ಶ್ರೀ ಅಖಿಲ ಹವ್ಯಕ ಮಹಾಸಭೆಯು ಸ್ವಾತಂತ್ರ್ಯ ಪೂರ್ವದಲ್ಲೇ ಸಂಘಟಿತವಾಗಿ, ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದೆ. ಗುರುಪೀಠಗಳ ದಿವ್ಯ ಮಾರ್ಗದರ್ಶನದೊಂದಿಗೆ 1943ರಿಂದ ಸಮಾಜದ ಸಂಘಟನೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ದಿಶೆಯಲ್ಲಿ ತೊಡಗಿಸಿಕೊಂಡಿದೆ. ಅಮೃತಮಹೋತ್ಸವ ವರ್ಷದ ಹರ್ಷದಲ್ಲಿರುವ ಹವ್ಯಕ ಮಹಾಸಭೆಯು ಡಿ. 28, 29 ಹಾಗೂ 30ರಂದು ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಿದೆ.
ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ, ಹವ್ಯಕ ಸಮಾಜವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ದಿಶೆಯಲ್ಲಿ ಆಯೋಜಿಸಲಾಗುತ್ತಿದೆ. ಡಿಸೆಂಬರ್ 28ರಂದು ಅಮೃತಮಹೋತ್ಸವ ನಡೆಯಲಿದ್ದು, 29 ಹಾಗೂ 30ರಂದು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಕಾರ್ಯಕ್ರಮ ಸಂಪನ್ನವಾಗಲಿದೆ.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ 75 ವೈದಿಕರಿಗೆ, 75 ಕೃಷಿಕರಿಗೆ , 75 ಸಾಧಕರಿಗೆ , 75 ವಿದ್ಯಾರ್ಥಿಗಳಿಗೆ ಹಾಗೂ75 ಯೋಧರಿಗೆ ಸನ್ಮಾನ, 75 ಗೋದಾನ ಮತ್ತು 75 ಪುಸ್ತಕಗಳಕೋಕಾರ್ಪಣೆ ಮುಂತಾದ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ. ಹವ್ಯಕರ ಪಾರಂಪರಿಕ ಬೆಳೆಯಾದ ಅಡಿಕೆ ಕೃಷಿಯ ಸಮಗ್ರ ಪ್ರದರ್ಶನ ಹಾಗೂ ಲೋಕಮಂಗಳಕಾರಿಯಾದ ಯಜ್ಞ ಯಾಗಗಳನ್ನು ಲೋಕಮುಖಕ್ಕೆ ಸಮಗ್ರವಾಗಿ ಪರಿಚಯಿಸುವ ವಿಶೇಷ ಪ್ರದರ್ಶನಗಳು ಸಂಪನ್ನವಾಗಲಿದ್ದು, ಹವ್ಯಕ ಸಾಂಸ್ಕೃತಿಕ ಜಗತ್ತು ಕಲೆಗಳ ಮೂಲಕ ಅನಾವರಣವಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಪ್ರಾಂತ್ಯಗಳ ಹವ್ಯಕರ ಪಾಕ ವೈವಿಧ್ಯಗಳನ್ನು ಪರಿಚಯಿಸುವ ಹವ್ಯಕ ಪಾಕೋತ್ಸವ ಈ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದೆ. ರಾಷ್ಟ್ರಮಟ್ಟದ ಗಣ್ಯರುಗಳು ಅನೇಕ ಮಹನೀಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಹವ್ಯಕ ಸಂಸ್ಕೃತಿ ಸಂಸ್ಕಾರಗಳನ್ನು ಆಸ್ವಾದಿಸಿ, ಆನಂದಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.
ಹವ್ಯಕ ಸಮಾಜ ಒಂದು ಕುಟುಂಬವಾಗಿ ತನ್ನ ಶಕ್ತಿ, ಸಾಮರ್ಥ್ಯ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬುದು ಮಹಾಸಭೆಯ ಆಶಯವಾಗಿದ್ದು, ಡಿಸೆಂಬರ್ 28, 29 ಹಾಗೂ 30ರಂದು ಬೇರೆ ಕಾರ್ಯಕ್ರಮಗಳನ್ನು ನಿಗದಿ ಮಾಡಿಕೊಳ್ಳದೇ, ಮೂರೂ ದಿನಗಳ ಕಾಲ ಆಗಮಿಸಿ, ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಸಮಾಜದಪ್ರತಿಯೋರ್ವ ಬಂಧುಗಳನ್ನೂ ಮಹಾಸಭೆ ಆತ್ಮೀಯವಾಗಿ ಆಮಂತ್ರಿಸುತ್ತದೆ.
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಡಿ.28ರಂದು ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ, ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಡಿ.30ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದಿವ್ಯ ಉಪಸ್ಥಿತಿಯನ್ನು ಕರುಣಿಸಿ, ಮಾರ್ಗದರ್ಶನಾಶೀರ್ವಾದ ಮಾಡಲಿದ್ದಾರೆ. ಆನಂತರ ಸಂಜೆ ‘ಯಜ್ಞಧಾರಿಣಿ’ ರಾಮಕಥಾ ಪ್ರಸ್ತುತಿಯನ್ನು ಶ್ರೀಸಂಸ್ಥಾನದವರು ನಡೆಸಿಕೊಡಲಿದ್ದು, ಹವ್ಯಕರ ಮೂಲವಾದ ಯಜ್ಞಗಳ ಮಹತಿಯನ್ನು ಸಾರುವ ಈ ರಾಮಕಥೆಯಲ್ಲಿ 75 ಖ್ಯಾತ ಕಲಾವಿದರು ಭಾಗವಹಿಸುವುದು ವಿಶೇಷವಾಗಿದೆ.