‘ಆರ್ಯಾ’- ಎಂಬ ಪ್ರಾಚೀನ ಸಂಗೀತ ಪ್ರಬಂಧ

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

ಪ್ರಾಚೀನ ಭಾರತೀಯ ಸಂಗೀತದಲ್ಲಿ ಹಲವು ಗೇಯ ಪ್ರಬಂಧಗಳು ಸ್ವನಾಮಕ ವೃತ್ತದಿಂದಲೇ ಉದಯಿಸಿ, ಅವುಗಳಿಂದ ಕ್ರಮೇಣ ಬೇರ್ಪಟ್ಟು ಪ್ರತ್ಯೇಕ ಗೇಯವ್ಯಕ್ತಿತ್ವವನ್ನು ಪಡೆದವು. ಹಯಲೀಲಾ, ಗಜಲೀಲಾ, ಕ್ರೌಂಚಪದ, ಆರ್ಯಾ, ದ್ವಿಪಥಕ, ಕಲಹಂಸ, ತೋಟಕ, ಝಂಪಟ, ಪದ್ಧಡೀ ಮುಂತಾದುವು ಇದಕ್ಕೆ ನಿದರ್ಶನಗಳು. ಪ್ರಾಚೀನ ಪ್ರಬಂಧ (ಹಾಡು) ಗಳಲ್ಲಿ ಮೂರು ವಿಧಗಳಿವೆ. ಅವು ಶುದ್ಧ, ಛಾಯಾಲಗ (ಅನಂತರದ ಕಾಲದಲ್ಲಿ ಸಾಲಗ) ಮತ್ತು ಸಂಕೀರ್ಣ. ಸಂಕೀರ್ಣ ಪ್ರಬಂಧಗಳಿಗೆ ಕ್ಷುದ್ರವೆಂಬ ಬೇರೆ ಹೆಸರೂ ಇತ್ತು. ಭರತಮುನಿಯ ಕಾಲದಲ್ಲಿಯೇ ಆರ್ಯಾವೃತ್ತವು ನಾಟ್ಯದಲ್ಲಿ ಪ್ರಚಲಿತವಿದ್ದು ಭರತನು ತನ್ನ ನಾಟ್ಯಶಾಸ್ತ್ರದ 17ನೆಯ ಅಧ್ಯಾಯದಲ್ಲಿ ಶೃಂಗಾರರಸದಲ್ಲಿ ರೂಪಕ – ದೀಪಕ ಅಲಂಕಾರಗಳನ್ನೂ ಆರ್ಯಾವೃತ್ತವನ್ನೂ ಮತ್ತು ಕೋಮಲವೃತ್ತಗಳನ್ನೂ ಬಳಸಬೇಕು ಎಂದಿದ್ದಾನೆ. ಸಂಗೀತಶಾಸ್ತ್ರದ ಪ್ರಥಮ ಗ್ರಂಥವಾಗಿ 5-6ನೆಯ ಶತಮಾನಗಳಲ್ಲಿ ಮತಂಗಮುನಿಯಿಂದ ರಚಿಸಲ್ಪಟ್ಟ ‘ಬೃಹದ್ದೇಶೀ’ ಗ್ರಂಥದಲ್ಲಿ ಮೇಲೆ ಹೇಳಿದ ಪ್ರಬಂಧಗಳಲ್ಲದೆ ಆರ್ಯಾ, ಗಾಥಾ, ಕಂದ ಇತ್ಯಾದಿಗಳು ಪ್ರಬಂಧದ ಅಧಿಕರಣದಲ್ಲಿ ಉಲ್ಲೇಖಿಸಲ್ಪಟ್ಟಿವೆ. ಇವುಗಳಲ್ಲಿ ‘ಆರ್ಯಾ’ ಎಂಬುದು ಪ್ರಾಚೀನ ಪ್ರಸಿದ್ಧವಾದ ಸಂಸ್ಕೃತ ವೃತ್ತ. ಮತಂಗನು ತಾಲರಹಿತವಾಗಿ ಪಾಟಗಳಿಂದಲೂ ಬಿರುದಗಳಿಂದಲೂ ಕೂಡಿದ್ದು ಕನ್ನಡಭಾಷೆಯದೇ ಮೊದಲಾದ ಪದಗಳ ಬೆರೆಕೆಯಿಂದ ಯಾವುದು ನಿರ್ಮಿತವಾಗಿದೆಯೋ ಅದು ಕಂದ ಪ್ರಬಂಧ. ಕಂದವೇ ಮೊದಲಾದ ಪ್ರಬಂಧಗಳು ಸಂಗೀತ ರೂಢಿಯಲ್ಲಿ ಪ್ರಸಿದ್ಧವೇ ಆಗಿದೆ, ಆರ್ಯಾದಲ್ಲಿ, ದ್ವಿಪಥದಲ್ಲಿ, ವೃತ್ತದಲ್ಲಿ, ಗಾಥಾದಲ್ಲಿ, ಹಾಗೆಯೇ ದೋಧಕದಲ್ಲಿ, ನಂತರ ತೋಟದಲ್ಲಿ, ತಾಲವಿರಬೇಕೆಂಬ ನಿಯಮವು ಯಾವಾಗಲೂ ಇರುವುದಿಲ್ಲ. ಆದರೆ ಅವುಗಳಲ್ಲಿ ಛಂದಸ್ಸು ಮುಖ್ಯವಾದುದೆಂದು ಮುನಿಗಳು (ಇಲ್ಲಿ ಭರತಮುನಿ ಎಂದು ಅರ್ಥ) ಸ್ಪಷ್ಟವಾಗಿ ನಿರ್ದೇಶಿಸಿದ್ದಾರೆ, ಅವುಗಳ ಕೊನೆಯಲ್ಲಿ ಸ್ವರವಿನ್ಯಾಸವಿರಬೇಕು ಎಂದು ಹೇಳಿದೆ, ಆದರೆ ಬೇರೆಯವರು ಕೊನೆಯಲ್ಲಿ ಸ್ವರಗಳಿರುವುದಿಲ್ಲವೆನ್ನುತ್ತಾರೆ ಎಂದು ಹೇಳುತ್ತಾನೆ (ಬೃ. ಶ್ಲೋ. 1075 – 1077). ಕಂದಪದ್ಯದ ಸಮಪಾದಗಳಿಂದ ಎರಡು ಮಾತ್ರೆಗಳನ್ನು ಕಳೆದರೆ ಆರ್ಯಾ ಆಗುತ್ತದೆ. ಕಂದಪದ್ಯಕ್ಕೆ 64 ಮಾತ್ರೆಗಳಾದರೆ ಆರ್ಯಾವೃತ್ತಕ್ಕೆ 60 ಮಾತ್ರೆಗಳಾಗಬೇಕು.

