ಅಧಿಕಮಾಸ-ಪುರುಷೋತ್ತಮ ಮಾಸ

ಉಪಾಸನೆ

ಪ್ರಸ್ತುತ ಜ್ಯೇಷ್ಠ ಮಾಸವು ಅಧಿಕ ಮಾಸವಾಗಿರುವುದರಿಂದ ಅದರ ಮಹತ್ತ್ವದ ಕುರಿತು ಈ ಲೇಖನ.

 

ಅಧಿಕಮಾಸ:

ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿದ್ವಯಮೇವ ವಾ |
ಮಲಮಾಸಃ ಸ ವಿಜ್ಞೇಯೋ ಮಾಸಃ ಸ್ಯಾತ್ತು ತ್ರಯೋದಶ ||

ಯಾವ ಚಾಂದ್ರಮಾಸದಲ್ಲಿ ಸಂಕ್ರಾಂತಿ ಇರುವುದಿಲ್ಲವೋ ಅಥವಾ ಎರಡು ಸಂಕ್ರಾಂತಿ ಇರುತ್ತದೆಯೋ ಆ ಮಾಸವು ಮಲಮಾಸವೆನಿಸಿಕೊಳ್ಳುವುದು. ಸಂಕ್ರಾಂತಿರಹಿತ ಚಾಂದ್ರಮಾನಮಾಸಕ್ಕೆ ಅಧಿಕಮಾಸವೆಂದೂ, ಎರಡು ಸಂಕ್ರಾಂತಿ ಇರುವ ಚಾಂದ್ರಮಾನಮಾಸವು ಕ್ಷಯಮಾಸವೆಂದೂ ಕರೆಯಲ್ಪಟ್ಟಿದೆ. ಆ ಸಂವತ್ಸರದಲ್ಲಿ 13 ಮಾಸಗಳಿರುತ್ತವೆ. (ಕ್ಷಯಮಾಸ ಬಂದ ವರ್ಷ ಎರಡು ಅಧಿಕಮಾಸಗಳು ಬಂದೇಬರುವುದರಿಂದ ಆ ಸಂವತ್ಸರದಲ್ಲೂ 13 ಮಾಸಗಳೇ ಇರುತ್ತವೆ.)

ಬಹುಳ ಪಂಚಮಿಯ ದಿನ ಸಂಕ್ರಾಂತಿ ಬಂದರೆ ಅದರ ಮುಂದಿನ ವರ್ಷ ಅದೇ ಮಾಸವು ಅಧಿಕವಾಗಿ ಬರುವುದು. ಇದು ಸಾಮಾನ್ಯವಾಗಿ ಅಧಿಕ ಮಾಸ ಕಂಡುಹಿಡಿಯುವ ಕ್ರಮವಾಗಿದೆ. ಹಿಂದೆ ಆದ ಅಧಿಕ ಮಾಸಕ್ಕಿಂತ ಮುಂದಿನ ಅಧಿಕ ಮಾಸವು ೩೨ ತಿಂಗಳು ೧೬ ದಿನ ೪ ಘಟಿ ಸುಮಾರಿಗೆ ಬರುವದು. (ಈ ವಿಷಯವಾಗಿ ಮೂಲದಲ್ಲಿ “ಪೂರ್ವಾಧಿಮಾಸಾ ದುತ್ತರೋsಧಿಮಾಸ: ತ್ರಿಂಶತ್ತಮ ಮಾಸಮಾರಭ್ಯ ಅಷ್ಟಸು ನವಸು ವಾ ಮಾಸೇಷ್ವನ್ಯತಮೋಭವತಿ” ಎಂದಿದೆ). ಇದರ ಸರಳಾನುವಾದ ಹೀಗಾಗುವದು: ಹಿಂದೆ ಆದ ಅಧಿಕ ಮಾಸಕ್ಕಿಂತ ಮುಂದಿನ ಅಧಿಕ ಮಾಸವು ಮೂವತ್ತನೇ ತಿಂಗಳಿಂದ ಆರಂಭಿಸಿ ಎಂಟು ಅಥವಾ ಒಂಭತ್ತು ತಿಂಗಳುಗಳೊಳಗೊಂದರಲ್ಲಾಗುವದು. ಮೂವತ್ತನೇ ತಿಂಗಳಿಂದ ಹಿಡಿದು ಎಂಟನೇ ತಿಂಗಳು-ಅಂದರೆ ಮೂವತ್ತೇಳನೇ ತಿಂಗಳಾಗುವದು.
ಸೌರಮಾನಪದ್ಧತಿಯಲ್ಲಿ ಒಂದು ವರ್ಷಕ್ಕೆ 365 ದಿನಗಳೂ, ಚಾಂದ್ರಮಾನಪದ್ಧತಿಯಲ್ಲಿ 354/355 ದಿನಗಳೂ ಬರುತ್ತವೆ. ಮೂರು ವರ್ಷಕ್ಕೆ 30 ದಿನಗಳ ಅಂತರವಾಗುವುದರಿಂದ ಸೌರಮಾನ ಮತ್ತು ಚಾಂದ್ರಮಾನ ಪದ್ಧತಿಯನ್ನು ಸರಿದೂಗಿಸಲು ಅಧಿಕಮಾಸಗಣನೆಯ ಕ್ರಮವಿದೆ.

