ದೊಡ್ಡ ಗೌಡರ ಆಲದ ಮರವೂ, ಪಾರಿವಾಳವೂ

ಅಂಕಣ ಸ್ಫಟಿಕ~ಸಲಿಲ : ಮಹೇಶ ಕೋರಿಕ್ಕಾರು

ಭುರ್ರ್..ರ್..ರ್..!

ಅಬ್ಬಾ…ಸಂಜೆಗೆಂಪಿನ ಬಾನಂಗಳದಲ್ಲಿ ಕಪ್ಪು ಚುಕ್ಕೆಗಳ ಚಿತ್ರ ವಿಸ್ಮಯವೇ!

ಸಂಜೆಯಾಯಿತೆಂದರೆ, ಆ ಪಾರಿವಾಳಗಳ ಸಮೂಹ ನರ್ತನವನ್ನು ನೋಡಲೆಂದೇ ಬಂದು ಸೇರುವರು ಅಲ್ಲಿ ಊರ ಜನರು. ಪಿಚಕಾರಿಯಂತೆ ಚಿಮ್ಮುವ ಸಾಗರದ ಅಲೆಗಳಂತೆ ಒಮ್ಮೆಲೇ ಬಾನೆತ್ತರಕ್ಕೆ ಏರಿ ಹರಡುವ ಪಕ್ಷಿ ಸಮೂಹವು, ಸಾಗರ ಮಧ್ಯಕ್ಕೆ ಇಳಿದು ಜಾರಿ ಶಾಂತವಾಗುವ ತೆರೆಗಳಂತೆ ಒಮ್ಮೆಲೇ ದೊಡ್ಡಗೌಡರ ಮನೆಯ ಮುಂದಿನ ಆ ಆಲದ ಮರದ ಮೇಲಿಳಿದು ಸುಮ್ಮನಾಗುತ್ತವೆ.

ಪಾರಿವಾಳಗಳು ಬಾನೆತ್ತರಕ್ಕೆ ಏರಿದಂತೆಯೇ ನೆರೆದ ಜನರ ಹರ್ಷೋದ್ಗಾರವೂ ಮುಗಿಲು ಮುಟ್ಟುತ್ತದೆ.

ಆ ಊರ ಜನರಿಗೆ ಅವು ಬರಿಯ ಪಕ್ಷಿಗಳಲ್ಲ, ಬದಲಾಗಿ ದೇವತಾ ಸ್ವರೂಪ! ವರುಷಕ್ಕೊಂದು ಬಾರಿ ಪಾರಿವಾಳಗಳಿಗೆಂದೇ ಅಲ್ಲಿ ಜಾತ್ರೆಯೂ ನಡೆಯುತ್ತದೆ!

ಹಾಗಾದರೆ, ದೊಡ್ಡಗೌಡರ ಮನೆಯ ಮುಂದಿನ ಆ ಆಲದ ಮರಕ್ಕೂ ಈ ಪಾರಿವಾಳಗಳಿಗೂ ಅದಾವ ಸಂಬಂಧ!?

ಸಂಬಂಧವು ಇಂದು ನಿನ್ನೆಯದಲ್ಲ.

ತಲೆಮಾರುಗಳ ಹಿಂದೆ ಆ ಊರಿಗೆ ಮಹಾ ಕಂಟಕವೊಂದು ಬಂದೊದಗಿದಾಗ, ದೊಡ್ಡಗೌಡರ ಮುತ್ತಾತರೊಬ್ಬರ ಬಳಿಗೆ ದೇವಸಂದೇಶವನ್ನು ಹೊತ್ತು ತಂದಿತ್ತಂತೆ ಒಂದು ಪಾರಿವಾಳ. ಅದು ಹೊತ್ತು ತಂದ ಸಂದೇಶದಂತೆ ನಡೆದ ಗೌಡರು ಆ ಊರನ್ನು ಮಹಾ ಕಂಟಕದಿಂದ ಪಾರು ಮಾಡಿದ್ದರಂತೆ! ಅಂದಿನಿಂದ ಇಂದಿನವರೆಗೆ ಪಾರಿವಾಳಗಳೆಂದರೆ ಆ ಊರ ಜನರಿಗೆ ಪರಮಪೂಜ್ಯ!

