‘ಓವೀ’ ಎಂಬ ದೇಶೀ ಪ್ರಬಂಧ

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

ಭಾರತೀಯ ಸಂಗೀತ ಇತಿಹಾಸದಲ್ಲಿ ಸಂಗೀತಶಾಸ್ತ್ರಗ್ರಂಥರಚನೆಯ ಕೊಡುಗೆಯಲ್ಲಿ ಕರ್ಣಾಟಕದ ಶಾಸ್ತ್ರಕಾರರದೇ ಮೇಲುಗೈ. ಉತ್ತರ – ದಕ್ಷಿಣಾದಿ ಸಂಗೀತಗಳೆಂದು ಕವಲೊಡೆಯುವ ಸಂದರ್ಭವುಂಟಾದಾಗ, ಈಗಲೂ ಅದೆಷ್ಟೋ ಮೂಲವಾದ, ಪ್ರಾಚೀನ ವಿಷಯಗಳನ್ನು ಉಳಿಸಿಕೊಂಡಿರುವ ದಕ್ಷಿಣ ಭಾರತದ ಸಂಗೀತಕ್ಕೆ ಕರ್ಣಾಟಕಸಂಗೀತವೆಂದೇ ಹೆಸರುಂಟಾಗಲು ಕರ್ಣಾಟಕದ ಶಾಸ್ತ್ರಕಾರರ ಗ್ರಂಥಗಳೇ ಕಾರಣವಾದವು.   ಈಗ ಶಾಸ್ತ್ರೀಯ ಸಂಗೀತವೆಂದು ಕರೆಯಲ್ಪಡುವ ಸಂಗೀತವು ಸುಮಾರು 250-275 ವರ್ಷಗಳಿಗಿಂತ ಈಚೆಗೆ ರೂಪಿತವಾದಂತಹುದು. ಪ್ರಾಚೀನದಿಂದಲೂ ನಮ್ಮ ಸಂಗೀತಶಾಸ್ತ್ರಕಾರರು ಮಡಿವಂತರಾಗದೆ, ಕೇವಲ ಮಾರ್ಗಸಂಗೀತವನ್ನು ಮಾತ್ರ ಹೇಳದೆ ಭಾರತವಿಡೀ ಹಲವು ಪ್ರಾಂತ್ಯಗಳಲ್ಲಿ ಆಗ ಪ್ರಚಲಿತವಿದ್ದ ದೇಶೀ ಜನಪದ ಸಂಗೀತ ಪ್ರಕಾರಗಳನ್ನೂ ತಮ್ಮ ಶಾಸ್ತ್ರಗ್ರಂಥಗಳಲ್ಲಿ ಉಲ್ಲೇಖಿಸಿ ಸಂಗೀತಲೋಕವನ್ನು ಉದ್ಧಾರ ಮಾಡಿ ಸಂಗೀತಸರಸ್ವತಿಯ ತೆಕ್ಕೆಗೆ ಜನಪದ ಸಂಗೀತಶಾಸ್ತ್ರವನ್ನೂ ಸೇರಿಸಿದರು. ಸ್ತ್ರೀಯರೇ ತಮ್ಮ ಹೃದಯದ ಭಾವನೆಗಳನ್ನು, ಭಕ್ತಿಯನ್ನು ತೋಡಿಕೊಳ್ಳುವ, ತಮ್ಮ ಕಠಿಣತಮ ದೈಹಿಕ ಪರಿಶ್ರಮಗಳಾದ ಬೀಸುವುದು, ಕುಟ್ಟುವುದು ಮುಂತಾದ ಕೆಲಸಗಳನ್ನು ಮಾಡುವ ಸಮಯದಲ್ಲಿ ಆಯಾಸ ಪರಿಹಾರಕ್ಕಾಗಿಯೂ, ಪರಂಪರೆ, ಸಂಪ್ರದಾಯಗಳನ್ನು ಮುಂದುವರಿಸಲೆಂದೂ ರಚಿಸಿದ ಓವೀಯಂತಹ ಹಾಡುಗಳಿಗೂ ಶಾಸ್ತ್ರೀಯ ಮಾನ್ಯತೆಯನ್ನು ತಮ್ಮ ಗ್ರಂಥಗಳಲ್ಲಿ ಒದಗಿಸಿಕೊಟ್ಟರು. ಓವೀ ಹಾಡುಗಳು ಜನಪದ ಹಾಗೂ ಶಿಷ್ಟ ಸಾಹಿತ್ಯ ಪ್ರಭೇದಗಳೆರಡಲ್ಲಿಯೂ ರಚಿತವಾಗಿವೆ. ಓವೀಯನ್ನು ಮೊತ್ತ ಮೊದಲಾಗಿ ಹೇಳಿದುದು ಚಾಳುಕ್ಯ ಚಕ್ರವರ್ತಿ ಸರ್ವಜ್ಞ ಸೋಮೇಶ್ವರನೇ.

