ಭವದ ಬಂಧ ಕಳೆಯುವ ಕುಂಭಮೇಳ

ಅಂಕಣ ಜಾಗೃಯಾಮ : ಶಿಶಿರ ಅಂಗಡಿ

ಸನಾತನ ಪರಂಪರೆ ಹಿಂದಿನಿಂದಲೂ ನಿಸರ್ಗವನ್ನು ಆರಾಧಿಸುತ್ತಲೇ ಬಂದಿದೆ. ನೀರು, ಗಾಳಿ, ಅಗ್ನಿ, ಮರಗಿಡಗಳು, ಪರ್ವತ ಶಿಖರಗಳು ಇತ್ಯಾದಿ. ನದಿಗಳು ಪುರಾಣಗಳಲ್ಲಿ ಅತಿ ಮಹತ್ತ್ವದ ಸ್ಥಾನವನ್ನು ಹೊಂದಿದೆ. ಹರಿಯುವ ನದಿಗಳು ಮನುಷ್ಯನ ಜೀವನದ‌ ಮೂಲಾಧಾರವಾಗಿವೆ. ಸನಾತನಧರ್ಮದ ಹಲವಾರು ಆಚರಣೆಗಳು, ಹಬ್ಬಗಳು ನದಿಯನ್ನು ಒಳಗೊಂಡಿದೆ. ಮನುಷ್ಯ ತನ್ನ ಅಸ್ತಿತ್ವವನ್ನು, ಕೃತಜ್ಞತೆಯನ್ನು ನದಿಗಳ ಆರಾಧನೆಯ ಮೂಲಕ ಅನಾದಿಕಾಲದಿಂದಲೂ ಮಾಡುತ್ತಾ ಬಂದಿದ್ದಾನೆ. ತೀರ್ಥಕ್ಷೇತ್ರಗಳು ಬಹುತೇಕ ಜಲಸಂಪನ್ಮೂಲಗಳ ದಂಡೆಯಲ್ಲಿ ಇರುವುದು ಇನ್ನೂ ವಿಶೇಷ. ಇಲ್ಲಿ ನಡೆಯುವ ಯಜ್ಞಯಾಗಾದಿಗಳು, ಮಂತ್ರಾನುಷ್ಠಾನಗಳು, ಸಾಧನೆಗಳು ಇಲ್ಲಿನ ಪವಿತ್ರತೆಯನ್ನು ಹೆಚ್ಚಿಸಿವೆ.

 

ಅಂತಹವುಗಳಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಉತ್ಸವ,‌ ದೇಶದಲ್ಲೇ ಅತಿ ಹೆಚ್ಚು ಜನಗಳು ಒಂದೆಡೆ ಸೇರುವ ಮಹೋತ್ಸವ ಎಂದರೆ ಅದು‌ ಕುಂಭಮೇಳ.‌ ಜೀವಬಂಧನನಿಂದ ಮುಕ್ತರಾಗಿ ದೇವಬಂಧನ ಸಾಧಿಸಲಿಕ್ಕಾಗಿ ಈ ಕುಂಭಮೇಳ ಎಂಬ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪವಿತ್ರ ನದಿಗಳಲ್ಲಿ ಮುಳುಗೇಳುತ್ತಾರೆ.

 

ಕುಂಭ ಎಂಬುದು ಅತಿ ಪುರಾತನವಾಗಿ‌ ಬಳಕೆಯಲ್ಲಿರುವ ಅಂಶ. ದೇವಸ್ಥಾನಗಳಲ್ಲಿ, ಹಳೆಯ ಶಾಸನಗಳಲ್ಲಿ ‌ಹಾಗೂ ಸಿಂಧೂ‌‌ ನಾಗರಿಕತೆಯಲ್ಲಿ ಪತ್ತೆಯಾದ ಪ್ರಾಚೀನ ಅವಶೇಷಗಳಲ್ಲಿ ಕುಂಭದ ಕುರಿತು ಸ್ಪಷ್ಟ ಉಲ್ಲೇಖಗಳನ್ನು ಕಾಣಬಹುದು. ಕುಂಭ ಎಂಬುದು ಫಲವತ್ತತೆಯ ಸಂಕೇತವೂ ಹೌದು. ಮೊದಲೆಲ್ಲ ಹೊಲದಲ್ಲಿ ಬಿತ್ತುವ ಬೀಜಗಳನ್ನು ಕುಂಭದಲ್ಲಿ ಇಟ್ಟು ಪವಿತ್ರ ನದಿಗಳಲ್ಲಿ ಮುಳುಗಿಸಿಡುತ್ತಿದ್ದರಂತೆ, ಹಾಗೆ ಮಾಡಿದಾಗ ಬೀಜ ಫಲವತ್ತಾಗುತ್ತದೆ, ಅನಂತರ‌ ಬಿತ್ತಿದಾಗ ಹೆಚ್ಚು ಇಳುವರಿ ಬರುವ ನಂಬಿಕೆ ಇತ್ತು ಎಂದು ಹೇಳಲಾಗುತ್ತದೆ.

