|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಹೃದಯದಲ್ಲಿರಲಿ ಲಲಿತೆ ಯ ಗುರು ತು | ನವರಾತ್ರ ನಮಸ್ಯಾ 2026 – ದಿನ 10

ಬೆಂಗಳೂರು: ತ್ರಿಪುರಸುಂದರಿಯ ಸಾನ್ನಿಧ್ಯದಲ್ಲಿ ಇಂದ್ರನೂ ಪಕ್ವನಾಗುತ್ತಾನೆ. ಇದು ಲಲಿತೋಪಾಖ್ಯಾನದಲ್ಲಿ ಮಾತ್ರ ಕಾಣಬಹುದಾದ ಸನ್ನಿವೇಶ. ಸರ್ವಸ್ವವನ್ನೂ ಸಮರ್ಪಿಸಿದ ಇಂದ್ರನಿಗೆ ದೇವಿ ಒಲಿದು ಅನುಗ್ರಹ ಮಾಡುತ್ತಾಳೆ ಎಂದು ರಾಜರಾಜೇಶ್ವರಿಯು ಭಂಡಾಸುರ ವಧೆಗೆ ಹೊರಟ ರೋಚಕ ಕಥಾನಕವನ್ನು ಪರಮಪೂಜ್ಯ ಶ್ರೀಸಂಸ್ಥಾನದವರು ವ್ಯಾಖ್ಯಾನಿಸಿದರು.

ಗಿರಿನಗರದಲ್ಲಿರುವ ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ನವರಾತ್ರ ನಮಸ್ಯಾ ಕಾರ್ಯಕ್ರಮದಲ್ಲಿ ಆಶ್ವಯುಜ ಶುಕ್ಲ‌ ನವಮಿಯಂದು (21-10-2026) ಲಲಿತೋಪಾಖ್ಯಾನದ ಕೊನೆಯ ಪ್ರವಚನವನ್ನು ಅನುಗ್ರಹಿಸಿದ ಪರಮಪೂಜ್ಯರು ಲಲಿತಾಸಹಸ್ರನಾಮದಲ್ಲಿ ಬರುವ ಅನೇಕ ನಾಮಗಳ‌ ಹಿಂದಿರುವ ಸನ್ನಿವೇಶಗಳನ್ನು ವಿವರಿಸಿದರು‌.

ರಾಜರಾಜೇಶ್ವರಿಯನ್ನು ವಿವಾಹವಾಗಲು ಶಿವನು ಕೂಡ ಚಂದದ ಅಲಂಕಾರ ಮಾಡಿಕೊಂಡ ಅಪರೂಪ ಸಂದರ್ಭ ಲಲಿತೋಪಾಖ್ಯಾನದಲ್ಲಿ ಮಾತ್ರ ಕಾಣುವಂಥದ್ದು. ಹಾಗಾಗಿ ಅವನಿಗೆ ಸುಂದರೇಶ್ವರ ಎಂಬ ಹೆಸರೂ ಬಂದಿದೆ. ಅವನನ್ನು ನೋಡಿದ ದೇವಿ ಎಲ್ಲವನ್ನೂ ಮರೆಯುತ್ತಾಳೆ. ಬ್ರಹ್ಮನಿಂದ ನಿಧಾನಕ್ಕೆ ಎಚ್ಚರಗೊಂಡವಳು ನಕ್ಕು ಹಾರವನ್ನು ಮೇಲೆ ಎಸೆದಾಗ, ಅದು ಕೆಳಗಿರುವ ಸಾವಿರಾರು ದೇವತೆಗಳ ಪೈಕಿ ಶಿವನ ಕೊರಳಿಗೆ ಬಿದ್ದಿತು. ಬ್ರಹ್ಮನ ಕೋರಿಕೆಯಂತೆ ನಾರಾಯಣನು ಕಾಮೇಶ್ವರಿಯನ್ನು ಕಾಮೇಶ್ವರನಿಗೆ ಧಾರೆ ಎರೆದುಕೊಟ್ಟು ವಿವಾಹ ಮಾಡಿಸಿದ ಎಂದು ಮಾತೆ ರಾಜರಾಜೇಶ್ವರಿಯ ವಿವಾಹದ ಸಂದರ್ಭವನ್ನು ವರ್ಣಿಸಿದರು.

