”ಗೋಮಾತೆಯ ಮೇಲಿನ ಮಮತೆಯಿಂದ ನಾನು ‘ಮಾಸದ ಮಾತೆ’ಯಾದೆ. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಅನೇಕ ಗುರುಬಂಧುಗಳ ಜೊತೆ ಸುಂದರ ಬಾಂಧವ್ಯ ಬೆಳೆದಿದೆ. ಇಂದು ಮಹಾ ಮಂಡಲದಾದ್ಯಂತ ಇರುವ ಶ್ರೀಮಠದ ಶಿಷ್ಯರೆಲ್ಲರೂ ಶ್ರೀಮಠವೆಂಬ ಒಂದೇ ಕುಟುಂಬದ ಸದಸ್ಯರಂತೆ ಅನಿಸುತ್ತದೆ. ” ಎಂದು ಹೃದಯ ತುಂಬಿ ನುಡಿಯುತ್ತಾರೆ ಗೀತಾ ಎಂ. ಭಟ್.
ಮುಳ್ಳೇರಿಯ ಮಂಡಲ ಪೆರಡಾಲ ವಲಯದ ಮೂಲತಃ ಏತಡ್ಕ ಕೊಚ್ಚಿಯ, ಪ್ರಸ್ತುತ ಬದಿಯಡ್ಕ ಸಮೀಪದ ಕೋಳಾರಿ ನಿವಾಸಿಗಳಾಗಿರುವ ಮಹಾಲಿಂಗೇಶ್ವರ ಭಟ್ ಅವರ ಪತ್ನಿಯಾಗಿರುವ ಗೀತಾ ಭಟ್ ಭಜನೆ ಮತ್ತು ಶ್ರೀಮಠದ ಸೇವೆಯನ್ನು ಸಮಾನವಾಗಿ ನೋಡುವವರು.
ಪಾದೆಕಲ್ಲು ಮೂಲದ, ಪ್ರಸ್ತುತ ಬೆಳ್ತಂಗಡಿ ನಿವಾಸಿಗಳಾದ ವೆಂಕಟ್ರಮಣ ಭಟ್ ಮತ್ತು ಲಕ್ಷ್ಮಿ ದಂಪತಿಗಳ ಪುತ್ರಿಯಾದ ಗೀತಾ ಅವರಿಗೆ ಬಾಲ್ಯದಿಂದಲೇ ಹಸುಗಳ ಒಡನಾಟ ದೊರಕಿತ್ತು. ಹಾಗಾಗಿ ಅವರಿಗೆ ಗೋವುಗಳೆಂದರೆ ಈಗಲೂ ತುಂಬಾ ಪ್ರೀತಿ.
ಶ್ರೀಗುರು ಪೀಠದ ಮೇಲೆ ಶ್ರದ್ಧೆಯಿರುವ, ಧಾರ್ಮಿಕ ಮನೋಭಾವದ ಮನೆತನದಲ್ಲಿ ಜನಿಸಿದ ಇವರಿಗೆ ಭಜನೆ, ಹಾಡುಗಾರಿಕೆ ಎಂದರೆ ತುಂಬಾ ಪ್ರೀತಿ.
‘ಶ್ರೀಮಾತಾ ಹವ್ಯಕ ಭಜನಾ ತಂಡ’ ಆರಂಭವಾದಂದಿನಿಂದಲೂ ಅದರ ಸಕ್ರಿಯ ಸದಸ್ಯರಾದ ಗೀತಾ ಅವರಿಗೆ ಶ್ರೀಮಠದ ಸಂಪರ್ಕ ಸಹಜವಾಗಿಯೇ ದೊರಕಿತು.
” ಬೇರ್ಕಡವು ಈಶ್ವರಿ ಅಕ್ಕನ ಪ್ರೇರಣೆಯಿಂದ ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ಮಾಸದ ಮಾತೆಯಾದೆ. ಆರಂಭದಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವೇ ಎಂಬ ಸಣ್ಣ ಆತಂಕವಿತ್ತು. ಆದರೆ ಶ್ರೀಗುರುಗಳ ಅನುಗ್ರಹದಿಂದ ಬಹಳ ಬೇಗನೆ ಎರಡು ಗೋವುಗಳ ನಿರ್ವಹಣೆಯ ಗುರಿಯನ್ನು ಯಶಸ್ವಿಯಾಗಿ ತಲುಪಿದೆ. ಶ್ರೀಗುರುಗಳಿಂದ ಲಕ್ಷಬಾಗಿನವನ್ನು ಸ್ವೀಕರಿಸಿದ್ದು ಬದುಕಿನ ಸೌಭಾಗ್ಯ ” ಎನ್ನುತ್ತಾರೆ ಇವರು.
” ಬದುಕಿನಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳೆರಡೂ ಎದುರಾಗುತ್ತವೆ. ಆದರೆ ನಾವು ಋಣಾತ್ಮಕ ವಿಚಾರಗಳನ್ನು ಬದಿಗೊತ್ತಿ, ಧನಾತ್ಮಕವಾಗಿಯೇ ಯೋಚಿಸಿದರೆ ಮಾತ್ರ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸು ಗಳಿಸಲು ಸಾಧ್ಯ. ಶ್ರೀಮಠದ ಸೇವೆಯಲ್ಲೂ ನಾವು ಇದನ್ನೇ ಅನುಸರಿಸಬೇಕು” ಎಂಬುದು ಗೀತಾ ಎಂ. ಭಟ್ ಅವರ ಅನುಭವದ ನುಡಿಗಳು.
ಶ್ರೀಮಾತಾ ಹವ್ಯಕ ಭಜನಾ ತಂಡ ಮಾತ್ರವಲ್ಲದೆ ಭಗವದ್ಗೀತಾ ತಂಡದ ಸಕ್ರಿಯ ಸದಸ್ಯೆಯಾಗಿಯೂ, ಅನೇಕ ಕಾರ್ಯಕ್ರಮಗಳಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ ಗೀತಾ ಎಂ. ಭಟ್ ಅವರಿಗೆ ಹಾಡು ಮತ್ತು ಭಜನೆ ನೆಚ್ಚಿನ ಹವ್ಯಾಸಗಳಾಗಿವೆ.
ತಮ್ಮ ಮಕ್ಕಳ ಹಾಗೂ ಮನೆಯವರ ಸಂಪೂರ್ಣ ಸಹಕಾರದಿಂದ ಶ್ರೀಮಠದ ಸೇವೆಯಲ್ಲಿ ಹಾಗೂ ಭಜನಾ ತಂಡದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಮಕ್ಕಳಿಬ್ಬರಿಗೂ ಉತ್ತಮ ಉದ್ಯೋಗ ಲಭಿಸಿದ್ದು ಶ್ರೀಗುರುಗಳ ಅನುಗ್ರಹದಿಂದ ಎಂದು ನಂಬುವ ಗೀತಾ ಎಂ ಭಟ್ ಅವರಿಗೆ ಶ್ರೀಮಠದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಶ್ರೀಮಾತಾ ಹವ್ಯಕ ಭಜನಾ ಸಂಘದಲ್ಲಿ ಸಕ್ರಿಯವಾಗಿ ಸೇವೆ ನಿರ್ವಹಿಸಬೇಕು ಎಂಬುದೇ ಅಭಿಲಾಷೆ.
ಪ್ರಸನ್ನಾ ವಿ. ಚೆಕ್ಕೆಮನೆ
