ಪೆರಾಜೆ: ಸೇವಾಖಂಡದ ಪ್ರೇರಣಾ ತರಬೇತಿ ತಂಡ, ಸಂಘಟನಾ ಖಂಡ ಹವ್ಯಕ ಮಹಾಮಂಡಲ ಮಂಗಳೂರು ಪ್ರಾಂತ್ಯ ಹಾಗೂ ಮಾಣಿ ಮಠದ ಕ್ರಿಯಾಸಮಿತಿ ಇವರುಗಳ ಸಹಯೋಗದಲ್ಲಿ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಗಾರ ಕಾರ್ತಿಕ ಶುಕ್ಲ ತ್ರಯೋದಶಿಯಂದು (22-11-2026) ಶ್ರೀಮಠದ ಪೆರಾಜೆ ಶಾಖೆಯಲ್ಲಿ ಸಂಪನ್ನವಾಯಿತು.
ಗುರುವಂದನೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ಮಾಣಿ ಮಠ ಕ್ರಿಯಾಸಮಿತಿ ಅಧ್ಯಕ್ಷ ಹಾಗೂ ಶಾಸನತಂತ್ರ ಸಂಪನ್ಮೂಲ ಖಂಡದ ಶ್ರೀಸಂಯೋಜಕ ಹಾರೆಕೆರೆ ನಾರಾಯಣ ಭಟ್ ನೆರವೇರಿಸಿದರು. ಬೆಳಗ್ಗಿನ ಅವಧಿಯಲ್ಲಿ ಸುಧೀರ್ ಕೃಷ್ಣ (ಪ್ರೀಮಿಯರ್ ಫ್ರೆಶ್ ಡ್ರಿಂಕಿಂಗ್ ವಾಟರ್), ಶ್ರೀನಂದನ್ (ಪೂಗ ಸಿರಿ ಧೋಟಿ ಸರ್ವಿಸಸ್), ಪೂರ್ಣಿಮಾ ಭಟ್ (ಕ್ರೋಶೆ ಒನ್ ವ್ಹೀಲ್) ಉದ್ಯಮಿಗಳು ತಾವು ನಡೆಸುತ್ತಿರುವ ಸ್ವ-ಉದ್ಯಮದ ಬಗ್ಗೆ, ಸ್ವ-ಉದ್ಯಮದ ಸವಾಲುಗಳ ಬಗ್ಗೆ ತಿಳಿಸಿದರು. ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅಶ್ವಿನ್ ಟಿ. ಭಟ್ ಇವರು ಸ್ವಉದ್ಯಮಕ್ಕೆ ಬ್ಯಾಂಕ್ ಕಡೆಯಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಮಧ್ಯಾಹ್ನದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಮಾಬೆನ್ ಅವರು ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರಗಳ ಸವಲುತ್ತಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಪ್ರೇರಣಾ ತಂಡದ ಸದಸ್ಯರಾದ ವಿಜೇತ್ ಪೆರುಂಬಾರು ಇವರು ಸೋಲುವ ಬಗ್ಗೆ ಇರುವ ಹೆದರಿಕೆಗಳನ್ನು ಎದುರಿಸುವ ಬಗ್ಗೆ ಸವಿವರವಾಗಿ ಚಟುವಟಿಕೆಗಳ ಮೂಲಕ ನಡೆಸಿಕೊಟ್ಟರು.
ಒಟ್ಟು 30 ಕ್ಕೂ ಅಧಿಕ ಜನರು ಕಾರ್ಯಗಾರ ಪ್ರಯೋಜನ ಪಡೆದರು. ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸನತಂತ್ರ ಸಂಘಟನಾ ಖಂಡ – ಹವ್ಯಕ ಮಹಾಮಂಡಲ ಅಧ್ಯಕ್ಷ ಡಾ. ವೈ. ವಿ ಕೃಷ್ಣಮೂರ್ತಿ ಇವರು, ಈ ರೀತಿಯ ಕಾರ್ಯಗಾರಗಳು ಅವಶ್ಯಕ ಇನ್ನೂ ಹೆಚ್ಚಿನ ಕಡೆ ಇಂತಹ ಕಾರ್ಯಗಾರಗಳು ನಡೆಯಬೇಕು ಎಂದು ಹಾರೈಸಿದರು.