ಅಧಿಕಮಾಸ ವರ್ಜ್ಯಗಳು:

ವಾಪ್ಯಾರಾಮತಟಾಕ ಕೂಪ ಭವನಾರಂಭ ಪ್ರತಿಷ್ಠೇವ್ರತಾ ರಂಭೋತ್ಸರ್ಗ ವಧೂಪ್ರವೇಶನ ಮಹಾದಾನಾನಿ ಸೋಮಾಷ್ಟಕೇ ।
ಗೋದಾನಾಗ್ರಯಣ ಪ್ರಪಾ ಪ್ರಥಮಕೋಪಾಕರ್ಮ ವೇದವ್ರತಂ ನೀಲೋದ್ವಾಹಮಥಾತಿಪನ್ನ ಶಿಶುಸಂಸ್ಕಾರಾನ್ ಸುರ ಸ್ಥಾಪನಮ್ ||
ದೀಕ್ಷಾಮೌಂಜಿ ವಿವಾಹ ಮುಂಡನಮಪೂರ್ವಂ ದೇವತೀರ್ಥೇಕ್ಷಣಂ ಸನ್ಯಾಸಾಗ್ನಿ ಪರಿಗ್ರಹೌ ನೃಪತಿಸಂದರ್ಶಾಭಿಷೇಕೌ ಗಮಮ್ |
ಚಾತುರ್ಮಾಸ್ಯ ಸಮಾವೃತೀ ಶ್ರವಣಯೋರ್ವೇಧಂ ಪರೀಕ್ಷಾಂ ತ್ಯಜೇದ್ ವೃದ್ಧತ್ವಾಸ್ತ ಶಿಶುತ್ವ ಇಜ್ಯಸಿತಯೋ ರ್ನ್ಯೂನಾಧಿಮಾಸೇ ತಥಾ ||