 

ದೊಡ್ಡಗೌಡರ ಒಡಹುಟ್ಟಿದವರಾದ ಸಿದ್ಧಪ್ಪಗೌಡರ ಮನೆಯೂ ಅವರ ಮನೆಯ ಪಕ್ಕದಲ್ಲಿಯೇ ಇದೆ. ಅವರ ಮನೆಯ ಮುಂದೆಯೂ ಆಲದ ಮರವಿದೆ. ಆದರೆ, ಅಲ್ಲೆಲ್ಲೂ ಬೀಡು ಬಿಟ್ಟಿರದ ಪಾರಿವಾಳಗಳು ನಿತ್ಯವೂ ಆಶ್ರಯ ಪಡೆಯುವುದು ದೊಡ್ಡಗೌಡರ ಮನೆಯ ಮುಂದಿನ ಆಲದ ಮರದಲ್ಲಿ ಮಾತ್ರ!

ಸತ್ಯಪರರೂ, ನ್ಯಾಯಪರರೂ, ಧರ್ಮಿಷ್ಠರೂ ಆದ ದೊಡ್ಡಗೌಡರೆಂದರೆ, ಊರ ಜನರಿಗೆ ಎಲ್ಲಿಲ್ಲದ ಗೌರವ, ವಿಶ್ವಾಸ.

ದೇವ ದೂತರಂತಿರುವ ಪಾರಿವಾಳಗಳು ಅವರ ಮನೆಯ ಮುಂದೆಯೇ ಸದಾ ಕಾಲ ಬೀಡು ಬಿಟ್ಟಿರುವುದು ಅವರ ವರ್ಚಸ್ಸನ್ನೂ, ವಿಶ್ವಾಸಾರ್ಹತೆಯನ್ನೂ ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇತ್ತು ಆ ಊರಿನೊಳಗೆ!

 

ಹಾಗಿರಲು..

ಇದ್ದಕ್ಕಿದ್ದಂತೆಯೇ ಒಂದು ದಿನ ಊರಿನೊಳಗೊಂದು ಕೋಲಾಹಲ!

ಸಿಡಿಲೆರಗಿದಂತೆ ಬಂದು ಬಿದ್ದ ಸಂಜೆ ಪತ್ರಿಕೆಯೊಂದರಲ್ಲಿ ಅಂಗೈಯಗಲ ಅಕ್ಷರಗಳಲ್ಲಿ ಅಚ್ಚೊತ್ತಿ ಬಂದ ಆ ಸುದ್ದಿಯು ಊರ ಜನರ ಜಂಘಾಬಲವನ್ನೇ ಉಡುಗಿಸಿತ್ತು!

ದೊಡ್ಡಗೌಡರ ಮನೆಯ ಮುಂದಿನ ಆಲದ ಮರದಿಂದ ರಾತ್ರೆ ಹೊತ್ತು ವಿಚಿತ್ರವಾದ ಸದ್ದು ಕೇಳಿಸುತ್ತದೆಯಂತೆ! ಆ ಆಲದ ಮರದಲ್ಲಿ ಪ್ರೇತವಾಸವಿದೆಯಂತೆ! ಮಧ್ಯರಾತ್ರೆಯಾಯಿತೆಂದರೆ ಅಲ್ಲಿರುವ ಪಾರಿವಾಳಗಳು ಭೀಕರ ರೂಪವನ್ನು ತಾಳುತ್ತವೆಯಂತೆ, ಬಳಿ ಬಂದವರನ್ನು ಅಟ್ಟಾಡಿಸಿ ಬೆಂಬತ್ತಿ ರಕ್ತ ಹೀರುತ್ತವೆಯಂತೆ!

ಭಯಭೀತಗೊಂಡ ಊರ ಜನರು ದೊಡ್ಡಗೌಡರ ಮನೆಯ ಮುಂದೆ ಸುಳಿಯದಾದರು! ಯಾವ ಪಾರಿವಾಳಗಳನ್ನು ಕಂಡ ಊರ ಜನರು ಭಕ್ತ್ಯಾದರಗಳಿಂದ ಕೈ ಮುಗಿಯುತ್ತಿದ್ದರೋ, ಅದೇ ಪಾರಿವಾಳಗಳನ್ನು ನೋಡಿದರೆ ಸಾಕು, ಭಯಗೊಂಡು ಮನೆಯ ಬಾಗಿಲುಗಳನ್ನು ಮುಚ್ಚತೊಡಗಿದರು!

