ಬದಲಿಸಬೇಕು ಬದುಕಿನ ನಕ್ಷೆ

ಅಂಕಣ ಚಿತ್ತ~ಭಿತ್ತಿ : ಡಾ. ಸುವರ್ಣಿನೀ ಕೊಣಲೆ

ಇದೀಗ ಫಲಿತಾಂಶಗಳ ಸಮಯ. ಫಲಿತಾಂಶಕ್ಕೆ, ಪರೀಕ್ಷೆಗೆ ಮಕ್ಕಳು ಹೆದರುವುದು, ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಬೆಚ್ಚಿಬೀಳುವಂತೆ ಮಾಡುತ್ತವೆ. ಅದಕ್ಕೆ ಕಾರಣವೇನು ಎಂಬುದನ್ನು ನಾವು ಅರಿತಿದ್ದೇವೆಯೇ? ಅರಿತಿದ್ದೇವಾದರೆ ಪರಿಹಾರವೇಕೆ ಸಿಕ್ಕಿಲ್ಲ ಇನ್ನೂ?

 

ಈ ಸಮಸ್ಯೆ ಇಂದಿನದಲ್ಲ. ಅಂದರೆ ಈಗ ಇದ್ದಕ್ಕಿದ್ದಂತೆ ಆರಂಭವಾದದ್ದಲ್ಲ. ಯಾವುದೇ ಸಮಸ್ಯೆ ಒಂದು ಕ್ಷಣದಲ್ಲಿ ಇದ್ದಕ್ಕಿದ್ದಂತೆ ಉದ್ಭವ ಆಗುವುದೂ ಇಲ್ಲ. ನಮ್ಮ ದೇಹದ ರೋಗಗಳಂತೆ, ನಮ್ಮ ಸಮಾಜದ ರೋಗಗಳೂ ನಿಧಾನಕ್ಕೆ ಮೊಳೆತು ಬೆಳೆಯುವಂಥವು. ಅದನ್ನು ನಾವು ಮೊಳೆಯಲು ಬಿಟ್ಟದ್ದೇ ಸರಿ ಅಲ್ಲ. ಬೆಳೆಯಲು ಬಿಟ್ಟದ್ದು ಅಪರಾಧ. ಈಗಲೂ ಆ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ನಮ್ಮ ಮೂರ್ಖತನಕ್ಕೆ ಕನ್ನಡಿ.

 

ಆತ್ಮಹತ್ಯೆಗೆ ನೂರೆಂಟು ಕಾರಣಗಳು. ಆದರೆ ಭಾರತದಲ್ಲಿ ದಾಖಲಾದ ಮತ್ತು ದಾಖಲಾಗುತ್ತಿರುವ ಆತ್ಮಹತ್ಯೆಗಳಲ್ಲಿ ಅತಿಹೆಚ್ಚು ಸಂಖ್ಯೆ ವಿದ್ಯಾರ್ಥಿಗಳದ್ದು. ಹಾಗೂ ಅದಕ್ಕೆ‌ ಕಾರಣ ಅವರ ಮೇಲಿನ ಒತ್ತಡ. ಅದರಲ್ಲೂ ನಗರ ಪ್ರದೇಶಗಳಲ್ಲಿ ಇದು ಹೆಚ್ಚು ಎನ್ನುತ್ತದೆ ಸಮೀಕ್ಷೆ. ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಈ‌ ವಿದ್ಯಾರ್ಥಿಗಳ ವಯಸ್ಸು. ಹತ್ತು ವರ್ಷದ ಮಗುವೂ ಇಂತಹ ‘ರ್ಯಾಂಕ್’ ಮರುಳಿಗೆ ಒಳಗಾಗಿ ಬದುಕನ್ನು ಕೊನೆಗಾಣಿಸುವುದು ಸಮಾಜದ ದೊಡ್ಡ ಅಸ್ವಸ್ಥತೆಯನ್ನು ಸಾರುತ್ತದೆ.