ಕೆರೆ,/ಉದ್ಯಾನ,/ಪುಷ್ಕರಿಣೀ, ಬಾವಿ, ಗೃಹಾರಂಭ, ನೂತನ ಗೃಹಪ್ರವೇಶ, ವ್ರತಾದಿಗಳ ಆರಂಭ, ಉದ್ಯಾಪನೆ, ಷೋಡಶಮಹಾದಾನಗಳು, ಸೋಮಯಾಗಾದಿಗಳು, ಅಷ್ಟಕಾಶ್ರಾದ್ಧ, ಗೋದಾನವ್ರತ, ಆಗ್ರಯಣ, ಪಾನೀಯಶಾಲೆ, ಪ್ರಥಮೋಪಾಕರ್ಮ, ಮಹಾನಾಮ್ನ್ಯಾದಿ ಮೂರು ವೇದವ್ರತಗಳು, ಕಾಮ್ಯ ವೃಷೋತ್ಸರ್ಗ, ಉಕ್ತಕಾಲದಲ್ಲಿ ಮಾಡದೆ ಅನಂತರ ಮಾಡುವ ಜಾತಕರ್ಮ ನಾಮಕರಣಾದಿ ಸಂಸ್ಕಾರಗಳು, ದೇವತಾಪ್ರತಿಷ್ಠೆ, ಮಂತ್ರದೀಕ್ಷೆ, ಉಪನಯನ, ವಿವಾಹ, ಚೂಡಾಕರ್ಮ, ಮಹಾತೀರ್ಥಕ್ಷೇತ್ರ ಗಮನ, ಅಪೂರ್ವ ದೇವತಾದರ್ಶನ, ಸಂನ್ಯಾಸಸ್ವೀಕಾರ, ಅಗ್ನ್ಯಾಧಾನ, ಮೊದಲನೇ ಸಲ ರಾಜದರ್ಶನ, ರಾಜಾಭಿಷೇಕ, ಪ್ರಥಮಬಾರಿಗೆ ಅನ್ಯದೇಶ(ರಾಜ್ಯ)ಕ್ಕೆ ಹೋಗುವುದು, ಚಾತುರ್ಮಾಸ್ಯ ಆರಂಭ, ಸಮಾವರ್ತನ, ಕರ್ಣವೇಧನ, ದಿವ್ಯಪರೀಕ್ಷೆ, ಇತ್ಯಾದಿಗಳನ್ನು ಗುರುಶುಕ್ರರ, ವೃದ್ಧತ್ವ, ಅಸ್ತ, ಬಾಲ್ಯದಲ್ಲಿ, ಅಧಿಕಮಾಸದಲ್ಲಿ, ಕ್ಷಯಮಾಸದಲ್ಲಿ ಮಾಡಬಾರದು. ಇದು ಮುಹೂರ್ತ ಚಿಂತಾಮಣಿ ಗ್ರಂಥದಲ್ಲಿ ಉಕ್ತವಾಗಿದೆ.

ಸೀಮಂತಜಾತಕಾದೀನಿ ಪ್ರಾಶನಾಂತಾನಿ ಯಾನಿ ವೈ |
ನ ದೋಷೋ ಮಲಮಾಸಸ್ಯ ಮೌಢ್ಯಸ್ಯ ಗುರುಶುಕ್ರಯೋಃ ||

ಪುಂಸವನ, ಸೀಮಂತ, ವಿಷ್ಣುಬಲಿ, ಜಾತಕರ್ಮ, ನಾಮಕರಣ, ಉಪನಿಷ್ಕ್ರಮಣ, ಅನ್ನಪ್ರಾಶನ- ಈ ಸಂಸ್ಕಾರಗಳನ್ನು ಅಧಿಕಮಾಸ(ಮಲಮಾಸ)ದಲ್ಲಿಯೂ ಮಾಡಬಹುದು. ಈ ಸಂಸ್ಕಾರಗಳನ್ನು ಉಕ್ತ ದಿನ/ತಿಂಗಳುಗಳಲ್ಲಿ ಮಾಡುವುದಾದರೆ ಮಾತ್ರ ಅನ್ವಯ. ಅತಿಕ್ರಾಂತವಾದರೆ ಬರುವುದಿಲ್ಲ.

