ಅಭಿಮಾನಿಗಳ ದೇವರಿಗೆ 90ನೇ ಜಯಂತಿ

ಅಂಕಣ ಜಾಗೃಯಾಮ : ಶಿಶಿರ ಅಂಗಡಿ

ಕೇವಲ ಮೂರನೇ ತರಗತಿಯವರೆಗೆ ಓದಿ ದೇಶ ಹೆಮ್ಮೆ ಪಡುವಂತಹ ನೂರಾರು ಸಾಧನೆ ಮಾಡಿ ಇಂದಿಗೂ ಕೋಟ್ಯಂತರ ಕನ್ನಡಿಗರ ಸ್ಪೂರ್ತಿಯ ಶಕ್ತಿಯಾಗಿರುವ ವರನಟ ಡಾ|| ರಾಜ್‍ಕುಮಾರ್ ಹುಟ್ಟಿದ್ದು ಎಪ್ರಿಲ್ 24, 1929 ನಿನ್ನೆ ಅಂದರೆ ಎಪ್ರಿಲ್ 24, 2019ಕ್ಕೆ ಅವರು ಹುಟ್ಟಿ 90 ವರ್ಷಗಳಾದವು. ಈ ಸಂದರ್ಭದಲ್ಲಿ ಅವರ ಸಾಧನೆಗಳು, ಅವರ ಜೀವ‌ನದ ಕುರಿತು ನಾವು ತಿಳಿಯಲೇಬೇಕಾದ ಕೆಲವು ಅಂಶಗಳನ್ನು ನೋಡೋಣ.



ಡಾ|| ರಾಜ್ ಅವರ ಜನ್ಮತಃ ಬಂದ ನಾಮ ಮುತ್ತುರಾಜ್. ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಗೌಡರು ಗುಬ್ಬಿ ಕಂಪನಿಯಲ್ಲಿ ಖ್ಯಾತ ರಂಗಭೂಮಿ ಕಲಾವಿದರಾಗಿದ್ದರು. ಬಡತನದ ಕಾರಣದಿಂದ ಓದು ಮೊಟಕುಗೊಳಿಸಿ ತಂದೆಯನ್ನು ಹಿಂಬಾಲಿಸಿದ ಮುತ್ತುರಾಜ್ ಗುಬ್ಬಿ ವೀರಣ್ಣ ಕಂಪನಿಯೇ ಅವರಿಗೆ ವಿಶ್ವವಿದ್ಯಾಲಯವಾಯಿತು ಎಂದು ಅವರೇ ಮುಂದೆ ಹೇಳಿಕೊಂಡಿದ್ದಾರೆ. ತಂದೆಯವರು ಅಲ್ಲಿಂದ ಎಮ್‌.ವಿ.ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿ ಸೇರಿದಾಗ ಮುತ್ತುರಾಜ್ ಅವರಿಗೆ ಒಮ್ಮೆ ಅರ್ಜುನನ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ತಂದೆಯವರ ನಿಧನದ ನಂತರ ಮತ್ತೆ ಗುಬ್ಬಿ ಕಂಪನಿ ಸೇರಿ ‘ಭೂಕೈಲಾಸ’ ನಾಟಕದಲ್ಲಿ ಅಭಿನಯಿಸಿದ್ದಾರೆ.


