ಅಸಾಮಾನ್ಯರಿಗೆ ಸಮಾನತೆಯ ನ್ಯಾಯ!

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

ಮನೆ ಮನೆಯಲಿ ದೀಪ ಉರಿಸಿ

ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೇ ಸಾಕೇ…


ಈ ನಾಲ್ಕು ಸಾಲು ಎಲ್ಲವನ್ನೂ ಹೇಳಿಬಿಡುತ್ತವೆ. ಜೀವವೊಂದು ಭೂಮಿಗಿಳಿಯಬೇಕಾದರೆ ಅವಳ ಗರ್ಭವೇ ಮಾರ್ಗ. ಮನೆಯೊಂದು ಬೆಳಗುವುದು ಹಚ್ಚಿದ ದೀಪದಿಂದ ಮಾತ್ರವಲ್ಲ. ಆ ದೀಪದ ಬೆಳಕನ್ನು ಪ್ರತಿಬಿಂಬಿಸುವ ಅವಳ ಹೊಳೆವ ಕಂಗಳಿಂದಲೂ. ಬೆಳಕು ಅವಳು; ಕುಟುಂಬಕ್ಕೂ, ಸಮಾಜಕ್ಕೂ. ಅವಳು ಭೂಮಿಯಂತೆ. ಅದಕ್ಕಿಂತ ಹೆಚ್ಚೇನು ಹೇಳುವುದು ಅವಳ ಬಗ್ಗೆ!


ಹೀಗಿರುವ ಅವಳಿಗೆ ಒಂದು ದಿನ! ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನ.


1909ರ ಫೆಬ್ರವರಿ 28ರಂದು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಅಮೆರಿಕದ ಸಮಾಜವಾದಿ ಪಕ್ಷವು ರಾಷ್ಟ್ರೀಯ ಮಹಿಳಾದಿನವನ್ನು ಆಚರಿಸಿತು. ಅನಂತರ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ಪ್ರಾಬಲ್ಯವಿರುವ ದೇಶಗಳಲ್ಲಿ ಇದರ ಆಚರಣೆಯು ವಾರ್ಷಿಕವಾಗಿ ನಡೆಯತೊಡಗಿತು. 1975ರಲ್ಲಿ ಅಮೆರಿಕೆಯು ಈ ದಿನದ ಆಚರಣೆಯನ್ನು ಆರಂಭಸಿತು. ಅದನ್ನನುಸರಿಸಿದವು ಜಗತ್ತಿನ ಇತರ ದೇಶಗಳು.


ಹೀಗೆ ಆರಂಭಗೊಂಡ ಈ ಮಹಿಳಾ ದಿನವನ್ನು ಪ್ರತಿವರ್ಷವೂ ಒಂದೊಂದು ವಿಷಯ (theme) ಆಧಾರಿತವಾಗಿ ಆಚರಿಸಲಾಗುತ್ತದೆ. 2019ರಲ್ಲಿ Balance for Better ಎಂಬುದು ವಿಷಯ. ಇಲ್ಲಿ balance ಎಂದರೆ gender balance! ಇದರ ಅರ್ಥ ಪುರುಷ ಮತ್ತು ಸ್ತ್ರೀ ಸಮಾನತೆ. ಇದು ಈ ಹೊತ್ತಿನ ಅಗತ್ಯ ಎನ್ನುತ್ತಿವೆ ಜಗತ್ತಿನ ಮಹಿಳಾವಾದಿ ದನಿಗಳು.


