ಸತ್ಪುರುಷರಿಗೆ ಕೋಪ ಯಾವಾಗ ಬರುತ್ತದೆ? ಧರ್ಮಕ್ಕೆ ಚ್ಯುತಿಯಾದಾಗ. ಧರ್ಮಕ್ಕೆ ಚ್ಯುತಿ ಮಾಡುವ ಕಾರ್ಯ ನಡೆದರೆ, ಚ್ಯುತಿಯ ಮಾತು ಕೇಳಿ ಬಂದರೆ ಸತ್ಪುರುಷರಿಗೆ ಕೋಪ ಬರುವುದುಂಟು. ಆಗಾಗ ಕೋಪ ಬರುವವವನಲ್ಲ ರಾಮ. ಜಾಬಾಲಿಗಳ ಮಾತು ನಂಬಿಕೆಗೆ ಚ್ಯುತಿ ಬರುವಂತಿತ್ತು. ಹಾಗಾಗಿ ಅವರ ಮಾತು ಕೇಳಿದಾಗ ರಾಮನಿಗೆ ಕೋಪ ಬಂತು.
ವಸಿಷ್ಠರು ರಾಮನಲ್ಲಿ “ದಶರಥನ ಹಿರಿಯ ಮಗ ನೀನು. ನಿನ್ನ ರಾಜ್ಯವನ್ನು ನೀನು ತೆಗೆದುಕೋ, ಸ್ವೀಕರಿಸು. ಇಕ್ಷ್ವಾಕು ವಂಶದಲ್ಲಿ ಹಿರಿಯವನೇ ರಾಜನಾದದ್ದು. ಹಾಗಾಗಿ ಇದು ನಿನಗೆ ಬರುವುದು ಸಹಜ. ಅದು ತಪ್ಪುವುದು ಬೇಡ. ನೀನೇ ರಾಜ್ಯದ ದೊರೆಯಾಗು” ಎಂದರು.
“ನಾನು ನಿನ್ನ ತಂದೆಗೂ ಗುರು, ನಿನಗೂ ಗುರು. ನನ್ನ ಮಾತನ್ನು ಕೇಳಿದರೆ ಸತ್ಪುರುಷರ ಮಾತನ್ನು ಬಿಟ್ಟಂತೆ ಆಗುವುದಿಲ್ಲ. ತಾಯಿ ಧರ್ಮಶೀಲೆ. ಅವಳ ಮಾತನ್ನು ಅನುಸರಿಸಿದರೆ, ಧರ್ಮವನ್ನು ಮಾಡಿದರೆ ಸತ್ಪುರುಷರ ಮಾತನ್ನು ಬಿಟ್ಟಂತೆ ಆಗುವುದಿಲ್ಲ. ನಮಗೆ ಜನ್ಮ, ವೃತ್ತಿ ಕೊಟ್ಟದ್ದು ಮಾತಾ-ಪಿತೃಗಳು.ಅದಕ್ಕೆ ಪ್ರತ್ಯುಪಕಾರವಿಲ್ಲ. ದೇಹ, ಜೀವನ ಕೊಟ್ಟವರವರು” ಎಂದರು.
ರಾಮ ’ತಂದೆಗಿತ್ತ ಮಾತನ್ನು ಕೊಟ್ಟು ಈ ಕಾರ್ಯ ಮುಗಿಸುವೆನು’ ಎಂದ. “ತಂದೆಯ ಬಳಿ ರಾಜ್ಯವನ್ನು ಬೇಡಿದವನು ನಾನಲ್ಲ. ಅಮ್ಮನು ಹೇಳಿ ಮಾಡಿದ್ದಲ್ಲ. ಯಾವುದರಲ್ಲೂ ನನ್ನ ಪಾತ್ರವಿಲ್ಲ. ಅಣ್ಣನ ಪರವಾಗಿ ನಾನೇ ೧೪ ವರ್ಷ ವನವಾಸ ಮಾಡುತ್ತೇನೆ” ಎಂಬ ಸತ್ಯವಾದ ಪ್ರತಿಜ್ಞೆಯನ್ನು ಭರತ ಮಾಡಿದನು.
ತಂದೆಯು ಬದುಕಿದ್ದಾಗ ಮಾಡಿದ್ದನ್ನು ನಂತರ ವ್ಯತ್ಯಾಸ ಮಾಡುವಂತಿಲ್ಲ. ಉಪಧಿಯನ್ನು ಮಾಡಲಾರೆ ಎಂದ ರಾಮ. ವಸಿಷ್ಠರು “ಭರತನಲ್ಲಿ ಕಲ್ಯಾಣ ಬಿಟ್ಟು ಬೇರೇನೂ ಇಲ್ಲ. ಇವನ ಮಾತು ತೆಗೆದು ಹಾಕುವಂತಿಲ್ಲ” ಎಂದಾಗ ರಾಮ ’೧೪ ವರ್ಷಗಳ ಬಳಿಕ ಕಾಡಿನಿಂದ ಬಿಟ್ಟು ಬಂದು ತಮ್ಮನೊಂದಿಗೆ ಸೇರಿ ರಾಜ್ಯವನ್ನಾಳುವೆನು’ ಎಂದ.
ಭರತ, ರಾಮರಿಗೆ ಅವರೇ ಸಾಟಿ. ಅಪ್ರತಿಮ ತೇಜಸ್ಸುಳ್ಳವರು. ಇವರಿಗೆ ರಾಜ್ಯ ದೊಡ್ಡದಲ್ಲ, ಸತ್ಯ, ಧರ್ಮ ದೊಡ್ಡದು.
ವಸಿಷ್ಠರು ’ರಾಮ ೧೪ ವರ್ಷ ಮುಗಿಯದೆ ರಾಜ್ಯಭಾರ ಮಾಡಲಾರ. ಸ್ವರ್ಣಪಾದುಕೆಯನ್ನು ಏರು. ಇನ್ನು ಮುಂದೆ ರಾಜ್ಯದ ಹೊಣೆ ಪಾದುಕೆಯದ್ದು. ಪಾದುಕೆಯಲ್ಲಿ ರಾಮ ತನ್ನ ಚೈತನ್ಯ, ಅಂತರಂಗವನ್ನು ಇಟ್ಟ. ಪಾದುಕೆಯಲ್ಲಿ ರಾಮ ಬಂದ. ನಮ್ಮ ಮಾತು ಸಾರ್ಥಕವಾಯಿತು. ವ್ಯರ್ಥವಾಗಲಿಲ್ಲ.’ ಎಂದರು.
೧೪ ವರ್ಷಗಳವರೆಗೆ ನಿನ್ನಂತೆ ವನವಾಸ, ಹಣ್ಣುಹಂಪಲನ್ನು ತಿಂದು ಅಯೋಧ್ಯೆಯ ಹೊರಗಿರುವೆನು ಎಂದ ಭರತ. ಭರತ ಪಾದುಕೆಯನ್ನು ಸ್ವೀಕರಿಸಿ ಮೂರು ಸುತ್ತು ಬಂದು, ಪಟ್ಟದಾನೆಯ ಮೇಲಿಟ್ಟು ನಮಸ್ಕರಿಸಿದ ಎಂದು ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಧಾರಾ ರಾಮಾಯಣದ ಪ್ರವಚನ ನೀಡಿದರು.