 

ಪ್ರಾಚೀನ ಪ್ರಬಂಧಗಳಾದ ಸೂಡ, ಆಲಿಕ್ರಮ ಮತ್ತು ವಿಪ್ರಕೀರ್ಣವೆಂಬ ಮೂರು ವಿಧಗಳಲ್ಲಿ ಓವೀ ಪ್ರಬಂಧವು ವಿಪ್ರಕೀರ್ಣವೆಂಬ ವಿಧಕ್ಕೆ ಸೇರಿದೆ. ವಿಪ್ರಕೀರ್ಣ ಪ್ರಬಂಧಗಳಲ್ಲಿ ಧಾರ್ಮಿಕ ಸಂದರ್ಭಗಳ, ಜನಪದ ಜೀವನದ, ವಿಶಿಷ್ಟ ಗುಂಪಿನ ಜನಗಳ, ಸಾಂಪ್ರದಾಯಿಕವಾದ ಅಥವಾ ಪುರಾತನವಾದ ಹಾಡುಗಳು ಸೇರಿರುತ್ತಿದ್ದವು. ಇವುಗಳಲ್ಲಿ ಕೆಲವು ಇಂತಹುದೇ ಛಂದಸ್ಸು, ತಾಳಗಳಲ್ಲಿ ನಿರ್ಯುಕ್ತವಾಗಿರಬೇಕೆಂಬ ನಿಯಮವಿದ್ದರೆ ಉಳಿದ ಕೆಲವು ಅನಿರ್ಯುಕ್ತದವೂ ಇದ್ದವು. ಪ್ರಾಚೀನ ಶಾಸ್ತ್ರಕಾರರು ವರ್ಣಿಸಿರುವ 75 ಮುಖ್ಯ ಪ್ರಬಂಧಗಳಲ್ಲಿ ಕೆಲವು ಸ್ವನಾಮಕಗಳಾಗಿದ್ದವು. ಎಂದರೆ ಪ್ರಬಂಧದಲ್ಲಿ ನಿರ್ಯುಕ್ತವಾಗಿದ್ದ ತಾಳದ ಹೆಸರೇ ಪ್ರಬಂಧಕ್ಕೂ ಇರುತ್ತಿದ್ದವು. ಉದಾಹರಣೆಗೆ ಢೇಂಕಿ, ಹಯಲೀಲಾ, ರಾಸ, ಮುಂತಾದವು ಸಾಲಗಸೂಡ ಪ್ರಬಂಧಗಳು (ಅನಂತರದ ಕಾಲದಲ್ಲಿ ಹರಿದಾಸರು ಇವುಗಳನ್ನು ಸ್ವಲ್ಪವಾಗಿ ಮಾರ್ಪಡಿಸಿ ಸೂಳಾದಿಗಳೆಂದು ಕರೆದರು). ಕೆಲವು ನಿರ್ಯುಕ್ತಿಯಾಗುತ್ತಿದ್ದ ಛಂದಸ್ಸಿನ ಹೆಸರೇ ಪ್ರಬಂಧಗಳಿಗೆ ಅನ್ವಯವಾಗುತ್ತಿದ್ದವು. ಉದಾಹರಣೆಗೆ ಹಯಲೀಲಾ, ಕ್ರೌಂಚಪದ, ಆರ್ಯಾ, ತೋಟಕ, ಪದ್ಧಡೀ, ದ್ವಿಪಥಕ ಮುಂತಾದವು. ಇನ್ನು ಕೆಲವು ಪ್ರಬಂಧದ ಅಂತ್ಯದಲ್ಲಿಯೋ ಅಥವಾ ಚರಣಗಳ ಕೊನೆಯಲ್ಲಿಯೋ ಪುನರಾವೃತ್ತಿಗೊಳ್ಳುತ್ತಿದ್ದ ಪದವೇ ಪ್ರಬಂಧದ (=ನಿಯಮಬದ್ಧವಾದ ಹಾಡಿನ) ಹೆಸರೂ ಆಗಿರುತ್ತಿತ್ತು. ಉದಾಹರಣೆಗೆ ಮಂಗಲ, ಧವಲ, ಓವೀ, ಲೋಲೀ, ಢೋಲ್ಲರೀ, ದಂತೀ ಮುಂತಾದವು. ಓವೀಯ ಲಕ್ಷಣವನ್ನು 16ನೆಯ ಶತಮಾನದಲ್ಲಿದ್ದ, ಕರ್ಣಾಟಕದ ಸಾತನೂರಿನವನೇ ಆಗಿದ್ದ ಸಂಗೀತಶಾಸ್ತ್ರಜ್ಞ ಪಂಡರೀಕ ವಿಠ್ಠಲನು ತನ್ನ ನರ್ತನನಿರ್ಣಯದ ಮೂರನೆಯ ಪ್ರಕರಣದ 255-256ನೆಯ ಶ್ಲೋಕಗಳಲ್ಲಿ ಹೀಗೆ ವರ್ಣಿಸಿದ್ದಾನೆ-

