ಸಾವಿರಾರು ಭಾರತೀಯರನ್ನು ಬಲಿ ಪಡೆದ ಬ್ರಿಟೀಷ್ ಕ್ರೌರ್ಯದ ಜಲಿಯನ್ ವಾಲಾಭಾಗ್ ಹತ್ಯಾಕಾಂಡಕ್ಕೆ ನೂರುವರ್ಷಗಳು

ಅಂಕಣ ಜಾಗೃಯಾಮ : ಶಿಶಿರ ಅಂಗಡಿ

ಅಂದು ಸಿಖ್ಖರ ಪವಿತ್ರ ದಿನ ವೈಶಾಕಿ ಹಬ್ಬ, ಅದನ್ನ ಬೈಸಾಕಿ ಎಂದೂ ಕರೆಯುತ್ತಾರೆ. ಅಂದಿನ ಸಂಭ್ರಮದ ದಿನ ಸೂತಕದ ದಿನವಾಗಿ ಪರಿಣಮಿಸಿತ್ತು. ಹಬ್ಬ ಆಚರಿಸುತ್ತಾ, ಬ್ರಿಟೀಷರ ದುರಾಡಳಿತದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಸಾವಿರಾರು ಭಾರತೀಯರು ಬ್ರೀಟಿಷರ ಕ್ರೌರ್ಯಕ್ಕೆ ಬಲಿಯಾಗಿದ್ದರು.ಬ್ರಿಟೀಷರು ಜಾರಿಗೊಳಿಸಿದ್ದ ರೌಲತ್ ಕಾಯ್ದೆಯ ವಿರುದ್ಧ ಗಾಂಧೀಜಿ ಪ್ರಬಲವಾಗಿ ದನಿ ಎತ್ತಿದ್ದರು. 1919 ಮಾರ್ಚ್ 30 ರಂದು ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ರೀತಿಯಲ್ಲಿ ರೌಲತ್ ಕಾಯ್ದೆಯ ವಿರುದ್ಧ ಹರತಾಳ ಯಶಸ್ವಿಯಾಗಿ ನಡೆಯಿತು. ಆದರೆ ಅತ್ತ ಪಂಜಾಬ್‌‍ನಲ್ಲಿ ದಂಗೆ ಪ್ರಾರಂಭವಾಯಿತು. ರೌಲತ್ ಕಾಯ್ದೆ ವಿರೋಧಿ ಹೋರಾಟ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಗಾಂಧೀಜಿಯವರು ಇದರಿಂದ ಹಿಂದೆ ಸರಿದರು. ಆದರೆ ಅದಾಗಲೇ ದೇಶವ್ಯಾಪಿ ಹೋರಾಟದ ಕಿಚ್ಚು ಹರಡಿತ್ತು.ಅದರಂತೆ 1919 ರ ಏ,13 ರಂದು ಅಮೃತಸರ್ ಜಲಿಯನ್ ವಾಲಾಬಾಗ್ ಪಾರ್ಕಿನಲ್ಲಿ ಸಿಖ್ ಹಬ್ಬ ಬೈಸಾಕಿಯ ಸಂಭ್ರಮದ ಸಂದರ್ಭದಲ್ಲಿ ಸುಮಾರು 20,000ಕ್ಕೂ ಅಧಿಕ ಜನ ಸೇರಿದ್ದರು. ಸಂಜೆ ಸುಮಾರು 5 ರಿಂದ 5:15ರ ಸಮಯ ಇರಬಹುದು, ಜನರಲ್ ಡಯರ್ ನೇತೃತ್ವದಲ್ಲಿ ಶಸ್ತ್ರಸಜ್ಜಿತ ಅತ್ಯಾಧುನಿಕ‌ ತಂತ್ರಜ್ಞಾನ ಇದ್ದ ಎರಡು ವಾಹನಗಳಲ್ಲಿ ಸುಮಾರು 90 ಬ್ರಿಟೀಷರ್ ಸೈನಿಕರು ಏಕಾಏಕಿ ಪಾರ್ಕಿಗೆ ನುಗ್ಗಿ ಒಂದೇ ಸಮನೇ ಗುಂಡಿನ ಮಳೆಗರೆದರೆ, 15-20 ನಿಮಷದಲ್ಲಿ ಸಾವಿರಾರು ಸುತ್ತಿನ ಗುಂಡಿನ ಮಳೆಯನ್ನು ಹರಿಸಿದ ಬ್ರಿಟಿಷ್ ಸೇನೆ ನೋಡನೋಡುತ್ತಿದ್ದಂತೆಯೇ ಸಾವಿರಾರು ಭಾರತೀಯರ ಜೀವವನ್ನು ನುಂಗಿಹಾಕಿತು. ಒಂದು ಲೆಕ್ಕದ ಪ್ರಕಾರ ಸುಮಾರು 2000 ಭಾರತೀಯರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಆ ಘಟನೆ ಎಷ್ಟು ಭೀಕರವಾಗಿತ್ತೆಂದರೆ ಬ್ರಿಟೀಷರ ಗುಂಡುಗಳಿಂದ ತಮ್ಮ ಜೀವ ಉಳಿಸಿಕೊಳ್ಳುವ ಧಾವಂತದಲ್ಲಿ ಆ ಪಾರ್ಕಿನಲ್ಲಿರುವ ಬಾವಿಗೆ ಧುಮಿಕಿಯೇ 120ಕ್ಕೂ ಅಧಿಕ ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯಾಗಿ ಇಂದಿಗೆ ಸರಿಯಾಗಿ ನೂರು ವರ್ಷಗಳು.‌ ಆ ಘಟನೆಯ ಕುರಿತು ಅರಿಯುವ ಪ್ರಯತ್ನ ಮಾಡೋಣ.ಈ ಪೈಶಾಚಿಕ ಕೃತ್ಯದ ವಿರುದ್ಧ ದನಿ ಎತ್ತಬಲ್ಲ ಇಚ್ಛಾಶಕ್ತಿ ಭಾರತದ ನಾಯಕರಲ್ಲಿ ಇರಲೇ ಇಲ್ಲ. ನೆಹರೂ, ಗಾಂಧೀಜಿಯಂಥವರೇ ಬಾಯಿ ಮುಚ್ಚಿಕೊಂಡು ಇದ್ದರು. ಆದರೆ ಭಾರತದ ಯುವಶಕ್ತಿಯಲ್ಲಿ ಬ್ರಿಟೀಷರನ್ನು ಹೊಡೆದೋಡಿಸಲೇಬೇಕೆಂಬ ಕಿಚ್ಚು ಹತ್ತಿಕೊಂಡಿತ್ತು. ಮುಂದೆ ಎಪ್ರಿಲ್ 19ರಂದು ಘಟನೆ ನಡೆದ‌ ಸ್ಥಳಕ್ಕೆ ಬಂದು ದುಃಖ‌ ತಡೆಯಲಾರದೆ ರಕ್ತಸಿಕ್ತವಾದ ಮಣ್ಣನ್ನು ತೆಗೆದುಕೊಂಡು ಹೋಗಿ  ಬ್ರಿಟೀಷರನ್ನು ಹೊಡೆದೋಡಿಸಲು ಸಂಕಲ್ಪ ಮಾಡಿದ್ದ ಹನ್ನೆರಡರ ಬಾಲ ಕ್ರಾಂತಿಕಾರಿ ಭಗತ್ ಸಿಂಗ್.ಹತ್ಯಾಕಾಂಡದ ರೂವಾರಿ ಜನರಲ್ ಡಯರ್ ಕೊನೆಗೆ ಪಾರ್ಶವಾಯುಗೆ ತುತ್ತಾಗಿ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ರೀತಿಯಲ್ಲಿ ಪಡಬಾರದ ಪಾಡನ್ನು ಅನುಭವಿಸಿ,  ಆರು ವರ್ಷಗಳ ನಂತರ ಅಂದರೆ 1927ರಲ್ಲಿ ಮರಣಹೊಂದಿದ. ಇಲ್ಲಿಗೆ ಭಾರತದ ಇತಿಹಾಸದಲ್ಲಿ ನಡೆದ ಕರಾಳ‌ ಅಧ್ಯಾಯ ಮುಗಿಯಿತು ಎಂದೆಣಿಸದರೆ,‌ ಇಲ್ಲ‌ ಇನ್ನೂ ಮುಗಿದಿರಲಿಲ್ಲ‌. ಯಾಕೆಂದರೆ, ಪ್ರತೀಕಾರದ ಕಿಚ್ಚು ಅಲ್ಲೊಬ್ಬನ ಮೈಯಲ್ಲಿ ಇನ್ನೂ ಉರಿಯುತ್ತಲೇ‌ ಇತ್ತು. ಸೇಡು ತೀರಿಸಿಕೊಳ್ಳಬೇಕೆಂಬ ಬೆಂಕಿ ಧಗಧಗಿಸುತ್ತಲೇ‌ ಇತ್ತು. ಅವನೇ ಉದ್ದಮ್ ಸಿಂಗ್. ಬ್ರೀಟಿಷರ ಆ ಗುಂಡಿನ ದಾಳಿಯನ್ನು ಪ್ರತ್ಯಕ್ಷ‌ ಎದುರಿಸಿ ಗಾಯಗೊಂಡವ, ಸಹ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ಸಾಯುವುದನ್ನು ಕಣ್ಣಾರೆ ಕಂಡಿದ್ದನಾತ. ಹೇಗಾದರೂ ಮಾಡಿ ಆ ದಾಳಿಯ ಹಿಂದಿರುವ ಕ್ರೂರಿಯನ್ನು ಕೊಲ್ಲಲೇಬೇಕೆಂದು ಪಣತೊಟ್ಟಿದ್ದ. ದಾಳಿಯಾದ ಸಂದರ್ಭದಲ್ಲಿ ಪಂಜಾಬಿನ ಲೆಫ್ಟಿನೆಂಟ್ ಗೌರ್ನರ್ ಆಗಿದ್ದವನು ಮೈಕಲ್‌ ಎಂಬುದಾಗಿಯೂ, ಬೈಸಾಕಿ ಸಂದರ್ಭದಲ್ಲಿ ಜಲಿಯನ್ ವಾಲಾಬಾಗ್ ಪಾರ್ಕಿನಲ್ಲಿ ದೊಡ್ಡ ಸಂಖ್ಯೆಯಲ್ಲಿ‌ ಭಾರತೀಯರು ಸೇರುತ್ತಾರೆಂದು ಮಾಹಿತಿ ಕೊಟ್ಟು, ಅಲ್ಲಿ ಸಾಮೂಹಿಕವಾಗಿ ಗುಂಡಿನ ದಾಳಿ ಮಾಡಬೇಕೆಂದು ಸೂಚನೆ ಕೊಟ್ಟಿದ್ದು ಇದೇ ಮೈಕಲ್ ಎಂಬ ಸುದ್ದಿ ಕೆಲವೇ ಸಮಯದಲ್ಲಿ‌ ಬಹಿರಂಗವಾಗಿತ್ತು.ದಾಳಿಯ ನೇತೃತ್ವ ವಹಿಸಿದ್ದ ಡಾಯರ್ ಹೇಗೂ ಸತ್ತಿದ್ದ, ದಾಳಿಯ ಹಿಂದಿರುವ ಈ ಮೈಕಲ್‍ನನ್ನು ಸುಮ್ಮನೇ ಬಿಡಬಾರದೆಂದು ಅವನನ್ನು‌ ಕೊಲ್ಲಲ್ಲು ಹೊಂಚುಹಾಕಿದ್ದ ಉದ್ದಮ್ ಸಿಂಗ್. ಅದಕ್ಕಾಗಿ ಆತ ಕಾಯಬೇಕಾಗಿ ಬಂದಿದ್ದು ಬರೋಬ್ಬರಿ 21 ವರ್ಷ. ಏತನ್ಮಧ್ಯೆ ಆತನನ್ನು ಬ್ರಿಟೀಷರು ಬಂಧಿಸಿ ನಾಲ್ಕು ವರ್ಷ ಸೆರೆಮನೆ ಶಿಕ್ಷೆಯನ್ನು‌ ನೀಡಿದ್ದರು. ಇದರಿಂದ‌ ಉದಮ್‌ ಸಿಂಗನ ಸೇಡಿನ‌ ರೋಷ ಹೆಚ್ಚಿತ್ತು. ಹೇಗಾದರೂ ಮಾಡಿ ಮೈಕಲ್‍ನನ್ನು ಕೊಲ್ಲಲೇಬೇಕೆಂದು 1934ರಲ್ಲಿ ಇಂಗ್ಲೆಂಡ್ ತಲುಪಿದ. ಸುಮಾರು ಆರು ವರ್ಷಗಳ ಕಾಲ ಮೈಕಲನ್ನನ್ನು ಕೊಲ್ಲಲು ಸತತವಾಗಿ ಪ್ರಯತ್ನಿಸುತ್ತಲೇ‌ ಇದ್ದ. ಕೊನೆಗೂ ಆ ದಿನ ಬಂದೇಬಿಟ್ಟಿತ್ತು. 