|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ತುಪ್ಪದಿಂದ ಬದುಕು ಬಂಗಾರ | ‘ಅನ್ನಂ ಬ್ರಹ್ಮ’ ಪ್ರವಚನ – 60

ಅಶೋಕೆ: ಮಿಶ್ರ ತಳಿ ಹಸುವಿನ ಹಾಲು ಅಹಿತ ಎಂಬುದಾಗಿ ಇಂದಿನ ವಿಜ್ಞಾನವೂ ಒಪ್ಪಿದೆ. ಆದರೆ ದುಡ್ಡಿನ ಹಿಂದೆ ಜಗತ್ತು ಓಡುತ್ತಿರುವುದರಿಂದ ಅದನ್ನು ಒಪ್ಪಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾದ್ರಪದ ಹುಣ್ಣಿಮೆಯಂದು (26-09-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಆಧುನಿಕ ವಿಜ್ಞಾನವೂ ಕೂಡ
ದೇಶಿ ಗೋವು ಹಾಗೂ ಮಿಶ್ರತಳಿಯ ಹಾಲು, ತುಪ್ಪಗಳನ್ನು ವಿಶ್ಲೇಷಿಸಿದ್ದು, ದೇಶಿ ಗೋವಿನ ಎ2 ಹಾಲು ಮತ್ತು ಅದರ ತುಪ್ಪು ಶ್ರೇಷ್ಠ ಎಂಬುದಾಗಿ ದೃಢೀಕರಿಸಿವೆ. ಗೋವಿನ ಉತ್ಪನ್ನಗಳು ಜೀರ್ಣಕ್ರಿಯೆಗೆ ಪೂರಕವಾದರೆ, ಮಿಶ್ರತಳಿಯ ಉತ್ಪನ್ನಗಳು ಜೀರ್ಣಕ್ರಿಯೆಗೆ ಸಹಕಾರಿಯಲ್ಲ. ಆಧುನಿಕ ವಿಜ್ಞಾನ ಅದರ ಭಾಷೆಯಲ್ಲಿ ಹೇಳಿದರೆ, ಆಯುರ್ವೇದ ಅಗ್ನಿದೀಪಕ, ಲಘು, ಪಾಚನ ಇತ್ಯಾದಿಯಾಗಿ ಅದರ ಭಾಷೆಯಲ್ಲಿ ಹೇಳಿದೆ. ದೇಶಿ ಗೋವು ಹಾಗೂ ಮಿಶ್ರ ತಳಿಯ ಹಸುವಿನ ವಿಷಯದಲ್ಲಿ ಇವೆರಡೂ ಒಂದನ್ನೇ ಹೇಳುತ್ತಿವೆ ಎಂದರು.

ಇಂದು ಎಷ್ಟೋ ಆಯುರ್ವೇದ ಔಷಧಗಳಲ್ಲಿ ಮಿಶ್ರ ತಳಿ ಹಸುವಿನ ತುಪ್ಪವನ್ನು ಬಳಸುತ್ತಿರುವುದರಿಂದ, ಅದು ಪರಿಣಾಮಕಾರಿಯಲ್ಲ ಎಂಬ ಮಾತು ಆಗಾಗ ಕೇಳಿಬರುತ್ತದೆ. ಔಷಧ ತಯಾರಿಕೆಯಲ್ಲಿ ಯೋಗವಾಹಕವಾದ ದೇಶೀ ತುಪ್ಪವನ್ನು ಬಳಸದಿರುವುದೇ ಇದಕ್ಕೆ ಕಾರಣ. ಬದುಕನ್ನು ಬಂಗಾರವಾಗಿಸಲು, ಜೀವವನ್ನು ದೇವರನ್ನಾಗಿ ಮಾಡಲು ತುಪ್ಪ ಸಾಕು‌. ಇದು ದೇಶಿ ತುಪ್ಪದ ಸಾಮರ್ಥ್ಯ ಎಂದು ವಿವರಿಸಿದರು.

ಗಡ್ಡ ಬಿಟ್ಟು, ವೇಷವನ್ನು ಧರಿಸುವುದರಿಂದ ಋಷಿಯಾಗುವುದಿಲ್ಲ. ಬೇರೆಯವರ ಕಣ್ಣಿಗೆ ಕಾಣದ್ದು ಯಾರ ಕಣ್ಣಿಗೆ ಕಾಣುತ್ತದೆಯೋ ಅವನು ನಿಜವಾದ ಋಷಿ. ಇಂದಿನ ವಿಜ್ಞಾನಿಗಳು ಕೇವಲ ಭೌತಿಕ ಗುಣಗಳನ್ನು ವಿಶ್ಲೇಷಿಸುತ್ತಿದ್ದಾರೆ. ಆದರೆ ಋಷಿಗಳು ಜ್ಞಾನದೃಷ್ಟಿಯಿಂದ ಅಪೂರ್ವ ಜ್ಞಾನವನ್ನು ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.