“ದೇಶಭಾಷೆಯಲ್ಲಿ ಪ್ರಾಸವುಳ್ಳ ಮೂರು ಖಂಡಗಳನ್ನು ಹಾಡಿ ಅದರ ಕೊನೆಯಲ್ಲಿ ಓವೀ ಎಂಬ ಶಬ್ದವಿದ್ದರೆ ಅದನ್ನು ತಜ್ಞರು ಓವೀ ಎಂದು ಕರೆಯುತ್ತಾರೆ. ಮೂರೂ ಚರಣಗಳನ್ನು ಒಮ್ಮೆಗೇ ಅಥವಾ ಪುನರುಚ್ಚರಿಸಿ ಹಾಡುವುದರಿಂದ ಅನೇಕ ಭೇದಗಳು ಹುಟ್ಟುತ್ತವೆ. ಮೊದಲು, ಮಧ್ಯ ಮತ್ತು ಕೊನೆಗಳಲ್ಲಿ ಬರುವ ಪ್ರಾಸಗಳಿಂದ ಪಾದ ಪಾದದಲ್ಲಿಯೂ ಬಹುವಾದ ಛಂದಸ್ಸುಗಳಲ್ಲಿಯೂ ಜನಮನೋಹರವಾದ ಓವೀಯನ್ನು ಅನೇಕ ವಿಧವಾಗಿ ಹಾಡಬಹುದು.”

 

