ಮಾಸದ ಮಾತೆಯರ ಸಮಾವೇಶ

ಸುದ್ದಿ

ಪೆರಾಜೆ: ಮಾಣಿ ಶ್ರೀರಾಮಚಂದ್ರಾಪುರಮಠದಲ್ಲಿ ಮಂಗಳೂರು ಪ್ರಾಂತ್ಯದ ಮಾಸದ ಮಾತೆಯರ ಸಮಾವೇಶ ಅ.೧೭ರಂದು ನಡೆಯಿತು.

 

ಮಾತೃತ್ವಮ್ ಅಧ್ಯಕ್ಷರಾದ ಈಶ್ವರಿಬೇರ್ಕಡವು ಮಾತನಾಡಿ ಸಂಘಟನೆಯ ಗುರಿಯನ್ನು ತಲುಪಲು ನಾವು ಇನ್ನೂ ಕ್ರಮಿಸಬೇಕಾಗಿರುವ ದೂರ, ಅದಕ್ಕಾಗಿ ಮಾಸದಮಾತೆಯರನ್ನು ಗುರುತಿಸುವಲ್ಲಿ ಪ್ರತಿಯೊಬ್ಬರ ಪಾತ್ರ ಈ ಕುರಿತು ಮಾಹಿತಿ ನೀಡಿದರು. ಜೊತೆಗೆ ಮಾಸದಮಾತೆಯರನ್ನು ಗುರುತಿಸಲು ಎಲ್ಲರಲ್ಲೂ ವಿನಂತಿಸಿಕೊಂಡರು.

 

ಮಹಾಮಂಡಲ ಸಂಯೋಜಕಿ ದೇವಿಕಾ ಶಾಸ್ತ್ರಿ ಮಾತನಾಡುತ್ತಾ, ನಾವೆಲ್ಲರೂ ನಮ್ಮ ನಮ್ಮ ಸಂಶಯಗಳನ್ನು ನಮ್ಮ ಸಂಘಟನೆಯ ಪದಾಧಿಕಾರಿಗಳಲ್ಲಿ ಕೇಳಿ ಪರಿಹರಿಸಿಕೊಳ್ಳೋಣ. ಸಲಹೆಗಳಿದ್ದಲ್ಲಿ ಸಂಬಂಧಪಟ್ಟ ಪದಾಧಿಕಾರಿಗಳ ಗಮನಕ್ಕೆ ತರೋಣ. ಒಟ್ಟಿನಲ್ಲಿ ಏನೇ ಸಮಸ್ಯೆಗಳಿದ್ದಲ್ಲಿ ಪದಾಧಿಕಾರಿಗಳ ಜೊತೆ ಮುಕ್ತವಾಗಿ ಹಂಚಿಕೊಳ್ಳೋಣ ಎಂದು ಕರೆನೀಡಿದರು.

 

ಮಾತೃತ್ವಮ್‌ನ ಕೇಂದ್ರಸಮಿತಿಯ ಪದಾಧಿಕಾರಿಗಳು, ಮಂಗಳೂರು ಪ್ರಾಂತ್ಯದ ಪದಾಧಿಕಾರಿಗಳು, ೩ ನಗರ ಸಮಿತಿಗಳ ಪದಾಧಿಕಾರಿಗಳು, ಜೊತೆಗೆ ಮಾಸದ ಮಾತೆಯರು ಹಾಜರಾಗುವ ಮೂಲಕ ಕಾರ್ಯಕ್ರಮ ನಡೆಯಿತು.

 

ಮಾಸದ ಮಾತೆಯರು ಸಂಘಟನೆ ಮತ್ತು ಸಂಗ್ರಹ ಕಾರ್ಯದಲ್ಲಿನ ತಮ್ಮತಮ್ಮ ಅನುಭವಗಳನ್ನು ಹಂಚಿಕೊಂಡರು. ಎಲ್ಲರಲ್ಲೂ ಈ ಕಾರ್ಯದಲ್ಲಿನ ಉತ್ಸಾಹ ಎದ್ದುಕಾಣುತ್ತಿತ್ತು. ಮನೆಯಲ್ಲಿ ಗೋವು ಸಾಕಿಕೊಂಡೂ, ಮಾಸದಮಾತೆಯರಾಗಿ ಮಠದ ಗೋವುಗಳನ್ನು ನೋಡಿಕೊಳ್ಳಬೇಕೆನ್ನುವ ಹಂಬಲ ಕೆಲವು ಮಾತೆಯರಲ್ಲಿದ್ದುದು ಅನುಕರಣೀಯವೆನ್ನಿಸಿತು.

 

ಒಮ್ಮೆ ಗುರಿಯನ್ನು ತಲುಪಿದವರು ಇನ್ನೊಂದು ಗೋವಿನ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದು – ಅವರಿಗೆ ಇರುವ ಗೋವಿನ ಕುರಿತ ಕಾಳಜಿಯನ್ನು ತೋರುತ್ತಿತ್ತು.

 

ಮೂರು ನಗರಸಮಿತಿಗಳ ಸಂಗ್ರಹದ ವರದಿಯನ್ನು ಕೋಶಾಧ್ಯಕ್ಷೆ ಜಯಶೀಲ ಸಭೆಗೆ ತಿಳಿಸಿದರು. ಗುರಿ ತಲುಪಿದ ಮಾಸದ ಮಾತೆಯರ ಅಂಕಿಅಂಶ ಮತ್ತು ಅದಕ್ಕಿರುವ ನಿಬಂಧನೆಗಳ ಮಾಹಿತಿಯನ್ನು ಸಂಘಟನಾ ಕಾರ್ಯದರ್ಶಿ ಶೈಲಜಾಪೋಳ್ಯ ಸಭೆಗೆ ನೀಡಿದರು.

 

ಗುರುವಂದನೆಯೊಂದಿಗೆ ಪ್ರಾರಂಭವಾಗಿ, ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ ಪಠಣ ನಡೆಯಿತು. ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.

Author Details


Srimukha

Leave a Reply

Your email address will not be published. Required fields are marked *