ಆದರೆ ಆರ್ಯಾದಲ್ಲಿ
4, 4, 4
4, 4, 4, 4, 2
4, 4, 4
4, 4, 1, 4, 2       — ಈ ರೀತಿ 57 ಮಾತ್ರೆಗಳದ್ದೂ ಇವೆ.


ಆರ್ಯಾವನ್ನು ಪಿಂಗಳನಾಗನು (IV, 14, 21) ‘ಸ್ವರಾ ಅರ್ಧಂ ಚಾರ್ಯಾರ್ಧಂ, ಅತ್ರಾಯುಙ್ ನ ಜ್, ಷಷ್ಠೋ ಜ್, ನ್ಲೌ ವಾ ನ್ಲೌ ಚೇತ್ ಪದಂ ದ್ವಿತೀಯಾದಿ, ಸಪ್ತಮಃ ಪ್ರಥಮಾದಿ, ಅಂತ್ಯೇ ಪಂಚಮಾದಿ, ಷಷ್ಠಶ್ಚ ಲ್’  ಎಂದು ಸೂತ್ರರೂಪನಾಗಿ ನಿರೂಪಿಸುತ್ತಾನೆ. ಕೇದಾರಭಟ್ಟನು ತನ್ನ ವೃತ್ತರತ್ನಾಕರದಲ್ಲಿ ಅದನ್ನು ಹೀಗೆ ವಿಸ್ತರಿಸಿ ಲಕ್ಷಿಸುತ್ತಾನೆ.


ಲಕ್ಷ್ಮೈ/ತತ್  ಸ/ಪ್ತಗಣಾ/ ಗೋಪೇ/ತಾ ಭವ/ತಿ ನೇಹ/ ವಿಷಮೇ/ ಜಃ l(30ಅಕ್ಷರಗಳು)
ಷಷ್ಠೋs/ಯಂ ನ ಲ/ಘೂ ವಾ/ ಪ್ರಥಮೇ/ sರ್ಧೇ ನಿಯ/ತ/ಮಾರ್ಯಾ/ಯಾಃ ll(20 ಅಕ್ಷರಗಳು)
ಷಷ್ಠೇ /ದ್ವಿತೀಯ/ಲಾನ್ ನ್ಲೇ/ ಪರಕೇ/ ಮುಖಲಾ/ಚ್ಚ ಸಯತಿ/ಪದನಿಯ/ಮಃ |(30ಅಕ್ಷರಗಳು)
ಚರಮೇ /sರ್ಧೇ ಪಂ/ಚಮಕೇ/ ತಸ್ಮಾ/ದಿಹ ಭವ/ತಿ /ಷಷ್ಠೋ/ ಲಃ ||(27ಅಕ್ಷರಗಳು)