ಓರ್ವ —> ಓವ = ಭಗವಂತ, ಉರ್ವೀ —> ಉವೀ = ಭೂಮಿ ತಾಯಿ ಎಂದು ಬಹುಶಃ ಈ ಶಬ್ದಗಳು ಅಪಭ್ರಂಶವಾಗಿರಬಹುದು. ಅಥವಾ ಓವು = ಪ್ರೀತಿಸು, ಪಾಲಿಸು ಎಂಬ ಅರ್ಥಗಳಿಂದ ಹುಟ್ಟಿಕೊಂಡ ಶಬ್ದವಿದಾಗಿರಬಹುದು. ಕನ್ನಡ ಹಾಗೂ ತೆಲುಗುಗಳಲ್ಲಿ ಪ್ರತಿಪಾದಾಂತ್ಯದಲ್ಲಿ ಓವೀ ಎಂದೇ ಮುಗಿಯುವ ಜೋಗುಳದ ಹಾಡುಗಳು ಇಂದಿಗೂ ಉಳಿದುಬಂದಿವೆ. ಈ ಪ್ರಬಂಧ ಪ್ರಕಾರವನ್ನು ಶಾರ್ಙ್ಗದೇವನೂ ವರ್ಣಿಸಿದ್ದಾನೆ. ಪಂಡರೀಕ ವಿಠ್ಠಲನು ಶಾರ್ಙ್ಗದೇವನ ಸಂಗೀತರತ್ನಾಕರದಲ್ಲಿರುವ ಓವೀ ಲಕ್ಷಣವನ್ನೇ ಅನುಸರಿಸಿ ಹೇಳಿದ್ದಾನೆ. ಮೂರು ಪಾದಗಳಲ್ಲಿ ಒಂದೊಂದನ್ನೂ ಅಥವಾ ಮೂರನ್ನೂ ಬೇರೆ ಬೇರೆ ರೀತಿಯಲ್ಲಿ ಪುನರುಚ್ಚರಿಸಿದರೆ, ಈ ಹಾಡನ್ನು ಬೇರೆ ಬೇರೆ ಛಂದೋವೃತ್ತಗಳಲ್ಲಿ ರಚಿಸಿದರೆ, ಪ್ರಾಸವನ್ನು ಪಾದದ ಮೊದಲು, ಮಧ್ಯ, ಕೊನೆಗಳಲ್ಲಿ ಇಡುವುದರಿಂದ ಹಾಗೂ ಇತರ ಲಾಕ್ಷಣಿಕರು ವಿಧಿಸುವ ಅನುಪ್ರಾಸವನ್ನು ಬೇರೆ ಬೇರೆ ವಿಧಗಳಲ್ಲಿ ಏರ್ಪಡಿಸುವುದರಿಂದ ಜನಮನೋಹರವಾದ ಓವೀಯನ್ನು ಬಹುಭಂಗಿಗಳಲ್ಲಿ ರಚಿಸಬಹುದಾದದ್ದರಿಂದ ಅನೇಕ ಅನುಭಾವೀ ಕವಿಗಳು ಜನಮನದ ಸಂತೋಷಕ್ಕಾಗಿ, ಭಕ್ತಿಪ್ರಸರಣಕ್ಕಾಗಿ ಈ ಬಂಧದಲ್ಲಿ ಕವಿತೆಗಳನ್ನು, ಅಭಂಗಗಳನ್ನು ರಚಿಸಿದ್ದಾರೆ. ಓವೀ ಪ್ರಬಂಧಕ್ಕೆ ರಸವಿನಿಯೋಗವು ಬಹುತೇಕ ಕಂಡುಬರುವುದಿಲ್ಲ. ಸರ್ವಜ್ಞ ಸೋಮೇಶ್ವರ ಚಕ್ರವರ್ತಿಯು ‘ಮಹಾರಾಷ್ಟ್ರೇಷು ಯೋಷಿದ್ಭಿರೋವೀ ಗೇಯಾ ತು ಕಂಡನೇ’ ಎಂದು ಹೇಳಿ, ಅದು ಸಂಭೋಗ – ವಿಪ್ರಲಂಭ ಶೃಂಗಾರಗಳಲ್ಲೂ ವಿನಿಯೋಗವನ್ನು ಪಡೆಯುತ್ತಿತ್ತು, ಅದರಲ್ಲಿ ಅನುಪ್ರಾಸಯುತವಾದ ಎರಡೇ ಪಾದಗಳಿರುತ್ತಿದ್ದವು, ಕೊನೆಯಲ್ಲಿ ಓವೀ (- ಉವೀ) ಎಂಬ ಶಬ್ದವಿರುತ್ತಿತ್ತು, ಇಷ್ಟಬಂದ ತಾಳದಲ್ಲಿ ರಚಿತವಾಗುತ್ತಿತ್ತು, ಎನ್ನುತ್ತಾನೆ. ತೊಟ್ಟಿಲು ತೂಗುವ ಸಂಪ್ರದಾಯ ಗೀತೆಯೊಂದನ್ನು ಹಳೆಯ ಮೈಸೂರಿನ ಸ್ತ್ರೀಯರು ಹಾಡುತ್ತಿದ್ದರು. ಇದರಲ್ಲಿ ಎರಡೆರಡು ಪಾದಗಳ ನುಡಿಗಳಿದ್ದವು. ಕೊನೆಯಲ್ಲಿ ಒಂದೊಂದು ನುಡಿಯ ಕೊನೆಯಲ್ಲಿಯೂ ಓವೀ – ಓವೀ ಎಂಬ ಶಬ್ದಗಳಿರುತ್ತಿದ್ದವು. ಇದರಲ್ಲಿ ಶೃಂಗಾರಮಯ ವಸ್ತುವಿರದೆ, ಕಂದನನ್ನು ಮುದ್ದಿಸುವ ಮಾತುಗಳಿರುತ್ತಿದ್ದವು. ‘ಓವು – ಪಾಲನೇ’ ಎಂಬ ಅರ್ಥಕ್ಕೆ ಹೆಚ್ಚು ಸಮೀಪವಾಗಿತ್ತು. ಓವಿಯ ಜನಮನೋಹರವಾದ ರಚನೆಗಳಲ್ಲಿ ಇದೂ ಒಂದಾಗಿತ್ತು. ನರಹರಿ ಚಕ್ರವರ್ತಿಯು ಓವೀ ಪ್ರಬಂಧವನ್ನು ‘ಸಂಕೀರ್ಣಸೂಡ’ವೆಂದು ಉಲ್ಲೇಖಿಸಿ ಇದನ್ನು ಚೈತ್ರಮಾಸದಲ್ಲಿ ತಪ್ಪದೆ ಹಾಡಬೇಕೆನ್ನುತ್ತಾನೆ.

 