 

ಪರಿಸ್ಥಿತಿ ಕೈಮೀರುತ್ತದೆಯೆಂದರಿತ ದೊಡ್ಡಗೌಡರು ಊರ ಮಂದಿಯ ಸಭೆ ಕರೆದರು. ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲವೆಂದು ಸಾರಿ ಹೇಳಿದರು. ತಮ್ಮ ಮನೆಯ ಮುಂದಿನ ಆಲದ ಮರದ ಐತಿಹ್ಯವನ್ನು ಕೂಗಿ ಹೇಳಿದರು. ಅಂದು ದೇವದೂತನಾಗಿ ಬಂದ ಪಾರಿವಾಳವು ಯಾವ ಆಲದ ಮರದ ಮೇಲೆ ಬಂದು ಕುಳಿತಿತ್ತೋ, ಅದೇ ಆಲದ ಮರದ ಬೇರಿನಿಂದ ಚಿಗುರೊಡೆದಿದ್ದು ತಮ್ಮ ಮನೆಯ ಮುಂದಿನ ಈ ಆಲದ ಮರ. ಸಿದ್ಧಪ್ಪಗೌಡರು ಇಂದಿರುವ ಮನೆಯ ಮುಂದೆಯೂ ಅದೇ ಆಲದ ಮರದಿಂದ ಹುಟ್ಟಿದ ಮರವಿತ್ತು ಒಂದು ಕಾಲದಲ್ಲಿ. ಅಂದು ಅದರ ಮೇಲೆಯೂ ಪಾರಿವಾಳಗಳು ಬೀಡುಬಿಟ್ಟಿದ್ದವು. ಕಾಲನ ಹೊಡೆತಕ್ಕೆ ಸಿಕ್ಕು ಆ ಆಲದ ಮರವು ಎಂದು ಧರಾಶಾಯಿಯಾಯಿತೋ, ಅಂದಿನಿಂದ ಅವು ದೊಡ್ಡಗೌಡರ ಮನೆಯ ಆಲದ ಮರವನ್ನು ಮಾತ್ರ ನೆಚ್ಚಿಕೊಂಡವು. ದೊಡ್ಡ ಗೌಡರ ಮಾತಿಗೆ ಊರ ಜನರು ಮಂತ್ರಮುಗ್ಧರಾದರು, ಅವರ ಮಾತಿಗೆ ದನಿಗೂಡಿಸಿದರು ಊರ ಹಿರಿಯರು.

 

ಏತನ್ಮಧ್ಯೆ, ಸಿದ್ಧಪ್ಪಗೌಡರ ಮನೆಯೊಳಗೂ ಗುಪ್ತವಾದೊಂದು ಸಭೆಯು ನಡೆದಿತ್ತು! ನಾನಾ ಕಾರಣಗಳಿಂದ ದೊಡ್ಡಗೌಡರನ್ನು ದ್ವೇಷಿಸುತ್ತಿದ್ದ ಊರ ಜನರೆಲ್ಲ ಆ ಸಭೆಯಲ್ಲಿ ಒಂದುಗೂಡಿದ್ದರು. ಆ ಸಭೆಯ ಪರಿಣಾಮವೋ ಎಂಬಂತೆ, ಊರ ಜನರ ಗುಂಪೊಂದು ಪಂಚಾಯಿತಿ ಕಟ್ಟೆಯೇರಿತು! ರಕ್ತ ಪಿಪಾಸುಗಳಾದ ಪಾರಿವಾಳಗಳನ್ನು ಪೋಷಿಸುತ್ತಿರುವ ದೊಡ್ಡಗೌಡರ ಮನೆಯ ಆಲದ ಮರವನ್ನು ಕಡಿಯಬೇಕೆಂದು ಬೇಡಿಕೆಯೊಡ್ಡಿತು!

 

ಪಾರಿವಾಳಗಳ ವಿಷಯದಲ್ಲಿ ಊರು ಎರಡಾಗಿ ಒಡೆಯಿತು~

ದೊಡ್ಡ ಗೌಡರು ನುಡಿದ ಸತ್ಯವನ್ನು ಬೆಂಬಲಿಸುವ ದೊಡ್ಡ ಪಂಗಡ, ಸುಳ್ಳನ್ನು ಸತ್ಯವಾಗಿಸಲು ಹೊರಟು ನಿಂತ ಪುಟ್ಟ ಪಂಗಡ.