ಭಕ್ತಪ್ರಹ್ಲಾದ, ಶ್ರೀನಿವಾಸ ಕಲ್ಯಾಣ ಚಿತ್ರಗಳಲ್ಲಿ ಅಭಿನಯಿಸಿದ್ದಾದರೂ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕನಾಗಿ ನಟಿಸಿದ ಮೊದಲ ಚಿತ್ರ 1954ರಲ್ಲಿ ಬಿಡುಗಡೆ ಆದ “ಬೇಡರ ಕಣ್ಣಪ್ಪ” ಚಿತ್ರ. ಉತ್ತಮ ಚಿತ್ರಕ್ಕಾಗಿ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಗಳಿಸಿದ್ದು ಈಗ ಇತಿಹಾಸ. 2000ರಲ್ಲಿ ನಾಯಕ ನಟನಾಗಿ ತಮ್ಮ ಕೊನೆಯ ಚಿತ್ರ ಶಬ್ದವೇದಿಯಲ್ಲಿ ಅಭಿನಯಿಸಿದ್ದರು. ಐತಿಹಾಸಿಕ, ಭಕ್ತಿ ಪ್ರಧಾನ, ಪೌರಾಣಿಕ, ಪತ್ತೆದಾರಿ, ಖಳನಾಯಕನಾಗಿ ಹೀಗೆ ಎಲ್ಲ ಬಗೆಯ ಪಾತ್ರಗಳಿಗೂ ಜೀವತುಂಬಿ ಸೈ ಎನಿಸಿಕೊಂಡಿದ್ದರು. ಅವರ ಸುದೀರ್ಘ ವೃತ್ತಿಜೀವನದಲ್ಲಿ ಸುಮಾರು 206 ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ರಸಿಕರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅಷ್ಟೇ ಅಲ್ಲದೇ ವೃತ್ತಿಪರ ಹಿನ್ನೆಲೆ ಗಾಯಕರಾಗಿ ಸುಮಾರು 300ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.



ಕನ್ನಡ ಚಿತ್ರರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಏಕೈಕ ನಟ ಎಂದರೆ ಅದು ನಮ್ಮ ಡಾ|| ರಾಜ್‍ಕುಮಾರ್. ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆಯುವ ಮೂಲಕ ನಟನೆಗಾಗಿ ಈ ಗೌರವ ಗಳಿಸಿದ ಭಾರತದಲ್ಲೇ ಮೊದಲ ಚಿತ್ರನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಮೇರಿಕದ ಕೆಂಟುಕಿ ಎಂಬ ರಾಜ್ಯ ಕೊಡಮಾಡುವ ಪ್ರತಿಷ್ಠಿತ ಕೆಂಟುಕಿ ಕರ್ನಲ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಸುಮಾರು ಐವತ್ತು ವರ್ಷಗಳ ವೃತ್ತಿಜೀವನದಲ್ಲಿ ಕನ್ನಡ ಭಾಷೆ ಒಂದರಲ್ಲೇ ನಟಿಸಿದ ಅಪರೂಪದ ಮಾಣಿಕ್ಯ ನಮ್ಮ ಅಣ್ಣಾವ್ರು. ಕರ್ನಾಟಕ ರಾಜ್ಯ ಸರ್ಕಾರವು ಅತ್ಯುತ್ತಮ ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಕೊಡಗೆ ನೀಡಿದವರಿಗೆ ರಾಜ್‍ಕುಮಾರ್ ಅವರ ಹೆಸರಲ್ಲಿ ಅವರ ಜೀವಿತಾವಧಿಯಲ್ಲೇ ವಾರ್ಷಿಕವಾಗಿ ಪ್ರಶಸ್ತಿ ಕೊಡಮಾಡುತ್ತದೆ. ವ್ಯಕ್ತಿ ಜೀವಂತ ಇರುವಾಗಲೇ ಅವರ ಹೆಸರಲ್ಲಿ ಪ್ರಶಸ್ತಿ ಕೊಡುತ್ತಿದ್ದುದು ರಾಜ್‍ಕುಮಾರ್ ಅವರ ಜೀವನದಲ್ಲಿ ಮಾತ್ರ ಸಾಧ್ಯವಾಗಿದೆ ಎಂಬುದು ನಮಗೆಲ್ಲ ಹೆಮ್ಮೆಯ ವಿಚಾರ. ಸಾರಾ ಗೋವಿಂದು ಅವರ ನೇತೃತ್ವದಲ್ಲಿ ಡಾ|| ರಾಜ್ ಅವರ ಅಭಿಮಾನಿ ಸಂಘಟನೆಗಳ ಒಕ್ಕೂಟವನ್ನು ಸ್ಥಾಪಿಸಿದಾಗ ಅಧಿಕೃತವಾಗಿ ನೊಂದಾಯಿಸಿದ ಡಾ|| ರಾಜ್ ಅಭಿಮಾನಿ ಸಂಘಟನೆಗಳ ಸಂಖ್ಯೆ ಹತ್ತಿರ ಹತ್ತಿರ 5000! ನೊಂದಣಿಯಾಗದ ಸಂಘಟನೆಗಳು ಇನ್ನು ಅದೆಷ್ಟೊ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಸಂಘಟನೆಗಳನ್ನು ಹೊಂದಿರುವ ನಟ ರಾಜಕುಮಾರ್ ಮಾತ್ರ ಎಂಬುದು ಕನ್ನಡಿಗರಿಗೆ ಹೆಮ್ಮೆ.  ನಾಯಕನಾಗಿ ನಟಿಸಿದ ಮೊದಲ ಚಿತ್ರವೇ ಉತ್ತಮ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದೂ ಇವರ ಒಂದು ದಾಖಲೆ.



