ಅಶೋಕೆ: ಶ್ವಾಸದ ಮೂಲಕ ನಮ್ಮ ಜೀವನವನ್ನು ಮಾತ್ರವಲ್ಲ, ಜಗತ್ತಿನ ಎಲ್ಲಾ ಆಗುಹೋಗುಗಳನ್ನು ತಿಳಿಯಬಹುದು. ದೇಹದಲ್ಲಿ ಏನಿದೆಯೋ ಅದೇ ಬ್ರಹ್ಮಾಂಡದಲ್ಲಿ ಇರುವುದಾದ್ದರಿಂದ, ಪ್ರಪಂಚದ ಎಲ್ಲಾ ಆಗುಹೋಗುಗಳನ್ನು ಉಸಿರಿನ ಮೂಲಕ ತಿಳಿಯಬಹುದು ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಶೋಧನಾ ಕೇಂದ್ರದಿಂದ ಅಶೋಕೆಯಲ್ಲಿ ಆಯೋಜಿಸಲ್ಪಟ್ಟ ಎರಡು ದಿನಗಳ ‘ಸ್ವರೋದಯ’ ರಾಷ್ಟ್ರಿಯ ಜ್ಯೌತಿಷ ವಿಚಾರಮಂಥನದಲ್ಲಿ ಸಾನ್ನಿಧ್ಯವಹಿಸಿ ಉಪನ್ಯಾಸ ನೀಡಿದ ಶ್ರೀಸಂಸ್ಥಾನದವರು, ನಮ್ಮ ಶರೀರ ಮತ್ತು ಪ್ರಕೃತಿಯು ಮುಂದೆ ಆಗಬಹುದಾದ ಸನ್ನಿವೇಶಗಳ ಸೂಚನೆಯನ್ನು ನಮಗೆ ನೀಡುತ್ತದೆ. ಇದನ್ನು ಶಕುನ ಎಂಬುದಾಗಿ ಕರೆಯಲಾಗಿದ್ದು, ಇದು ಜ್ಯೌತಿಷ ಭಾಗವಾಗಿದೆ. ಹಾಗೆಯೇ ಶ್ವಾಸದ ಕುರಿತಾದ ಸ್ವರಶಾಸ್ತ್ರವೂ ಜ್ಯೌತಿಷದ ಅಂಗವೇ ಆಗಿದ್ದು, ಶ್ವಾಸದ ಗತಿಯನ್ನು ಅರ್ಥಮಾಡಿಕೊಂಡರೆ ಬದುಕನ್ನೇ ಅರ್ಥಮಾಡಿಕೊಂಡಂತೆ. ಎಲ್ಲರೂ ಮೂಗಿನಲ್ಲೇ ಉಸಿರಾಡುತ್ತಾರೆ ಹಾಗೂ ಉಸಿರನ್ನು ತೆಗೆದುಕೊಂಡು ಮತ್ತು ಹೊರಗೆ ಬಿಡುತ್ತಾರೆ. ಅದರಲ್ಲಿ ವಿಶೇಷವೇನಿಲ್ಲ ಎನಿಸಬಹುದು. ಆದರೆ ಶ್ವಾಸವೇ ಜೀವನವಾಗಿದ್ದು, ಉಸಿರಾಟದ ಮೂಲಕ ಜಗತ್ತನ್ನು ತಿಳಿಯಲು ಸಾಧ್ಯವಿದೆ. ನಮ್ಮ ಜೀವನದ ಹಾಗೂ ಜಗತ್ತಿನ ಶುಭಾಶುಭಗಳನ್ನು ಕೇವಲ ಉಸಿರಿನ ಅವಲೋಕನದ ಮೂಲಕ ತಿಳಿದುಕೊಳ್ಳಬಹುದು ಮಾತ್ರವಲ್ಲ, ನಮ್ಮ ಮುಂದಿನ ಹೆಜ್ಜೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಶರೀರಕ್ಕೂ ತಲೆಗೂ ಇರುವ ಸಂಬಂಧ ಜ್ಯೌತಿಷಕ್ಕೂ ಸ್ವರಶಾಸ್ತ್ರಕ್ಕೂ ಇದೆ. ಉಸಿರಾಟದ ಸೂಕ್ಷ್ಮ ಜ್ಞಾನ ತಿಳಿದಿಲ್ಲದಿದ್ದರೆ ದೈವಜ್ಞನು ಪರಿಪೂರ್ಣ ಎನಿಸಿಕೊಳ್ಳುವುದಿಲ್ಲ. ದೈವಜ್ಞರಿಗೆ ಮಾತ್ರವಲ್ಲ, ಜನಸಾಮಾನ್ಯನೂ ಕೂಡ ಈ ಶಾಸ್ತ್ರವನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಉಸಿರಾಟದ ಹಿನ್ನೆಲೆಯ ಸೂಕ್ಷ್ಮಗಳ ಮಾಹಿತಿಯನ್ನು ನೀಡಿದರು.