ಇದು ಆರ್ಯಾವೃತ್ತಕ್ಕೆ ಲಕ್ಷಣವೂ ಉದಾಹರಣೆಯೂ ಒಮ್ಮೆಗೇ ಆಗಿದೆ. ಇದನ್ನು ಹೀಗೆ ಅನುವಾದಿಸಬಹುದು : ‘ಇದರ ಲಕ್ಷಣವು (ಹೀಗಿದೆ 🙂 (ಒಂದು) ಗುರುವನ್ನು (ಕಡೆಯಲ್ಲಿ ಹೆಚ್ಚಾಗಿ ಹೊಂದಿರುವ) ಏಳುಗಣಗಳು ; (ಒಂದು, ಮೂರು, ಐದು, ಏಳು ಎಂಬ) ವಿಷಮ (ಸ್ಥಾನ) ದಲ್ಲಿ ಜಗಣವಿಲ್ಲ. ಆರನೆಯ ಗಣವು ಈ ಜಗಣವೋ ಅಥವಾ ಒಂದು ಲಘುವು ಸೇರಿಕೊಂಡ ನಗಣವೋ ಆಗಬಹುದು. ಆರ್ಯಾದ ಪ್ರಥಮಾರ್ಧದಲ್ಲಿ ಇದು ನಿಯತವಾದ ಲಕ್ಷಣ. ಅಲ್ಲದೆ (ಪ್ರಥಮಾರ್ಧದಲ್ಲಿ) ಆರನೆಯದು ನಗಣವೂ ಲಘುವೂ ಆಗಿದ್ದಲ್ಲಿ ಅದರ ಎರಡನೆಯ ಲಘುವಿನಿಂದಲೂ ಅದರ ಮುಂದಿನ (ಏಳನೆಯ ಗಣದಲ್ಲಿ) ಮೊದಲನೆಯ ಲಘುವಿನಿಂದಲೂ ಪದವಿಚ್ಚೇದವಾಗಬೇಕೆಂಬ ನಿಯಮವಿದೆ. ಕಡೆಯ ಅರ್ಧದಲ್ಲಿ ಹೀಗೆಯೇ ಐದನೆಯ ಗಣದ, ಮೊದಲನೆಯ ಗಣದ ಲಘುವಿನಿಂದ ಪದಚ್ಛೇದ ; ಆರನೆಯ ಗಣವು (ಒಂದು) ಲಘು (ಮಾತ್ರ) ವಾಗಿರುತ್ತದೆ’.


ಇದರ ಲಕ್ಷಣಾನ್ವಯವು  ಹೀಗೆ- ಆರ್ಯೆಗೆ ಎರಡು ಅರ್ಧಗಳು. ಮೊದಲನೆಯದರಲ್ಲಿ ಏಳು ಚತುರ್ಮಾತ್ರಾಗಣಗಳೂ ಒಂದು ಗುರುವೂ ಸೇರಿ 30 ಮಾತ್ರೆಗಳಿರುತ್ತವೆ. ಎರಡನೆಯದರಲ್ಲಿ ಐದು ಚತುರ್ಮಾತ್ರಾಗಣಗಳೂ ಒಂದು ಲಘುವೂ ಒಂದು ಚತುರ್ಮಾತ್ರಾಗಣವೂ ಒಂದು ಗುರುವೂ ಸೇರಿ 27 ಮಾತ್ರೆಗಳಿರುತ್ತವೆ. ಎಲ್ಲಿಯೂ ಬೆಸಸ್ಥಾನದಲ್ಲಿ ಜಗಣವು ನಿಷಿದ್ಧ, ಆದರೆ ಮೊದಲನೆಯ ಅರ್ಧದಲ್ಲಿ ಆರನೆಯ ಗಣವು ಜಗಣವೋ, ಸರ್ವಲಘುವಿನ ಚತುರ್ಮಾತ್ರಾಗಣವೋ ಇದ್ದೇ ತೀರಬೇಕು. ಸರ್ವಲಘುವಾಗಿದ್ದರೆ ಅದರ ಎರಡನೆಯ ಲಘುವಿನಿಂದ ಹೊಸ ಪದವು ಪ್ರಾರಂಭವಾಗಿರಬೇಕು. ಆದರೆ ಪೂರ್ವಾರ್ಧದ ಏಳನೆಯದೋ ಉತ್ತರಾರ್ಧದ ಐದನೆಯದೋ ಸರ್ವಲಘುವಿನ ಗಣವಾಗಿದ್ದರೆ ಅದರ ಮೊದಲನೆಯ ಲಘುವಿನಿಂದಲೇ ಹೊಸ ಪದವು ಪ್ರಾರಂಭವಾಗಬೇಕು. ಆರ್ಯೆಗೆ ಎರಡು ನಿದರ್ಶನಗಳನ್ನಿಲ್ಲಿ ಕೊಡಬಹುದು :

ದ್ವೀಪಾ/ದನ್ಯ/ಸ್ಮಾದಪಿ/ ಮಧ್ಯಾ/ದಪಿ ಜಲ/ನಿಧೇರ್ದಿ/ಶ್ಯೋಪ್ಯಂ/ತಾತ್ |
ಆನೀಯ/ ಝಟತಿ ಘ/ಟಯತಿ ವಿ/ಧಿರಭಿಮ/ತಮಭಿಮು/ಖೀಭೂ/ತಾಃ ||
(ಶ್ರೀಹರ್ಷ, ರತ್ನಾವಲೀನಾಟಕ, l, 6)

ದೂರಂ/ ಮುಕ್ತಾ/ಲತಯಾ/ ಬಿಸಸಿತ/ಯಾ ವಿ/ಪ್ರಲೋಭ್ಯ/ಮಾನೋ/ ಮೇ |
ಹಂಸ ಇ/ವ ದರ್ಶಿ/ತಾಶೋ/ ಮಾನಸ/ ಜನ್ಮಾ /ತ್ವ/ಯಾನೀ/ತಃ ll
(ನಾಗವರ್ಮ, ಕನ್ನಡ ಕಾದಂಬರೀ, V, 78)


