ಮಂಗಳೂರು: ‘ಮನುಷ್ಯರಾಗಿ ಹುಟ್ಟಿದ ಮೇಲೆ ಭಗವಂತನ ಅನುಗ್ರಹ ಪಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ. ವೇದಾಧ್ಯಯನದ ಮೂಲಕ ವಟುಗಳು ಉತ್ತಮ ಜೀವನ ನಡೆಸುವಂತಾಗಬೇಕು’ ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಕೆ. ವಿ. ಶ್ರೀಧರ ಅಡಿಗ ಹೇಳಿದರು.
ಅವರು ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯಲ್ಲಿ ಅಧಿಕ ಜ್ಯೇಷ್ಠ ಬಿದಿಗೆಯಂದು (17-05-2026) ವಿಷ್ಣುಗುಪ್ತ ವಿಶ್ವವಿದ್ಯಾಪೀಠ – ಭಾರತೀ ಎಜುಕೇಷನ್ ಟ್ರಸ್ಟ್ – ಶಂಕರಶ್ರೀ ವಸಂತ ವೇದಪಾಠಶಾಲೆ ಸಮಿತಿ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜರಗಿದ ಒಂದು ತಿಂಗಳ ವಸಂತ ವೇದಪಾಠಶಾಲೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ‘ಶ್ರೀರಾಮನ ಆದರ್ಶ, ನಡೆ, ನುಡಿ ಅಳವಡಿಸಿಕೊಳ್ಳಬೇಕು. ಮಾನವನಾಗಿ ಸಂಸ್ಕಾರಯುತ ಜೀವನ ನಡೆಸಬೇಕು. ಸಮಾಜಕ್ಕೆ ಮಾದರಿಯಾಗಿರಬೇಕು’ ಎಂದು ಅವರು ಹೇಳಿದರು.
ವಿದ್ವಾಂಸರಾದ ಡಾ| ವಿನಾಯಕ ಭಟ್ ಗಾಳಿಮನೆ ಮಾತನಾಡಿ ‘ಒಂದು ತಿಂಗಳಲ್ಲಿ ಕಲಿತ ವೇದಪಾಠವನ್ನು ಮನೆಯಲ್ಲಿ ನಿರಂತರವಾಗಿ ಪಠಿಸಬೇಕು. ಹೆತ್ತವರು ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು’ ಎಂದರು. ವೇ| ಮೂ| ಅಮೈ ಶಿವಪ್ರಸಾದ ಭಟ್ ಅವರು ವೇದಪಾಠಶಾಲೆಯ ಬಗ್ಗೆ ಮತ್ತು ಅನಂತ ಸುಬ್ರಹ್ಮಣ್ಯ ಶರ್ಮ ಅವರು ಪರಂಪರಾ ಶಿಬಿರದ ಬಗ್ಗೆ ನುಡಿದರು.
ಮಂಗಳೂರು ಏನಪೋಯ ವೈದ್ಯಕೀಯ ವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸೆ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ ಭಟ್ ಪೆಲತ್ತಡ್ಕ, ಆಶಾಗೌರಿ ಕೆ. ಎಸ್. ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಗುರು ವೇದಮೂರ್ತಿ ಅಮೈ ಶಿವಪ್ರಸಾದ ಭಟ್, ಗೋವಿಂದ ಜೋಯಿಸ ಚವರ್ಕಾಡು, ಅನಂತಸುಬ್ರಹ್ಮಣ್ಯ ಶರ್ಮ ಮತ್ತು ಭಾಸ್ಕರ ಹೊಸಮನೆ ಅವರನ್ನು ಗೌರವಿಸಲಾಯಿತು. ಹೆತ್ತವರ ಪರವಾಗಿ ಹರೀಶ್ ಕೇವಳ ಅನಿಸಿಕೆ ವ್ಯಕ್ತಪಡಿಸಿದರು. ವೇದಪಾಠಶಾಲೆಗೆ ಮಂಗಳೂರು ಹವ್ಯಕ ಮಂಡಲ, ಮಂಗಳೂರು ಹವ್ಯಕ ಸಭಾ, ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನಸಭಾ, ರುದ್ರ ಸಮಿತಿ, ನಂತೂರು ಶ್ರೀಭಾರತೀ ಸಮೂಹ ಸಂಸ್ಥೆ, ಶ್ರೀಭಾರತೀ ಸೌಹಾರ್ದ ಸಹಕಾರಿ ನಿಗಮಗಳು ಸಹಕಾರ ನೀಡಿದ್ದವು.
ಕಾರ್ಯಕ್ರಮಕ್ಕೆ ಶ್ರೀಭಾರತೀ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.