ಅನಂತರ ಭಂಡಾಸುರನ ವಿರುದ್ಧ ಯುದ್ಧಕ್ಕೆ ಹೊರಟ ಲಲಿತೆಯ ಸೈನ್ಯದ ಶಕ್ತಿದೇವಿಯರ ಬಗ್ಗೆ ತಿಳಿಸಿಕೊಟ್ಟರು. ಪೋತ್ರಿಣೀ (ದಂಡನಾಥಾ) ದೇವಿಯನ್ನು ಸ್ತುತಿಸಿದರೆ ವಜ್ರಪಂಜರದ ರಕ್ಷೆ ನಮಗೆ ಸಿಗುತ್ತದೆ, ಶ್ಯಾಮಲಾದೇವಿಯನ್ನು (ಮಂತ್ರಿಣೀ) ಸ್ತುತಿಸಿದರೆ ಮೂರು ಲೋಕಗಳೂ ಅವರ ವಶದಲ್ಲಿರುತ್ತವೆ ಎಂದು ರಾಜರಾಜೇಶ್ವರಿಯ ಸೇವೆಯಲ್ಲಿರುವ ಎರಡು ದೇವಿಯರ ಬಗ್ಗೆ ವರ್ಣಿಸಿದರು. ಬಾಲಾ ತ್ರಿಪುರಸುಂದರಿಯ ಮುಗ್ಧ ಹಠವನ್ನು ಹಾಗೂ ಭಂಡಾಸುರನ ಮಕ್ಕಳ ಮೇಲಿನ ಅವಳ ವಿಕ್ರಮವನ್ನು ವಿವರಿಸಿದರು. ನಕುಲೀಶ್ವರೀ, ತಿರಸ್ಕರಣೀ, ಜ್ವಾಲಾಮಾಲಿನೀ, ಮಹಾಗಣೇಶ ಮುಂತಾದ ಅನೇಕ ಶಕ್ತಿಗಳ ಬಗ್ಗೆ ತಿಳಿಸಿದರು.

ಭಂಡಾಸುರನ ವಿರುದ್ಧ ರಾಜರಾಜೇಶ್ವರಿಯ ಸೈನ್ಯ ಯುದ್ಧಕ್ಕೆ ಹೊರಟಾಗ ಭಂಡಾಸುರನ ಶೂನ್ಯಕ ನಗರದಲ್ಲಿ ಉತ್ಪಾತಗಳಾದವು ಎಂದು ತಿಳಿಸುತ್ತಾ ‘ಪ್ರಕೃತಿ ತುಂಬಾ ವಾತ್ಸಲ್ಯಮಯಿ. ಆಪತ್ತು ಬಂದಾಗ ಕೇವಲ‌ ಒಳ್ಳೆಯವರಿಗೆ ಮಾತ್ರವಲ್ಲ, ಕೆಡುಕರಿಗೂ ಅದು ಸೂಚಿನೆ ನೀಡುತ್ತದೆ. ಸೂಚನೆ ಇಲ್ಲದೆ ಯಾವ ಕಷ್ಟವೂ ಬರುವುದಿಲ್ಲ. ಪರಿಹಾರ ಕೂಡ ಸೂಚನೆಯಲ್ಲಿಯೇ ಇರುತ್ತದೆ.‌ ಅದನ್ನು ನೋಡುವ ಕಣ್ಣು ಕಿವಿ ನಮಗಿರಬೇಕು’ ಎಂದು ನುಡಿದರು‌. ‘ಆ ಸಂದರ್ಭದಲ್ಲಿ ಶುಕ್ರಾಚಾರ್ಯರು ಇರುವ ಉಲ್ಲೇಖ ಕಾಣುವುದಿಲ್ಲ. ಭಂಡಾಸುರ ಅವರನ್ನು ಅವಮಾನಿಸಿದ್ದರಿಂದ ಅವರು ಅಲ್ಲಿಲ್ಲದರಿಬಹುದು. ಕೆಡುವ ಕಾಲದಲ್ಲಿಯೇ ಗುರುವಿನಿಂದ ದೂರವಾಗುವ ಸಂದರ್ಭ ಬರುವುದು’ ಎಂದು ಎಚ್ಚರಿಸಿದರು.

