗೊಂಡಿತು.
ಗಣಪತಿ ಅಥರ್ವಶೀರ್ಷ ಹವನ, ಶನಿ ಕಲ್ಪೋಕ್ತ ಪೂಜೆ, ಗ್ರಹಶಾಂತಿ, ಶನಿಶಾಂತಿ, ಪೂರ್ಣ ನವಗ್ರಹಶಾಂತಿ ಮುಂತಾದ ಉಪಾಸನೆಗಳು ನಡೆದವು. ಭಕ್ತರು ಸುವಸ್ತುಗಳ ಮಹಪೂರವನ್ನೇ ಸಮರ್ಪಿಸಿದರು. ವಿಶೇಷವಾಗಿ ‘ಮುಷ್ಟಿ ಎಳ್ಳು’ ಸಮರ್ಪಣೆಯಲ್ಲಿ ಭಕ್ತರು ಭಾಗಿಯಾದರು.
ಕಾರ್ಯಕ್ರಮದಲ್ಲಿ ನಿರಂತರ ಫಲಾಹಾರ-ಪಾನೀಯ ವ್ಯವಸ್ಥೆಯಿತ್ತು. ಕಾರ್ಯಕರ್ತರ ಅವಿರತ ಶ್ರಮದಿಂದ ಈ ಮಹೋಪಾಸನೆ ನೆರವೇರಿತು. ಮಳೆಯ ತಂಪಾದ ವಾತಾವರಣದಲ್ಲೂ ಸಾಗರೋಪಾದಿಯಲ್ಲಿ ಉಪಸ್ಥಿತರಿದ್ದರು.