‘ಏಲಾ’ ಎಂಬ ಪ್ರಾಚೀನ ಕನ್ನಡದ ಒಂದು ದ್ವಿಪದಿ ವರ್ಗದ ಛಂದಸ್ಸೇ ಮರಾಠಿಯ ‘ಓವೀ’ ಛಂದಸ್ಸಿಗೂ ಮೂಲವಾಗಿದೆಯೆಂದೂ ಈ ಛಂದಸ್ಸು ನಂತರದಲ್ಲಿ ಕನ್ನಡದ ತ್ರಿಪದಿಗೆ ತಾಯಿಯಾಯಿತು ಎಂದೂ ಕೆಲವು ಸಂಶೋಧಕರು ಹೇಳುತ್ತಾರೆ. ಏಳೆ ಎಂಬುದು ಒಂದು ಪ್ರಾಚೀನ ಪ್ರಸಿದ್ಧ ಛಂದಸ್ಸು ಏಳು ಗಣಗಳಿರುವ ಅದು ತ್ರಿಪದಿ ಮತ್ತು ಸಾಂಗತ್ಯಗಳೊಡನೆ ನಿಕಟ ಸಂಬಂಧವನ್ನು ಹೊಂದಿದೆಯೆಂದು ಎರಡನೆಯ ನಾಗವರ್ಮ, ಜಯಕೀರ್ತಿ ಮುಂತಾದ ಕನ್ನಡ ಛಂದಃಶಾಸ್ತ್ರಕಾರರು ಅದನ್ನು ವರ್ಣಿಸಿ ವಿವೇಚಿಸಿದ್ದಾರೆ. ಆಧುನಿಕ ಛಂದಃಶಾಸ್ತ್ರಕಾರರೂ ಜಾನಪದ ಮೂಲಗಳಿಂದ ಅದರ ರಚನೆಗಳನ್ನು ಕನ್ನಡ, ತೆಲುಗು, ಮತ್ತು ತಮಿಳು ಭಾಷೆಗಳಿಂದ ಹುಡುಕಿ ತೆಗೆದಿದ್ದಾರೆ. ಏಳೆ ಎಂಬುದು ಪ್ರಾಚೀನ ಪ್ರಸಿದ್ಧ ಹಾಡಿನ ಪ್ರಕಾರವೂ ಹೌದು. ಕನ್ನಡ, ತೆಲುಗು, ತಮಿಳು ಮತ್ತು ಲಾಟ ಭಾಷೆಗಳಲ್ಲಿ ಭಾರತದ  ಬಹು ಭಾಗಗಳಲ್ಲಿ ಅದನ್ನು ವಾಗ್ಗೇಯಕಾರರು ಅಂಶಗಣ, ಮಾತ್ರಾಗಣ ಮತ್ತು ವರ್ಣಗಣಗಳಲ್ಲಿ ಶಾಸ್ತ್ರೀಯ ಸಂಗೀತ ವಿದ್ವಾಂಸರೂ ಜಾನಪದ ಕವಿಗಳೂ ರಚಿಸಿ, ಹಾಡಿ, ನರ್ತಿಸುತ್ತಿದ್ದರೆಂದು ನಾನ್ಯದೇವ, ಚಾಳುಕ್ಯ ಸೋಮೇಶ್ವರ ಮುಂತಾದ ಪ್ರಾಚೀನ ಶಾಸ್ತ್ರಜ್ಞರಿಂದ ಅವರ ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಹೇಳಲ್ಪಟ್ಟಿದೆ. ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಓವೀ ಎಂಬ ಪ್ರಸಿದ್ಧ ಜನಪದ ಗೀತವಿದೆ. ದೇಶಭಾಷೆಯೆಂದು ಶಾಸ್ತ್ರಕಾರರು ಇದನ್ನೇ ಕರೆದಿದ್ದಿರಬಹುದು. ಸರ್ವಜ್ಞ ಸೋಮೇಶ್ವರ ಚಕ್ರವರ್ತಿಯ ಮಾನಸೋಲ್ಲಾಸದ ಕೆಲವು ಹಸ್ತಪ್ರತಿಗಳಲ್ಲಿ ಓವೀಯನ್ನು ಉವೀಯೆಂದು ಬರೆದಿದೆ. ಉಪಲಬ್ಧ ಮಾನಸೋಲ್ಲಾಸದಲ್ಲಿ ಓವೀ (ಅಥವಾ ಉವೀ)ಯನ್ನು ಮಹಾರಾಷ್ಟ್ರದ ಹೆಂಗಸರು ಕುಟ್ಟುವ ಸಮಯದಲ್ಲಿ ಹಾಡುತ್ತಿದ್ದರೆಂದು ಸೂಚಿಸಿದೆ. ಎಂದರೆ ಓವೀ ಎಂಬುದು ಕುಟ್ಟುವ ಹಾಡು, ಒನಕೆವಾಡು ಅಥವಾ ರಾಗಿ ಇತ್ಯಾದಿ ಧಾನ್ಯಗಳನ್ನು ಬೀಸುವಾಗ ಸ್ತ್ರೀಯರು ಹಾಡುವ ಪದ್ಯಗಳನ್ನು ಹೋಲುತ್ತದೆ. ಆದರೆ ಓವೀ ಎಂಬುದು ಮರಾಠೀ ಮಾತ್ರವಲ್ಲದೆ ಕನ್ನಡ ಶಬ್ದವೂ ಹೌದು. ‘ಓವು ಪಾಲನೆ’ ಎಂದು ಕೇಶಿರಾಜನು ತನ್ನ ಶಬ್ದಮಣಿದರ್ಪಣದ ಧಾತುಪ್ರಕರಣದಲ್ಲಿ ಇದನ್ನು ವಿವರಿಸುತ್ತಾನೆ. ಸೈಗೊಟ್ಟ ಶಿವಕುಮಾರನ ಗಜಾಷ್ಟಕವು ಒಂದು ಓವನಿಗೆಯಾಗಿತ್ತು. ಆಚಣ್ಣನು ತನ್ನ ವರ್ಧಮಾನಪುರಾಣದಲ್ಲಿ ಓವನಿಗೆಯನ್ನು ಉಲ್ಲೇಖಿಸುತ್ತಾನೆ. ಒನಕೆವಾಡುಗಳ ಉಲ್ಲೇಖವು ಪ್ರಾಚೀನಕನ್ನಡಕಾವ್ಯಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ನೇಮಿಚಂದ್ರನು ತನ್ನ ‘ಲೀಲಾವತಿ’ಯಲ್ಲಿಯೂ ಸುರಂಗಕವಿಯು ತನ್ನ ‘ತ್ರಿಷಷ್ಟಿಪುರಾತನವಿಲಾಸ’ದಲ್ಲಿಯೂ ಸೋಮರಾಜನು ತನ್ನ ‘ಉದ್ಭಟಕಾವ್ಯ’ದಲ್ಲಿಯೂ ಭೀಮಕವಿಯು ‘ಬಸವಪುರಾಣ’ದಲ್ಲಿಯೂ, ಸಿದ್ಧನಂಜೇಶನು ‘ಗುರುರಾಜಚಾರಿತ್ರಂ’ನಲ್ಲಿಯೂ ಷಡಕ್ಷರಿಯು ‘ವೃಷಭೇಂದ್ರವಿಜಯ’ದಲ್ಲಿಯೂ, ತಿರುಮಲಾರ್ಯನು ‘ಕರ್ಣವೃತ್ತಾಂತಕಥೆ’ಯಲ್ಲಿಯೂ ಒನಕೆವಾಡುಗಳನ್ನು ಹೇಳಿದ್ದಾರೆ. ಇವುಗಳಲ್ಲೆಲ್ಲ ಓವಿಯು ಮೂರುಪಾದದ ರಚನೆಯೇ ಆಗಿದೆ. ಪ್ರಾಚೀನ ಮರಾಠೀ ಸಾಹಿತ್ಯವು ಹೆಚ್ಚು ಪದ್ಯ ರೂಪದಲ್ಲಿಯೇ ಇದ್ದು ಅನೇಕ ಓವನಿಗೆಗಳು ರಚಿತವಾಗಿವೆ.

