ಗುಬ್ಬಚ್ಚಿ ಕಂಡ ಲೋಕ

ಅಂಕಣ ಸ್ಫಟಿಕ~ಸಲಿಲ : ಮಹೇಶ ಕೋರಿಕ್ಕಾರು

ನಾನೊಂದು ಗುಬ್ಬಚ್ಚಿ.


ಅದೋ, ಆ ಗುಡಿಸಲ ಸೂರಿನ ಸಂದಿಯಲ್ಲಿಯೇ ನನ್ನ ವಾಸ. ಈಗಲೂ ನೆನಪಿದೆ ನನಗೆ, ಅದೇ ಗುಡಿಸಲಿನ ಸೂರಿನೆಡೆಯಲ್ಲಿನ ಪುಟ್ಟ ಗೂಡಿನಲ್ಲಿ ಮೊಟ್ಟೆಯಿಂದ ಬಿರಿದೆದ್ದು ಮೊತ್ತ ಮೊದಲ ಬಾರಿಗೆ ಈ ಪ್ರಪಂಚವನ್ನು ನಾ ಕಂಡ ಆ ಕ್ಷಣ. ಮನೆಯೊಳಗೆ ಯಾರೂ ಇಲ್ಲದ ಸಮಯವನ್ನು ನೋಡಿ, ಭತ್ತದ ಮೂಟೆಯನ್ನು ಕುಕ್ಕಿ, ಅದರೊಳಗಿನ ಭತ್ತವನ್ನು ತಂದು ನನ್ನ ಬಾಯೊಳಗಿಡುತ್ತಿದ್ದಳು ಅಂದು ಅಮ್ಮ. ಒಂದು ದಿನ, ಅದು ಹೇಗೋ ಆ ದೃಶ್ಯವನ್ನು ಕಂಡನು ಆ ಮನೆಯ ಪುಟ್ಟ ಪೋರ. ಚಪ್ಪಾಳೆ ಹೊಡೆದು, ಕೇಕೇ ಹಾಕಿ ನಕ್ಕು, ಮನೆಯವರನ್ನೆಲ್ಲಾ ಕರೆದು ಗುಲ್ಲೆಬ್ಬಿಸಿದ್ದನು ಅಂದು ಆತ.  ಆ ಮುದ್ದು ಮಕ್ಕಳಿಗಾಗಿ ಅವರು ತಂದಿರಿಸಿದ್ದ ಭತ್ತವನ್ನು ಕದ್ದು ತಿಂದಿದ್ದಕ್ಕಾಗಿ ಅವರು ಬೇಸರಿಸುವರೇನೋ ಎಂದು ನೊಂದಿದ್ದಳು ಅಂದು ಅಮ್ಮ. ಆದರೆ, ಹಾಗಾಗಲಿಲ್ಲ. ತಟ್ಟೆಯೊಂದರಲ್ಲಿ ಒಂದು ಹಿಡಿ ಭತ್ತವನ್ನು ಹರಡಿ ನನ್ನ ಗೂಡಿನ ಬಳಿಯೇ ನಿತ್ಯವೂ ತಂದಿರಿಸುತ್ತಿದ್ದಳು ಮನೆಯೊಡತಿ ನನಗಾಗಿ. ‘ಅಬ್ಬಾ! ಮನುಷ್ಯನೆಂದರೆ ಅದೆಷ್ಟು ಕರುಣಾಳುಗಳು’ ಎಂದುಕೊಂಡಿದ್ದೆ ನಾನಾಗ.

ಅದೆಲ್ಲಾ ಹಿಂದೆ ನಡೆದ ಕಥೆಯಲ್ಲವೇ. .ಅದಾಗಿ ಒಂದು ಮಳೆಗಾಲವನ್ನು ನಾನಾಗಲೇ ಕಂಡಿರುವೆ.

ಇಂದೇಕೋ, ಆಗಸದಲ್ಲಿ ಮೂಡಿ ಬರುವ ಕಾರ್ಮೋಡಗಳನ್ನು ನೋಡಿದರೆ, ಸುಡುವ ಈ ಬಿಸಿಲನ್ನು ನೋಡಿದರೆ, ಮತ್ತೆ ಇನ್ನೊಂದು ಮಳೆಗಾಲವು ಹತ್ತಿರವಾಗುತ್ತಿದೆಯೇ ಎಂಬ ಭಯ ನನಗೆ.