ದೊಡ್ಡ ಗೌಡರ ಮನೆಯ ಆಲದ ಮರದ ಮೇಲಿರುವ ಅಪವಾದವು ನಿಜವಲ್ಲವೆಂದು ನಿರೂಪಿಸುವುದಕ್ಕೆ ಊರ ಯುವಕರ ತಂಡವೊಂದು ಸಿದ್ಧವಾಗಿ ನಿಂತಿತು. ಅವರು ತೆಗೆದುಕೊಂಡ ದಿಟ್ಟ ನಿರ್ಧಾರವೊಂದು ಊರೊಳಗೆ ಸಂಚಲನವನ್ನೇ ಸೃಷ್ಟಿಸಿತು. ದಿನಕ್ಕೊಂದು ತಂಡದಂತೆ ಯುವಕರ ಗುಂಪು ದೊಡ್ಡಗೌಡರ ಮನೆಯ ಆಲದ ಮರದ ಕೆಳಗೆ ಜಾಗರಣೆ ಗೈಯತೊಡಗಿತು. ಅಹೋರಾತ್ರಿ ಭಜನೆ ಗೈಯತೊಡಗಿತು!

ದಿನದಿಂದ ದಿನಕ್ಕೆ ಅಲ್ಲಿ ಜಾಗರಣೆ ಗೈವ ಜನರ ಸಂಖ್ಯೆಯು ಹೆಚ್ಚಾದಂತೆಯೇ, ಸುಳ್ಳು ಸುದ್ದಿಯು ಹಬ್ಬಿದ ಭಯದ ವಾತಾವರಣವು ಇನ್ನಿಲ್ಲದಂತೆ ಮಾಯವಾಯಿತು!

 

ಕಂಟಕವು ಅಷ್ಟಕ್ಕೇ ನಿಲ್ಲಲಿಲ್ಲ!

ಬೇಸಿಗೆ ಕಾಲದ ಬಿಸಿಲು ಇನ್ನೇನು ಏರತೊಡಗಿತ್ತು. ಕಾಲದ ಹಂಗಿಲ್ಲದೇ ನಿತ್ಯವೂ ಹಸಿರೆಲೆಗಳಿಂದ ಕಂಗೊಳಿಸುತ್ತಿದ್ದ ಆಲದ ಮರವು ಇದ್ದಕ್ಕಿದ್ದಂತೆಯೇ ಹಳದಿ ಬಣ್ಣಕ್ಕೆ ತಿರುಗತೊಡಗಿತು! ಉಲ್ಲಾಸದಿಂದ ಹಾರಿ ಕುಣಿಯುತ್ತಿದ್ದ ಪಾರಿವಾಳಗಳು ಚಟುವಟಿಕೆಯಿಲ್ಲದೇ ಆಲಸ್ಯದಿಂದ ಅತ್ತಿಂದಿತ್ತ ಸುಳಿದಾಡತೊಡಗಿದವು!

ಬಿಸಿಲ ಬೇಗೆಯು ಏರುತ್ತಲೇ ಇತ್ತು..

ಮರವು ಇನ್ನೇನು ಒಣಗಿ ಸತ್ತೇ ಹೋಗುತ್ತದೆ ಎಂದರಿತ ಊರ ಜನರು ನಿತ್ಯವೂ ಆ ಮರಕ್ಕೆ ನೀರೂಡಿಸತೊಡಗಿದರು. ಆದರೇನು?!

ದಿನದಿಂದ ದಿನಕ್ಕೆ ಒಣಗುತ್ತಲೇ ಹೋದ ಆಲದ ಮರವು ಕೊನೆಗೊಂದು ದಿನ ಸಂಪೂರ್ಣ

ಎಲೆಗೆಳನ್ನು ಕಳೆದುಕೊಂಡು ಬೆತ್ತಲಾಗಿ ನಿಂತಿತು!

ಅಷ್ಟೇ ಸಾಕೇ?

ಪಾರಿವಾಳಗಳೂ ಕಣ್ಮರೆಯಾದವು!

 

ಅಷ್ಟರಲ್ಲಿಯೇ ಆ ಊರನ್ನು ಕಾದಿತ್ತು ಇನ್ನೊಂದು ಮಹಾ ಕಂಟಕ! ಯಾವ ದಿನ ಆ ಆಲದ ಮರದ ಎಲೆಗಳು ಸಂಪೂರ್ಣ ಒಣಗಿ ಖಾಲಿಯಾದವೋ, ಅದೇ ದಿನ ಆ ಊರಿನ ಸಂಪೂರ್ಣ ಕೆರೆದಂಡೆಗಳೂ ಇದ್ದಕ್ಕಿದ್ದಂತೆಯೇ ಒಣಗಿ ಬರಡಾಗಿದ್ದವು!

ಇದುವರೆಗೆ ಕಂಡು ಕೇಳರಿಯದ ಬರಗಾಲ ಆ ಊರನ್ನು ವ್ಯಾಪಿಸಿದಂತೆಯೇ, ದಿಕ್ಕು ತೋಚದ ಜನರು ನೀರನ್ನರಸಿ ಗುಳೆ ಹೋಗತೊಡಗಿದರು!

 

ಅಷ್ಟರೊಳಗೆ ಆ ಊರನ್ನು ಬೆಚ್ಚಿ ಬೀಳಿಸುವ ಇನ್ನೊಂದು ಘಟನೆ ನಡೆದು ಹೋಯಿತು!

ಊರೊಳಗೆಲ್ಲ ಹಬ್ಬಿದ ಆ ಗುಸುಗುಸು ನಿಜವೇ ಎಂದರಿಯುವ ತವಕದಿಂದ ಊರ ಮಂದಿಯೆಲ್ಲ ಸಿದ್ಧಪ್ಪಗೌಡರ ಮನೆಯ ಮುಂದೆ ಜಮಾಯಿಸತೊಡಗಿದರು!

ಹರಿದ ಬಟ್ಟೆ, ಗರಿಕೆದರಿದ ಕೂದಲುಗಳು, ಇದು ಸಿದ್ಧಪ್ಪಗೌಡರು ಹೌದೇ ಎಂದು ಉದ್ಗಾರ ತೆಗೆಯಿತು ಊರ ಜನತೆ!

ಅವರು ಕೇಳಿದ್ದ ಆ ಸುದ್ದಿ ನಿಜವಾಗಿತ್ತು.

ಹೌದು, ಸಿದ್ಧಪ್ಪಗೌಡರಿಗೆ ಹುಚ್ಚು ಹಿಡಿದಿದೆ!

ಊರ ಮಂದಿಯನ್ನು ಉದ್ದೇಶಿಸಿ ಕೂಗಿ ಹೇಳುತ್ತಿದ್ದರು ಸಿದ್ಧಪ್ಪಗೌಡರು, “ಜನರೇ ನನ್ನನ್ನು ಕ್ಷಮಿಸಿ ಬಿಡಿ. ಈ ಊರಿಗೆ ಬಂದ ಕಂಟಕಕ್ಕೆ ಕಾರಣ ನಾನೇ. ಆಲದ ಮರದಲ್ಲಿ ಪ್ರೇತವಾಸವಿದೆಯೆಂದು ಗುಸುಗುಸು ಹಬ್ಬಿಸಿದವನು ನಾನೇ. ಆಲದ ಮರದ ಬುಡಕ್ಕೆ ವಿಷವನ್ನು ಸುರಿದು ಅದನ್ನು ಸಾಯಿಸಿದವನೂ ನಾನೇ. ದೊಡ್ಡಗೌಡರ ಮೇಲಿನ ಅಸೂಯೆಯಿಂದಲೇ ನಾನು ಈ ಅಪರಾಧವನ್ನು ಮಾಡಿದೆನು. ಕೊಂದು ಬಿಡಿ. ಈ ಊರಿಗೆ ಮಹಾ ಗಂಡಾಂತರವನ್ನು ತಂದಿಕ್ಕಿದ ಪಾಪಕ್ಕೆ ನಿಮ್ಮ ಕೈಯಾರ ನೀವು ನನ್ನನ್ನು ಕೊಂದು ಬಿಡಿ.”

ಒಂದೊಮ್ಮೆ ವಿಚಿತ್ರವಾಗಿ ನಗುತ್ತಾ, ಮತ್ತೊಮ್ಮೆ ಗೋಳೋ ಎಂದು ಅಳುತ್ತಾ ನುಡಿಯುತ್ತಿರುವ ಸಿದ್ಧಪ್ಪಗೌಡರ ಮಾತು ಕೇಳಿ ಹೌಹಾರಿದರೂ, ಅವರ ಬಳಿ ಸಾರಲು ಹಿಂಜರಿಯಿತು ಊರ ಜನತೆ!