 

ಪೂರ್ಣ ಕುಂಭಮೇಳ ಪ್ರಯಾಗ, ಹರಿದ್ವಾರ, ಉಜ್ಜಯಿನಿ, ನಾಸಿಕ ಎಂಬ ನಾಲ್ಕು ತೀರ್ಥಕ್ಷೇತ್ರಗಳಲ್ಲಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಅರ್ದ ಕುಂಭಮೇಳ 6 ವರ್ಷಗಳಿಗೊಮ್ಮೆ ಹರಿದ್ವಾರ ಹಾಗೂ ಪ್ರಯಾಗದಲ್ಲಿ ಜರುಗುತ್ತದೆ. ಹಾಗೆಯೇ ಮಹಾ ಕುಂಭಮೇಳ ಎಂಬದು 12 ‘ಪೂರ್ಣ ಕುಂಭ ಮೇಳ’ಗಳ aನಂತರ, ಅಂದರೆ 144 ವರ್ಷಗಳಿಗೊಮ್ಮೆ ಅಲಹಾಬಾದ್ ನಲ್ಲಿ ಆಚರಿಸಲಾಗುತ್ತದೆ. ಹಿಂದಿನ ಮಹಾ ಕುಂಭಮೇಳವು 2001 ಆಚರಿಸಲ್ಪಟ್ಟಿತು. ಇದರಲ್ಲಿ 60 ದಶಲಕ್ಷ ಭಕ್ತಾದಿಗಳು ಪಾಲ್ಗೊಂಡಿದ್ದರು

 

ಕುಂಭ ಹಾಗೂ ಕುಂಭಸ್ನಾನದ ಉಲ್ಲೇಖವನ್ನು ಋಗ್ವೇದದಲ್ಲಿ ನಾವು ಕಾಣಬಹುದು. ಪವಿತ್ರ ಸಂಗಮದಲ್ಲಿ ಮುಳುಗೇಳುವುದರಿಂದ ನಮ್ಮಲ್ಲಿನ ಋಣಾತ್ಮಕ ಅಂಶಗಳು‌ ನಾಶವಾಗಿ ಮನಸ್ಸು, ಆತ್ಮವು ಶುದ್ಧವಾಗುತ್ತದೆ ಎಂಬುದನ್ನು ಹೇಳಲಾಗಿದೆ.

 

ಕುಂಭಮೇಳದ ಇತಿಹಾಸ ಏನು?

 

ದೇವತೆಗಳು ಅಸುರರು ಅಮರತ್ವಕ್ಕಾಗಿ ಸಮುದ್ರಮಥನ ಮಾಡಿದ ಸಂಕೇತವಾಗಿ ಕುಂಭಮೇಳ ಆಚರಿಸುತ್ತ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಕ್ಷೀರಸಾಗರದಲ್ಲಿ ದೇವತೆಗಳು ಮತ್ತು ಅಸುರರ ನಡೆಸಿದ ಮಥನದ ಅನಂತರ ದೇವವೈದ್ಯ ಧನ್ವಂತರಿ ಅಮೃತದ ಕುಂಭದೊಂದಿಗೆ ಉದ್ಭವವಾಗುತ್ತಾನೆ. ಆ ಅಮೃತದ ಕುಂಭವನ್ನು ಪಡೆಯಲು ದೇವತೆಗಳು ಮತ್ತು ಅಸುರರಲ್ಲಿ ಸ್ಪರ್ಧೆ ಏರ್ಪಟ್ಟಿತು. ವಿಷ್ಣುದೇವ ಆ ಕುಂಭವನ್ನು ತೆಗೆದುಕೊಂಡು ಸ್ವರ್ಗದೆಡೆಗೆ ಸಾಗಿದ. ಈ ಸಂದರ್ಭದಲ್ಲಿ ಹನ್ನೆರಡು ಹಗಲು ಹನ್ನೆರಡು ರಾತ್ರಿ ಅಸುರರು ವಿಷ್ಣುವನ್ನು ಅಟ್ಟಿಸಿಕೊಂಡು ಹೋಗಿದ್ದರು, ಹಲವಾರು ಕಡೆ ದೇವ-ಅಸುರರ ನಡುವೆ ಹೋರಾಟಗಳಾಗಿದ್ದು, ಆ ಸಂದರ್ಭದಲ್ಲಿ ಕುಂಭದಿಂದ ನಾಲ್ಕು ಸ್ಥಾನಗಳಲ್ಲಿ (ಪ್ರಯಾಗ, ಹರಿದ್ವಾರ, ಉಜ್ಜಯಿನಿ, ನಾಸಿಕ) ಅಮೃತದ ಹನಿಗಳನ್ನು ಚೆಲ್ಲಿದ್ದು ಆ ಸ್ಥಳಗಳಲ್ಲಿ ಕುಂಭ ಮೇಳವನ್ನು ಆಯೋಜಿಸಲಾಗುತ್ತದೆ ಎಂಬ ಪ್ರತೀತಿ ಇದೆ. ದೇವಲೋಕದ ಹನ್ನೆರಡು ದಿನ ಅಂದರೆ ಭೂಲೋಕದ ಹನ್ನೆರಡು ವರ್ಷ ಆದ್ದರಿಂದ, ಅಮೃತ ಚೆಲ್ಲಿದ‌ ನೆನಪಿಗಾಗಿ ಹನ್ನೆರಡು ವರ್ಷಕ್ಕೊಮ್ಮೆ ಈ ಐತಿಹಾಸಿಕ ಮಹೋತ್ಸವವನ್ನು ಅಮೃತ ಚೆಲ್ಲಿದೆ ಎನ್ನಲಾದ‌ ಗೋದಾವರಿ ನದಿ ತೀರದ ನಾಸಿಕ್, ಉಜ್ಜಯಿನಿಯ ಕ್ಷಿಪ್ರಾ ನದಿ, ಹರಿದ್ವಾರದ ಗಂಗಾ ನದಿ  ಮತ್ತು ಅಲಹಾಬಾದಿನಲ್ಲಿ ಗಂಗೆ-ಯಮುನೆ-ಸರಸ್ವತಿಯರ ತ್ರಿವೇಣಿ ಸಂಗಮದಲ್ಲಿ ಆಚರಿಸಲಾಗುತ್ತಿದೆ. ಆ ನದಿಗಳು ಅಮೃತತ್ವ ಪಡೆದಿವೆ ಎಂಬ ನಂಬಿಕೆಯಿದೆ. ಕುಂಭಮೇಳದ ದಿನಾಂಕ ಮತ್ತು ಸಮಯವನ್ನು ಗ್ರಹಗಳ‌ ಚಲನೆಯ ಆಧಾರದ ಮೇಲೆ ಆಯೋಜಿಸಲಾಗುತ್ತದೆ. ನಿರ್ಧಿಷ್ಟ ಅವಧಿಯಲ್ಲಿ ರವಿ, ಚಂದ್ರ, ಗುರು ಗ್ರಹಗಳು ಯಾವ ರಾಶಿಯ ಮೇಲಿದೆ ಎಂಬುದರ ಮೇಲೆ ಕುಂಭಮೇಳ ನಡೆಯುವ ಸ್ಥಳಗಳನ್ನು ನಿಗದಿಯಾಗುತ್ತದೆ.