ಈಗಲೂ ನೆನಪಿದೆ ನನಗೆ. ಕಳೆದು ಹೋದ ಆ ಮಳೆಗಾಲದಲ್ಲಿ ಬೀಸಿ ಬಂದ ಆ ಬಿರುಗಾಳಿ. ರೆಕ್ಕೆಗಳಿನ್ನೂ ಬಲಿತುಕೊಳ್ಳದ ಪುಟ್ಟ ಮರಿ ನಾನಾಗ. ನನ್ನ ತಾಯಿಯ ರೆಕ್ಕೆಗಳೆಡೆಯಲ್ಲಿಯೇ ಮುದುರಿ ಕುಳಿತು ಭಯದಿಂದ ಥರಗುಟ್ಟುತ್ತಾ, ನಾನಂದು ಆಗಸವನ್ನು ದಿಟ್ಟಿಸುತ್ತಿದ್ದೆ. ಅಬ್ಬಾ! ಹೆಬ್ಬಂಡೆಗಳೇ ಉರುಳಿ ಒಂದಕ್ಕೊಂದು ಢಿಕ್ಕಿ ಹೊಡೆದಂತೆ, ಕ್ಷಣಕ್ಷಣಕ್ಕೂ ಕೋಲ್ಮಿಂಚುಗಳನ್ನು ಝಳಪಿಸುತ್ತಾ ಬಿರುಸಾಗಿ ಸಾಗಿ ಬರುತ್ತಿದ್ದ ಕಾರ್ಮೋಡಗಳು. ಘಳಿಗೆ ಘಳಿಗೆಗೂ ಅಪ್ಪಳಿಸುತ್ತಿದ್ದ ಭರಸಿಡಿಲು. ಆ ಗುಡಿಸಲನ್ನೇ ಹೊತ್ತೊಯ್ಯುವಂತೆ ಬೀಸಿ ಬಂದಿದ್ದ ಬಿರುಗಾಳಿ. ಗುಡಿಸಲ ಸುತ್ತಲೂ ಇರುವ ತೆಂಗಿನ ಮರಗಳು ಧಡಾರೆಂದು ಮುರಿದು ಬಿದ್ದ ಆ ಕ್ಷಣವನ್ನು ನೆನೆಸಿಕೊಂಡರೆ ಈಗಲೂ ಎದೆಯೊಳಗೆ ನಡುಕ ಹುಟ್ಟುತ್ತದೆ ನನಗೆ. ಎತ್ತಲಾದರೂ ಹಾರಿ ಪಾರಾಗೋಣವೆಂದರೆ, ರೆಕ್ಕೆ ಬಿಚ್ಚುವುದಕ್ಕೂ ಸಾಧ್ಯವಾಗದಷ್ಟು ವೇಗವಾಗಿ ಬೀಸಿ ಬರುತ್ತಿತ್ತಂದು ಬಿರುಗಾಳಿ. ಅದಾವ ಜನ್ಮದ ಪುಣ್ಯದ ಫಲವೋ, ಅಂದು ಬದುಕುಳಿದೆನು ನಾನು.

ಇಂದೀಗ ನನ್ನ ಉದರದಲ್ಲೂ ಚಿಗುರೊಡೆಯುತ್ತಿವೆ ಮೊಟ್ಟೆಗಳು. ಮೊಟ್ಟೆಯಿಂದೆದ್ದು ಹೊರಲೋಕವನ್ನು ಕಾಣುವ ಹೊತ್ತು ನನ್ನ ಮರಿಗಳಿಗೂ ಅಂತಹಾ ಭಯಾನಕ ಸನ್ನಿವೇಶಗಳು ಎದುರಾಗದಿರಲಿ ಭಗವಂತಾ ಎಂದು ನೆನೆಯುತ್ತಾ, ಗುಡಿಸಲಿನ ಮುಂದೆ ಹೊಸದಾಗಿ ಎದ್ದು ಬಂದ ಆ ಭವ್ಯ ಬಂಗಲೆಯನ್ನೇ ದಿಟ್ಟಿಸುತ್ತಿದ್ದೆನು ನಾನು. ಅದೆಷ್ಟು ಕಟ್ಟುಮಸ್ತಾಗಿದೆ ಆ ಬಂಗಲೆ. ಎಂತಹಾ ಬಿರುಗಾಳಿಗೂ ಜಗ್ಗದಂತೆ, ಕಾರ್ಗಲ್ಲುಗಳಿಂದಲೇ ನಿರ್ಮಿಸಿದ್ದಾರೆ ಅದರ ಗೋಡೆಗಳನ್ನು. ನನ್ನ ಮರಿಗಳಿಗಾಗಿ ಅಲ್ಲೊಂದು ಗೂಡು ಕಟ್ಟಲೇ? ಯೋಚಿಸುತ್ತಿದ್ದೆನು ನಾನು.

