ಬೆಂಗಳೂರು: ಭಕ್ತಿಯೇ ಮುಕ್ತಿಗೆ ಕಾರಣವಾಗಿದ್ದು, ಎಲ್ಲಿ ಪ್ರೀತಿ ಇದೆಯೋ ಅಲ್ಲಿ ಮನಸ್ಸು ಸ್ವಾಭಾವಿಕವಾಗಿ ಸ್ಥಿರವಾಗುತ್ತದೆ. ದೇವರು, ಗುರುಗಳ ಕುರಿತಾದ ಪ್ರೀತಿಗೆ ಭಕ್ತಿ ಎಂಬ ಹೆಸರಿದ್ದು, ದೇವರ ಕುರಿತಾಗಿ ಪ್ರೀತಿ ಉಂಟಾದಾಗ ನಾವು ಜೀವನದ ಕಷ್ಟಗಳನ್ನು ದಾಟುವುದರ ಜೊತೆಗೆ ಮೋಕ್ಷವನ್ನೂ ಪಡೆಯಬಹುದು ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ನುಡಿದರು.
ಗಿರಿನಗರದಲ್ಲಿರುವ ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಆಶ್ವಯುಜ ಶುದ್ಧ ತದಿಗೆಯಂದು (13-10-2026) ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ಶ್ರೀಸಂಸ್ಥಾನದವರು, ಬ್ರಹ್ಮಾಂಡ ಪುರಾಣದ ಭಾಗವಾಗಿರುವ ಲಲಿತೋಪಾಖ್ಯಾನವು ರಹಸ್ಯವಾಗಿದ್ದು, ಇದನ್ನು ಯೋಗ್ಯರಿಗೆ ಮಾತ್ರ ತಿಳಿಸಬೇಕು. ಲಲಿತೋಪಾಖ್ಯಾನದ ಕುರಿತಾಗಿ ಅನೇಕ ಪುಸ್ತಕಾದಿಗಳು ಇವೆಯಾದರೂ, ಅದು ಅಷ್ಟು ಪ್ರಚಲಿತದಲ್ಲಿಲ್ಲದೇ ಇಂದಿಗೂ ರಹಸ್ಯವಾಗಿಯೇ ಇದೆ. ಪುರಾಣ ಗ್ರಂಥಗಳು ದೇವರ ಅವತಾರಕ್ಕಿಂತ ಕಡಿಮೆಯಲ್ಲ. ಅಂದು ದೇವರು ಅವತಾರದ ಮೂಲಕ ಮಾಡಿದ್ದನ್ನೇ ಇಂದೂ ಕೂಡ ಗ್ರಂಥಗಳು ಮಾಡುತ್ತಿವೆ. ದೇವರ ಅವತಾರಗಳು ಹಾಗೂ ಅದನ್ನು ತಿಳಿಸುವ ಗ್ರಂಥಗಳು ಜೀವಿಗಳ ಕುರಿತಾಗಿ ದಯೆಯನ್ನು ಹೊಂದಿದ್ದು, ಅವು ನಮ್ಮ ಉದ್ಧಾರಕ್ಕೆ ಕಾರಣವಾಗುವಂಥವು ಎಂದರು.
ಪ್ರಪಂಚವು ಪ್ರಕೃತಿ ಹಾಗೂ ಪುರುಷಾತ್ಮಕವಾಗಿದ್ದು, ಸೃಷ್ಟಿಯ ಭೌತಿಕ ರೂಪ ಪ್ರಕೃತಿಯಾದರೇ, ಪುರುಷ ಎಂಬುದು ಅದರೊಳಗಿರುವ ಚೇತನವಾಗಿದೆ. ಪ್ರಕೃತಿ ಹಾಗೂ ಪುರುಷವನ್ನು ಸಮರ್ಪಕವಾಗಿ ಅರಿತುಕೊಂಡರೆ ಅದೇ ಮುಕ್ತಿಗೆ ಮಾರ್ಗವಾಗಿದೆ. ಪರಮ ಪಾಪಿಯೂ ಕೂಡ ಲಲಿತಾ ತ್ರಿಪುರಸುಂದರಿಯನ್ನು ಧ್ಯಾನಿಸಿದರೆ ಪರಮ ಪುಣ್ಯಾತ್ಮನಾಗುತ್ತಾನೆ ಎಂದು ತಿಳಿಸಿದರು. ಹಾಗೆಯೇ, ಪ್ರಕೃತಿಯು ರಾಜರಾಜೇಶ್ವರಿಯ ಅವತಾರವೇ ಆದ್ದರಿಂದ ಪ್ರಕೃತಿ ಮಾಲಿನ್ಯ ಅವಳಿಗೇ ಮಾಡಿದ ಅಪಚಾರವಾಗುತ್ತದೆ ಎಂದು ಎಚ್ಚರಿಸಿದರು.
ತಾಪತ್ರಯಗಳು ಜೀವನದಲ್ಲಿ ಮುಗಿಯುವುದೇ ಇಲ್ಲ. ಜೀವನದಲ್ಲಿ ಕಷ್ಟಗಳು ಸಮುದ್ರದ ತೆರೆಗಳಂತೆ ಒಂದಾದ ಮೇಲೋಂದು ಬರುತ್ತಲೇ ಇರುತ್ತದೆ. ದೇವರಲ್ಲಿ ಭಕ್ತಿಯನ್ನು ಹೊಂದಿದಾಗ ಈ ಸಂಸಾರ ಸಾಗರವನ್ನು ದಾಟಬಹುದು. ಭಾವ ಮತ್ತು ಬುದ್ಧಿಗಳಿಗೆ ಮಹತ್ವವನ್ನು ಕೊಟ್ಟು ಬದುಕಬೇಕು. ಅರಿವಿನ ಬದುಕು ನಮ್ಮದಾದಾಗ ಮಾತ್ರ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು. ಆದರೆ ನಾವಿಂದು ಹೊಟ್ಟೆಪಾಡಿನ ಬದುಕನ್ನು ಮಾಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
**
ಇಮಾಮಿ ಸಂಸ್ಥೆಯ ಸಂಸ್ಥಾಪಕ ರಾಧೇಶ್ಯಾಮ್ ಗೋಯೆಂಕಾ, ಉದ್ಯಮಿ ಆರ್.ಕೆ ಅಗರ್’ವಾಲ್, ಉದ್ಯಮಿ ಜೆ.ಕೆ. ಜವೇರ್ ಶ್ರೀಸಂಸ್ಥಾನದವರ ಆಶೀರ್ವಾದ ಪಡೆದರು. ಶ್ರೀದುರ್ಗಾಸೂಕ್ತ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ, ಭಜನಾ ಮಂಡಳಿಗಳಿಂದ ಭಜನೆ, ದುರ್ಗಾ ದೀಪನಮಸ್ಕಾರ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು. ಹಿರಿಯ ನ್ಯಾಯವಾದಿ ಗಣಪತಿ ಹೆಗಡೆ ದುವಾ, ಮಂಜುನಾಥ ರಾವ್ ಕೆ.ಎನ್, ದಿನಪ್ರಧಾನರಾಗಿ ಅರವಿಂದ ದರ್ಭೆ ದಂಪತಿಗಳು ಉಪಸ್ಥಿತರಿದ್ದರು.
























