ಸಾಗರ: ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಯತ್ನ ತುಘಲಕ್ ದರ್ಬಾರ್ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಇಲ್ಲಿನ ಶ್ರೀರಾಘವೇಶ್ವರ ಭವನದಲ್ಲಿ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮಾರ್ಗದರ್ಶನ ಸಭೆಯಲ್ಲಿ ಮಾತನಾಡಿದ ಅವರು, ನಾಡಿನ ನೆಲ- ಜಲ ರಕ್ಷಣೆಗೆ ಶ್ರೀಮಠ ದಶಕಗಳಿಂದಲೂ ಶ್ರಮಿಸುತ್ತಿದೆ ಎಂದು ಹೇಳಿದರು.
ನಿಸರ್ಗದ ಮೇಲೆ ದೌರ್ಜನ್ಯವನ್ನು ಸಹಿಸೆವು. ಈ ಹುಚ್ಚು ಯೋಜನೆಗೆ ಶ್ರೀಮಠದ ಖಡಾಖಂಡಿತ ವಿರೋಧವಿದೆ. ಶರಾವತಿ ವಿಚಾರದಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟರೆ, ಶ್ರೀಮಠ ಹಾಗೂ ಶ್ರೀಮಠದ ಕಾರ್ಯಕರ್ತರು ಇದನ್ನು ವಿರೋಧಿಸಲು ನೂರು ಹೆಜ್ಜೆ ಮುಂದಿಡುತ್ತಾರೆ ಎಂದು ಘೋಷಿಸಿದರು.
ಎಲ್ಲ ಪ್ರದೇಶಗಳ ಜನರ ಬದುಕಿನ ಬಗೆಗೂ ನಮಗೆ ಗೌರವಿದೆ. ಆದರೆ ದೇವರು ಅಲ್ಲಲ್ಲಿಗೆ ಅಲ್ಲಲ್ಲೇ ಸಂಪತ್ತು ಕರುಣಿಸಿದ್ದಾನೆ. ಅದು ಅಲ್ಲೇ ಸದ್ಬಳಕೆಯಾಗಬೇಕು. ಈ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದು ಶ್ರೀಮಠದ ದೃಢ ನಿರ್ಧಾರ. ಪ್ರಕೃತಿಗೆ ಹಾನಿ ಮಾಡುವ ಯಾವ ಕಾರ್ಯವನ್ನೂ ನಾವು ಒಪ್ಪುವುದಿಲ್ಲ. ಇದು ಯಾರ ಒಳಿತಿಗೂ ಇರುವ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದರು.