ವಿಶ್ವಾವಸು ಸಂವತ್ಸರದ ಮಾಘ ಕೃಷ್ಣ ಚತುರ್ದಶಿಯಂದು (15-02-2026) ಶಿವರಾತ್ರಿ ಹಬ್ಬ ಜಗದಗಲ ವಿವಿಧ ರೀತಿಯಲ್ಲಿ ಆಚರಿಸಲ್ಪಟ್ಟಿದೆ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅನುಗ್ರಹ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀರಾಮಚಂದ್ರಾಪುರ ಮಠದ ವಿವಿಧ ಅಂಗಸಂಸ್ಥೆಗಳಲ್ಲಿಯೂ ಸಡಗರದಿಂದ ಶಿವರಾತ್ರಿ ಮಹಾರಾಧನೆ ನಡೆಸಲಾಯಿತು.
ಮಹಾಶಿವರಾತ್ರಿಯ ದಿನದಂದು ಅಶೋಕೆಯ ಶ್ರೀಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಮೃತ್ಯುಂಜಯ ಶಾಂತಿ-ರುದ್ರಹವನಗಳಲ್ಲದೇ, ವಿಶೇಷವಾಗಿ ರಾತ್ರಿ ನಾಲ್ಕು ಯಾಮಗಳಲ್ಲಿ ರುದ್ರಪಠನ ನಡೆಯಿತು. ಸಂಗೀತ, ಯಕ್ಷಗಾನ, ಭರತನಾಟ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮರ್ಪಿತಗೊಂಡವು. ಪರಮಪೂಜ್ಯ ಶ್ರೀಸಂಸ್ಥಾನದವರು ಶ್ರೀಗಣಪತಿ ಮತ್ತು ಶ್ರೀಮಲ್ಲಿಕಾರ್ಜುನ ಸಾನ್ನಿಧ್ಯಗಳ ದರ್ಶನ ಮಾಡಿದರು.


ಹೊಸನಗರದ ಶ್ರೀಚಂದ್ರಮೌಳೀಶ್ವರ ದೇವಾಲಯದಲ್ಲಿ ಶ್ರೀದೇವರಿಗೆ ಜಲಾಭಿಷೇಕ, ಸೀಯಾಳದ ಅಭಿಷೇಕ, ಗಂಗಾಜಲಾಭಿಷೇಕ, ಪಂಚಾಮೃತಾಭಿಷೇಕ ಸಹಿತ ಏಕಾದಶ ರುದ್ರಾಭಿಷೇಕ ನಡೆಯಿತು. ಭಕ್ಷ್ಯ, ಪಾಯಸ, ನೈವೇದ್ಯಗಳೂ ಭಕ್ತಿಯಿಂದ ಅರ್ಪಿತವಾಯಿತು. ಸರ್ವಾಲಂಕಾರಗಳೊಂದಿಗೆ ಯಾಮಪೂಜೆ ನೆರವೇರಿತು.

ಮಹಾಶಿವರಾತ್ರಿ ಪರ್ವದ ಶುಭ ಸಂದರ್ಭದಲ್ಲಿ ಶ್ರೀಮಠದ ಗಿರಿನಗರ ಶಾಖೆಯಾದ ಶ್ರೀರಾಮಾಶ್ರಮದಲ್ಲಿ ಶ್ರೀರುದ್ರ ಹೋಮ ಸಂಪನ್ನಗೊಂಡಿತು.

ಚಿತ್ತಾರಿ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಶ್ರೀಮಠದ ಶಿಷ್ಯರಿಂದ ಶತರುದ್ರ ಪಠಣ ಸೇವೆ ನಡೆಯಿತು.

ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದ ಶ್ರೀಸ್ವಯಂಭೂ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವ ವೈಭವೋಪೇತವಾಗಿ ನಡೆಯಿತು. ಖರಾಸುರ ಪ್ರತಿಷ್ಠಿತ ಪುರಾಣಪ್ರಸಿದ್ಧ ಶ್ರೀಸ್ವಯಂಭೂ ದೇವಾಲಯದ ಪೂಜಾಕಾರ್ಯದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಇದರ ಅಂಗವಾಗಿ ದೇವಾಲಯದಲ್ಲಿ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶೇಷ ಪೂಜೆಗಳು, ರುದ್ರಾಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಜಟಗನ ಪೂಜೆ, ದೀಪೋತ್ಸವ, ಮಹಾಮಂಗಳಾರತಿ ಮುಂತಾದ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಸಂಜೆ ಹಲವು ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಗಳ ರಸಪಾಕವನ್ನು ಸವಿದ ಭಕ್ತಾದಿಗಳು ಶುದ್ಧ ಬೆಲ್ಲದ ಪಾನಕವನ್ನಾಸ್ವಾದಿಸಿ ಮರಳಿದರು.

ಬಜಕೂಡ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಪ್ರತಿವರ್ಷದಂತೆ ಮಹಾಶಿವರಾತ್ರಿ ಉತ್ಸವವು ವಿಜೃಂಭಣೆಯಿಂದ ಜರುಗಿತು. ಶತರುದ್ರಾಭಿಷೇಕ, ಶಿವಪೂಜೆ, ಶಿವಪಂಚಾಕ್ಷರೀಜಪ, ಗೋಪೂಜೆ, ಗೋಪಾಲಕೃಷ್ಣ ಪೂಜೆ, ಗುರುಪಾದುಕಾಸ್ತೋತ್ರ ಪಠನ ನಡೆದವು. ಪೂರ್ವಸಂಪ್ರದಾಯದಂತೆ ವಿಭೂತಿಗಾಗಿ ಗೋಮಯಜ್ವಲನ ಮಾಡಲಾಯಿತು. ದೀಪೋತ್ಸವ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಉಪಾಹಾರ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಮೂಲಾಪುರ ಶ್ರೀಪರಮೇಶ್ವರ ದೇವಸ್ಥಾನದಲ್ಲಿಯೂ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.

ಮಾಲೂರಿನ ಶ್ರೀರಾಘವೇಂದ್ರ ಗೋ ಆಶ್ರಮದಲ್ಲಿ ಏಕಾದಶ ರುದ್ರ ಹಾಗೂ ಪಂಚಾಮೃತಾಭಿಷೇಕ ಸಮರ್ಪಣೆಗೊಂಡವು.

ಹೀಗೆ ವಿವಿಧೆಡೆಗಳಲ್ಲಿ ಶಿವರಾತ್ರಿಯ ಮಹಾಪರ್ವ ಮಹತ್ತರ ರೀತಿಯಲ್ಲಿ ಸಂಪನ್ನಗೊಂಡಿತು.