1995ರಲ್ಲಿ ಭಾರತ ಸರ್ಕಾರ ಚಲನಚಿತ್ರ ರಂಗದಲ್ಲಿನ ವಿಶೇಷ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಹಾಗೂ ಏಕೈಕ ಕನ್ನಡ ಚಿತ್ರನಟ ಎಂದರೆ ಅದು ಡಾ|| ರಾಜಕುಮಾರ್.



ವರನಟ, ಕರ್ನಾಟಕ ರತ್ನ, ಕನ್ನಡ ಕಂಠೀರವ, ಕಲಾಕೌಸ್ತುಭ, ರಸಿಕರ ರಾಜ, ಗಾನ ಗಂಧರ್ವ, ನಟಶ್ರೇಷ್ಠ ಸೇರಿದಂತೆ ಹತ್ತಾರು ಬಿರುದುಗಳನ್ನು ಪಡೆದ ಒಬ್ಬನೇ ನಟ ಅಂತಿದ್ದರೆ ಅದು ಡಾ|| ರಾಜ್ ಮಾತ್ರ. ಇವಷ್ಟೇ ಅಲ್ಲದೇ, 1983ರಲ್ಲಿ ಚಲನಚಿತ್ರ ರಂಗದಲ್ಲಿನ ವಿಶಿಷ್ಟ ಸಾಧನೆಗಾಗಿ ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ  ಏಕೈಕ ಕನ್ನಡ ನಟ ಇವರು. ಜೀವನ ಚೈತ್ರ ಚಿತ್ರದ ‘ನಾದಮಯ ಈ ಲೋಕವೆಲ್ಲ’ ಎಂಬ ಮನಮೋಹಕ ಹಾಡಿಗೆ ದನಿಯಾಗಿಸಿದ್ದಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕನಾಗಿ 1992ರಲ್ಲಿ ರಾಷ್ಟ್ರಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 1963ರಲ್ಲಿ ಸಂತ ತುಕಾರಾಮ್ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರಪತಿ ಪದಕ ಗಳಿಸಿದ್ದಾರೆ. ಹೀಗೆ ನಟನೆ ಹಾಗೂ ಗಾಯನ ಎರಡರಲ್ಲೂ ರಾಷ್ಟ್ರ ಪ್ರಶಸ್ತಿ ಗಳಿಸಿದ ಏಕೈಕ ಕಲಾವಿದ.



