ಗಿರಿನಗರ: ರಾಮಶ್ರಮದಲ್ಲಿ ಸಪರಿವಾರ ಸೀತಾರಾಮಚಂದ್ರದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅ.೨೧ ಮತ್ತು ೨೨ರಂದು ನಡೆಯಲಿದೆ.
ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಅ.೨೧ರಂದು ಬೆಳಿಗ್ಗೆ ೯ರಿಂದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗುರುದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಸಂಕಲ್ಪ, ಋತ್ವಿಗ್ವರಣ, ಕೌತುಕ ಬಂಧನ, ಧ್ವಜಾರೋಹಣ, ಬಲಿ ಸೇವೆಗಳು ನಡೆಯಲಿವೆ.
ಸಂಜೆ ರಾಕ್ಷೋಘ್ನಹೋಮ, ವಾಸ್ತುಪೂಜೆ, ಕಲಶಸ್ಥಾಪನೆ, ಕುಂಡಮಂಟಪ ಸಂಸ್ಕಾರ, ಅಗ್ನಿಜನನ, ಅಧಿವಾಸ ಹೋಮ, ಭೇರಿತಾಡನ, ರಂಗಪೂಜೆ, ಉತ್ಸವಾಂಗ ಬಲಿ, ನಗರ ಪ್ರದಕ್ಷಿಣೆ ನಡೆಯಲಿದೆ ಎಂದು ಅಧ್ಯಕ್ಷ ರಮೇಶ್ ಹೆಗಡೆ ಕೋರಮಂಗಲ ಮತ್ತು ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಗಡೆ ಕಣ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.೨೨ರಂದು ಬೆಳಿಗ್ಗೆ ೮.೩೦ರಿಂದ ತತ್ವಕಲಾವೃದ್ಧಿಹೋಮ, ರಾಮತಾರಕ ಹವನ, ಕಲಶಾಭಿಷೇಕ, ಧ್ವಜಾವರೋಹಣ ಮತ್ತಿತರ ವಿಧಿವಿಧಾನಗಳು ನಡೆಯಲಿವೆ. ಶ್ರೀರಾಮದೇವರಿಗೆ ನಿರ್ಮಿಸಲು ಉದ್ದೇಶಿಸಿರುವ ರಜತ ಪ್ರಭಾವಳಿಗೆ ಸಮರ್ಪಣೆಗೆ ಈ ಉತ್ಸವ ದಿನಗಳಂದು ಅವಕಾಶ ಇರುತ್ತದೆ ಎಂದು ವಿವರಿಸಿದ್ದಾರೆ.