 

ಅಷ್ಟರಲ್ಲಿ ಅದೋ…ನೆರೆದಿದ್ದ ಜನಸಮೂಹವು ಇಬ್ಭಾಗವಾಗಿ ಚದುರಿತು. ಅವರ ಮಧ್ಯದಿಂದ ಶಾಂತಮೂರ್ತಿಯಾಗಿ ನಡೆದು ಬರುತ್ತಿರುವರು ದೊಡ್ಡಗೌಡರು! ಅವರ ಕೈಯಲ್ಲೊಂದು ಚಾಟಿಯಿತ್ತು!

ತನ್ನತ್ತಲೇ ನಡೆದು ಬರುತ್ತಿರುವ ದೊಡ್ಡ ಗೌಡರನ್ನು ನೋಡಿದ್ದೇ ಸಿದ್ಧಪ್ಪಗೌಡರ ಹುಚ್ಚಾಟವು ಮಿತಿಮೀರತೊಡಗಿತು!

ಸಿದ್ಧಪ್ಪಗೌಡರತ್ತ ತೀಕ್ಷ್ಣವಾಗಿ ಒಂದು ಕ್ಷಣ ನೋಡಿ ನಿಂತರು ದೊಡ್ಡ ಗೌಡರು,

“ತಮ್ಮನೇ ಆಗಿರಲಿ, ಇನ್ಯಾರೇ ಆಗಿರಲಿ. ಮಾಡಿದ ತಪ್ಪಿಗೆ ಶಾಸ್ತಿಯಾಗಲೇಬೇಕು” ಎಂದು ನುಡಿದ ದೊಡ್ಡಗೌಡರು ತಮ್ಮ ಕೈಯಲ್ಲಿರುವ ಚಾಟಿಯಿಂದ ಒಂದೇ ಸಮನೆ ಅವನ ಮೇಲೆ ಪ್ರಹಾರ ಮಾಡತೊಡಗಿದರು. ಒಂದೊಂದು ಏಟಿಗೂ ಕರತಾಡನಗಳೊಂದಿಗೆ ಊರ ಜನತೆ ಆ ಶಿಕ್ಷೆಯನ್ನು ಅನುಮೋದಿಸಿತು.

ಬಿದ್ದ ಏಟಿಗೆ ಸಿದ್ಧಪ್ಪಗೌಡರ ಹುಚ್ಚು ಇಳಿದು ಹೋಯಿತು. ತನ್ನ ಕಾಲಿಗೆ ಬಿದ್ದು ಹೊರಳಾಡಿ ಕ್ಷಮೆ ಯಾಚಿಸುತ್ತಿದ್ದ ತಮ್ಮನ ಮೇಲೆ ಚಾಟಿ ಬೀಸುವುದಕ್ಕೆ ಮತ್ತೆ ದೊಡ್ಡಗೌಡರಿಗೆ ಮನಸ್ಸಾಗಲಿಲ್ಲ.

