ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ನಾಡಿನ ಸುಪ್ರಸಿದ್ದ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಮಲ್ಲೇಶ್ವರಂನಲ್ಲಿರುವ ಹವ್ಯಕ ಮಹಾಸಭೆಯ ಭವನದಲ್ಲಿ ಭಾನುವಾರ ನಡೆಯಿತು.
ಪ್ರಸಿದ್ಧ ಡಾ. ಎಸ್.ಆರ್. ಹೆಗಡೆ, ಡಾ. ಶ್ರೀಪಾದ ಹೆಗಡೆ, ಡಾ. ಶಿವರಾಮ ಗಂಗೋತ್ರಿ, ಡಾ. ನರಸಿಂಹ ಭಟ್, ಡಾ. ನರಸಿಂಹಕುಮಾರ್, ಡಾ. ಎಚ್.ಕೆ.ಕೆ. ಭಟ್, ಡಾ. ಈಶ್ವರ ಭಟ್, ಡಾ. ರವಿಕಿರಣ್ ಭಟ್, ಡಾ. ಶ್ವೇತಾ ಕೆ ಹೆಗಡೆ, ಡಾ. ರೇವತಿ, ಡಾ. ಕೆ.ಎ.ಎನ್ ಶಾಸ್ತ್ರಿ, ಡಾ. ಆರ್.ಸಿ. ಭಾರಧ್ವಜ್, ಡಾ. ವೀಣಾ ಶಾಸ್ತ್ರಿ, ಡಾ. ರವಿಶಂಕರ್ ಹಾಗೂ ಮಹಾಸಭೆಯ ಅಧ್ಯಕ್ಷರು ಹಾಗೂ ಪ್ರಸಿದ್ದ ವೈದ್ಯರಾದ ಡಾ. ಗಿರಿಧರ್ ಕಜೆ ಸೇರಿದಂತೆ ಹಲವಾರು ಪ್ರಸಿದ್ಧ ವೈದ್ಯರ ತಂಡ ಕಣ್ಣಿನ ತೊಂದರೆ, ಹೃದಯ ಸಮಸ್ಯೆ, ದಂತ ಪರೀಕ್ಷೆ, ಚರ್ಮವ್ಯಾಧಿ, ಸ್ತ್ರೀರೋಗ, ಕ್ಯಾನ್ಸರ್, ಸಂಧು ನೋವು, ಬೆನ್ನು ನೋವು, ಅರೆ ತಲೆನೋವು ಸೇರಿದಂತೆ ಎಲ್ಲ ಬಗೆಯ ರೋಗಗಳಿಗೆ ಅಲೋಪತಿ – ಹೋಮಿಯೋಪತಿ ಹಾಗೂ ಆಯುರ್ವೇದ ವೈದ್ಯಪದ್ದತಿಯಲ್ಲಿ ಪರೀಕ್ಷೆ ಮಾಡಿ ಚಿಕಿತ್ಸೆಗೆ ಮಾರ್ಗದರ್ಶನ ಮಾಡಲಾಯಿತು.
ಸರ್ವಸಮಾಜದ ಹಿತಕ್ಕಾಗಿ ಹವ್ಯಕ ಮಹಾಸಭೆಯ ವೈದ್ಯಕೀಯ ಹಾಗೂ ಆರೋಗ್ಯ ಸಮಿತಿ ಈ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದ್ದು, ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಸುನೇತ್ರ ಕಣ್ಣಿನ ಆಸ್ಪತ್ರೆ ಹಾಗೂ ಮಹಾವೀರ ಜೈನ್ ಆಸ್ಪತ್ರೆ ಇವರುಗಳ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ೩೦೦ಕ್ಕೂ ಹೆಚ್ಚು ಜನ ಪಾಲ್ಗೊಂಡು ಪ್ರಯೋಜನ ಪಡೆದರು.
ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಹಾಗೂ ಮಹಾಸಭೆಯ ವೈದ್ಯಕೀಯ ಹಾಗೂ ಆರೋಗ್ಯ ಸಮಿತಿಯ ಸಂಚಾಲಕರಾದ ಡಾ. ಶ್ರೀಪಾದ್ ಹೆಗಡೆ ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ ಮಳವಳಿ ಮತ್ತು ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಎಲ್ಲ ವೈದ್ಯರಿಗೆ ಹಾಗೂ ಸಹಕಾರ ನೀಡಿದವರಿಗೆ ಧನ್ಯವಾದ ಸಮರ್ಪಿಸಿದರು. ಮಹಾಸಭೆಯ ಪದಾಧಿಕಾರಿಗಳು, ಸಂಚಾಲಕರು ಉಪಸ್ಥಿತರಿದ್ದರು.