|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀಭಾರತೀ ವಿದ್ಯಾಲಯದ ದೀಪೋತ್ಸವ

ಬೆಂಗಳೂರು: ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ಶ್ರೀಭಾರತೀ ವಿದ್ಯಾಲಯದ ವತಿಯಿಂದ ಕಾರ್ತಿಕ ದೀಪೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ತಿಕ ಶುಕ್ಲ ಪಂಚಮಿಯಂದು (14-11-2026) ನಡೆದ ಈ ಕಾರ್ಯಕ್ರಮವು ಭಕ್ತಿಪೂರ್ಣ ವಾತಾವರಣದಲ್ಲಿ ನೆರವೇರಿತು. ದೀಪಾರಾಧನೆಯ ಮೂಲಕ ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜ್ಞಾನ, ಶಾಂತಿ, ಸನ್ಮಾರ್ಗ ಮತ್ತು ಸಕಾರಾತ್ಮಕತೆಯ ಬೆಳಕನ್ನು ಜೀವನದಲ್ಲಿ ತುಂಬುವ ಕಾರ್ತಿಕ ದೀಪೋತ್ಸವದ ಮಹತ್ತ್ವವನ್ನು ಸಾರಲಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಅಷ್ಟಾವಧಾನ ಸೇವೆಯಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡು ತಮ್ಮ ಭಕ್ತಿ, ಶಿಸ್ತು ಹಾಗೂ ಭಾರತೀಯ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮೆರೆದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷೆ ಶಾರದಾ ಜಯಗೋವಿಂದ್, ಪ್ರಾಂಶುಪಾಲೆ ವರ್ಷಾ ಎಸ್. ಎಸ್., ಮುಖ್ಯೋಪಾಧ್ಯಾಯ ಎಸ್. ಐ. ಭಟ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಶ್ರೀರಾಮನ ದರ್ಶನ ಪಡೆದು ಆಶೀರ್ವಾದಕ್ಕೆ ಪಾತ್ರರಾದರು.

ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ ಪರಂಪರೆ ಮತ್ತು ಮೌಲ್ಯಾಧಾರಿತ ಜೀವನದ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ವಿದ್ಯಾಲಯವು ಆಯೋಜಿಸುತ್ತಿದೆ.