 

ಚೈತ್ರಮಾಸದಲ್ಲಿ ಗುರು ಮೇಷ ರಾಶಿಯಲ್ಲಿದ್ದು ಅಥವಾ ರವಿಯು ವೃಷಭ ರಾಶಿಯಲ್ಲಿರುವ ಸಂದರ್ಭದಲ್ಲಿ ಉತ್ತರಾಖಂಡದ ‘ಹರಿದ್ವಾರ’ದಲ್ಲಿ ಕುಂಭಮೇಳ ನಡೆಯುತ್ತದೆ.

ಹರಿದ್ವಾರದ ‘ಹರ್ ಕಿ ಪೌರಿ’ ಎಂಬ ಸ್ಥಳದಲ್ಲಿ ವಿಷ್ಣುದೇವರು ಪಾದ ಊರಿದ್ದ ಎಂಬ ಪ್ರತೀತಿ. ಹಾಗೆಯೇ ಗಂಗೆಯು ಹಿಮಾಲಯದಿಂದ ಭಾರತದ ಬಯಲು ಪ್ರದೇಶಗಳನ್ನು ಪ್ರವೇಶಿಸುವ ಸ್ಥಳ ಇದಾಗಿದೆ. ಹರಿದ್ವಾರದ ಕುಂಭಮೇಳದ ಕೇಂದ್ರಸ್ಥಾನ ಇದೇ ಹರ್ ಕಿ ಪೌರಿ.

ಹರಿದ್ವಾರದಲ್ಲಿರುವ ಪ್ರಮುಖ ಸ್ನಾನಘಟ್ಟಗಳೆಂದರೆ ಅಸ್ತಿ ಪ್ರವಥ ಘಾಟ್, ಸುಭಾಷ್ ಘಾಟ್, ಗೌ ಘಾಟ್, ಸಪ್ತ‌ಸರೋವರ ಘಾಟ್, ಸರ್ವಾನಂದ‌ ಘಾಟ್, ಪಂತದ್ವೀಪ್ ಘಾಟ್, ಕಾಂಗ್ರಾ ಘಾಟ್, ಗಣೇಶ್ ಘಾಟ್, ಸೀತಾ ಘಾಟ್, ದಕ್ಷೇಶ್ವರ ಘಾಟ್, ಸತಿ ಘಾಟ್ ಮುಂತಾದವುಗಳು.

 

ಹರಿದ್ವಾರ ಸ್ವರ್ಗದ ದ್ವಾರ ಎಂಬ ನಂಬಿಕೆ ಹಿಂದೂ ಪುರಾಣಗಳಲ್ಲಿ ಇದೆ. ಉಳಿದ ಮೂರು ಪುಣ್ಯಕ್ಷೇತ್ರಗಳಿಗಿಂತ ಮಹತ್ತ್ವ ಈ ಹರಿದ್ವಾರದ ಕುಂಭಮೇಳಕ್ಕೆ ಇದೆ. ಇಲ್ಲಿಗೆ ಹರಿದು ಬರುವ ಜನಸಾಗರ, ಸಾಧು ಸಂತರುಗಳ ಬೃಹದಾದ ಸಂಖ್ಯೆಯೇ ಇದಕ್ಕೆ ಸಾಕ್ಷಿ.