ಭಾರತ ಚಿತ್ರರಂಗದಲ್ಲೇ ನಟನೆಗಾಗಿ 9 ರಾಜ್ಯ ಪ್ರಶಸ್ತಿಗಳು, 10 ಫಿಲಂ ಫೇರ್ ಪ್ರಶಸ್ತಿಗಳು, ಹಿನ್ನೆಲೆ ಗಾಯನಕ್ಕಾಗಿ 2 ರಾಜ್ಯ ಪ್ರಶಸ್ತಿ ಪಡೆದ ಏಕೈಕ ಕಲಾವಿದ ಡಾ|| ರಾಜಕುಮಾರ್. ಒಂದೇ ವರ್ಷದಲ್ಲಿ 14+ ಸಿನೆಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಯಾರಿಗಾದರೂ ಇದ್ದರೆ ಅದು ವರನಟ ಮಾತ್ರ. ಅದೂ ಒಂದು ಬಾರಿ ಅಲ್ಲ 1964,1968 ಸಾಲುಗಳಲ್ಲಿ ಎರಡೆರಡು ಸಲ ಈ ಸಾಧನೆ ಮಾಡಿದ್ದಾರೆ. ವೃತ್ತಿಯಲ್ಲಿ ಉತ್ತುಂಗದಲ್ಲಿದ್ದಾಗ ವರ್ಷದಲ್ಲಿ ಡಾ|| ರಾಜ್ ಅವರ ಸಾಮಾನ್ಯವಾಗಿ ಹತ್ತು ಚಲನಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಶೇ 95% ಯಶಸ್ಸಿನ ಸಾಧನೆಯನ್ನು ತಮ್ಮ ವೃತ್ತಿಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು. ತಾಯಿ ಹಾಗೂ ಮಗಳೊಂದಿಗೆ ನಾಯಕನಾಗಿ ನಟಿಸಿದ ಅಪರೂಪದ ನಟ ಇವರು. ದೊರೈ ಭಗವಾನ್ ಅವರ ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿ ಡಾ|| ರಾಜ್ ಅವರು ತಮ್ಮ ವೃತ್ತಿಜೀವನದ ಏಕೈಕ ಇಂಗ್ಲಿಷ್ ಹಾಡನ್ನು ಹಾಡಿದ್ದಾರೆ.



ಆಂದ್ರ ಸರ್ಕಾರ ಚಿತ್ರರಂಗದಲ್ಲಿನ ವಿಶೇಷ ಸಾಧನೆಗಾಗಿ ಕೊಡುವ ‘ಎನ್.ಟಿ.ಆರ್. ಅವಾರ್ಡ್’ನ್ನು ಪಡೆದ ಏಕೈಕ ಕನ್ನಡಿಗ ಡಾ|| ರಾಜ್ ಅವರು. ಅತಿ ಹೆಚ್ಚು ದಿನಗಳ ಕಾಲ ಓಡಿದ ಕನ್ನಡ ಚಿತ್ರದ ನಾಯಕ ಇವರು. ಡಾ|| ರಾಜ್ ನಟಿಸಿದ ಬಂಗಾರದ ಮನುಷ್ಯ ಒಂದು ಚಿತ್ರಮಂದಿರದಲ್ಲಿ ಎರಡು ವರ್ಷ ಓಡಿದರೆ, ಇನ್ನೈದು ಚಿತ್ರಮಂದಿರಗಳಲ್ಲಿ ಒಂದೊಂದು ವರ್ಷ ಓಡಿದೆ ಎನ್ನುತ್ತದೆ ಇತಿಹಾಸ.


ಕನ್ನಡ ಪರ ಹೋರಾಟಗಳಲ್ಲಿ ಪ್ರಮುಖವಾಗಿ ಗೋಕಾಕ ಚಳುವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು, ರಾಜ್ಯಾದ್ಯಂತ ಪ್ರವಾಸ ಮಾಡಿ ಜನರನ್ನು ಸಂಘಟಿಸಿ ಕನ್ನಡದ ಅಸ್ಮಿತೆಯನ್ನು ಸಾರಿದರು‌. ಗೋಕಾಕ್ ಚಳುವಳಿಗೆ ಒಂದು ಹಂತಕ್ಕೆ ಬರಲು ರಾಜಕುಮಾರ್ ಅವರೇ ಕಾರಣ ಎಂದರೆ ಅತಿಶಯೋಕ್ತಿ ಆಗಲಾರದು.