ಆರ್ಯೆಯಲ್ಲಿ ಈ ಒಂಬತ್ತು ಪ್ರಬೇಧಗಳಿವೆ :
1.ಪಥ್ಯಾ : ವೃತ್ತದ ಪ್ರತಿ ಅರ್ಧದಲ್ಲಿಯೂ ಮೂರನೆಯ ಚತುರ್ಮಾತ್ರಾ ಗಣದ ಕೊನೆಗೆ ಯತಿಯು ಪದವನ್ನು ಮುಗಿಸುತ್ತದೆ.
2.ವಿಪುಲಾನ್ಯಾ : ಹೀಗೆ ಯತಿಯು ಇರದೆ ಮುಂದಿನ ಗಣಕ್ಕೆ ಮುಂದುವರಿಯುತ್ತದೆ.
3.ಚಪಲಾ :  ಆರ್ಯೆಯ ಎರಡನೇ ಮತ್ತು ನಾಲ್ಕನೇ ಗಣಗಳು ಜಗಣವಾಗಿದ್ದು ಅದರ ಹಿಂದೆಯೂ ಮುಂದೆಯೂ ಒಂದೊಂದು ಗುರುವಿರುತ್ತದೆ.
4.ಮುಖಚಪಲಾ :  ಚಪಲಾದ ಲಕ್ಷಣವು ಆರ್ಯೆಯ ಮುಖದಲ್ಲಿ ಎಂದರೆ ಪೂರ್ವಾರ್ಧದಲ್ಲಿರುತ್ತದೆ.
5.ಜಘನ :  ಚಪಲಾದ ಈ ಲಕ್ಷಣವು ಆರ್ಯೆಯ  ಉತ್ತರಾರ್ಧದಲ್ಲಿರುತ್ತದೆ.
6.ಮಹಾಚಪಲಾದಲ್ಲಿ ಈ ಲಕ್ಷಣವು ಎರಡೂ ಅರ್ಧಗಳಲ್ಲಿರುತ್ತವೆ.
7.ಗೀತಿ : ಆರ್ಯಾ ವೃತ್ತದ ಎರಡು ಅರ್ಧಗಳು,  ವಿಶೇಷವಾಗಿ ಮೂರನೆಯ ಮತ್ತು ನಾಲ್ಕನೆಯ ಪಾದಗಳು,  ಒಂದೇ ರೀತಿಯಾಗಿರುತ್ತವೆ.
8.ಉದ್ಗೀತೆ : ಆರ್ಯೆಯ  ಎರಡು ಅರ್ಧಗಳು ಅದಲು ಬದಲಾಗುತ್ತವೆ.
9.ಆರ್ಯಾಗೀತಿ : ಈ ಆರ್ಯಾ ವೃತ್ತದ ಭೇದವನ್ನು ಪಿಂಗಳ ನಾಗನು (ಪಿಂಗಳ ಛಂದಸ್ಸು, IV, 31) ‘ಅರ್ಧೇ  ವಸುಗಣ ಆರ್ಯಾ ಗೀತಿಃ’ ಎಂದೂ ಕೇದಾರಭಟ್ಟನು (ವೃತ್ತ ರತ್ನಾಕರ, ।।, 11) ಲಕ್ಷ್ಯ – ಲಕ್ಷಣ ಗಳೆರೆಡೂ ಒಮ್ಮೆಗೇ ದೊರೆಯುವಂತೆ,

ಆರ್ಯಾ ಪೂರ್ವಾರ್ಧಂ ಯದಿ ಗುರುಣೈಕೇನಾಧಿಕೇನ ನಿಧನೇ ಯುಕ್ತಮ್ |
ಇತರತ್ತದ್ವನ್ನಿಖಿಲಂ ದಲಂ ಯದೀಯಮುದಿತೈವಮಾರ್ಯಾಗೀತಿಃ ||

ಎಂದೂ ವರ್ಣಿಸುತ್ತಾರೆ. ಎಂದರೆ ಆರ್ಯಾದ ಒಂದೊಂದು ಅರ್ಧದಲ್ಲಿಯೂ ಎಂಟೆಂಟು ಚತುರ್ಮಾತ್ರಾಗಣಗಳಿರುತ್ತವೆ. ಇದಕ್ಕೂ ಆರ್ಯೆಯಲ್ಲಿ ಹೇಳಿರುವ ಮೊದಲನೆಯ ಆರು ಬೇಧಗಳಿವೆ. ಆರ್ಯಾಗೀತಿಯ ರಚನೆಯು ಕನ್ನಡದ ಕಂದದ ರಚನೆಯನ್ನು ಬಹಳವಾಗಿ ಹೋಲುತ್ತದೆ. ಕಂದಪದ್ಯಕ್ಕೆ 64 ಮಾತ್ರೆಗಳಿವೆ.