1600ರ ಸಮಯದಲ್ಲೇ ಇಲ್ಲಿ ಕುಂಭಮೇಳ ಪ್ರಾರಂಭವಾಗಿತ್ತು ಎಂದು ಅನೇಕ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಇತ್ತೀಚೆಗೆ ಕೊನೆಯದಾಗಿ 2010ರ ಜನವರಿ 14ರಿಂದ ಎಪ್ರಿಲ್ 14ರ ವರೆಗೆ ಪೂರ್ಣ ಕುಂಭಮೇಳ ನಡೆದಿದ್ದು ಕನಿಷ್ಠ 40ದಶಲಕ್ಷ ಜನರು ಪವಿತ್ರ ಗಂಗಾಸ್ನಾನ ಮಾಡಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಎಪ್ರಿಲ್ 14ರ ದಿನ ಒಂದರಲ್ಲೇ ಸುಮಾರು 10 ದಶಲಕ್ಷ ಯಾತ್ರಿಗಳು ಗಂಗೆಯಲ್ಲಿ ಮುಳುಗೆದ್ದಿದ್ದು ದಾಖಲಾಗಿವೆ. 2016ರಲ್ಲಿ ಅರ್ಧ ಕುಂಭಮೇಳ ಇಲ್ಲಿ ಆಚರಣೆಗೊಂಡಿತ್ತು.

 

ವೈಶಾಖ ಮಾಸದಲ್ಲಿ ಗುರು ವೃಷಭ ರಾಶಿಯಲ್ಲಿದ್ದು, ರವಿಯು ಮಕರ ರಾಶಿಯಲ್ಲಿ ಇದ್ದಾಗ ಅಥವಾ  ಗುರು ಮೇಷ ರಾಶಿಯಲ್ಲಿದ್ದು, ಸೂರ್ಯ-ಚಂದ್ರರು ಮಕರ ರಾಶಿಯಲ್ಲಿದ್ದಾಗ ಉತ್ತರಪ್ರದೇಶದ ‘ಪ್ರಯಾಗ’ದಲ್ಲಿ ಕುಂಭಮೇಳ ಸಂಪನ್ನಗೊಳ್ಳುತ್ತದೆ.

ಹಿಂದೂ ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಉಲ್ಲೇಖಿಸಿದಂತೆ, ಈ ಕ್ಷೇತ್ರದ ಇತಿಹಾಸದ ಪ್ರಕಾರ ಪ್ರಯಾಗವು ದೇಶದ ಅತಿಶ್ರೇಷ್ಠವಾದ ಪುಣ್ಯಕ್ಷೇತ್ರಗಳಲ್ಲಿ ಒಂದು. ಭಾರತೀಯರೆಲ್ಲರ ಹೃದಯದಲ್ಲೂ ಪ್ರಯಾಗಕ್ಕೊಂದು ಮಹತ್ತ್ವದ ಸ್ಥಾನ ಇದೆ. ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ಅನಂತರ ಮೊದಲ ಯಜ್ಞಕಾರ್ಯ ಮಾಡಿದ್ದು ಇದೇ ಕ್ಷೇತ್ರದಲ್ಲಿ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಪ್ರ’ಯಾಗ’ ಎಂಬ ಹೆಸರು ಬಂದಿದ್ದೆಂದು ಇತಿಹಾಸ ಹೇಳುತ್ತದೆ. ಈ ಕ್ಷೇತ್ರದ ಇನ್ನೂ ಒಂದು ವಿಶೇಷ ಎಂದರೆ ಮೂರು ಪವಿತ್ರ ನದಿಗಳ‌ ತ್ರಿವೇಣಿ ಸಂಗಮ. ಗಂಗೆ, ಯಮುನೆ, ಸರಸ್ವತಿ ನದಿಗಳ ಪವಿತ್ರ ಸಂಗಮ ಕ್ಷೇತ್ರ ಇದು‌. ಈ ಸಂಗಮ ಸ್ಥಳವೇ ಇಲ್ಲಿನ ಕುಂಭಮೇಳದ ಕೇಂದ್ರಬಿಂದು.

ಇಲ್ಲಿ‌ ಈ ಹಿಂದೆ 2013ರಲ್ಲಿ ಪೂರ್ಣ ಕುಂಭಮೇಳ ಆಚರಿಸಲಾಗಿದೆ. ಇದರಲ್ಲಿ ಸುಮಾರು 120 ದಶಲಕ್ಷ‌ ಯಾತ್ರಿಗಳು ಪಾಲ್ಗೊಂಡಿದ್ದು, ಜಗತ್ತಿನ ಅತಿದೊಡ್ಡ ಮಾನವ ಸಮೂಹ ಒಂದೆಡೆ ಸೇರಿದ್ದು ಎಂದು ದಾಖಲಾಗಿದೆ. ಹಿಂದಿನ ಅರ್ಧ ಕುಂಭಮೇಳವು ಜನವರಿ 2007 ರಲ್ಲಿ 45 ದಿನಗಳ ಕಾಲ ನಡೆಯಿತು. ಇದರಲ್ಲಿ 17 ದಶಲಕ್ಷ ಹಿಂದೂ ಯಾತ್ರಿಕರು ಪಾಲ್ಗೊಂಡರು ಹಾಗೂ ಜನವರಿ 15ರ ಮಕರ ಸಂಕ್ರಾಂತಿಯ ಮಂಗಳಕರ ದಿನದಂದು 5 ದಶಲಕ್ಷಕ್ಕೂ ಹೆಚ್ಚು  ಯಾತ್ರಿಗಳು ಪವಿತ್ರ ಸ್ನಾನಗೈದಿದ್ದಾರೆ.