ಅಧಿಕ ಮಾಸದ ಮಹತ್ತ್ವದ ಮುಖ್ಯಾಂಶಗಳು:

ಪುರುಷೋತ್ತಮ ಮಾಸ: ಈ ಮಾಸಕ್ಕೆ ಅಧಿಪತಿ ಶ್ರೀ ವಿಷ್ಣು (ಪುರುಷೋತ್ತಮ) ಮತ್ತು ಮಲಮಾಸವೆಂದು ಸಹ ಕರೆಯಲ್ಪಟ್ಟಿದೆ.
ಈ ತಿಂಗಳಿಗೆ ವಿಷ್ಣು ತನ್ನ ಹೆಸರನ್ನೇ ನೀಡಿ, ಈ ಸಮಯದಲ್ಲಿ ಆರಾಧನೆ ಮಾಡುವವರಿಗೆ ಹೆಚ್ಚಿನ ಫಲ ನೀಡುವುದಾಗಿ ವರ ನೀಡಿದ್ದಾನೆ.

ದಾನದ ಮಹತ್ತ್ವ: ಅಧಿಕ ಮಾಸದಲ್ಲಿ ದೀಪ, ಧಾನ್ಯ, ವಸ್ತ್ರ ಮುಂತಾದ ದಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಜಪ-ತಪ: ಈ ತಿಂಗಳಲ್ಲಿ ಮಾಡುವ ಜಪ, ತಪಸ್ಸು, ದಾನ ಮತ್ತು ವ್ರತಗಳು ಸಾಮಾನ್ಯ ದಿನಗಳಿಗಿಂತ ಹೆಚ್ಚಿನ (ಅಧಿಕ) ಪುಣ್ಯಫಲವನ್ನು ನೀಡುತ್ತವೆ. ಸ್ವಂತ ಅನುಷ್ಠಾನವು ವಿಶೇಷ ಫಲಪ್ರದವಾಗಿದೆ. ಇದು ಸತ್ಕರ್ಮಗಳನ್ನು ಹೆಚ್ಚಿಸುವ ಹಾಗೂ ಪಾಪಗಳನ್ನು ಕಳೆಯುವ ಕಾಲವೂ ಆಗಿದೆ.

ಪುರಾಣ ಶ್ರವಣ: ಅಧಿಕ ಮಾಸದ ಮಹಾತ್ಮೆಯ ಕಥೆಗಳನ್ನು ಓದುವುದು ಅಥವಾ ಕೇಳುವುದು ವಿಶೇಷ ಫಲಪ್ರದ.

ಮಲಮಾಸದಲ್ಲಿ ಮಾಡಬೇಕಾದ ವ್ರತವಿಶೇಷಗಳ ವಿಧಾನವನ್ನು ಪದ್ಮ ಪುರಾಣದ ವಚನಾನುಸಾರ ಹೇಮಾದ್ರಿಗ್ರಂಥದಲ್ಲಿ ಹೀಗೆ ಪ್ರತಿಪಾದನ ಮಾಡಲಾಗಿದೆ:

ಅಧಿಕಮಾಸದಲ್ಲಿ ಬೆಲ್ಲ ಹಾಗೂ ತುಪ್ಪಗಳ ಮಿಶ್ರಣದಿಂದ ಮಾಡಿದ ಮೂವತ್ತುಮೂರು ಅಪೂಪಗಳನ್ನು ಪ್ರತಿದಿನ ದಾನ ಮಾಡಬೇಕು. ಮೂವತ್ತು ಮೂರು ದೇವತೆಗಳು ಪ್ರಧಾನರಾಗಿರುವುದರಿಂದ ಅವರನ್ನು ಉದ್ದೇಶಿಸಿ ಮಾಡುವ ಅಪೂಪದಾನವು ಭೂಮಿದಾನ ಮಾಡಿದಷ್ಟು ಫಲಕಾರಿಯಾಗಿದೆ. ಮಲಮಾಸದಲ್ಲಿ (ಅಧಿಕ ಮಾಸ) ತುಪ್ಪ ಹಾಗೂ ಸುವರ್ಣಸಹಿತ ಈ ಅಪೂಪಗಳನ್ನು ಬ್ರಾಹ್ಮಣನಿಗೆ ಕಂಚಿನ ಪಾತ್ರೆಯಲ್ಲಿಟ್ಟು ದಾನ ಮಾಡಬೇಕು, ನಂತರ “ಹೇ ವಿಷ್ಣುರೂಪೀ ಸೂರ್ಯನೇ, ಈ ದಾನ ಮಾಡುವದರಿಂದ ನನ್ನ ಪಾಪಗಳನ್ನು ಪರಿಹರಿಸು” ಎಂದು ಪ್ರಾರ್ಥಿಸಬೇಕು. “ಸೂರ್ಯಸ್ವರೂಪನಾದ ಹೇ ನಾರಾಯಣನೇ, ಈ ಅಪೂಪಗಳ ದಾನ-ವ್ರತಾಚರಣೆಯಿಂದ ನನ್ನ ಪುತ್ರರನ್ನು, ಸಂಪತ್ತನ್ನು ಅಭಿವರ್ಧಿಸು. ಹಸ್ತಗಳಲ್ಲಿ ಚಕ್ರ, ಶಂಖ, ಗದೆಗಳನ್ನು ಧರಿಸಿದ ಹಾಗು ಗರುಡ ವಾಹನನಾದ ಹರಿಯೇ, ನನ್ನ ಮೇಲೆ ಪ್ರಸನ್ನನಾಗು. ಕಲಾ, ಕಾಷ್ಠಾ ನಿಮೇಷ ಹಾಗು ಗಳಿಗೆ (ಘಟಿಕಾ) ಇತ್ಯಾದಿ ಸಮಯದ ಸೂಕ್ಷ್ಮ ಅಂಶಗಳಿಂದ ಜಗತ್ತನ್ನು ಮೋಹಿತಗೊಳಿಸುತ್ತಿರುವ ಹೇ ಕಾಲಸ್ವರೂಪನಾದ ವಿಷ್ಣುವೇ, ನಿನಗೆ ನಮಸ್ಕಾರಗಳು. ಈ ಸ್ಥಾನವು ಕುರುಕ್ಷೇತ್ರಕ್ಕೆ ಸಮಾನವಾಗಿದೆ, ಈ ಸಮಯವು ಪರ್ವ (ಪುಣ್ಯದಿನ)ಕ್ಕೆ ಸಮಾನವಾಗಿದೆ ಹಾಗು ಈ ಬ್ರಾಹ್ಮಣನು ನಾರಾಯಣನಿಗೆ ಸಮಾನನಾಗಿದ್ದಾನೆ. ಈ ದಾನವು ಭೂಮಿದಾನಕ್ಕೆ ಸಮಾನವಾಗಿದೆ. ಹೇ ವಿಷ್ಣುವೇ, ಇದನ್ನು ಸ್ವೀಕರಿಸು. ಹೇ ಸೂರ್ಯದೇವನೇ! ರೋಗಾದಿಗಳ ಶುದ್ಧಿಗಾಗಿ, ಪಾಪದ ಪರಿಹಾರಕ್ಕಾಗಿ, ಪುತ್ರ, ಪೌತ್ರರ ಕ್ಷೇಮ ವೃದ್ಧಿಗಾಗಿ ಈ ಅಪೂಪದಾನವನ್ನು ನಿನಗೆ ಸಮರ್ಪಿಸುತ್ತೇನೆ.” ಈ ಮಂತ್ರಗಳನ್ನುಚ್ಚರಿಸುತ್ತ ಯಾವಾತನು ಮೂವತ್ತುಮೂರು ಅಪೂಪಗಳ ದಾನ ಮಾಡುತ್ತಾನೋ ಅವನಿಗೆ ಪವಿತ್ರ-ಪಾತ್ರ ಹಾಗೂ ಸಂಪತ್ತು ಲಭಿಸುತ್ತವೆ.