ಯಾಕೋ, ತಡ ಮಾಡಬೇಕನ್ನಿಸಲಿಲ್ಲ. ಆ ಬಂಗಲೆಯ ಸುತ್ತ ರೆಕ್ಕೆ ಬಿಚ್ಚಿ ಹಾರಾಡಿ ನೋಡುವಾಸೆ. ಅಬ್ಬಾ ಅದೆಷ್ಟು ಸುಂದರವಾಗಿದೆ ಪರಿಸರ.  ಮನೆಯ ಸುತ್ತಲೂ ಹೂ ಬಿಡುವ ಹಲವಾರು ಬಗೆಯ ಸಸ್ಯಗಳು. ನಿತ್ಯವೂ ನೀರು ಚಿಮುಕಿಸಿ ಹಸನಾಗಿರುವ ಹುಲ್ಲು ಹಾಸುಗಳು. ಭದ್ರವಾದ ಕಾರ್ಗಲ್ಲಿನ ಕೋಟೆಯೊಳಗೆ ಈ ಪರಿಸರವು ಅದೆಷ್ಟು ಸುರಕ್ಷಿತವಾಗಿದೆ ಎಂದನ್ನಿಸಿತು ನನಗೆ. ಯಾಕೋ ಮನಸ್ಸು ಉಲ್ಲಸಿತವಾಯಿತು. ಈ ಬಂಗಲೆಯೊಳಗೇ ಗೂಡು ಕಟ್ಟಿಕೊಳ್ಳಬೇಕೆಂಬ ಅತಿಯಾದ ಹಂಬಲ ಮನದೊಳಗೆ. ಅಷ್ಟರಲ್ಲಿ ಅದೋ, ಆ ಕಿಟಕಿಯ ಸಂದಿಯಲ್ಲಾಗಿ ಒಳಸೇರುವುದಕ್ಕೊಂದು ಪುಟ್ಟ ಕಿಂಡಿ.  ಹಾಗೆ ಒಳ ಸೇರಿಕೊಂಡರೆ ಅಲ್ಲಿಯೇ ಆ ಕಿಟಕಿಯ ಮಗ್ಗುಲಲ್ಲಿಯೇ, ನನಗಾಗಿಯೇ ಮಾಡಿಸಿಟ್ಟಂತೆ ಒಂದು ಪುಟ್ಟ ಜಾಗ. ಭಾವಪರವಶವಾಯಿತು ಹುಚ್ಚು ಮನಸು. ಇದುವೇ ನನ್ನ ಜಾಗವೆಂದು ನಿರ್ಧರಿಸಿಯೇ ಬಿಟ್ಟೆನು ನಾನು.

ಆ ಗುಡಿಸಲ ಸೂರಿನಿಂದಲೇ ಒಣ ಹುಲ್ಲುಕಡ್ಡಿಗಳನ್ನು ಸಂಗ್ರಹಿಸಿ, ಆ ಬಂಗಲೆಯಲ್ಲೊಂದು ಪುಟ್ಟ ಗೂಡನ್ನು ನಿರ್ಮಿಸಿಯೇಬಿಟ್ಟೆನು ನಾನು.


ನಾಲ್ಕಾರು ಮಂದಿ ಇರುವರು ಆ ಬಂಗಲೆಯೊಳಗೆ. ಖುಷಿ ಎನ್ನಿಸಿತು ನನಗೆ. ದಟ್ಟ ದಾರಿದ್ರ್ಯ ತುಂಬಿ ತುಳುಕುತ್ತಿದ್ದ ಆ ಗುಡಿಸಲಿನ ಪುಟ್ಟ ಕುಟುಂಬವೇ ಅದೆಷ್ಟು ಅನ್ಯೋನ್ಯವಾಗಿ ಆನಂದದಿಂದ ಜೀವಿಸುತ್ತಿದೆ. ಇನ್ನು ಸುಖದ ಸುಪ್ಪತ್ತಿಗೆಯಲ್ಲಿರುವ ಈ ತುಂಬು ಸಂ‌ಸಾರವು ಅದೆಷ್ಟು ಸಂತಸದಿಂದಿರಬೇಡ ಎಂದು ಯೋಚಿಸುತ್ತಲೇ ಆ ಆನಂದವನ್ನು ಕಣ್ತುಂಬಿಕೊಳ್ಳಲು ತವಕಿಸಿ ಹಿರಿಹಿರಿ ಹಿಗ್ಗಿದೆನು ನಾನು.