ಕಂದಪದ್ಯ :-
4, 4, 4
4, 4, 4, 4, 4
4, 4, 4
4, 4, 4, 4

ಇದು ಕಂದದ ಶರೀರ. ಇದರಲ್ಲಿ ವಿಷಮಸ್ಥಾನಗಳಲ್ಲಿ ‘ಜಗಣ’ ಬರಬಾರದು. ಸಮಪಾದಾಂತ್ಯಗಳಲ್ಲಿ (2 ಮತ್ತು 4ನೆಯ ಪಾದಗಳ ಕೊನೆಯಲ್ಲಿ) ಗುರುವಿರಬೇಕು. ಪ್ರತೀ ಪದ್ಯಾರ್ಧದ ಆರನೆಯ ಗಣ ಜಗಣ ಅಥವಾ ನಾಲ್ಕು ಲಘುಗಳ ಗಣವಾಗಿದ್ದು, ಗಣದ ಮೊದಲ ಅಕ್ಷರಕ್ಕೆ ಅರ್ಥಯತಿಯಿರಬೇಕು. ಇದು ಕಂದ ಪದ್ಯದ ಲಕ್ಷಣ. ಕಂದಪದ್ಯದ ಉದಾಹರಣೆ : ಕವಿ ವಿಶ್ವನಾಥ್ ಕೆ. ಕುಕಿಯನ್ ರವರ ಕಂದಪದ್ಯ :

ಅವಿರತ /ಗತಿಯಿಂ /ಸುತ್ತುವ/
ಭುವನದಿ /ಜೀವ/ರ್ಗೆ ಜೀವ/ ಕಾರಣ/ನೀತಂ |
ರವಿಯಾ/ಕಾಶದಿ /ಬೆಳಗುತ/
ನವಕಿರ/ಣವ ಬೀ/ರಿ ಕತ್ತ/ಲ ಕೊಳೆಯ /ತೊಳೆವಂ||


ಇದರಲ್ಲಿ ಯತಿಸ್ಥಾನಗಳು ‘ಗೆ ಜೀವ’,  ‘ರಿ ಕತ್ತ’ ಇವು ಆರನೆಯ ಗಣಸ್ಥಾನಗಳು (ಪ್ರತೀ ಅರ್ಧಪದ್ಯದಲ್ಲಿ).


ಆರ್ಯಾಗೀತಿಯು ಪ್ರಾಕೃತದಲ್ಲಿ ಸ್ಕಂಧಕವೆಂದಾಗಿದೆ. ಸ್ಕಂಧಕವು ಕನ್ನಡದಲ್ಲಿ ಕಂದವೆಂದಾಯಿತೆಂದು ವಿದ್ವಾಂಸರು ಹೇಳುತ್ತಾರೆ. ಇದನ್ನು ಮೊದಲು ಸಂಕೀರ್ಣವೆಂದೂ ಕರೆದಿದ್ದಾರೆ. ಇದನ್ನು ಸ್ವಯಂಭೂ (ಸ್ವಯಂಭೂಚ್ಛಂದಃ l, 3),ಹೇಮಚಂದ್ರ (ಛಂದೋನುಶಾಸನ, IV, 17) ಮುಂತಾದ ಪಿಂಗಳಾನಂತರದ ಛಂದಃಶಾಸ್ತ್ರಕಾರರು ವರ್ಣಿಸಿದ್ದಾರೆ. ಸ್ಕಂದಕದ ಅರ್ಧದಲ್ಲಿ ಎಂಟು ಚತುರ್ಮಾತ್ರಾಗಣಗಳಿರುತ್ತವೆ. ಅವುಗಳಲ್ಲಿ ಆರನೆಯದು ಮಧ್ಯಗುರುವಿನ ಅಥವಾ ಸರ್ವಲಘುವಿನ ಗಣವಾಗಿರುತ್ತದೆ. 1, 3, 5 ಮತ್ತು 7 ನೆಯ ಗಣಗಳಲ್ಲಿ ಜಗಣವು ನಿಷಿದ್ಧ. ಇದರ ಉದಾಹರಣೆಯನ್ನು ಹಲಾಯುಧಭಟ್ಟನು (ಮೃತಸಂಜೀವನೀ —ಪಿಂಗಲಛಂದೋವ್ಯಾಖ್ಯೆ, IV, 31)ಹೀಗೆ ಕೊಡುತ್ತಾನೆ.

ಅಜಮಜರಮಮರಮೇಕಂ ಪ್ರತ್ಯಕ್ಷೈತ್ಯನಮೀಶ್ವರಂ ಬ್ರಹ್ಮಪರಮ್ |
ಆತ್ಮಾನಂ ಭಾವಯತೋ ಭವಮುಕ್ತಿಃ ಸ್ಯಾದಿತೀಯಮಾರ್ಯಾಗೀತಿಃ ||


9.ಉಪಗೀತಿ : ಪೂರ್ವಾರ್ಧ —ಉತ್ತರಾರ್ಧಗಳೆರಡರಲ್ಲೂ ಪಥ್ಯಾ ಆರ್ಯೆಯ ಲಕ್ಷಣವಿರುವುದು (ಪಿಂಗಳ ಛಂದಸ್ಸು, VI, 22–27).


