|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ದೇವಿಯ ಅಲ್ಪ ಸೇವೆಯಿಂದ ಅನಂತ ಫಲ | ನವರಾತ್ರ ನಮಸ್ಯಾ 2026 – ದಿನ 1

ಬೆಂಗಳೂರು: ನವರಾತ್ರಿಯ ಪರ್ವಕಾಲವು ಪ್ರಕೃತಿಯೂ ಕೂಡಾ ನಮಗೆ ಉಪಾಸನೆಯನ್ನು ಮಾಡು ಎಂದು ಅಗತ್ಯ ಅವಕಾಶವನ್ನು ಒದಗಿಸಿಕೊಡುವ ಸಮಯವಾಗಿದ್ದು, ಬಾಹ್ಯ ಪ್ರಕೃತಿಯಲ್ಲಿನ ಪ್ರಸನ್ನತೆಯು ಉಪಾಸನೆಗಳಿಗೆ ತುಂಬಾ ಸೂಕ್ತವಾದ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ದೇವಿಯ ಅಲ್ಪ ಸೇವೆಯನ್ನು ಮಾಡಿ ಅನಂತ ಫಲವನ್ನು ಪಡೆಯಲು ನವರಾತ್ರಿಯು ಸಕಾಲ. ಆಧ್ಯಾತ್ಮಿಕವಾಗಿ ಇದು ತುಂಬ ಉತ್ತಮ ಕಾಲ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.

ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ಶ್ರೀಸಂಸ್ಥಾನದವರು, ಬಾಹ್ಯ ಪ್ರಕೃತಿಗೂ ನಮ್ಮ ದೇಹ ಹಾಗೂ ಮನಸ್ಸಿಗೂ ನೇರವಾದ ಸಂಬಂಧವಿದೆ. ಪ್ರಾಕೃತಿಕವಾಗಿ ಈ ಶರತ್ಕಾಲ ಮಳೆಗಾಲ ಕಳೆದು ಪ್ರಸನ್ನತೆಯನ್ನು ಪಡೆಯುವ ಕಾಲವಾಗಿದ್ದು, ಚಂಡಮಾರುತ ಕಳೆದು ಮಂದಮಾರುತ ಈ ಕಾಲದಲ್ಲಿ ಬೀಸಿದರೆ, ಆಗಸದಲ್ಲಿ ಅಗಸ್ತ್ಯ ನಕ್ಷತ್ರದ ಉದಯವಾಗಿ ಸತ್ತ್ವಗುಣದ ಉದಯವಾಗುತ್ತದೆ. ಮಳೆಯ ಕಾರ್ಮೋಡಗಳು ಕರಗಿ, ಜ್ಞಾನಸೂರ್ಯ ಉದಯವಾಗಿ ಹೃದಯ ಕಮಲ ತೆರೆದುಕೊಳ್ಳುವ ಕಾಲವಾಗಿದೆ ಎಂದು ಅಭಿಪ್ರಾಯಪಟ್ಟರು.

ನವರಾತ್ರ ವ್ರತದ ಆಚರಣೆಯನ್ನು ಯಾರು ಬೇಕಾದರೂ ಮಾಡಬಹುದಾಗಿದ್ದು, ಮೊದಲಿನಿಂದ ನವರಾತ್ರ ವ್ರತವನ್ನು ಆಚರಿಸುವ ಪರಂಪರೆಯನ್ನು ಹೊಂದಿರುವವರು ಆಚರಣೆಯನ್ನು ಬಿಡಬಾರದು. ಆಚರಣೆ ಬಿಟ್ಟುರುವವರು ಹಲವಾರು ರೀತಿಯಲ್ಲಿ ತೊಂದರೆಗೊಳಗಾಗಿರುವುದನ್ನು ಕಾಣಬಹುದು. ಹಾಗಾಗಿ ನವರಾತ್ರದ ಆಚರಣೆಯನ್ನು ಪ್ರಯತ್ನಪೂರ್ವಕವಾಗಿ ಆಚರಿಸಬೇಕು ಎಂದು ಕರೆನೀಡಿದರು.

ಲಲಿತೋಪಾಖ್ಯಾನವನ್ನು ಒಂದು ಬಾರಿ ಅನುಸಂಧಾನ ಮಾಡಿದಾರೆ, ಕೋಟಿ ಬಾರಿ ದೇವಿಮಹಾತ್ಮವನ್ನು ಅನುಸಂಧಾನ ಮಾಡಿದ ಫಲವಿದೆ. ದೇವಿಯ ಚರಿತ್ರೆ ಪಠನ, ಶ್ರವಣಗಳಿಗೆ ನವರಾತ್ರಿಯಲ್ಲಿ ವಿಶೇಷ ಫಲವಿದ್ದು, ಲಲಿತೋಪಾಖ್ಯಾನ, ಶ್ರೀಚಕ್ರ ಪೂಜೆಗಳನ್ನು ರಹಸ್ಯ ಎಂಬುದಾಗಿ ಪರಂಪರೆಯಲ್ಲಿ ಹೇಳಲಾಗಿದೆ. ಲಲಿತೋಪಾಖ್ಯಾನವು ಇಂದಿನ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲ. ಇದು ದೇವಿಯ ಮಹಿಮೆಯನ್ನು ವರ್ಣಿಸುವ ಕಥಾನಕವಾಗಿದ್ದು, ‘ನವರಾತ್ರ್ಯ ನಮಸ್ಯಾ’ದಲ್ಲಿ ಲಲಿತೋಪಾಖ್ಯಾನ ಪ್ರವಚನದ ಮೂಲಕ ಪ್ರತಿದಿನ ದೇವಿಯನ್ನು ವಾಗ್ಪುಷ್ಪಗಳಿಂದ ಪೂಜಿಸಲಾಗುವುದು ಎಂದರು.

**

ಇದಕ್ಕೂ ಮೊದಲು ಶ್ರೀಸಂಸ್ಥಾನದವರ ಸಾನ್ನಿಧ್ಯದಲ್ಲಿ ಮಣ್ಣಿನ ರಾಜರಾಜೇಶ್ವರಿಯ ಪ್ರತಿಷ್ಠೆ ನಡೆಯಿತು. ನವರಾತ್ರ್ಯ ನಮಸ್ಯಾದ ಅಂಗವಾಗಿ ರಾಜರಾಜೇಶ್ವರಿಯ, ಶ್ರೀಮಹಾಕಾಳಿ ಮಂತ್ರ ಹವನ, ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.

ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳಾದ ನಿವೃತ್ತ ಪೋಲಿಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಲ್, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ. ಎಲ್., ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ನವರಾತ್ರ ನಮಸ್ಯಾದ ಪ್ರಧಾನ ಸಂಯೋಜಕ ರಮೇಶ ಹೆಗಡೆ ಕೋರಮಂಗಲ, ಡಾ| ಶಾರದಾ ಜಯಗೋವಿಂದ, ರಮಾನಾಥ ಬಿ. ಎಲ್., ದಿನಪ್ರಧಾನರಾಗಿ ಶ್ರೀಮಠದ ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ದಂಪತಿಗಳು ಸೇರಿದಂತೆ ಸಾವಿರಾರು ಭಕ್ತರು ದೇವಿಯ ಉಪಾಸನೆಯಲ್ಲಿ ಭಾಗಿಗಳಾದರು.