ಬೆಂಗಳೂರು: ಆಕೋಬರ್ 11 ರಿಂದ ಅಕ್ಟೋಬರ್ 21 ರ ವರೆಗೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ನವರಾತ್ರಿ ವ್ರತಾಚರಣೆಯನ್ನು ಶ್ರೀರಾಮಚಂದ್ರಾಪುರ ಮಠದ ಬೆಂಗಳೂರು ಶಾಖೆ – ಶ್ರೀರಾಮಾಶ್ರಮದಲ್ಲಿ ಆಚರಿಸಲಿದ್ದಾರೆ.
ನವರಾತ್ರ ನಮಸ್ಯಾ ಪೂರ್ವ ತಯಾರಿಯಾಗಿ ಅಕ್ಟೋಬರ್ 4 ರಂದು ಸಪರಿವಾರ ಶ್ರೀರಾಮದೇವರು ಮತ್ತು ಶ್ರೀಗುರು ಸನ್ನಿಧಿಯಲ್ಲಿ ಫಲ ಸಮರ್ಪಿಸಿ ಶ್ರೀರಾಮಾಶ್ರಮದಲ್ಲಿ ಸುಮಾರು 75 ಕ್ಕೂ ಅಧಿಕ ಕಾರ್ಯಕರ್ತರಿಂದ ಶ್ರೀರಾಮಾಶ್ರಮ ಆವರಣವನ್ನು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಗೊಳಿಸುವ ಮೂಲಕ ಶ್ರಮಸೇವೆ ನಡೆಯಿತು.
ಮಧ್ಯಾಹ್ನದ ಭೋಜನ ನಂತರ ಗುರು ವಂದನೆಯೊಂದಿಗೆ ಪ್ರಾರಂಭವಾದ ಲಘು ಸಭೆಯಲ್ಲಿ ಕಾರ್ಯಕರ್ತರಿಗೆ ವಿದ್ವಾನ್ ಜಗದೀಶ ಶರ್ಮಾ ಸಂಪ ಇವರು ನವರಾತ್ರ ನಮಸ್ಯಾ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ವಿದ್ವಾನ್ ಜಗದೀಶ ಶರ್ಮಾ ಸಂಪ ಇವರು ಮಾತನಾಡಿ ಭಾರತೀಯ ಹಬ್ಬ ಹರಿದಿನಗಳಲ್ಲಿ ನವರಾತ್ರದ ಆಚರಣೆಗೆ ವಿಶೇಷ ಮಹತ್ತ್ವವಿದೆ. ಹಾಗೇ ಶ್ರೀರಾಮಚಂದ್ರಾಪುರ ಮಠದ ಯತಿಗಳು ನಡೆಸುವ ನವರಾತ್ರಿಯು ಕೆಲವು ವರ್ಷಗಳಿಂದ ಇಡೀ ಸಮಾಜವು ಪಾಲ್ಗೊಂಡು ಉತ್ಸವಾಗಿ ಆಚರಿಸಲು ಅನುಗ್ರಹಿಸಿದ್ದಾರೆ. ಯತಿಗಳು ಆಚರಿಸುವ ಈ ನವರಾತ್ರಿಯ ಪುಣ್ಯ ಪರ್ವದಲ್ಲಿ ಪಾಲ್ಗೊಳ್ಳುವುದೇ ಒಂದು ಸೌಭಾಗ್ಯ. ಹಾಗಾಗಿ ಶ್ರೀಮಠದ ಎಲ್ಲ ಶಿಷ್ಯರು ಈ ನವರಾತ್ರಿ ಆಚರಣೆಯಲ್ಲಿ ಪಾಲ್ಗೊಂಡು ಜಗನ್ಮಾತೆಯ ಮತ್ತು ಶ್ರೀಗುರು ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ಬೆಂಗಳೂರು ಪ್ರಾಂತ್ಯ ಅಧ್ಯಕ್ಷರಾದ ಜಿ. ಜಿ. ಹೆಗಡೆ ತಲಗೇರಿ ಅವರು ಮಾತನಾಡಿ ಕೆಲವು ವರ್ಷಗಳ ಅನಂತರ ಮತ್ತೆ ನಮಗೆ ಬೆಂಗಳೂರಿಗರಿಗೆ ನವರಾತಿ ಉತ್ಸವವನ್ನು ಅನುಗ್ರಹಿಸಿದ್ದಾರೆ. ಈ ಸಮಯದಲ್ಲಿ ಶ್ರೀಮಠದ ಸರ್ವ ಶಿಷ್ಯರು ತನು ಮನ ಧನ ಸಹಕಾರಗಳಿಂದ ಹಾಗೂ ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಉತ್ತರ ಮಂಡಲ ಮಾತೃ ಪ್ರಧಾನೆ ಗಾಯತ್ರಿ ಭಾಗ್ವತ್ ಅವರು ನವರಾತ್ರ ನಮಸ್ಯಾ ಸಂದರ್ಭದಲ್ಲಿ ಶಿಷ್ಯ ಭಕ್ತರು ಪಾಲ್ಗೊಂಡು ಪುನೀತರಾಗುವ ದೈನಂದಿನ ಕಾರ್ಯಕ್ರಮಗಳ ವಿವರವನ್ನು ನೀಡಿದರು.
ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಇವರು ಮಾತನಾಡಿ *ಮಹಾನಗರದಲ್ಲಿ ಮಹಾದೇವಿಯ ಮಹಾರಾಧನೆ* ಈ ನವರಾತ್ರ ಸಮಾರಾಧನೆಯಲ್ಲಿ ಮಹಾನಗರದ ಎಲ್ಲ ಶಿಷ್ಯ ಭಕ್ತರು ‘ಮಮ’ಕಾರವನ್ನು ತ್ಯಜಿಸಿ ಶ್ರೀದೇವೀ ಆರಾಧನೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ದಕ್ಷಿಣ ಮಂಡಲ ಸೇವಾ ವಿಭಾಗದ ಪದಾಧಿಕಾರಿಗಳಾದ ರಮೇಶ್ ಸುರ್ಡೇಲು ಅವರು ನವರಾತ್ರ ನಮಸ್ಯಾ ಸಂದರ್ಭದಲ್ಲಿ ದೂರದ ಊರಿಂದ ಬಂದವರಿಗೆ ವಸತಿ ವ್ಯವಸ್ಥೆ ಬಗ್ಗೆ ತಿಳಿಸಿದರು. ದಕ್ಷಿಣ ಮಂಡಲ ಶಿಷ್ಯ ಮಧ್ಯಮ ಪದಾಧಿಕಾರಿಗಳಾದ ಶಿವರಾಜ ಪೆರ್ಮುಖ ಇವರು ಸುಗಮವಾಗಿ ನವರಾತ್ರ ನಮಸ್ಯಾ ಸಂಪನ್ನವಾಗುವಲ್ಲಿ ಶ್ರೀಸಂಸ್ಥಾನದವರ ಗುರುವಾಣಿಯಂತೆ ‘ದೇವ ದುರ್ಲಭ’ ಕಾರ್ಯಕರ್ತರ ಪಾತ್ರವನ್ನು ವಿವರಿಸಿದರು. ಸಭೆಯನ್ನು ಶ್ರೀಕಾಂತ ಅಂತ್ರವಳ್ಳಿ ಅವರು ಮುನ್ನಡೆಸಿದರು.