ಆರ್ಯಾವೃತ್ತದಲ್ಲಿ ಒಂದೊಂದು ಪಾದಕ್ಕೂ ಏಳರಂತೆ ಒಟ್ಟು ಹದಿನಾಲ್ಕು ಚತುರ್ಮಾತ್ರಾಗಣಗಳಿವೆಯಷ್ಟೆ ; ಇವುಗಳಲ್ಲಿ ಒಂದೊಂದು ಪಾದದಲ್ಲಿಯೂ ಆರನೆಯದು ಜಗಣವೋ ಸರ್ವಲಘುವೋ ಆಗಬೇಕೆಂಬ ವಿಧಿಯು ಇರುವುದರಿಂದ ಹನ್ನೆರಡು ಗಣಗಳು ಉಳಿಯುತ್ತವೆ. ಇವೆಲ್ಲವೂ ಸರ್ವಗುರುಗಣಗಳೇ ಆದರೆ, 24 ಗುರುಗಳು ದೊರೆಯುತ್ತವೆ. ಪ್ರತಿಪಾದಾಂತ್ಯದಲ್ಲಿಯೂ ಒಂದೊಂದು ಗುರುವನ್ನು ವಿಧಿಸಿರುವುದರಿಂದ ಒಟ್ಟು 26 ಗುರುಗಳು ಆರ್ಯೆಯಲ್ಲಿರುತ್ತವೆ. ಇದು ಪ್ರಕೃತಿ. ಇವುಗಳಲ್ಲಿ ಒಂದೊಂದು ಗುರುವನ್ನು ಭಂಗಗೊಳಿಸಿ ಎರಡು ಲಘುಗಳನ್ನಾಗಿ ಮಾಡಿದರೆ ಆರ್ಯಾವೃತ್ತವು ವಿಕೃತವಾಗಿ ಒಂದೊಂದು ಭೇದವನ್ನು ಕೊಡುತ್ತದೆ. ಹೀಗೆ 26 ಆರ್ಯಾಬೇಧಗಳು ದೊರೆಯುತ್ತವೆ : ಲಕ್ಷ್ಮೀ, ವೃದ್ಧಿ, ಬುದ್ಧಿ, ಲೀಲಾ, ಲಜ್ಜಾ, ಕ್ಷಮಾ, ದೀರ್ಘಾ, ಗೌರೀ, ರಾಜೀ, ಜ್ಯೋತ್ಸ್ನಾ, ಛಾಯಾ, ಕಾಂತೀ, ಮಹಿ, ಮತಿ, ಕೀರ್ತಿ, ಮನೋರಮಾ, ರೋಹಿಣೀ, ವಿಶಾಲಾ, ವಸುಧಾ, ಶಿವಾ, ಹರಿಣೀ, ಚಕ್ರಾ, ಸಾರಸೀ, ಕುರರೀ, ಹಂಸೀ ಮತ್ತು ವಧೂ. ಇವು ಕ್ರಮವಾಗಿ, 0, 1, 2, 3…….. 25 ಗುರುಗಳನ್ನು ಭಂಗಗೊಳಿಸುವುದರಿಂದ ಆಗುತ್ತವೆ.


ಸಂಸ್ಕೃತ ಭಾಷೆಯ ಪದಗಳಿದ್ದರೆ ‘ಆರ್ಯಾ’, ಪ್ರಾಕೃತ ಭಾಷೆಯ ಪದಗಳಿದ್ದರೆ ‘ಗಾಥಾ’ ಎಂದೂ ಎನ್ನಿಸಿಕೊಳ್ಳುತ್ತದೆ. ಪ್ರಾಚೀನದಲ್ಲಿ ಜಾತಿ, ಗೀತಿ, ಕಂಬಲ, ಕಪಾಲ, ಪ್ರಕರಣ, ಮದ್ರಕ, ಋಕ್, ಸಾಮ ಮುಂತಾದ ಗೇಯ ಸಾಮಗ್ರಿಗಳೊಂದಿಗೆ ಗಾಥಾ ಸಹ ‘ಮಾರ್ಗಸಂಗೀತ’ವೆಂಬ ಪೂಜ್ಯ ಗೇಯಸಾಮಗ್ರಿಯಾಗಿತ್ತು. ಯಾಜ್ಞವಲ್ಕ್ಯ ಸ್ಮೃತಿಯಲ್ಲಿ ಯತಿಧರ್ಮಪ್ರಕರಣದ ಪ್ರಾಯಶ್ಚಿತ್ತಾಧ್ಯಾಯದಲ್ಲಿ ಋಗ್ ಗಾಥಾ ಮೊದಲಾದ ಹದಿನಾಲ್ಕು ತಾಳ ಪ್ರಧಾನ ಪ್ರಬಂಧಗಳ ಪ್ರಶಂಸೆಯನ್ನೂ ಅದರ ಅಭ್ಯಾಸಿಗಳಿಗೆ ಮೋಕ್ಷ ಅಥವಾ ರುದ್ರ ಸಾಹಚರ್ಯವನ್ನು ಬೋಧಿಸುತ್ತದೆ. ಪದಗಳಲ್ಲಿ ಭಾಷಾಬೇಧವು ಇರದಿದ್ದರೂ ಚರಣಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗುವುದರಿಂದಲೂ ಆರ್ಯೆಯೇ ಗಾಥಾ ಎನ್ನಿಸಿಕೊಳ್ಳುತ್ತದೆ ಎಂಬ ಮತಾಂತರವನ್ನು ಶಾರ್ಙ್ಗದೇವನು ತನ್ನ ಸಂಗೀತರತ್ನಾಕರದಲ್ಲಿ (Vl, 231, 232) ಸಂಗ್ರಹಿಸುತ್ತಾನೆ :


*ಆರ್ಯೈವ ಪ್ರಾಕೃತೇ ಗೇಯಾ ಸ್ಯಾತ್ ಪಂಚಚರಣಾಥವಾ |
ತ್ರಿಪದೀ ಷಟ್ಪದೀ ಗಾಥೇತ್ಯಪರೇ ಸೂರಯೋ ಜಗುಃ ||*