ಜಗತ್ತಿನ ಹಲವು ಕಡೆಗಳಲ್ಲಿ ಮಹಿಳೆ ಎಂಬ ಕಾರಣದಿಂದಾಗಿಯೇ ಹಲವು ಅವಕಾಶಗಳಿಂದ ವಂಚಿತಳಾಗಿದ್ದಾಳೆ ಅವಳು. ಅದನ್ನು ಪಡೆಯುವ ಜಿದ್ದಿಗೆ ಬಿದ್ದಿದ್ದಾಳೆ. ಹೋರಾಟದಲ್ಲಿ ತೊಡಗಿದ್ದಾಳೆ. ಆ ಪಯಣದಲ್ಲಿ ಸೋತವರೂ ಇದ್ದಾರೆ, ಗೆದ್ದವರೂ ಇದ್ದಾರೆ. ಗೆದ್ದು ಸೋತವರೂ ಇದ್ದಾರೆ. ಸೋತು ಗೆದ್ದವರೂ.


ಅವಳು ಅಮ್ಮ, ಅವಳು ಅಕ್ಕ, ಅವಳು ತಂಗಿ, ಅವಳು ಮಗಳು, ಅವಳು ಪತ್ನಿ, ಅವಳು ಸ್ನೇಹಿತೆ. ಅವಳು ವೈದ್ಯೆ, ಅವಳು ತಂತ್ರಜ್ಞೆ, ಅವಳು ಪೈಲೆಟ್, ಅವಳು ಅಧಿಕಾರಿ, ಅವಳು ಶಿಕ್ಷಕಿ. ಅಡುಗೆಮನೆಯಲ್ಲಿ ತರಕಾರಿ ಕತ್ತರಿಸುವುದರಿಂದ, ರೋಗಿಯೊಬ್ಬನ ದೇಹಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ವರೆಗೆ; ಮಗುವಿನ ಕೈಬೆರಳು ಹಿಡಿದು ನಡೆವುದನ್ನು ಕಲಿಸುವುದರಿಂದ, ದೇಶವನ್ನು ನಡೆಸುವ ವರೆಗೆ; ಹಸಿದವರಿಗೆ ಅನ್ನವಿಕ್ಕುವುದರಿಂದ, ನೂರಾರು ಜನರಿಗೆ ಉದ್ಯೋಗ ನೀಡುವುದರ ವರೆಗೆ. ಎಲ್ಲ ಕ್ಷೇತ್ರಗಳಲ್ಲಿ ಆಕೆಯಿದ್ದಾಳೆ. ಎಲ್ಲೆಡೆ ಅವಳಿದ್ದಾಳೆ ಅನ್ನುವುದಕ್ಕಿಂತ, ಆಕೆಯಿಲ್ಲದೆ ಜಗತ್ತು ಮುಂದುವರಿಯುವುದೇ ಇಲ್ಲ ಎನ್ನುವುದು ಹೆಚ್ಚು ಸೂಕ್ತ.


ಜಗತ್ತಿನ ಬೇರೆಲ್ಲ ದೇಶಗಳು ಒತ್ತಟ್ಟಿಗಿರಲಿ.

ನಾರಿಯರು ಎಲ್ಲಿ ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳಿರುತ್ತಾರೆ ಎಂದು ನಂಬಿದವರು ನಾವು. ಆಕೆಯನ್ನು ದೇವಿಯನ್ನಾಗಿಸಿ, ಶಕ್ತಿಸ್ವರೂಪಿಣಿಯಾಗಿ ಕಾಣುವ ಸಂಸ್ಕೃತಿ ನಮ್ಮದು. ಸೀತಾರಾಮ ಎನ್ನುವುದು ಶ್ರೀರಾಮನನ್ನು. ರಾಧಾಕೃಷ್ಣ ಎನ್ನುವುದು ಶ್ರೀಕೃಷ್ಣನನ್ನು. ಇನ್ನು ಕೈಲಾಸದಲ್ಲಿರುವಾತ ತನ್ನರ್ಧವನ್ನೇ ಅವಳಿಗಿತ್ತಿದ್ದಾನೆ! ಕ್ಷೀರಸಾಗರದಲ್ಲಿ ಪವಡಿಸಿದವನ ಹೃದಯದೊಳಗೆ ಅವಳ ಸ್ಥಾನ. ಇದು ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿ, ಇತಿಹಾಸ.