ನೆರೆದ ಜನರನ್ನುದ್ದೇಶಿಸಿ ದೊಡ್ಡಗೌಡರು ನುಡಿಯತೊಡಗಿದರು,

“ಮಾನ್ಯ ಜನಗಳೇ, ಆಗಿದ್ದು ಆಗಿ ಹೋಯಿತು. ನನ್ನ ತಮ್ಮನು ಗೈದ ತಪ್ಪಿನಿಂದಾಗಿ ಈ ಊರಿಗೆ ಮಹಾ ಕಂಟಕವೊಂದು ಒದಗಿಬಂದಿರುವುದು ನಿಜ. ಮಾಡಿದ ತಪ್ಪಿಗೆ ಶಾಸ್ತಿಯಾಗಲೇ ಬೇಕು. ಯಾರೂ ಧೃತಿಗೆಡದಿರಿ. ಆಲದ ಮರವು ಮತ್ತೆ ಚಿಗುರೊಡೆಯುತ್ತದೆ, ಅಲ್ಲಿ ಪಾರಿವಾಳಗಳು ಮತ್ತೆ ಬಂದು ನೆಲೆಸುತ್ತವೆ. ಈ ಊರು ಮತ್ತೆ ಹಸಿರಿನಿಂದ ಕಂಗೊಳಿಸುತ್ತದೆ. ಆಲದ ಮರವೂ, ಪಾರಿವಾಳಗಳೂ ಎಂದಿಗೂ ನಮ್ಮ ಕೈ ಬಿಡವು. ನಾವು ಮಾಡಬೇಕಾದುದು ಇಷ್ಟೇ. ತಕ್ಷಣವೇ ಆಲದ ಮರದ ಬುಡದಲ್ಲಿ ಪಾರಿವಾಳಗಳಿಗಾಗಿ ಗುಡಿಯೊಂದು ಎದ್ದು ನಿಲ್ಲಬೇಕು. ಅಲ್ಲಿ ಪೂಜಾಕಾರ್ಯಗಳೂ ನಡೆಯಬೇಕು. ಈ ಕಾರ್ಯಗಳಿಗಾಗಿ ನೀವು ನನ್ನ ಜತೆಗಿರುವಿರಾ?”

 

ನೆರೆದ ಜನತೆಯು ಎರಡೂ ಕೈ ಎತ್ತಿ ಹರ್ಷೋದ್ಗಾರಗಳೊಂದಿಗೆ ದೊಡ್ಡಗೌಡರ ಮಾತುಗಳನ್ನು ಅನುಮೋದಿಸಿತು.

ಗುಡಿ ನಿರ್ಮಾಣದ ಕಾರ್ಯಕ್ಕಾಗಿ ಅಲ್ಲಿಯೇ ತಂಡವೊಂದರ ರಚನೆಯಾಯಿತು.

ನೋಡ ನೋಡುತ್ತಿರುವಂತೆಯೇ, ಕೆಲವೇ ದಿನಗಳಲ್ಲಿ ಸುಂದರ ಪಾರಿವಾಳದ ಮೂರ್ತಿಯೊಂದು ದೊಡ್ಡ ಗೌಡರ ಆಲದ ಮರದ ಕೆಳಗೆ ತಲೆಯೆತ್ತಿ ನಿಂತಿತು.

 

ಅಂದು ಸಂಧ್ಯಾಕಾಲದಲ್ಲಿ ಆ ಮೂರ್ತಿಗೆ ಮೊದಲ ಪೂಜೆ. ಶಂಖ, ಜಾಗಟೆ, ನಗಾರಿಗಳ ಹಿಮ್ಮೇಳದಲ್ಲಿ ಕೈಯಲ್ಲಿ ಕರ್ಪೂರದಾರತಿಯನ್ನು ಹಿಡಿದು ದೊಡ್ಡಗೌಡರು ಆ ಮೂರ್ತಿಯನ್ನು ಸಮೀಪಿಸುತ್ತಿದ್ದಂತೆಯೇ ಅಲ್ಲೊಂದು ಅಚ್ಚರಿ ಕಾದಿತ್ತು.

ಅದೋ, ಆ ಮೂರ್ತಿಯ ನೆತ್ತಿಯ ಮೇಲೆಯೇ ಬಂದು ಕುಳಿತಿದೆಯೊಂದು ಶುಭ್ರ ವರ್ಣದ ಪಾರಿವಾಳ! ಅದರ ಕಣ್ಣುಗಳಲ್ಲಿ ಏನೋ ಹೊಳಪು. ಅದರ ಸುತ್ತಲೂ ಹೊಂಬಣ್ಣದ ಪ್ರಭಾವಲಯ!

ನೆರೆದ ಜನತೆಯು ಜೈಕಾರ ಗೈದು ಆ ಪಾರಿವಾಳವನ್ನು ನಮಿಸಿತು, ಸಾಷ್ಟಾಂಗ ಪ್ರಣಾಮ ಗೈದಿತು. ಮಂಗಳಾರತಿ ಮುಗಿಯುವ ಹೊತ್ತಿಗೆ ಆ ಪಾರಿವಾಳವು ಎತ್ತಲೋ ಹಾರಿ ಕಣ್ಮರೆಯಾಯಿತು.