ಇಂದು ಶ್ವಾಸವಿದ್ಯೆ ಅಳಿವಿನ ಅಂಚಿನಲ್ಲಿದ್ದು, ಅದನ್ನು ಬಳಸುವ ಮೂಲಕ ನಾವು ಉಳಿಸಿಕೊಳ್ಳಬೇಕು. ನಮ್ಮ ಬದುಕನ್ನು ಪ್ರಯೋಗಾತ್ಮಕವಾಗಿ ಶ್ವಾಸಾವಲೋಕನ ಮಾಡಿಕೊಂಡರೆ ಈ ವಿದ್ಯೆಯ ಸಂರಕ್ಷಣೆಯಾಗುತ್ತದೆ. ಭಾರತೀಯ ಪರಂಪರೆ ಇಂತಹಾ ಅನೇಕ ಅಮೂಲ್ಯ ವಿಚಾರಗಳನ್ನು ಒಳಗೊಂಡಿದ್ದು, ಇಂದು ನಾವು ಅವುಗಳ ಕುರಿತಾಗಿ ಅಸಡ್ಡೆಯನ್ನು ಬೆಳೆಸಿಕೊಂಡಿದ್ದೇವೆ. ವಿದೇಶದವರು ನಮ್ಮ ಜ್ಞಾನ ಭಂಡಾರವನ್ನು ಕದ್ದುಕೊಂಡು ಹೋದಮೇಲೆ ಅವರಿಂದ ನಾವು ಮತ್ತೆ ಕಲಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಶ್ರೇಷ್ಠ ದೈವಜ್ಞರಲ್ಲೊಬ್ಬರಾದ ಕೇರಳದ ವಿದ್ವಾನ್ ಕೈಮುಕ್ಕು ನಾರಾಯಣ ನಂಬೂದರಿ ಅವರನ್ನು ಶ್ರೀಸಂಸ್ಥಾನದವರು ಸನ್ಮಾನಿಸಿ ಆಶೀರ್ವದಿಸಿದರು. ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ವಿದ್ವಾನ್ ಗೋಪಾಲಕೃಷ್ಣಶರ್ಮರು ಉಡುಪಿ ‘ದೈವಜ್ಞನ ಲಕ್ಷಣ’, ವಿದ್ವಾನ್ ರಾ. ಗಣಪತಿ ಭಟ್ಟರು ಮೈಸೂರು ‘ಸಮಾಹಿತಮನಾಃ’, ವಿದ್ವಾನ್ ಶಿವಪ್ರಸಾದ್ ತಂತ್ರಿಗಳು ಉಡುಪಿ ‘ದೈವಜ್ಞನ ದಿನಚರಿ’ ವಿಚಾರದ ಕುರಿತಾಗಿ ವಿಷಯ ಮಂಡಿಸಿದರು. ಡಾ. ಗೋಪಾಲಕೃಷ್ಣ ಹೆಗಡೆ ಕುಮಟಾ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ವಾನ್ ನರಸಿಂಹ ಭಟ್ಟ ಬಡಗು, ದೈವಜ್ಞ ಮಿತ್ತೂರು ಕೇಶವ ಭಟ್ಟ, ದೈವಜ್ಞ ಮಧುಸೂಧನ ಶರ್ಮಾ, ಡಾ. ಕೆ. ಸಿ. ನಾಗೇಶ್ ಭಟ್ ಸೇರಿದಂತೆ ರಾಜ್ಯದ ಹಲವಾರು ಕಡೆಗಳಿಂದ ಜ್ಯೌತಿಷ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.