ರಾಜಕೀಯ ಅವರನ್ನು ಬಾರಿ ಬಾರಿ ಕೈಬೀಸಿ ಕರೆಯಿತು. ಆದರೆ ಅವರೆಂದೂ ಅದನ್ನು ಒಪ್ಪಿಕೊಂಡಿಲ್ಲ. ತಮಗಿರುವ ಜನಪ್ರಿಯತೆ ರಾಜಕೀಯಕ್ಕೆ ಬಳಕೆಯಾಗಬಾರದು ಎಂಬ ಸ್ಪೂರ್ತಿದಾಯಕ ನಿಲುವನ್ನು ತಳೆದರು.



ಬಾಲಿವುಡ್ ಸಹ ಅವರನ್ನು ತನ್ನತ್ತ ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡಿತ್ತು. ಸ್ವತಃ ಅಮಿತಾಬ್ ಬಚ್ಚನ್ ಅವರು ತಮ್ಮ ಕೂಲಿ ಚಿತ್ರದಲ್ಲಿ ಡಾ|| ರಾಜ್ ಕುಮಾರ್ ರೈಲಿನಲ್ಲಿ ಬರಲಿ, ತಾವು ಅವರ ಕೂಲಿಯಾಗಿ ಅಭಿನಯಿಸುವ ಯೋಜನೆ ಮಾಡಿದ್ದರು. ಆದರೆ ಡಾ|| ರಾಜ್‍ಕುಮಾರ್ ಕನ್ನಡ ಬಿಟ್ಟು ಕದಲಲಿಲ್ಲ. ಇನ್ನೊಬ್ಬ ಆಗಿನ ಕಾಲದ ಪ್ರಖ್ಯಾತ ನಟ ಪೃಥ್ವಿರಾಜ್ ಕಪೂರ್ ಅವರಂತೂ ರಾಜ್ ಅವರಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ, ಮೊದಲು ರಾಜ್ ಅವರನ್ನು ತಮ್ಮ ಜೊತೆ ನಟಿಸಲು ಆಹ್ವಾನಿಸಿ, ಅವರು ನಿರಾಕರಿಸಿದಾಗ, ತಾವು ರಾಜ್ ಅವರ ಜೊತೆ ನಟಿಸಲೇಬೇಕು ಎಂಬ ಉತ್ಕಟ ಅಪೇಕ್ಷೆಯೊಂದಿಗೆ ಅವರೇ ಕನ್ನಡ ಚಿತ್ರರಂಗಕ್ಕೆ ಬಂದರು. ಸಾಕ್ಷಾತ್ಕಾರ ಎಂಬ ಪುಟ್ಟಣ ಕಣಗಾಲ್ ಚಿತ್ರದಲ್ಲಿ ರಾಜಕುಮಾರ್ ಅವರ ಜೊತೆ ನಟಿಸಿದರು. ಹೀಗಿತ್ತು ಡಾ|| ರಾಜ್ ಅವರ ಕನ್ನಡ ಪರ ಪ್ರೀತಿ, ನಿಷ್ಠೆ, ಅಭಿಮಾನ.


ಅಪಾರ ಜನಸ್ತೋಮ ತಮ್ಮನ್ನು ಹಿಂಬಾಲಿಸುತ್ತದೆ ಎಂಬ ಅರಿವಿದ್ದ ರಾಜ್ ಕುಮಾರ್ ಅವರು, ಎಂದಿಗೂ ತಮ್ಮ ಚಿತ್ರಗಳಲ್ಲಿ ಮಧ್ಯಪಾನ ಮಾಡುವ, ಧೂಮಪಾನ(ಒಂದು ಚಿತ್ರ ಹೊರತುಪಡಿಸಿ) ಮಾಡುವ ದೃಶ್ಯಗಳಲ್ಲಿ ಅಭಿನಯಿಸಿಲ್ಲ. ಅದರಿಂದ ಅವರನ್ನು ಆರಾಧಿಸುವ ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಳಕಳಿ ಅವರು ಹೊಂದಿದ್ದು ನಮಗೆಲ್ಲ ಮಾದರಿ. ಬದಲಿಗೆ ಅವರು ಜನಕ್ಕೆ ಉಪಕಾರಿ ಆಗುವ ಯೋಗಶಾಸ್ತ್ರವನ್ನು ತಮ್ಮ ಚಿತ್ರಗಳ ಮೂಲಕ ತೋರಿಸಿದರು. ಅವರ ನಿಜ ಜೀವನದಲ್ಲೂ ಅವರು ಎಂದಿಗೂ ವ್ಯಸನಿಯಾಗಿರಲಿಲ್ಲ ಅಷ್ಟೇ ಅಲ್ಲ ಕಡ್ಡಾಯವಾಗಿ ಯೋಗವನ್ನು ಅಭ್ಯಸಿಸುತ್ತಿದ್ದರು.