ಇಲ್ಲಿ ಮೊದಲನೆಯ ಶ್ಲೋಕದ ‘ಚರಣ’ ಎಂಬುದನ್ನು ಸಿಂಹಭೂಪಾಲನು ‘ಚಗಣ’ ಎಂದು ಪಠಿಸಿಕೊಂಡಿದ್ದಾನೆ. ಇದರಿಂದಾಗಿ ಆರ್ಯೆಯ ನಾಲ್ಕು ಪಾದಗಳಲ್ಲಿ ಪ್ರತಿಯೊಂದರಲ್ಲೂ ಐದೈದು ಚಗಣಗಳಿಂದಾದ(ಚಗಣವು 4 ಮಾತ್ರೆಯುಳ್ಳದು ‘ಪುರಹರ’ ಎಂಬಂತೆ) ಪದಗಳನ್ನು ರಚಿಸಿದರೆ ಅದು ಗಾಥಾ ವೃತ್ತವಾಗುತ್ತದೆ ಎಂಬ ಲಕ್ಷಣವು ಹೊರಡುತ್ತದೆ. ಆಗ ಅದರಲ್ಲಿ ಪ್ರಾಕೃತಭಾಷಾ ಶಬ್ದಗಳಿರಬೇಕೆಂಬ ನಿಯಮವೇನೂ ಇರದು ; ಏಕೆಂದರೆ ಪಂಚ ಚಗಣವೆಂಬ ಲಕ್ಷಣಕ್ಕೆ ‘ಅಥವಾ’ ಎಂಬ ವಿಕಲ್ಪವನ್ನು ಹೇಳಿದೆ. ಈ ಪಕ್ಷದಲ್ಲಿ ಆರ್ಯಾದಂತೆ ಗಾಥಾದಲ್ಲಿ ನಾಲ್ಕು ಪಾದಗಳಿರುವುದಿಲ್ಲ, ಮೂರು ಅಥವಾ ಆರು ಪಾದಗಳಿರುತ್ತವೆ ಎಂದು ಅರ್ಥವಾಗುತ್ತದೆ. (ರಾ. ಸತ್ಯನಾರಾಯಣ, ಪುಂಡರೀಕ ಮಾಲಾ, ಪು. 442 – 445). ಪಂಡರೀಕ ವಿಠ್ಠಲನು ಪ್ರಬಂಧದಲ್ಲಿ “ಯಾವುದರಲ್ಲಿ ಆರ್ಯಾ ಛಂದಸ್ಸು ಇರುತ್ತದೋ, ಅದರ ಮೊದಲನೆಯ ಅರ್ಧ (ದಲ)ವು ಉದ್ಗ್ರಾಹವೂ (ವಾದ್ಯಪ್ರಬಂಧವಾದರೆ ಪಾಟವನ್ನು ಮೊದಲಿನಲ್ಲಿ ಯಾವುದರಿಂದ ಎತ್ತಿಕೊಳ್ಳಲಾಗುತ್ತದೋ ಅದು ಉದ್ಗ್ರಾಹವೆನ್ನಿಸುತ್ತದೆ. ಮೊದಲಿನಲ್ಲಿ ಶುದ್ಧಕೂಟ ಇತ್ಯಾದಿ ಪಾಟಗಳಿಂದ ನಿರ್ಮಿತವಾದ ಖಂಡವನ್ನು ನುಡಿಸಲಾಗುತ್ತದೋ ಅದು  ಉದ್ಗ್ರಾಹವಾಗುತ್ತದೆ. ಉದ್ಗ್ರಾಹವು ಗೀತದ ಮೊದಲಿನಲ್ಲಿರುತ್ತದೆ. ಪಾಟಗಳು ಅನೇಕ ವಿಧವಾಗಿವೆ. ಇವುಗಳಲ್ಲಿ ಕೇವಲ ತದ್ಧಿತ್ ಥೋಂಟೇಂನೇಹೇಂದೇಂಗಳು ಮಾತ್ರ ಶುದ್ಧಪಾಟಗಳು) ಸ್ವರಗಳಲ್ಲಿ ಮುಗಿಯುವಂತಹದೂ ಎರಡು ಸಲ ಹಾಡುವಂತಹದೂ ಆಗಿರುತ್ತದೋ, ಕೊನೆಯ ಅರ್ಧವು ಧ್ರುವವೂ (ಇದು ನಿಯತವಾಗಿ ಇದ್ದೇ ಇರಬೇಕಾದದ್ದೂ, ಮತ್ತೆ ಮತ್ತೆ ಮರುಕಳಿಸುತ್ತಿರುವ ಭಾಗವಾಗಿದೆ) ಒಮ್ಮೆ ಹಾಡುವಂತಹದೂ ಆಗಿದ್ದು ಅದಾದ ಬಳಿಕ ಆಭೋಗವು(ಗೀತವು ಮುಗಿಯಿತೆಂದು ಸೂಚಿಸುವ ಭಾಗ) ಇರುತ್ತದೋ, ಪ್ರಬಂಧದ ವಿಶ್ರಾಂತಿಯು ಉದ್ಗ್ರಾಹದಲ್ಲಿ ಏರ್ಪಡುತ್ತದೋ, ಅದು ಆರ್ಯಾ, ಅದು ತಾಲ ಮತ್ತು ಪದಗಳನ್ನು ಆಶ್ರಯಿಸುತ್ತದೆ ; ಮೂರು ಧಾತುಗಳನ್ನುಳ್ಳದ್ದು, ಭಾವನೀ ಜಾತಿಯದು, (ಪ್ರಬಂಧಗಳ ಜಾತಿಗಳಲ್ಲೊಂದಾದ ಭಾವನೀಯಲ್ಲಿ ಮೂರು ಅಂಗಗಳಿರುತ್ತವೆ. ಆರ್ಯಾಪ್ರಬಂಧದಲ್ಲಿ ಸ್ವರ ಪದ ತಾಲಗಳಿರುವುದರಿಂದ ಇದು ಭಾವನೀ ಜಾತಿ.) ಆರ್ಯಾ ಛಂದಸ್ಸಿನ ನಿರ್ಯುಕ್ತಿ ಇರುವುದರಿಂದ ಈ ಪ್ರಬಂಧವು ನಿರ್ಯುಕ್ತ, ಎಂಬ ಲಕ್ಷಣವನ್ನು ಆರ್ಯಾ ಪ್ರಬಂಧಕ್ಕೆ ಕೊಡುತ್ತಾನೆ.