ದಿನಗಳುರುಳಿದವು. ಯಾಕೋ, ಮನದಾಳದಲ್ಲಿ ಅದೇನೋ ಒಂದು ರೀತಿಯ ಬೇಸರ, ನಾನು ಒಬ್ಬಂಟಿಯೆಂಬ ಭಾವ ಮನಸ್ಸನ್ನೆಲ್ಲಾ ಆವರಿಸುತ್ತಿದೆ. ಆ ಗುಡಿಸಲಿನಲ್ಲಿಯೂ ನಾನು ಒಬ್ಬಳೇ ಇದ್ದಾಗ ಎಂದೂ ಮೂಡಿರದ ಒಬ್ಬಂಟಿ ಭಾವ ಇಲ್ಲೇಕೆ ಕಾಡುತ್ತಿದೆ? ಯೋಚಿಸುತ್ತಲೇ ಇದ್ದೆನು ನಾನು.

ಹೌದಲ್ಲವೇ?


ಕಿತ್ತು ತಿನ್ನುವ ದಾರಿದ್ರ್ಯವಿದ್ದರೂ, ಆ ಗುಡಿಸಲಿನೊಳಗೆ ನಗುವಿತ್ತು, ಅನ್ಯೋನ್ಯತೆಯಿತ್ತು, ಜೀವಂತಿಕೆಯಿತ್ತು. ಸದಾ ಒಂದಲ್ಲ ಒಂದು ಕೆಲಸದಲ್ಲಿ ಜೊತೆಯಾಗಿಯೇ ತೊಡಗಿರುತ್ತಿದ್ದರು ಆ ಮನೆಯ ಜೀವಗಳು. ಅವರ ಪರಸ್ಪರ ಮಾತುಕತೆ, ಹಸಿಮುನಿಸು, ನಗು, ಎಲ್ಲವೂ ನನ್ನ ಮನಸ್ಸಿಗೆ ಮುದ ನೀಡುತ್ತಿತ್ತು.

ಆದರಿಲ್ಲಿ?

ಸುಖದ ಸುಪ್ಪತ್ತಿಗೆಯಲ್ಲಿದ್ದರೂ, ಈ ಬಂಗಲೆಯೊಳಗೆ ಜೀವಂತಿಕೆಯಿಲ್ಲ. ಇರುವ ನಾಲ್ಕಾರು ಮಂದಿಗೆ ನಾಲ್ಕಾರು ಪ್ರತ್ಯೇಕ ಕೋಣೆಗಳು. ಅವರವರ ಕೋಣೆಯಲ್ಲಿ ಅವರವರು ಮೌನಿಗಳು. ಪರಸ್ಪರರಲ್ಲಿ ಬಿಚ್ಚಿಡುವ ಭಾವಕ್ಕಿಂತ, ಒಬ್ಬರಿಂದೊಬ್ಬರು ಮುಚ್ಚಿಡುವ ರಹಸ್ಯಗಳೇ ತುಂಬಿ ಹೋಗಿದ್ದವು ಆ ಮನೆಯೊಳಗೆ. ಅವರಿದ್ದಲ್ಲಿ ಇವರಿಲ್ಲ, ಇವರಿದ್ದಲ್ಲಿ ಅವರಿಲ್ಲ. ಒಂದೊಮ್ಮೆ ಎಲ್ಲರೂ ಒಂದಾದರೂ, ಕರ್ಣಕಠೋರ ವಾದ್ಯಗಳನ್ನು ಹೊಮ್ಮಿಸುವ ಟಿವಿ ಪರದೆಯ ಮುಂದೆ ಸುಮ್ಮನೇ ಕುಳಿತಿರುವರು ಎಲ್ಲರೂ. ನಗುವಿಲ್ಲ, ಅಳುವಿಲ್ಲ, ಚಟುವಟಿಕೆಯಿಲ್ಲ, ಮಾತುಕತೆಯಿಲ್ಲ. ‘ಛೇ ಇದೆಂತಹಾ ಜೀವನ ಈ ಮಾನವರದು!’ ಅನ್ನಿಸಿತು ನನಗೆ. ಸುಖದ ಸುಪ್ಪತ್ತಿಗೆಯಲ್ಲಿ ಸಂಬಂಧಗಳಿಲ್ಲದೇ, ಚಟುವಟಿಕೆಯಿಲ್ಲದೇ, ಭಾವಶೂನ್ಯರಾಗಿ ಬದುಕುವ ಈ ಮಾನವರಿಗಿಂತ, ದಟ್ಟದಾರಿದ್ರ್ಯದಲ್ಲೂ ನಗುಮೊಗದಿಂದ ಕೂಡಿ ಬಾಳುವ ಆ ಗುಡಿಸಲ ದಾರಿದ್ರ್ಯವೇ ವಾಸಿಯೆನ್ನಿಸಿತು ನನಗೆ.