ಶ್ರೀಚಕ್ರ ರಥಕ್ಕೆ ನಾಲ್ಕು ವೇದಗಳೇ ನಾಲ್ಕು ಚಕ್ರಗಳು. ಧರ್ಮ, ಅರ್ಥ, ಕಾಮ, ಮೋಕ್ಷಗಳೇ ನಾಲ್ಕು ಕುದುರೆಗಳು. ಆನಂದವೇ ಧ್ವಜ. ಹತ್ತು ಯೋಜನ ಎತ್ತರ, ನಾಲ್ಕು ಯೋಜನ ವಿಸ್ತರ ಇರುವ ಇಂಥ ಅದ್ಭುತ ರಥವನ್ನೇರಿ ರಾಜರಾಜೇಶ್ವರಿಯು ಯುದ್ಧಕ್ಕೆ ಹೊರಟಳು ಎಂದು ಲಲಿತೆಯ ಶ್ರೀಚಕ್ರರಥವನ್ನು ವರ್ಣಿಸಿದರು.

ಇಂಥ ಸಂದರ್ಭಗಳನ್ನು ಪುಸ್ತಕದಲ್ಲಿ ಓದಬೇಕು. ದೂರದರ್ಶನದಲ್ಲಿ ಇಂಥದ್ದನ್ನು ನೋಡಿದರೆ ಅದು ನಮ್ಮ ಕಲ್ಪನೆಯನ್ನೇ ಕೊಲ್ಲುತ್ತದೆ. ಕಲ್ಪನೆಗಿರುವ ಸೊಬಗು ದೂರದರ್ಶನದ‌‌‌ ದೃಶ್ಯಗಳಿಗೆ ಇರುವುದಿಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ ಆಂಜನೇಯನ ಸ್ವರೂಪ ತುಂಬಾ ಅದ್ಭುತವಾಗಿರುವುದು. ಆದರೆ ದೂರದರ್ಶನದಲ್ಲಿ‌ ನೋಡುವ ರೂಪದಿಂದ ಆ‌‌ ಕಲ್ಪನೆಯೇ ಹೊರಟು ಹೋಗುತ್ತದೆ ಎಂದು ತಿಳಿಸಿದರು.

ಯುದ್ಧದ ಕೊನೆಯಲ್ಲಿ ರಾಜರಾಜೇಶ್ವರೀ ಮಹಾಕಾಮೇಶ್ವರಾಸ್ತ್ರದ ಮೂಲಕ ಭಂಡಾಸುರನನ್ನು ಸಂಹಾರ ಮಾಡುತ್ತಾಳೆ. ಶಿವನ ತಂಟೆಗೆ ಹೋದ ಮನ್ಮಥನನ್ನು ಶಿವನು ಸುಟ್ಟು ಬೂದಿಯಾಗಿಸಿದ್ದ. ಈಗ ಆ ಬೂದಿಯಿಂದ ಎದ್ದುಬಂದ ಭಂಡಾಸುರನನ್ನೂ ಪುನಃ ಶಿವನೇ (ಕಾಮೇಶ್ವರ) ಬೂದಿ ಮಾಡಿದ. ದಾರಿ ತಪ್ಪಿದ ಕಾಮವನ್ನು ಶಿವ ದಂಡಿಸಿದ. ಕಾಮ ಶುದ್ಧ ಆಗಬೇಕು‌.‌ ಧರ್ಮಕ್ಕೆ ವಿರುದ್ಧವಲ್ಲದ ಕಾಮ ತಾನೇ ಎಂದು ಕೃಷ್ಣ ನುಡಿದಿದ್ದಾನೆ. ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ಬರುವ ಕಾಮ ಇರಬೇಕು. ಆದರೆ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳಲ್ಲಿ ಬರುವ ಕಾಮ‌ ಇರಬಾರದು ಎಂದು ನುಡಿದರು.