ಕೇವಲ ಕಲಾವಿದರಲ್ಲದೇ ಅವರು ಸಾಮಾಜಿಕ ಕಳಕಳಿ ಉಳ್ಳ ವ್ಯಕ್ತಿಯಾಗಿದ್ದರು‌. ಚಿತ್ರೀಕರಣದ ಸಂದರ್ಭದಲ್ಲಿ ಲೈಟ್ ಬಾಯ್ ಇಂದ ಹಿಡಿದು ಎಲ್ಲ ತಂತ್ರಜ್ಞರನ್ನು, ಕಲಾವಿದರನ್ನು ಸಮಾನವಾಗಿ ಕಾಣುತ್ತಿದ್ದರು. ಎಲ್ಲರ ಬಗ್ಗೆ ಕಾಳಜಿ ಹೊಂದಿರುತ್ತಿದ್ದರು. ಹಾಗೆಯೇ ತಮ್ಮ ಚಿತ್ರದಿಂದ ಯಾವುದಾದರೂ ನಿರ್ಮಾಪಕರಿಗೆ ನಷ್ಟವಾಯಿತು ಎಂಬ ಭಾವನೆ ಅವರಿಗೆ ಬಂದಾಗೆಲ್ಲ ಉಚಿತವಾಗಿ ಕಾಲ್ ಶೀಟ್ ಕೊಟ್ಟು ಇನ್ನೊಂದು ಸಿನೆಮಾ ಮಾಡುವಂತೆ ಪ್ರೋತ್ಸಾಹಿಸಿದ ಘಟನೆಗಳು ಸಾಕಷ್ಟಿವೆ.


ಅವರ ಅಪಹರಣ ಅವರ ಜೀವನದ ಅಷ್ಟೇಕೆ ಕನ್ನಡ ನಾಡಿನ ಇತಿಹಾಸದಲ್ಲೇ ನಡೆದ ಕರಾಳ ಅಧ್ಯಾಯ ಎನ್ನಬಹುದು. ನೂರಕ್ಕೂ ಅಧಿಕ ದಿನಗಳ ವನವಾಸದಿಂದ ಸುರಕ್ಷಿತ ಮರಳಿ ಬಂದು ಅಭಿಮಾನಿಗಳಿಗೆ ನೆಮ್ಮದಿ ಉಂಟುಮಾಡಿದರು.


ಎಪ್ರಿಲ್ 12, 2006ರಂದು ಡಾ||ರಾಜ್ ಅವರು ಇಹಲೋಕವನ್ನು ತ್ಯಜಿಸಿದರೂ, ಪ್ರತಿಯೊಬ್ಬ ಕನ್ನಡಿಗನ ಹೃದಯಾಂತರಾಳದಲ್ಲಿ ಅವರೆಂದಿಗೂ ಸ್ಪೂರ್ತಿಯಾಗಿ, ಆರಾಧ್ಯವಾಗಿ ಇರುತ್ತಾರೆ.



ಅಭಿಮಾನಿಗಳನ್ನು ದೇವರೆಂದು ಕರೆದ ಅವರು ನಿಜವಾಗಿಯೂ ಅಭಿಮಾನಿಗಳ ದೇವರು. ಅವರಿಗೊಂದು ಈ ಸಣ್ಣ ಅಕ್ಷರ‌ನಮನ ಅರ್ಪಣೆ.

Leave a Reply

Your email address will not be published. Required fields are marked *