|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

‘ ನಿರಂತರ ಗುರುಸೇವೆಯೇ ಜೀವನದ ಅಭಿಲಾಷೆ ‘ – ಜಯಂತಿ ಗಜಾನನ ಹೆಗಡೆ ಗುಡೇಅಂಗಡಿ

​” ಶ್ರೀಮಠದ ಸೇವೆ ಹಾಗೂ ಗೋಸೇವೆಗೆ ನಮ್ಮ ಬದುಕಿನಲ್ಲಿ ಯಾವಾಗಲೂ ಮೊದಲ ಆದ್ಯತೆ. ಕಳೆದ ಎರಡೂವರೆ ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದೇವೆ. ನಮ್ಮ ಬದುಕಿನ ಸುಖ, ಶಾಂತಿ ಮತ್ತು ನೆಮ್ಮದಿಗಳಿಗೆ ಶ್ರೀಗುರುಗಳ ಕೃಪೆಯೇ ಕಾರಣ ” ಎಂದು ಹೃದಯತುಂಬಿ ನುಡಿಯುವವರು ಜಯಂತಿ ಗಜಾನನ ಹೆಗಡೆ ಗುಡೇಅಂಗಡಿ.

ಕುಮಟಾ ಮಂಡಲ, ಗುಡೇಅಂಗಡಿ ವಲಯದ ನಿವಾಸಿಗಳಾಗಿರುವ ಗಜಾನನ ಹೆಗಡೆಯವರ ಪತ್ನಿ ಜಯಂತಿಯವರು ​ಅಂತ್ರವಳ್ಳಿಯ ಸುಬ್ರಹ್ಮಣ್ಯ ಭಟ್ ಮತ್ತು ಶಾಂತಾ ದಂಪತಿಗಳ ಪುತ್ರಿ.

ಜಯಂತಿ ಅವರಿಗೆ ಬಾಲ್ಯದಿಂದಲೇ ಹಸುಗಳೊಂದಿಗೆ ಅವಿನಾಭಾವ ಒಡನಾಟವಿತ್ತು.
” ನಾನು ಐದನೇ ತರಗತಿಯಲ್ಲಿರುವಾಗಲೇ ಹಸುಗಳ ಹಾಲು ಕರೆಯಲು ಅಭ್ಯಾಸ ಮಾಡಿದ್ದೆ. ಹೈಸ್ಕೂಲ್‌ಗೆ ಹೋಗುವ ದಿನಗಳಲ್ಲಿ ಪ್ರತಿ ದಿನವೂ ಹಾಲು ಕರೆಯುವ ಕೆಲಸ ನನ್ನ ಪಾಲಿಗೆ ಒದಗಿ ಬಂದಿತ್ತು. ಹಾಗಾಗಿ ಗೋಮಾತೆಗೆ ನನ್ನ ಬದುಕಿನಲ್ಲಿ ಅತ್ಯುನ್ನತ ಸ್ಥಾನವಿದೆ ” ಎನ್ನುತ್ತಾರೆ ಇವರು.

ಕನ್ನಡ ಉಪನ್ಯಾಸಕರಾಗಿದ್ದ ಪತಿಯ ಉದ್ಯೋಗ ನಿಮಿತ್ತ ಕೆಲಕಾಲ ನಗರ ಪ್ರದೇಶದಲ್ಲಿ ವಾಸಿಸಬೇಕಾಗಿ ಬಂದರೂ, ಅವರ ನಿವೃತ್ತಿಯ ನಂತರ ತಮ್ಮ ಸ್ವಗ್ರಾಮಕ್ಕೆ ಮರಳಿ ಬಂದು ನೆಲೆಸಿದ ಇವರು ಪ್ರಸ್ತುತ ತಮ್ಮ ಮನೆಯಲ್ಲಿಯೂ ಹಸುಗಳನ್ನು ಪ್ರೀತಿಯಿಂದ ಸಾಕುತ್ತಾ, ಮನೆಯ ಧಾರ್ಮಿಕ ಸಂಪ್ರದಾಯಗಳನ್ನು ಉಳಿಸಿಕೊಂಡು ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದಾರೆ. ಪತಿ ಗಜಾನನ ಹೆಗಡೆಯವರು ಸಹಾ ಘಟಕವೊಂದರ ಗುರಿಕಾರರಾಗಿ ಶ್ರೀಮಠದ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