ಭಂಡಾಸುರನ ಸಂಹಾರದ ಅನಂತರ ಸಪ್ತರ್ಷಿಗಳು ವೇದಮಂತ್ರಗಳ ಮೂಲಕ ದೇವಿಯನ್ನು ಸ್ತುತಿ ಮಾಡುತ್ತಾರೆ. ಆದರೆ ದೇವಿ ಅದನ್ನು ‘ಇದು ನಾನು ಮಾಡಿದ್ದಲ್ಲ, ಇವರೆಲ್ಲ ಸೇರಿ ಮಾಡಿದ್ದು’ ಎಂಬ ಭಾವದಿಂದ ವಿನಯದಿಂದ‌ ತಲೆಬಾಗಿ ಸ್ವೀಕರಿಸುತ್ತಾಳೆ. ದೇವಿಗೇ ಈ ಭಾವ ಇರುವಾಗ, ಅಲ್ಪ ಕೆಲಸ ಮಾಡಿ ನಾವೇಕೆ ಗರ್ವ ಪಡಬೇಕು ಎಂದು ನೀತಿಯನ್ನು ತಿಳಿಸಿಕೊಟ್ಟರು.

ಕಾಮವನ್ನು ಬಿಡಬೇಕು; ಸಾಧ್ಯವಾಗದಿದ್ದರೆ ಅದನ್ನು ಮುಕ್ತಿಯಲ್ಲಿ ಇಡಬೇಕು. ಮುಕ್ತಿಕಾಮನಾಗಬೇಕು. ಸಂಗವನ್ನು ಬಿಡಬೇಕು; ಸಾಧ್ಯವಾಗದಿದ್ದರೆ ಸಜ್ಜನರ ಸಂಗ ಮಾಡಬೇಕು ಎಂದು ಕಥಾತಾತ್ಪರ್ಯವನ್ನು ಉಪದೇಶಿಸಿದರು‌.

**

ಶತಚಂಡಿಕಾಯಾಗ

ಒಂಭತ್ತು ದಿನಗಳಿಂದ ವಿವಿಧ ಯಾಗಗಳ ಮೂಲಕ ದೇವ್ಯುಪಾಸನೆ ನಡೆದಿದ್ದು, ಇಂದು ಶತಚಂಡಿಕಾಯಾಗ ಸಮರ್ಪಣೆಗೊಂಡಿತು. ಕಾಂಚನ ಶ್ರುತಿರಂಜನೀ ಹಾಗೂ ರಾಜಶೇಖರ ಹಿಲ್ಯಾರು ದಂಪತಿಗಳು ಯಜಮಾನತ್ವ ವಹಿಸಿದ್ದರು. ದುರ್ಗಾಮಂಟಪದಲ್ಲಿ ಪೂಜೆಗೊಂಡ ರಾಜರಾಜೇಶ್ವರಿಯ ಮೃಣ್ಮಯ ವಿಗ್ರಹವನ್ನು ಭವ್ಯ ಮೆರವಣಿಗೆಯ ಮೂಲಕ ವಿಸರ್ಜನೆ ಮಾಡಲಾಯಿತು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ ದಂಪತಿಗಳು ಉಪಸ್ಥಿತರಿದ್ದು ಶ್ರೀಸಂಸ್ಥಾನದವರಿಂದ ಆಶೀರ್ವಾದ ಪಡೆದರು. ದಿನಪ್ರಧಾನರಾಗಿ ಮುರಳಿಕೃಷ್ಣ ಕುಕ್ಕುಪುಣಿ ನಿರ್ವಹಿಸಿದರು.