 

ಮುಕುಂದರಾಜನು ಮರಾಠಿಯ ಆದ್ಯಕವಿಯೆಂದು ವಿದ್ವಾಂಸರು ಹೇಳುತ್ತಾರೆ. ಈತನು ನಾಥಪಂಥಕ್ಕೆ ಸೇರಿದವನಾಗಿದ್ದನು. 12ನೆಯ ಶತಮಾನದಲ್ಲಿ ರಚಿಸಲ್ಪಟ್ಟ ‘ವಿವೇಕಸಿಂಧು’ ಮತ್ತು ‘ಪರಮಾಮೃತ’ಗಳು ಈತನೇ ರಚಿಸಿದ ಗ್ರಂಥಗಳು. ವಿವೇಕಸಿಂಧುವು ಮರಾಠೀ ಭಾಷೆಯ ಆದಿಗ್ರಂಥವೆಂದು ಪರಿಗಣಿಸಲ್ಪಟ್ಟಿದೆ. ಇದನ್ನು ತನ್ನ ಆಶ್ರಯದಾತನಾದ ಶ್ರೀಮಂತವ್ಯಕ್ತಿ ಜೈತ್ರಪಾಲನಿಗೆ ತತ್ತ್ವವನ್ನು ಬೋಧಿಸಲು ಮುಕುಂದರಾಜನು ರಚಿಸಿದನಂತೆ. ಈ ಕೃತಿಯು ಓವೀ ಛಂದಸ್ಸಿನಲ್ಲಿದೆ. ಶ್ರೀಶಂಕರಾಚಾರ್ಯ ಭಗವದ್ಪಾದರ ಅದ್ವೈತವನ್ನು ಜನಸಾಮಾನ್ಯರಿಗೆ ತಿಳಿಸುವುದೇ ಈ ಗ್ರಂಥದ ಮುಖ್ಯಧ್ಯೇಯವೆಂದು ಸಂಶೋಧಕರು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಮುಕುಂದರಾಜನ ಅಭಂಗವನ್ನು ಹಾಡದವರೇ ಇಲ್ಲವೆಂಬ ನಂಬಿಕೆಯಿದೆ.  ಅಲ್ಲಿ ಭಾಗವತಪಂಥವು ವಿಶೇಷವಾಗಿ ಬೆಳೆಯಲೂ ಹಬ್ಬಲೂ ಈ ಅಭಂಗಗಳು ನೆರವಾದವು. ವಾರಕರೀ ಭಕ್ತರಾದ ಸಂತ ತುಕಾರಾಮನಂತಹ ಸಂತರು ಅತ್ಯುತ್ತಮ ಅನುಭವಿ, ಅನುಭಾವಿ ಕವಿಗಳಾಗಿದ್ದರಿಂದ ಅಭಂಗಗಳಿಂದ ಭಕ್ತಿಪಂಥವು ಸಮರ್ಥವಾಗಿ ಜನರ ಹೃದಯವನ್ನು ಗೆಲ್ಲಲು ಸಮರ್ಥವಾದವು. ಈ ಸಂತರ ಅಭಂಗಗಳು ಓವೀ ಹಾಡುಗಳಾಗಿ ಸ್ತ್ರೀಯರ ಬಾಯಲ್ಲಿ ನಲಿದಾಡಿದವು ಹಾಗೂ ಅವರ ಕವಿತ್ವ ಶಕ್ತಿಗೆ ಪೂರಕವಾದವು. ಓವೀ ಛಂದಸ್ಸು, ಅಭಂಗವನ್ನು ರಚಿಸಿದ ಕವಿಗಳಿಂದಲೇ ನಿರ್ಮಿತವಾಯಿತು, ಇದಕ್ಕೆ ಮೂಲವಾಗಿ ಓವೀ (ವೋವೀ) ಎಂಬ ಬಂಧವು ಇದ್ದಿತೆಂದು ಕೆಲವು ಸಂಶೋಧಕರು ಹೇಳಿದ್ದಾರೆ. ಕೃಷಿಕರಾದ, ದೈಹಿಕ ಶ್ರಮಗಳಿಂದ ಜೀವಿಸುತ್ತಿದ್ದ ಸ್ತ್ರೀಯರಿಂದ ಅವರ ಕಷ್ಟ ಕಾರ್ಯಗಳನ್ನು ನಿರ್ವಹಿಸುವ ಕಾಲದಲ್ಲಿ, ಮಾನಸಿಕವಾದ ಹಾಗೂ ದೈಹಿಕವಾದ ಆಯಾಸ ಪರಿಹಾರಕ್ಕಾಗಿ, ಉಲ್ಲಾಸ ಪ್ರಚೋದನೆಗಾಗಿ ರಚಿಸಲ್ಪಟ್ಟ, ಕವಿತ್ವವಾಗಿ ಅವರ ಭಾವನೆಗಳು ಹೊರಹೊಮ್ಮಿದ ಈ ಓವೀ ಹಾಡುಗಳ ಪ್ರಾಚೀನತೆಯು  ಅದಕ್ಕಿಂತ ಬಹಳ ಹಿಂದಿನದ್ದೇ ಆಗಿದೆ. ಓವಿಯಲ್ಲಿ ಗಣ, ಮಾತ್ರೆ, ಅಕ್ಷರಗಳು ನಿಯಮಿತವಾಗಿ ಬರುವುದಿಲ್ಲ. ಪ್ರತಿ ಓವಿಯಲ್ಲೂ ಒಂದೇ ಅಂತ್ಯಾಕ್ಷರವುಳ್ಳ ನಾಲ್ಕು ಚರಣಗಳಿದ್ದೂ ನಾಲ್ಕನೆಯ ಚರಣ ಪದಭಾಗವಾಗಿರುತ್ತದೆ. ರಚನಾಕಾರರಿಗೆ ಬೀಸುವ ಕಲ್ಲಿನ ಬೀಸುವ ಲಯವೇ ಛಂದಸ್ಸಾಗುತ್ತದೆ. ಓವೀಬಂಧಕ್ಕೆ ಹೊಂದುವಂತೆ ಜ್ಞಾನೇಶ್ವರಿಯನ್ನು ಬರೆದ ಜ್ಞಾನದೇವನು ಅಭಂಗಮಾಲೆಯನ್ನೂ ರಚಿಸಿದ್ದಾನೆ. ಅದರಲ್ಲಿ ಕನ್ನಡದ ಅಭಂಗವೊಂದು ಸೇರಿದೆ.

 

“ಆಕ್ಕಾ ನೀ ಕೇಳೆ ಚಿಕನ ಮಾತು ಕೇಳುಲೆ? ಘನಿಗೆ ಮರುಳಾದೆನೆ ||1|| ಚೆಲುವಾನೆ ಚೆಲುವಾನೆ ಪಂಢರಿರಾಯ ಚೆಲುವಾನೆ ಯಲ್ಲೆ ದೊರೆ ಕನ್ನೇ ಯಲ್ಲೆ ಬಾರನ್ನೆ ||2|| ಪುಂಡಲೀಕನೆ ಭಕ್ತಿಗೆ ಬಂದಾ, ರಖುಮಾದೇವೀವರ ವಿಟ್ಠಲುನೇ ||3||”