​ ” 2010ರಿಂದಲೂ ನಾವು ನಿಯಮಿತವಾಗಿ ಶ್ರೀಮಠದ ಗೋಲೋಕಕ್ಕೆ ತೆರಳಿ ಗೋಸೇವೆ ಮಾಡುತ್ತಿದ್ದೆವು. ಇಂದಿಗೂ ಆ ಸೇವೆಯನ್ನು ಶ್ರದ್ಧೆಯಿಂದ ಮುಂದುವರಿಸಿದ್ದೇವೆ. ನಮ್ಮ ವಲಯದ ಅಧ್ಯಕ್ಷರಾಗಿದ್ದ ಮಹಾದೇವಿ ಭಟ್ ಅವರ ಪ್ರೇರಣೆಯಿಂದ ‘ಮಾತೃತ್ವಮ್’ ಯೋಜನೆಯ ಅಡಿಯಲ್ಲಿ ‘ಮಾಸದ ಮಾತೆ’ಯಾಗಿಯೂ ಗೋಮಾತೆಯ ಸೇವೆಯನ್ನು ಆರಂಭಿಸಿದೆ. ಈ ಎಲ್ಲಾ ಸತ್ಕಾರ್ಯಗಳಿಗೆ ನನ್ನ ಪತಿ ಗಜಾನನ ಹೆಗಡೆ ಹಾಗೂ ಮಕ್ಕಳು ಮತ್ತು ಸೊಸೆಯ ಸಂಪೂರ್ಣ ಪ್ರೋತ್ಸಾಹ ಮತ್ತು ಬೆಂಬಲ ದೊರೆತಿದೆ ” ಎನ್ನುತ್ತಾರೆ ಜಯಂತಿ ಹೆಗಡೆ.

​ಶ್ರೀಗುರುಗಳ ಅನುಗ್ರಹದಿಂದ ಗುರು ಭಿಕ್ಷಾಸೇವೆ, ಸುವರ್ಣ ಪಾದುಕಾಭಿಕ್ಷೆ ಹಾಗೂ ಸುವರ್ಣ ಪಾದುಕಾ ಪೂಜೆ ಸಹಿತ ಶ್ರೀಮಠದ ವಿವಿಧ ಸೇವೆಗಳನ್ನು ನೆರವೇರಿಸುವ ಅವಕಾಶ ಲಭಿಸಿದೆ. ವಿವಿವಿ ಸೇರಿದಂತೆ ಶ್ರೀಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ ಮಾಡುವ ಅವಕಾಶವು ಒದಗಿ ಬಂದಿದೆ. ಬದುಕಿನಲ್ಲಿ ಕೆಲವು ಸಂಕಷ್ಟಗಳು ಬೆಟ್ಟದಂತೆ ಎದುರಾದರೂ, ಗುರುಕೃಪೆಯಿಂದ ಅವೆಲ್ಲವೂ ಮಂಜಿನಂತೆ ಕರಗಿಹೋಗಿವೆ. ಗುರುಗಳ ದಿವ್ಯ ರಕ್ಷಣೆ ನಮ್ಮ ಕುಟುಂಬಕ್ಕೆ ಸದಾ ಇದೆ ಎಂಬುದು ನಮ್ಮ ಅನೇಕ ಅನುಭವಗಳಿಂದ ವೇದ್ಯವಾಗಿದೆ ” ಎನ್ನುತ್ತಾರೆ ಅವರು.

ಪ್ರತಿದಿನವೂ ತಪ್ಪದೇ ಕುಂಕುಮಾರ್ಚನೆ ಮಾಡುವ ಇವರಿಗೆ ಮುಂದೆ ತಮ್ಮ ಮಕ್ಕಳು ಕೂಡ ತಮ್ಮಂತೆ ಸಂಪೂರ್ಣವಾಗಿ ಗುರು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದೇ ಅಭಿಲಾಷೆ

” ನಮಗೆ ಕೊನೆಯ ಉಸಿರಿನವರೆಗೂ ಗುರುಸೇವೆಯಲ್ಲಿ ನಿರತರಾಗಿರುವ ಯೋಗ ಲಭಿಸಬೇಕು ಮತ್ತು ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳೂ ಕೂಡ ನಮ್ಮಂತೆ ಸಂಪೂರ್ಣವಾಗಿ ಗುರುಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದೇ ದೇವರು ಮತ್ತು ಶ್ರೀಗುರುಗಳ ಚರಣಗಳಲ್ಲಿ ನನ್ನ ಪ್ರಾರ್ಥನೆ ” ಎಂಬುದು ಅವರ ಮನದಾಳದ ನುಡಿ.
ಮನೆಯಲ್ಲಿ ಗೋವುಗಳನ್ನು ಸಾಕುತ್ತಾ ಶ್ರೀಮಠದ ಸೇವೆಯಲ್ಲಿ ನಿರತರಾಗಿರುವ ಜಯಂತಿ ಗಜಾನನ ಹೆಗಡೆ ದಂಪತಿಗಳ ಸೇವೆ ಅನನ್ಯವಾದದು.
​
ಪ್ರಸನ್ನಾ ವಿ. ಚೆಕ್ಕೆಮನೆ