 

ಇಲ್ಲಿ ನನಗೆ ಕಾಣಿಸುವುದು ನಮ್ಮ ಸೋಲು. ವೈಯಕ್ತಿಕವಾಗಿಯೂ, ಸಮಾಜವಾಗಿಯೂ. ಒಬ್ಬ ವಿದ್ಯಾರ್ಥಿಯನ್ನು ಆತ ಪಡೆಯುವ ಅಂಕಗಳ‌ನ್ನಾಧರಿಸಿ ಗೌರವಿಸುವ, ಅಗೌರವಿಸುವ, ಹೀಯಾಳಿಸುವ, ಹೊಗಳುವ ನಮ್ಮ ಮನಸ್ಥಿತಿ ಬೇಸರ ಹುಟ್ಟಿಸುವುದಿಲ್ಲವೇ? ಮಕ್ಕಳಿಗೆ ‘ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಈ ಅಂಕಗಳು ಮುಖ್ಯವಲ್ಲ’ ಎನ್ನುವ ಮಾತನ್ನು ಹೇಳುವ ನಾವು, ಅದನ್ನೇ ಹಿರಿಯರಿಗೆ ಅರ್ಥ ಮಾಡಿಸಲಾಗದೇ ಸೋತಿದ್ದೇವೆ. ನಾವು ನಮ್ಮ ಸೋಲನ್ನು ಒಪ್ಪಿಕೊಳ್ಳಬೇಕು. ಸಮಾಜದ ಗೆಲುವಿಗಾಗಿ.

 

ನಮ್ಮ ಇಂತಹ ಮನಸ್ಥಿತಿಗೆ ಕಾರಣ ಇನ್ನೇನೋ ಇರಬೇಕಲ್ಲ? ಅದನ್ನು ಅರಸುತ್ತಾ‌ ಹೊರಟಾಗ ಮತ್ತೆ ತಲುಪುವುದು ನಮ್ಮ ಬೇರೆಲ್ಲ ಸಮಸ್ಯೆಗಳ ಮೂಲವೆಲ್ಲಿದೆಯೋ‌ ಅಲ್ಲಿಗೇ. ಹೌದು, ನಾವು ನಮ್ಮ ಮೂಲದಿಂದ ದೂರಾದದ್ದು ಇದಕ್ಕೆಲ್ಲ ಮೂಲ ಕಾರಣ. ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕಡೆಗಣಿಸಿದ್ದು, ಯಾವುದೋ ಅವೈಜ್ಞಾನಿಕವಾದ ಕ್ರಮಗಳನ್ನು ಅನುಸರಿಸಿದ್ದು ಕಾರಣವೆನಿಸುವುದಿಲ್ಲವೇ? ಯಾವುದೋ ಮಾಹಿತಿಗಳನ್ನು ಮಕ್ಕಳ ತಲೆಗೆ ತುಂಬುವುದೇ ವಿದ್ಯಾಭ್ಯಾಸ ಎಂಬ ನಮ್ಮ ಮೂರ್ಖತನ ಇದಕ್ಕೆ ಕಾರಣವೆನಿಸುವುದಿಲ್ಲವೇ?

 

ಶಾಲೆ, ಕಾಲೇಜು ಓದು, ಪದವಿ, ಉದ್ಯೋಗ, ಸಂಪಾದನೆ… ಹೀಗೆ ಸಾಗುತ್ತದೆ ನಮ್ಮ ಬದುಕಿನ ನಕ್ಷೆ ಇಂದು. ಆ ನಕ್ಷೆಯಲ್ಲಿ‌ ಎಲ್ಲಿಯೂ ನಗು, ನೆಮ್ಮದಿ, ಸಂತೋಷಗಳ ರೇಖೆ ಇರುವುದೇ ಇಲ್ಲ. ನಾವು ನಮ್ಮ ಮಕ್ಕಳ ಬದುಕನ್ನು ಅಂತಹ ನಕ್ಷೆಯ ಆಧಾರದಲ್ಲಿ ರೂಪಿಸುತ್ತಿದ್ದೇವೆ. ಬದುಕಿಗೆ ಅಗತ್ಯವಾದ ಸಂತೃಪ್ತಿ ಸಂತೋಷಗಳ ನಕ್ಷೆ ಇಲ್ಲವಾಗುವುದು ಬದುಕನ್ನು ಅಳಿಸಿ ಹಾಕುತ್ತಿದೆ.

 

ಅದಕ್ಕೊಂದು ಪರಿಹಾರ ಬೇಕಿದೆ. ಬದುಕು ಬೆಳಗಬೇಕಿದೆ. ಅದಕ್ಕಾಗಿ ಬದುಕಿನ ನಕ್ಷೆಯಲ್ಲಿ ನೆಮ್ಮದಿ ನಿರಂತರ ಬೆಳೆಯಬೇಕಿದೆ.

Author Details


Srimukha

Leave a Reply

Your email address will not be published. Required fields are marked *