 

ಮಾಘ ಮಾಸದಲ್ಲಿ ಗುರು ಮತ್ತು ರವಿಯು ಸಿಂಹ ರಾಶಿಯಲ್ಲಿ ಇದ್ದಾಗ ಮಹಾರಾಷ್ಟ್ರದ ‘ನಾಸಿಕ’ದಲ್ಲಿ ಕುಂಭಮೇಳ ಆಯೋಜನೆಗೊಳ್ಳುತ್ತದೆ. ಸಮುದ್ರಮಥನದ ಅನಂತರ ವಿಷ್ಣುದೇವ ಅಮೃತದೊಂದಿಗೆ ಸ್ವರ್ಗಕ್ಕೆ ಚಲಿಸುವಾಗ ಗೋದಾವರಿ ನದಿ ತಟದಲ್ಲಿ ಅಮೃತದ ಬಿಂದುಗಳು ಚೆಲ್ಲಿದ್ದವು ಎಂದು ಪುರಾಣಗಳು ಹೇಳುತ್ತವೆ.

ರಾಮಕುಂಡ ಮತ್ತು ಕುಶವರ್ತ ಇಲ್ಲಿನ ತೀರ್ಥಘಟ್ಟಗಳಾಗಿವೆ‌. ಇಲ್ಲಿ ಸಾವಿರಾರು ಸಾಧುಗಳು, ಲಕ್ಷಾಂತರ ಭಕ್ತಾದಿಗಳು ಮುಳುಗೆದ್ದು ತಮ್ಮ ಪಾಪಾದಿಗಳನ್ನು ತೊಳೆದುಕೊಳ್ಳುತ್ತಾರೆ.

1978ರ ವರೆಗೂ ಕೇವಲ ತ್ರಯಂಬಕೇಶ್ವರದಲ್ಲಿ ಈ ಮಹೋತ್ಸವದ ಆಚರಣೆಗಳು ನಡೆಯುತ್ತಿತ್ತು. ಅನಂತರದ ಶೈವ ಮತ್ತು ವೈಷ್ಣವರ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮರಾಠಾ ಪೇಶ್ವೆಗಳು ವೈಷ್ಣವರಿಗೆ ನಾಸಿಕದಲ್ಲಿ ಆಚರಿಸುವ ಏರ್ಪಾಟು ಮಾಡಿದರು. ಅಂದಿನಿಂದ ನಾಸಿಕದ ರಾಮಕುಂಡಲ್ಲಿಯೂ ಆಚರಣೆಗಳು ನಡೆಯುತ್ತವೆ.

ಜುಲೈ 14ರಿಂದ ಸಪ್ಟೆಂಬರ್ 15, 2015ವರೆಗೆ ಇಲ್ಲಿ ಕುಂಭಮೇಳ ನಡೆದಿದ್ದು ಇತಿಹಾಸ. ಇದರಲ್ಲಿ ಒಂದು ಕೋಟಿಗೂ ಮಿಕ್ಕಿ ಭಕ್ತಾದಿಗಳು, 3ಲಕ್ಷಕ್ಕೂ ಅಧಿಕ ಸಾಧುಸಂತರು ಪವಿತ್ರ ಸ್ನಾನ‌ ಮಾಡಿರುತ್ತಾರೆ.

 

ಗುರು ತುಲಾ ರಾಶಿಯಲ್ಲಿ, ರವಿ – ಚಂದ್ರರು ಒಂದೆ ಮನೆಯಲ್ಲಿ ಇರುವ ಕಾರ್ತಿಕ ಅಮಾವಾಸ್ಯೆಯಂದು ಅಥವಾ ಗುರು ಸಿಂಹ ರಾಶಿಯಲ್ಲಿ, ಸೂರ್ಯ ಮೇಷ ರಾಶಿಯಲ್ಲಿ ಇದ್ದಾಗ ಮಧ್ಯಪ್ರದೇಶದ ‘ಉಜ್ಜಯಿನಿ’ಯಲ್ಲಿ ಕುಂಭಮೇಳ ಜರುಗುತ್ತದೆ.

ಉಜ್ಜಯಿನಿಯಲ್ಲಿ ಈ ಹಿಂದೆ 2010ರಲ್ಲಿ ಅರ್ಧ ಕುಂಭಮೇಳ ಹಾಗೂ 2016ರಲ್ಲಿ ನಡೆದ ಪೂರ್ಣ ಕುಂಭಮೇಳದಲ್ಲಿ 75ದಶಲಕ್ಷ ಯಾತ್ರಿಗಳು ಭಾಗವಹಿಸಿದ್ದರು

 

ಈ ಬಾರಿಯ ಕುಂಭಮೇಳ ಪ್ರಯಾಗದಲ್ಲಿ

 