ಬಹಳ ದಿನಗಳಾಗಿತ್ತು ಈ ಬಂಗಲೆಗೆ ಬಂದು ಗೂಡು ಕಟ್ಟಿಕೊಂಡು. ಯಾಕೋ, ಉಸಿರುಕಟ್ಟುವಂತೆನಿಸಿತು. ಅಲ್ಲಿರಲಾಗಲಿಲ್ಲ. ಸುಮ್ಮನೇ ಒಂದು ಬಾರಿ ನನ್ನ ಹಳೆಯ ಗುಡಿಸಲಿನ ಸುತ್ತ ರೆಕ್ಕೆ ಬಿಚ್ಚಿ ಹಾರಿಬರುವ ಆಸೆ. ಆ ಆಸೆಯು ಚಿಗುರೊಡೆದಿದ್ದೇ ತಡ, ರೆಕ್ಕೆಗಳು ತಾನಾಗಿ ಬಡಿದುಕೊಂಡವು. ಅತ್ತ ಹಾರಿಯೇ ಬಿಟ್ಟೆನು ನಾನು. ಅದೋ, ಅಂಗಳದಲ್ಲಿ ಆಟವಾಡುತ್ತಿದೆ ಆ ಮನೆಯ ಪುಟ್ಟ ಮಗು. ತುಂಟನಲ್ಲವೇ ಅವನು. ನನ್ನನ್ನು ಕಂಡಾಕ್ಷಣ ಚಪ್ಪಾಳೆ ತಟ್ಟಿ ಗುಲ್ಲೆಬ್ಬಿಸಿದನು. “ಅಮ್ಮಾ, ಅದೋ ನಮ್ಮ ಗುಬ್ಬಚ್ಚಿ ಮತ್ತೆ ಬಂದಿದೆ ನೋಡು” ಎನ್ನುತ್ತಾ ಕೇಕೇ ಹಾಕಿ ಸಂಭ್ರಮಿಸಿದನು. ಸೆರಗಿನ ಅಂಚಿನಿಂದ ಬೆವರೊರೆಸಿಕೊಳ್ಳುತ್ತಾ ನನ್ನತ್ತ ತಿರುಗಿ ನೋಡಿದ ಆ ತಾಯಿಯ ಕಣ್ಣುಗಳಲ್ಲೂ ಆನಂದದ ಹೊಳಪನ್ನು ಕಂಡೆ ನಾನು.
ಹುಲ್ಲು ಹಾಸಿದ ಸೂರಿನ ಸಂದಿಯಲ್ಲಿರುವ ಆ ನನ್ನ ಹಳೆಯ ಗೂಡನ್ನು ಮತ್ತೆ ಹೊಕ್ಕು ಕುಳಿತುಕೊಂಡೆನು ನಾನು. ಕೈಯಲ್ಲಿ ಒಂದು ಹಿಡಿ ಕಾಳನ್ನು ಹಿಡಿದು ನನ್ನತ್ತಲೇ ಕುಣಿದು ಕುಪ್ಪಳಿಸಿ ಬರುತ್ತಿತ್ತು ಆ ಮನೆಯ ಪುಟ್ಟ ಮಗು. ಅಬ್ಬಾ, ಕಳೆದುಕೊಂಡಿದ್ದ ಅತ್ಯಮೂಲ್ಯವಾದ ಏನೋ ಒಂದನ್ನು ಮರಳಿ ಪಡೆದ ಆನಂದ ನನಗೆ.

ಯಾಕೋ, ಕುಳಿತ ಆ ಜಾಗದಿಂದ ಮತ್ತೆ ಮೇಲೇಳಬೇಕನ್ನಿಸಲೇ ಇಲ್ಲ. ಆ ಬಂಗಲೆಯತ್ತ ಮತ್ತೆ ಹಾರಬೇಕನ್ನಿಸಲೇ ಇಲ್ಲ.

Author Details


Srimukha

Leave a Reply

Your email address will not be published.