ಆರ್ಯಾಪ್ರಬಂಧದ ಗಾಯನಕ್ರಮವು ಹೀಗಿದೆ: ಈ ವೃತ್ತದಲ್ಲಿ ಎರಡು ದಲಗಳಿವೆ. ಮೊದಲನೆಯ ಪಾದ ಪೂರ್ತಿ ಮತ್ತು ಎರಡನೆಯದರ ಪ್ರಥಮಾರ್ಧವು ಸೇರಿ ಮೊದಲನೆಯ ದಲವೂ ಎರಡನೆಯ ಪಾದದ ಉತ್ತರಾರ್ಧವು ಎರಡನೆಯ ದಲವೂ ಆಗುತ್ತವೆ. ಮೊದಲನೆಯ ದಲವು ಉದ್ಗ್ರಾಹ ; ಇದನ್ನು ಎರಡು ಸಲ ಹಾಡಬೇಕು. ಇದರ ಕೊನೆಯಲ್ಲಿ ಸ್ವರಗಳನ್ನು ರಚಿಸಬೇಕು ; ಸಂಗೀತರತ್ನಾಕರದ ಮತದಲ್ಲಿ (Vl, 225) ಪಾದಾಂತ್ಯದಲ್ಲಾದರೂ ಸ್ವರಗಳನ್ನು ಕಲ್ಪಿಸಬಹುದು. ಎರಡನೆಯ ದಲವು ಧ್ರುವವಾಗುತ್ತದೆ.(ಧ್ರುವವು ಪುನಃ ಪುನಃ  ಗಾಯನ – ವಾದನಗಳಲ್ಲಿ ಪ್ರಸ್ತುಪಡಿಸುವಂತಹದು) ಆಭೋಗವು ಈ ಎರಡು ದಲದಲ್ಲಿ ಇಲ್ಲದ ಬೇರೆ ಪದಗಳಿಂದ ವಾಗ್ಗೇಯಕಾರ, ಪ್ರಬಂಧನಾಯಕ, ಪ್ರಬಂಧ ಇವುಗಳ ಹೆಸರುಗಳನ್ನು ಒಳಗೊಂಡು ನಿರ್ಮಿತವಾಗುತ್ತದೆ. ಉದ್ಗ್ರಾಹ – ಧ್ರುವ – ಆಭೋಗಗಳನ್ನು ಹಾಡಿ ಪುನಃ ಉದ್ಗ್ರಾಹವನ್ನು ಹಾಡಿ ನಿಲ್ಲಿಸಬೇಕು. ಆರ್ಯಾವು ಇಂದು ಹರಿಕಥೆ, ಕಾವ್ಯವಾಚನ, ಗಮಕವಾಚನ, ಯಕ್ಷಗಾನಗಳಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಆದರೆ ಶಾಸ್ತ್ರೀಯವೆಂದು ಈಗ ಕರೆಯಲ್ಪಡುವ ಕರ್ಣಾಟಕ – ಹಿಂದೂಸ್ಥಾನೀ ಸಂಗೀತ ಪದ್ಧತಿಗಳಲ್ಲಿ ನಷ್ಟವಾಗಿದೆ. ಈ ಸಂಗೀತಪದ್ಧತಿಗಳ ವಿದ್ವಾಂಸರು ಇಂದಿಗೂ ಆರ್ಯಾದಲ್ಲಿರುವ ಶ್ಲೋಕಗಳನ್ನು ಕಚೇರಿಗಳಲ್ಲಿ ಮೇಲೆ ಹೇಳಿದ ಲಕ್ಷಣದಲ್ಲಿಯೆ ಗಾಯನ ಮಾಡಿ  ರೂಢಿಯಲ್ಲಿ ಇರಿಸಿಕೊಳ್ಳುವುದು ಸಂಗೀತಶಾಸ್ತ್ರೀಯ ನೆಲೆಯಲ್ಲಿ ಅವಶ್ಯವಿದೆ.


-ವಿವಿಧ ಆಕರಗಳಿಂದ

 

Author Details


Srimukha

Leave a Reply

Your email address will not be published. Required fields are marked *