ಹೀಗಿರುವಾಗ ಈ ಸಮಾನತೆಯ ಹೋರಾಟಗಳು ಯಾಕಾಗಿ? ತಾನು ಮೇಲೆ ತಾನು ಮೇಲು ಎನ್ನುವುದೇ ಹೋರಾಟವಾದರೆ ಅದಕ್ಕೆ ಅರ್ಥವೂ ಇಲ್ಲ. ಫಲಿತಾಂಶವೂ ಇಲ್ಲ. ಗಂಡು-ಹೆಣ್ಣು ಒಬ್ಬರಿಗೊಬ್ಬರು ಪೂರಕವೇ ಹೊರತು ಯಾರೂ ಹೆಚ್ಚಲ್ಲ, ಕಡಿಮೆಯೂ ಅಲ್ಲ. ಇದನ್ನು ನಾವು ಅರ್ಥೈಸಿಕೊಳ್ಳಬೇಕಿದೆ. ಸೃಷ್ಟಿಯು ಹಲವು ಶಕ್ತಿಗಳನ್ನು ಹೆಣ್ಣಿನಲ್ಲಿಯೂ ಇನ್ನು ಕೆಲವನ್ನು ಗಂಡಿನಲ್ಲಿಯೂ ಇಟ್ಟಿರುವುದೇ ಅದಕ್ಕಾಗಿ. ಸೃಷ್ಟಿಯು ಸಮತೋಲನದಲ್ಲಿ ಸಾಗಲು ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಂಡು ನಡೆಯುವುದಕ್ಕಾಗಿಯೇ. ಮಗುವನ್ನು ಹಡೆಯುವುದು ಹೆಣ್ಣಿನ ಪಾಲಿಗೆ ಬಂದ ಬಹುದೊಡ್ಡ ಜವಾಬ್ದಾರಿ. ಅದನ್ನು ನಿಭಾಯಿಸುವ ಶಕ್ತಿಯನ್ನೂ ಸೃಷ್ಟಿ ಅವಳಿಗೇ ಕೊಟ್ಟಿದೆ!


ಈ ಸಮತೋಲಿತ ಸೃಷ್ಟಿಯ ಪಥವನ್ನು ಬಿಟ್ಟು ಇನ್ನೆಲ್ಲೋ ನಿಂತು, ಇನ್ನಾವುದೋ ಸಮಾನತೆಯ ಹೋರಾಟ ಮಾಡುತ್ತಿದ್ದೇವೆ ಎಂದೆನಿಸುತ್ತಿಲ್ಲವೇ? ವ್ಯಕ್ತಿ-ವ್ಯಕ್ತಿಯ ನಡುವೆ ಸಾಮರಸ್ಯಕ್ಕಾಗಿ ನಾವು ಶ್ರಮಿಸಬೇಕಿದೆ ಇಂದು. ವ್ಯಕ್ತಿ-ವ್ಯಕ್ತಿಯ ನಡುವೆ ಯಾರು ಹೆಚ್ಚು ಎನ್ನುವುದಕ್ಕಾಗಿ ಅಲ್ಲ. ಅದೆಲ್ಲವನ್ನೂ ಮೀರಿ ನಿಜವಾದ ಏಳಿಗೆಯತ್ತ ಸಾಗಬೇಕಿದೆ ನಾವು. ನಿನ್ನಂತೆ ನಾನಾಗುವೆ ಎಂಬುದನ್ನು ಬಿಟ್ಟು ನಮ್ಮೊಳಗಿನ ಸ್ವಾರ್ಥ, ಅಹಂಕಾರ, ದ್ವೇಷಗಳ ವಿರುದ್ಧ ನಡೆಯಬೇಕಿದೆ ಹೋರಾಟ. ನಾನು ಎನ್ನುವುದು ವಿಸ್ತಾರಗೊಂಡು ನಾವಾಗಬೇಕಿದೆ.

 


Author Details


Srimukha

Leave a Reply

Your email address will not be published. Required fields are marked *