 

ಕೊಲ್ಹಾಪುರಕ್ಕೆ ಹತ್ತಿರದ ‘ವಾಡಿ – ರತ್ನಾಗಿರಿ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಬೆಟ್ಟದ ಮೇಲೆ ಜೋತಿಬಾನ ಪ್ರಖ್ಯಾತ ಸ್ಥಳವಿದೆ. ಜೋತಿಬಾನ ಮಾಹಾತ್ಮ್ಯೆಯನ್ನು ಸಾರುವ ‘ಕೇದಾರ ವಿಜಯ’ ಎಂಬ ಹೆಸರಿನ ಓವೀ ಬದ್ಧವಾದ ಗ್ರಂಥವೊಂದು ಹರಿ ಅಂಗಾಪೂರಕರ ಎಂಬ ಕವಿಯು ರಚಿಸಿದ್ದು, ಪ್ರಕಟವಾಗಿದೆ. ಬ್ರಹ್ಮದಾಸನೆಂಬ (ಶಾ. ಶ. 1644) ಕವಿಯು ಕನ್ನಡದ ಪ್ರಭುಲಿಂಗಲೀಲೆಯನ್ನು ‘ಲೀಲಾವಿಶ್ವಂಭರ ಲೀಲೆ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾನೆ. ಮರಾಠೀ ಭಾಷೆಯ ಈ ಪ್ರಭುಲಿಂಗಲೀಲೆಯು ಓವೀ ಪದ್ಯಗಳುಳ್ಳ ಬೃಹತ್ಕೃತಿಯಾಗಿದೆ. ಸಮರ್ಥ ರಾಮದಾಸರು ಮರಾಠೀ ಭಾಷೆಯಲ್ಲಿ ರಚಿಸಿದ ‘ಶ್ರೀದಾಸಭೋದ’ವೂ ಓವೀ ಬಂಧಗಳನ್ನು ಒಳಗೊಂಡಿದೆ.

 

ಪ್ರಾಚೀನ ಸಂಗೀತಶಾಸ್ತ್ರಜ್ಞರು ಜನಪದ ಗೀತ – ನೃತ್ತಗಳಿಗೂ ಅವರ ಹೃದಯಲ್ಲಿಯೂ, ಶಾಸ್ತ್ರಗ್ರಂಥಗಳಲ್ಲಿಯೂ, ಸಂಗೀತಲೋಕದಲ್ಲಿಯೂ ಸ್ಥಾನಮಾನಗಳನ್ನು ನೀಡಿದ್ದರೂ ಅದರ ಸೊಗಡು, ಇಂಪು, ಕವಿತ್ವ ಶಕ್ತಿ, ಸಹಜತೆಗಳನ್ನು ನಾಶವಾಗದಂತೆ, ಕಲಬೆರಕೆಯಾಗದಂತೆ ಸಂರಕ್ಷಿಸಿಟ್ಟಿದ್ದರು. ಆದರೆ ಇಂದು ಜನಪದ ಗೀತೆಯೆಂಬುದು ಸಿನೆಮಾಗಳ, ಆಧುನಿಕತೆಯ ಸಂಗೀತಯಂತ್ರ ಶಬ್ದಗಳ ಆಳವಾದ ಸುಳಿಯಲ್ಲಿ ಸಿಲುಕಿ ಮೇಲೇಳಲಾರದೆ ಅದರ ಸಹಜ – ಸುಂದರ ಸೊಗಡನ್ನು ಕಳೆದುಕೊಂಡು ನಾಶದ ಅಂಚಿನಲ್ಲಿದೆ. ಇಂತಹ ರಚನೆಗಳ ಉಳಿವಿನತ್ತ, ಸೃಷ್ಟಿಯತ್ತ ವಿದ್ವಾಂಸರೂ ಸರ್ಕಾರಗಳೂ ಗಮನವನ್ನು ಹರಿಸದಿದ್ದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳ ಮುಖ್ಯವಾದ ಸಹಜ ಸೌಂದರ್ಯಗಳನ್ನೂ, ಸ್ವಂತಿಕೆಯನ್ನೂ, ಅಸ್ತಿತ್ವವನ್ನೂ ಶಾಶ್ವತವಾಗಿ ಕಳೆದುಕೊಳ್ಳುವ ಹಾಗೂ ಪರದೇಶೀ ಸಂಗೀತಗಳಿಗೆ ಪರಾವಲಂಬಿಗಳಾಗಿ ದುರ್ಮೋಹದ ಅಮಲಿನ ಭ್ರಷ್ಟರಾಗಿ ನತದೃಷ್ಟರಾಗುತ್ತೇವೆ.

 

(ವಿವಿಧ ಆಕರಗಳಿಂದ)

Author Details


Srimukha

Leave a Reply

Your email address will not be published. Required fields are marked *