ಉತ್ತರಪ್ರದೇಶದ ಪ್ರಯಾಗದಲ್ಲಿ ಈ ಬಾರಿಯ ಕುಂಭಮೇಳ. ಜನವರಿ 15ರಿಂದ ಕುಂಭಮೇಳ ಬೃಹತ್ ವಿಜೃಂಭಣೆಯಿಂದ ಆರಂಭವಾಗಿದ್ದು, ಈಗಾಗಲೇ ಲಕ್ಷಾನುಗಟ್ಟಲೆ‌ ಜನ ಮೇಳದಲ್ಲಿ ಪಾಲ್ಗೊಂಡು ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಜನವರಿ 15ಕ್ಕೆ ಪೌಷ ಪೂರ್ಣಿಮೆಯ ನಿಮಿತ್ತ ಶಾಹಿ ಸ್ನಾನ,  4ನೇ ಫೆಬ್ರವರಿ ಮೌನಿ ಅಮಾವಾಸ್ಯೆಯ ನಿಮಿತ್ತ ಎರಡನೇ ಶಾಹಿ ಸ್ನಾನ ಮತ್ತು ಮೊದಲ ರಾಜಯೋಗಿ ಸ್ನಾನ, 10ನೇ ಫೆಬ್ರವರಿ ವಸಂತ ಹುಣ್ಣಿಮೆಯ ನಿಮಿತ್ತ ಮೂರನೆಯ ಶಾಹಿ ಸ್ನಾನ, 19ನೇ ಫೆಬ್ರವರಿ ಮಾಘ ಹುಣ್ಣಿಮೆ ಹಾಗೂ 4ನೇ ಮಾರ್ಚ್ ಮಹಾಶಿವರಾತ್ರಿ ಇವೇ ಪ್ರಮುಖ ಆಚರಣಾ‌ ದಿನಗಳಾಗಿವೆ. ಶಾಹಿ ಸ್ನಾನದ ಸಂದರ್ಭದಲ್ಲಿ ಮೊದಲು ಸಾಧುಸಂತರು ಸ್ನಾನ ಮಾಡುತ್ತಾರೆ ಅನಂತರದಲ್ಲಿ ಇತರ ಯಾತ್ರಿಗಳು ಪವಿತ್ರನದಿಯಲ್ಲಿ ಮಿಂದೇಳುತ್ತಾರೆ.

 

ದಿವ್ಯತೆಯನ್ನು ಹೆಚ್ಚಿಸುವ ಅಖಾಡಾ ಸಾಧುಗಳು

 

ಇವರಲ್ಲಿ ಶೈವ ಹಾಗೂ ವೈಷ್ಣವ ಎರಡೂ ಪಂಥದ ಸಾಧುಗಳಿದ್ದು ಪ್ರಮುಖವಾಗಿ ನಾಗಾ ಸಾಧುಗಳು, ದೇಹಕ್ಕೆ ವಿಭೂತಿ ಬಳಿದುಕೊಂಡು ವಿವಸ್ತ್ರವಾಗಿ ಸಂಚರಿಸುವ ಇವರು ಯಾವುದೇ ರೀತಿಯ ಹವಾಮಾನ ವ್ಯತ್ಯಾಸದ  ವಾತಾವರಣಗಳಲ್ಲಿಯೂ ಯಾವುದೇ ಕಷ್ಟವಿಲ್ಲದೇ ಬದುಕುತ್ತಾರೆ. ರಾಜಯೋಗಿ ಸ್ನಾನದಲ್ಲಿ ಮೊದಲು ಸ್ನಾನ ಮಾಡುವ ಅವಕಾಶ ಇವರದ್ದಾಗಿರುತ್ತದೆ. ತಮ್ಮ ದೇಹಗಳನ್ನು ವಿವಿಧ ಕಾಠಿಣ್ಯತೆಗೆ ಒಡ್ಡುತ್ತ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುವ ಊರ್ಧ್ವವಾಹುಗಳನ್ನು ಕಾಣಬಹುದಾಗಿದೆ. ದಿನಕ್ಕೆ ಹಲವು ಬಾರಿ ಸ್ನಾನ ಹಾಗೂ ನದಿಯ ದಂಡೆಯಲ್ಲಿ ಗಂಟೆಗಟ್ಟಲೆ ಧ್ಯಾನಾದಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವ ಕಲ್ಪವಾಸಿಗಳನ್ನೂ ನೋಡಬಹುದು. ಇವರೆಲ್ಲರಿಗಿಂತ ವಿಭಿನ್ನವಾಗಿ ಕಂಡುಬರುವ ಸಾಧುಗಳೆಂದರೆ ಶೀರ್ಷಾಸನಿಗಳು, ಇವರು ತಲೆಕೆಳಗಾಗಿ ನಿಂತು ಧ್ಯಾನ ಮಾಡುತ್ತಾರೆ ಅಥವಾ ಗೋಡೆಗೆ/ಕಂಬಗಳಿಗೆ ಒರಗಿ ನಿಂತುಕೊಂಡೇ ನಿದ್ದೆ ಮಾಡುತ್ತಾರೆ. ಇನ್ನು ಪರಿವ್ರಾಜಕರು, ಇವರು ಮೌನವೃತದಲ್ಲಿರುತ್ತಾರೆ. ಗಂಟೆಯನ್ನು ಹಿಡಿದುಕೊಂಡು ಸಂಚರಿಸುವ ಇವರು ಗಂಟೆ ಬಡಿಯುವ ಮೂಲಕ ತಮ್ಮ ಉಪಸ್ಥಿತಿಯನ್ನು ತಿಳಿಸುತ್ತಾರೆ.