 

ದೇವದೂತನಂತಹ ಪಾರಿವಾಳವನ್ನು ಕಂಡ ಸಂತೃಪ್ತಿಯಲ್ಲಿ ಊರಿಗೆ ಊರೇ ಆ ರಾತ್ರಿ ಗಾಢವಾದ ಶಾಂತ ನಿದ್ರೆಗೆ ಜಾರಿತ್ತು. ಆ ರಾತ್ರಿಯೇ, ಗುಡುಗು ಮಿಂಚುಗಳಿಂದ ಕೂಡಿದ ಮಹಾ ಮಳೆಯು ಅಲ್ಲಿ ಸಂಭವಿಸಿದ್ದು ಯಾರ ಅರಿವಿಗೂ ಬರಲೇ ಇಲ್ಲ!

ಮರುದಿನ ಎಚ್ಚರಗೊಳ್ಳುತ್ತಲೇ ಮೂಗಿಗೆ ಬಡಿದ ಒದ್ದೆ ಮಣ್ಣಿನ ವಾಸನೆ, ಕಣ್ಣಿಗೆ ಬಿದ್ದ ತುಂಬಿದ ಕೆರೆ ಕಟ್ಟೆಗಳು ಆ ಜನರನ್ನು ಸ್ವರ್ಗ ತುಲ್ಯವಾದ ಆನಂದದಲ್ಲಿ ತೋಯಿಸಿತ್ತು. ಯಾರ ಪ್ರೇರಣೆಯೂ ಇಲ್ಲದೆಯೇ ಊರ ಜನರೆಲ್ಲ ಪಾರಿವಾಳದ ಗುಡಿಯ ಮುಂದೆ ಬಂದು ನೆರೆದಿದ್ದರು.

ಜನ ಮಧ್ಯದಿಂದ ಪುಟ್ಟ ಮಗುವೊಂದು ಕೂಗಿ ಹೇಳಿತು, ಅದೋ, ಆಲದ ಮರವು ಚಿಗುರುತ್ತಿದೆ!”

ಅದರ ಮಾತು ನಿಜವಾಗಿತ್ತು. ಆಲದ ಮರದ ಕೊಂಬೆ ರೆಂಬೆಗಳ ತುಂಬೆಲ್ಲ ಅಲ್ಲಲ್ಲಿ ಹಸಿರು ಚುಕ್ಕೆಗಳು.

 

ಹರ್ಷೋದ್ಗಾರ ದೊಂದಿಗೆ ನಲಿಯುತ್ತಲೇ ದೇವದೂತ ನನ್ನು ಕೊಂಡಾಡುತ್ತಲೇ ಇತ್ತು ಊರ ಜನತೆ.

ಅಷ್ಟರಲ್ಲಿಯೇ ತಲೆಯ ಮೇಲಿಂದ “ಭುರ್ರ್….!” ಎಂಬೊಂದು ಸದ್ದು. ಅದೋ ತನ್ನ ಕೊಕ್ಕಿನಲ್ಲೊಂದು ಒಣ ಕಡ್ಡಿಯೊಂದನ್ನು ಹೊತ್ತು ಹಾರಿ ಬಂದು ಆಲದ ಮರದ ಮೇಲೆ ಕುಳಿತಿದೆಯೊಂದು ಪಾರಿವಾಳ! ನೆರೆದ ಜನರ ಆನಂದಕ್ಕೆ ಪಾರವೇ ಇಲ್ಲ!

ಆಲದ ಮರದ ಛಾಯೆಯನ್ನು ಒಂದು ಕ್ಷಣವೂ ಬಿಟ್ಟು ಕದಲದಾದರು ಊರ ಜನರು!

 

ದಿನಗಳುರುಳಿದಂತೆಯೇ ಆ ಮರವು ಮತ್ತೆ ಹಸನಾಯಿತು. ಮರೆಯಾಗಿದ್ದ ಪಾರಿವಾಳಗಳ ಹಿಂಡು ಅಲ್ಲಿ ಮತ್ತೆ ಬಂದು ನೆಲೆಸಿತು. ಮರೆತೇ ಹೋಗಿದ್ದ ಅವುಗಳ ನರ್ತನ ವೈಭವವು ಆ ಊರ ಜನರ ಕಣ್ಮನ ತಣಿಸಿತು. ಊರು ಮತ್ತೆ ಸಹಜ ಸ್ಥಿತಿಗೆ ಮರಳಿತು!

 

Author Details


Srimukha

Leave a Reply

Your email address will not be published. Required fields are marked *