ಗಿರಿನಗರ: ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಸಂಕಲ್ಪಸಿದ್ಧಿಗಾಗಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ನಡೆಸುತ್ತಿರುವ ಧಾರಾ ರಾಮಾಯಣ ಪ್ರವಚನದ ಅಂಗವಾಗಿ ಜುಲೈ ೧೦ರಂದು ಶ್ರೀರಾಮಾಶ್ರಮದಲ್ಲಿ ವೈಭವದ ಸೀತಾರಾಮ ಕಲ್ಯಾಣೋತ್ಸವ ಆಯೋಜಿಸಲಾಗಿದೆ.
ಸೀತಾರಾಮ ಕಲ್ಯಾಣದೊಂದಿಗೆ ಸ್ವಾಮೀಜಿಯವರ ಪ್ರವಚನದ ಬಾಲಕಾಂಡ ಸಮಾಪ್ತಿಗೊಳ್ಳಲಿದ್ದು, ಈ ತಿಂಗಳ ೧೫ರಿಂದ ಅಯೋಧ್ಯಾಕಾಂಡ ಪ್ರವಚನ ಆರಂಭವಾಗಲಿದೆ. ೧೦ರಂದು ಸಂಜೆ ೬ಕ್ಕೆ ಕಲ್ಯಾಣೋತ್ಸವ ಪೂರ್ವವಿಧಿಗಳು ಆರಂಭವಾಗಲಿದ್ದು, ೭ಕ್ಕೆ ಮುಹೂರ್ತ ವಾಚನ ಮತ್ತು ವೈದಿಕರಿಂದ ಮಂಗಲಾಷ್ಟಕ ಸೇರಿದಂತೆ ಧಾರ್ಮಿಕ ವಿಧಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಅಮೃತವರ್ಷಿಣಿ ಸಂಗೀತ ವಿದ್ಯಾಲಯದ ವಿದುಷಿ ಜಯಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಸೀತಾ ಕಲ್ಯಾಣ ಗೀತೆ ಪ್ರಸ್ತುತಪಡಿಸುವರು.
ಶ್ರೀರಾಮದೇವರಿಗೆ ಭಕ್ಷ್ಯಾಲಂಕಾರ, ವಿಶ್ವವಿದ್ಯಾಪೀಠಕ್ಕೆ ಸಮರ್ಪಣೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಭಟ್ ಬೇರ್ಕಡವು ಮತ್ತು ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಾಜ್ಯಾದ್ಯಂತ ಇರುವ ಶ್ರೀಮಠದ ಅಂಗಸಂಸ್ಥೆಗಳಲ್ಲಿ, ಹವ್ಯಕ ಮಂಡಲ, ವಲಯಗಳಲ್ಲಿ, ಶಿಷ್ಯ-ಭಕ್ತರ ಮನೆಗಳಲ್ಲಿ ಕೂಡಾ ಸೀತಾರಾಮ ಕಲ್ಯಾಣೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಮಾತೆಯರು ಸಿಹಿ ಹಂಚಿ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ನೀಡುವರು.