 

ಕುಂಭಮೇಳದ ಔಚಿತ್ಯ ಏನೆಂದರೆ ಇದರಲ್ಲಿ ಜಗತ್ತಿನ ಎಲ್ಲ ಸಂಸ್ಕೃತಿಗಳ ಮಹಾಸಂಗಮ ಆಗುವುದು. ಆಧ್ಯಾತ್ಮಿಕ ಪ್ರಜ್ಞೆ‌ ಜಾಗೃತವಾಗುವುದು. ಎಲ್ಲ ಜಾತಿ, ವರ್ಗ, ಲಿಂಗ, ಪರಂಪರೆಯ ಭಕ್ತಾದಿಗಳು, ಸಾಧುಸಂತರೊಂದಿಗೆ ಬೆರೆತಾಗ ಮಾನವೀಯತೆ, ಜೀವನ ಎಂದರೇನು ಎಂಬುದು ನಿಜಾರ್ಥದಲ್ಲಿ ಅರ್ಥವಾಗುತ್ತದೆ. ಇಲ್ಲಿ ಮನುಷ್ಯ ಮತ್ತು ಪ್ರಕೃತಿಯ ಸಮಾಗಮ ಆಗಲಿದ್ದು‌, ಇದೊಂದು ಅರಿವಿನ ದಾರಿಯಾಗಿದೆ. ಕೋಟ್ಯಾಂತರ ಜನರು, ಸಾಧುಸಂತರು, ಋಷಿಮುನಿಗಳು ಒಟ್ಟಾಗಿದ್ದು ದೇಶಾದ್ಯಂತದ ಸಂಸ್ಕೃತಿಗಳ ಪರಂಪರೆಗಳ ವಿನಿಮಯ ಆಗುತ್ತದೆ.

 

ಕುಂಭಮೇಳದ‌ ಪ್ರಮುಖ ವಿಧಿವಿಧಾನಗಳು

 

ಲೇಖನದ ಪ್ರಾರಂಭದಲ್ಲಿ ಹೇಳಿದಂತೆ ಈ ಕುಂಭಮೇಳದಲ್ಲೂ ಪವಿತ್ರ ನದಿಗಳಿಗೆ ಆರತಿ ಸಮರ್ಪಣೆಯೆ ಅತಿಮುಖ್ಯವಾದ ಆಚರಣೆ. ಸಾವಿರದಿಂದ ಆರಂಭಿಸಿ ಹಲವು ಲಕ್ಷ ಭಕ್ತರು ಇಂತಹ ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ. ಸಾಮಾನ್ಯವಾಗಿ 5 ಅಥವಾ 7 ಜನ ಪುರೋಹಿತರು ಬೆಳಿಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ ಮಂತ್ರಶ್ಲೋಕಗಳನ್ನು ಉಚ್ಚರಿಸುತ್ತಾ ನದಿ ದಂಡೆಯ ಮೇಲೆ‌ ನಿಂತು ಅತ್ಯಂತ ಆಕರ್ಷಕವಾಗಿ ಅಲಂಕಾರಗೊಳಿಸಿದ ದೀಪಗಳಿಂದ ಪವಿತ್ರ ನದಿಗಳಿಗೆ ಆರತಿ ಮಾಡುತ್ತಾರೆ.

 

ಅಖಾರಾ ಸಾಧುಗಳ ಸಾಂಪ್ರದಾಯಿಕ ಮೆರವಣಿಗೆ.‌ ಇದಕ್ಕೆ ಪೆಶವಾಯ್ ಎಂದು ಕರೆಯುತ್ತಾರೆ. ಆನೆ, ಕುದುರೆ, ರಥದ ಮೇಲೆ ಹಾಗೂ ಕಾಲ್ನಡಿಗೆಯಲ್ಲಿ ಆಯುಧಗಳನ್ನು ಝಳಪಿಸುತ್ತಾ ಸಾಗುತ್ತಾರೆ. ನಾಗಾಸಾಧುಗಳ ‘ಶಾಹಿ ಸ್ನಾನ’ ಕೂಡ ಒಂದು ಮುಖ್ಯ ಆಚರಣೆ.

 

ಇ‌ನ್ನು ಸಾಮಾಜಿಕವಾಗಿ ವಿವಿಧ ಯಜ್ಞ ಯಾಗಾದಿಗಳು, ವೈದಿಕ ಮಂತ್ರಗಳ ಪಠಣ, ಅನುಷ್ಠಾನಗಳು‌, ಸಾಂಪ್ರದಾಯಿಕ ನೃತ್ಯಗಳು, ಭಕ್ತಿಗೀತೆಗಳು, ಪೌರಾಣಿಕ ಕಥೆಗಳು ಮತ್ತು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಕೂಡ ಇರುತ್ತವೆ.  ಸಾಧುಸಂತರು ಮತ್ತು ಋಷಿಗಳು ನಡೆಸುವ ಧಾರ್ಮಿಕ ಸಭೆಗಳು, ಚರ್ಚೆಗಳೂ ಇರುತ್ತವೆ. ಕುಂಭಮೇಳದ ಪ್ರಮುಖವಾದ ಒಂದು ಆಚರಣೆ ಎಂದರೆ ಬಡವರಿಗೆ ಮತ್ತು ಅಸಹಾಯಕರಿಗೆ, ಸಂತರಿಗೆ ಮತ್ತು ಗೋವುಗಳಿಗೆ ದಾನ ನೀಡುವುದು. ದಾನಗಳು ಮೂಲಭೂತ ಅವಶ್ಯಕತೆಗಳಾದ ಆಹಾರ ಮತ್ತು ಬಟ್ಟೆಗಳಿಂದ ಹಿಡಿದು ಅಮೂಲ್ಯ ಲೋಹಗಳನ್ನು ಒಳಗೊಂಡಿರುತ್ತದೆ.