ಈ ಅಧಿಕಮಾಸ(ಪುರುಷೋತ್ತಮ ಮಾಸ) ದಲ್ಲಿ ಮುಂದಿನ ಶ್ಲೋಕಗಳನ್ನು ಪಠಿಸಿ ಅಪೂಪಕಾನ್ನದಾನ ಮಾಡಿದರೆ ವಿಶೇಷ ಫಲ ಲಭಿಸುವುದು. (ಅಪೂಪವೆಂದರೆ ಸುಟ್ಟೋವು, ರೊಟ್ಟಿ, ದೋಸೆ, ಹೋಳಿಗೆ ಮೊದಲಾದವು)

ವಿಷ್ಣುರೂಪೀ ಸಹಸ್ರಾಂಶುಃ ಸರ್ವಪಾಪಪ್ರಣಾಶನಃ |
ಅಪೂಪಾನ್ನಪ್ರದಾನೇನ ಮಮ ಪಾಪಂ ವ್ಯಪೋಹತು || 1 ||

ನಾರಾಯಣ ಜಗದ್ಬೀಜ ಭಾಸ್ಕರ ಪ್ರತಿರೂಪಕ |
ವ್ರತೇನಾನೇನ ಪುತ್ರಾಂಶ್ಚ ಸಂಪದಂ ಚಾಭಿವರ್ಧಯ || 2 ||

ಯಸ್ಯ ಹಸ್ತೇ ಗದಾಚಕ್ರೇ ಗರುಡೋ ಯಸ್ಯ ವಾಹನಮ್ । ಶಂಖಃ ಕರತಲೇ ಯಸ್ಯ ಸ ಮೇ ವಿಷ್ಣುಃ ಪ್ರಸೀದತು || 3 ||

ಕಲಾಕಾಷ್ಠಾದಿರೂಪೇಣ ನಿಮೇಷ ಘಟಿಕಾದಿನಾ।
ಯೋ ವಂಚಯತಿ ಭೂತಾನಿ ತಸ್ಮೈ ಕಾಲಾತ್ಮನೇ ನಮಃ || 4 ||

ಕುರುಕ್ಷೇತ್ರಮಯಂ ದೇಶಃ ಕಾಲಃ ಪರ್ವ ದ್ವಿಜೋ ಹರಿಃ ।
ಪೃಥ್ವೀಸಮಮಿದಂ ದಾನಂ ಗೃಹಾಣ ಪುರುಷೋತ್ತಮ || 5 ||

ಮಲಾನಾಂ ಚ ವಿಶುದ್ಧ್ಯರ್ಥಂ ಪಾಪಪ್ರಶಮನಾಯ ಚ ।
ಪುತ್ರಪೌತ್ರಾಭಿವೃದ್ಧ್ಯರ್ಥಂ ತವ ದಾಸ್ಯಾಮಿ ಭಾಸ್ಕರ || 6 ||

*********

ಲೇಖಕರು ಹಾಗೂ ವಿಷಯ ಸಂಗ್ರಹ:

ವೇ| ಮೂ| ಸುಚೇತನ ಘನಪಾಠಿಗಳು
(ಶ್ರೀಸಂಸ್ಥಾನ ಉಪಖಂಡದ ಸಂಯೋಜಕರು ಹಾಗೂ ಶ್ರೀಸವಾರಿ ಶಾಸ್ತ್ರಿಗಳು)

ವಿ. ರವೀಂದ್ರ ಶರ್ಮಾ ಕೋಣನಕಟ್ಟೆ
(ಧರ್ಮ ಜಿಜ್ಞಾಸೆ ಉಪಖಂಡದ ಸಂಯೋಜಕರು ಹಾಗೂ ಜ್ಯೌತಿಷ ವಿದ್ವಾಂಸರು)

ಪ್ರಕಟಣೆ: ಧರ್ಮಕರ್ಮ ಖಂಡ

Leave a Reply

Your email address will not be published. Required fields are marked *