**

ಡಾ. ವಿಶ್ವನಾಥ್ ಭಟ್ ಹಾಗೂ ಡಾ.ವಿದ್ಯಾ ಭಟ್ ದಂಪತಿಗಳು ಗುರುಭಿಕ್ಷಾಸೇವೆ ಸಮರ್ಪಿಸಿದರು. ಉದ್ಯಮಿ ಕೆ. ಎಸ್ ಭಟ್ ಮುಂಬಯಿ, ವೆಂಕಟ ರಮಣ ಹೆಗಡೆ ಕವಲಕ್ಕಿ, ಗಣೇಶ್ ಆರ್ಕೊಡ್ಲು, ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶ್ರೀವತ್ಸ ಭೀಮನಕೊಣೆ, ವಿಷ್ಣು ಭಟ್ ಕವಲಕ್ಕಿ, ಶ್ರೀಕೃಷ್ಣ ಶಾಸ್ತ್ರಿ, ಸೌಮ್ಯ ಮಧ್ಯಸ್ಥ, ಅಜಿತ್ ಹೆಗಡೆ ಗುಡ್ಗೆ, ದಿನಪ್ರಧಾನರಾಗಿ ಸೂರ್ಯನಾರಾಯಣ ದಂಪತಿಗಳು ಉಪಸ್ಥಿತರಿದ್ದರು.

**

ಸಂಪನ್ನವಾದ ಸೀಮೋಲ್ಲಂಘನ : ಕಳೆದ ಎರಡು ತಿಂಗಳಿನಿಂದ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದ ಶ್ರೀಸಂಸ್ಥಾನದವರು, ಸೀಮೋಲ್ಲಂಘನವನ್ನು ಮಾಡುವ ಮೂಲಕ ಚಾತುರ್ಮಾಸ್ಯ ವ್ರತವನ್ನು ಸಂಪನ್ನಗೊಳಿಸಿದರು. ಗಂಗಾವಳಿ ನದಿಗೆ ಫಲ ಸಮರ್ಪಿಸಿ, ತೊರ್ಕೆಯ
ಕೆಂಗಾಳ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಭಕ್ತರನ್ನು ಆಶೀರ್ವಾದಿಸಿದರು. ಪ್ರದೀಪ್ ನಾಯ್ಕ್ ದೇವರಬಾವಿ, ಮಹೇಶ್ ಶೆಟ್ಟಿ, ವೆಂಕಟರಮಣ ಕೌರಿ, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

*ಸರ್ವ ಸಮಾಜದ ಪಾಲ್ಗೊಳ್ಳುವಿಕೆ* : ಶ್ರೀರಾಮಚಂದ್ರಾಪುರ ಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುವ ಭಕ್ತ ಸಮಾಜದವರೆಲ್ಲರೂ ಚಾತುರ್ಮಾಸ್ಯದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಸಮರ್ಪಿಸಿದರು. 23 ವಿವಿಧ ಸಮಾಜಗಳು ಸ್ವರ್ಣಪಾದುಕಾ ಪೂಜೆಯನ್ನು ಸಮರ್ಪಿಸಿ, ತಮ್ಮ ಪರಂಪರಾಗತ ಗುರು ಭಕ್ತಿಯನ್ನು ವ್ಯಕ್ತಪಡಿಸಿದರು.

ಆಹಾರದ ಕುರಿತಾದ ಪ್ರವಚನ – ಪಾರಂಪರಿಕ ಭೋಜನ: ಆಹಾರದ ಕುರಿತಾಗಿ ಪೀಠಾಧಿಪತಿಗಳೊಬ್ಬರು ಸವಿಸ್ತಾರವಾಗಿ ಸಮಾಜಕ್ಕೆ ಪ್ರವಚನದ ಮೂಲಕ ಮಾರ್ಗದರ್ಶನ ಮಾಡಿದ್ದು ಇದೇ ಮೊದಲಾಗಿದ್ದು, ಇಂದಿನ ಕಾಲಕ್ಕೆ ಅತ್ಯಗತ್ಯವಾದ ವಿಚಾರವನ್ನು ಶ್ರೀಸಂಸ್ಥಾನದವರು ಚಾತುರ್ಮಾಸ್ಯದ 60 ದಿನಗಳ ಕಾಲ ಪ್ರವಚನದ ಮೂಲಕ ಆಹಾರದ ಸರಿ ತಪ್ಪುಗಳನ್ನು ತಿಳಿಸಿದರು. ಹಾಗೆಯೇ 60 ದಿನಗಳು ಕರಾವಳಿ, ಮಲೆನಾಡು ಭಾಗದ ಪಾರಂಪರಿಕ ಆಹಾರ ಪದಾರ್ಥಗಳು ಚಾತುರ್ಮಾಸ್ಯದ ವಿಶೇಷವಾಗಿತ್ತು.