 

ಕರ್ನಾಟಕದ ಕುಂಭಮೇಳ

 

ಕರ್ನಾಟಕದ ತ್ರಿವೇಣಿ ಸಂಗಮವಾದ ಮೈಸೂರು ಜಿಲ್ಲೆಯ ತಿ.ನರಸೀಪುರವು ಕಾವೇರಿ, ಕಪಿಲಾ ಹಾಗೂ ಸ್ಪಟಿಕ  ಎಂಬ ಗುಪ್ತಗಾಮಿನಿ ಸರೋವರಗಳ ಸಂಗಮದ‌ ಪುಣ್ಯಕ್ಷೇತ್ರವಾಗಿದ್ದು, ಪ್ರಯಾಗದಷ್ಟೇ ಪವಿತ್ರ ಕ್ಷೇತ್ರ ಎಂಬ ನಂಬಿಕೆ ಇದೆ. ಇದಕ್ಕೆ ದಕ್ಷಿಣದ ಕಾಶಿ ಎಂಬ ಹೆಸರೂ ಇದೆ. ಮೂರು ಪವಿತ್ರ ತೀರ್ಥಗಳ ಸಂಗಮದ ಸಂಕೇತವಾಗಿ ತಿರುಮ-ಕೂಡಲು ಎಂಬ ಹೆಸರು ನರಸೀಪುರದ ಜೊತೆಗೆ ಜೋಡಿಸಿಕೊಂಡು ಕ್ಷೇತ್ರದ ಹೆಸರು ತಿರುಮಕೂಡಲು ನರಸೀಪುರ ಎಂಬುದಾಗಿದೆ. ಮೂರು ನದಿಗಳ‌ ಸಂಗಮ ಸ್ಥಳ ತ್ರಿಮಕುಟ ಕ್ಷೇತ್ರ ಎಂದು ಈ ಸ್ಥಳ ಸ್ಕಂದಪುರಾಣದಲ್ಲಿ ಉಲ್ಲೇಖಿತವಾಗಿದೆ. ಅಗಸ್ತ್ಯ ಋಷಿಗಳು ಇಲ್ಲಿಗೆ ಬಂದಾಗ ಅವರಿಗೆ ದಕ್ಷಿಣಕಾಶಿಯ ಕಲ್ಪನೆ ಬಂದಿತ್ತು ಎಂದೂ ಹೇಳಲಾಗುತ್ತದೆ.

 

ಇತ್ತೀಚೆಗೆ, ಅಂದರೆ 1989ರಿಂದ ತಿ.ನರಸಿಪುರದಲ್ಲಿ ಕುಂಭಮೇಳದ ಆಚರಣೆ ಆರಂಭವಾಗಿದ್ದು, ವಿವಿಧ ಮಠಾಧೀಶರ ನೇತೃತ್ವದಲ್ಲಿ ಮೂರು ವರ್ಷಕ್ಕೊಮ್ಮೆ ಆಯೋಜಿಸಲ್ಪಡುತ್ತದೆ. ಸದ್ಯದಲ್ಲೇ ಅಂದರೆ 2019ರ ಫೆಬ್ರವರಿ 17 ರಿಂದ‌ 19ರ ವರೆಗೆ ಮೂರು ದಿನಗಳ ಇಲ್ಲಿ ಕುಂಭಮೇಳ ನಡೆಯಲಿದ್ದು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವಿಶೇಷವಾಗಿ ಕಾವೇರಿ ನದಿ ತೀರದಲ್ಲಿ ಧಾರ್ಮಿಕ ಸಭೆಗಳನ್ನು ಆಯೋಜಿಸಲಾಗುತ್ತದೆ. ಗಂಗಾಪೂಜೆ, ದೀಪಾರತಿ, ಅಗಸ್ತ್ಯೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ, ನವಗ್ರಹ ಹೋಮ, ಸುದರ್ಶನ ಹೋಮ, ಭಾಗವಹಿಸಿದ ಮಹಾಮಂಡಲೇಶ್ವರರ, ಸಾಧುಸಂತರ ಸಂಗಮ ಪ್ರವೇಶ, ಏಳು ನದಿಗಳ ಪುಣ್ಯತೀರ್ಥಗಳನ್ನು ಸಂಗಮ ಕ್ಷೇತ್ರದಲ್ಲಿ ಸಂಯೋಜಿಸುವುದು, ಪುಣ್ಯಸ್ನಾನ ಇವೇ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

 

ಜೀವನದಲ್ಲಿ ಒಮ್ಮೆಯಾದರೂ ಕುಂಭಮೇಳದಲ್ಲಿ ಭಾಗವಹಿಸುವ ಮೂಲಕ ಹೃನ್ಮನಗಳನ್ನು ಶುದ್ಧಿಗೊಳಿಸಿಕೊಂಡು, ಪಾಪಕರ್ಮಗಳನ್ನು ತೊಳೆದುಕೊಂಡು ಮೋಕ್ಷದ ದಾರಿ ಹಿಡಿಯೋಣ.

 

Author Details


Srimukha

Leave a Reply

Your email address will not be published. Required fields are marked *