1940 ಮಾರ್ಚ 13, ಲಂಡನ್ನಿನ‌ ಯಾವುದೋ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೈಕಲ್‍ನನ್ನು ಗುರಿಯಾಗಿಸಿ ಉದಮ್‍‌ ತನ್ನ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಯೇ ಬಿಟ್ಟ. ಎರಡು ಗುಂಡುಗಳು‌ ನೇರವಾಗಿ ಮೈಕಲ್‌ ಎದೆಯನ್ನು ಸೀಳಿದವು. ಅಮಾನವೀಯ ಗುಂಡಿನ ದಾಳಿಗೆ ಗುಂಡಿನಿಂದಲೇ‌ ಪ್ರತಿಕಾರ ತೀರಿಸಿಕೊಂಡಿದ್ದ ಉದಮ್.

ಉದಮ್ ಸಿಂಗ್ ಮಾಡಿದ ಈ ಕೆಲಸವನ್ನು ಇಡಿಯ ಭಾರತ ಶ್ಲಾಘಿಸಿತ್ತು, ಆದರೆ ಇಬ್ಬರನ್ನು ಹೊರತುಪಡಿಸಿ. ಅದೇ‌ ಗಾಂಧೀಜಿ ಮತ್ತು ನೆಹರು. ಈ ಇಬ್ಬರು ಸೋ ಕಾಲ್ಡ್ ನಾಯಕರ ಪ್ರಕಾರ ಉದಮ್‌ ಮಾಡಿದ ಕೆಲಸ ‘ವಿವೇಚನಾರಹಿತ’ ಆಗಿತ್ತಂತೆ. ಅಂದು ಸಾವಿರಾರು ಜನ ಭಾರತೀಯರು ತಮ್ಮ ಪ್ರಾಣ ಕಳೆದುಕೊಂಡಾಗ ಎಲ್ಲಿ ಹೋಗಿತ್ತೋ‌ ಇವರ ವಿವೇಚನೆ? ಬ್ರೀಟಿಷರೆದರು ಹಲ್ಲುಗಿಂಜಿಕೊಂಡು ಸತ್ತ ಸಾವಿರಾರು ಭಾರತೀಯರ ತ್ಯಾಗಕ್ಕೆ ಅವಮಾನ ಮಾಡಿಬಿಟ್ಟರು.ಆದರೆ ಉದಮ್‌ ಮಾತ್ರ ತನ್ನ ರೋಷವನ್ನು ಉಳಿಸಿಕೊಂಡಿದ್ದ,  “ಅವನ ಸಾವನ್ನು ಅವನೇ ಬರಮಾಡಿಕೊಂಡಿದ್ದ, ನನ್ನ ಭಾರತೀಯರು ಬ್ರಿಟೀಷರಿಂದ‌ ಸಾಯುವುದನ್ನು ನೋಡಿದ್ದೇನೆ, ಪ್ರತೀಕಾರಕ್ಕಾಗಿ 21ವರ್ಷ ಕಾದಿದ್ದೇನೆ. ಈಗ ನನಗೆ ಆನಂದವಾಗಿದೆ. ತಾಯ್ನಾಡಿಗಾಗಿ ಪ್ರಾಣವನ್ನು ಅರ್ಪಿಸುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನಿದೆ” ಎಂದು ಕೆಚ್ಚೆದೆಯಿಂದ‌ ನುಡಿದಿದ್ದ.‌ ಮುಂದೆ ಮೂರು ತಿಂಗಳಲ್ಲಿ ಉದಮ್‍ನನ್ನು ಮೈಕಲ್‍ನನ್ನು ಕೊಂದ ಆರೋಪದ ಮೇಲೆ ನೇಣಿಗೇರಿಸಲಾಯಿತು.


ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ‌ ಪ್ರಧಾನಿ ನೆಹರೂ ಅಂತರರಾಷ್ಟ್ರೀಯವಾಗಿ ಮೆಚ್ಚುಗೆ ಗಳಿಸುವ ಉದ್ದೇಶದಿಂದ, “ದೇಶದ‌ ಸ್ವಾತಂತ್ರ್ಯಕ್ಕಾಗಿ ಪ್ರಾಣ ಪಣಕ್ಕಿಟ್ಟ ಶಾಹಿದ್-ಇ-ಅಜೀಮ್ ಉದಮ್ ಸಿಂಗ್‍ನನ್ನು ಗೌರವಾದರಗಳಿಂದ ನಮಿಸುತ್ತೇನೆ” ಎಂದು ಹೇಳಿದರಂತೆ. ನೋಡಿ ಎಂತಹ ನಾಟಕೀಯ ವ್ಯಕ್ತಿತ್ವ ಈ‌ ನಾಯಕರದ್ದು. ಮೈಕಲ್‍ನನ್ನು ಕೊಂದ‌ ಸಂದರ್ಭದಲ್ಲಿ‌ ಬ್ರಿಟೀಷರನ್ನು ಓಲೈಸಲು, ಉದಮ್ ಮಾಡಿದ‌ ಕಾರ್ಯವನ್ನು ವಿವೇಚನಾರಹಿತ ಎಂದು ಹೇಳಿದ್ದವರು, ಈಗ ಸ್ವಾತಂತ್ರ್ಯ ಬಂದ ಮೇಲೆ ತಮ್ಮ ಹೇಳಿಕೆಯನ್ನೇ ಬದಲಿಸಿದರು.ದೇಶಕ್ಕೆ ಉದಮ್ ಸಿಂಗರಂತ ಸೇನಾನಿಗಳು ಎಷ್ಟು ಮುಖ್ಯವೋ,‌ ಸದಾಕಾಲ ದೇಶದ ಗೌರವವನ್ನು ಎತ್ತಿ ಹಿಡಿದು, ಸೇನೆ, ಸೈನಿಕರ ಪರ ನಿಂತು ಎಂತಹ ಸಂದರ್ಭದಲ್ಲೂ ಅವರಿಗೆ ಶಕ್ತಿ ತುಂಬುವಂತ ಸಮರ್ಥ ನಾಯಕನೂ ಅಷ್ಟೇ ಮುಖ್ಯ. ‌ಅಂತಹ ಸಮರ್ಥ ನಾಯಕನ್ನು ಆರಿಸಿದಾಗ‌ ಮಾತ್ರ ದೇಶಕ್ಕೂ, ದೇಶದ ಯೋಧರಿಗೂ, ಹುತಾತ್ಮರಿಗೂ ಸಲ್ಲಬೇಕಾದ ಗೌರವ ಸಲ್ಲುತ್ತದೆ.‌ ಸ್ವಪ್ರತಿಷ್ಟೆ,‌ ಸ್ವಾರ್ಥ ರಾಜಕಾರಣ ಮಾಡುವರಿಗೆ‌ ದೇಶವನ್ನು ಕೊಟ್ಟಲ್ಲಿ ದೇಶದ ಮಾನವನ್ನು ಹರಾಜು ಹಾಕುತ್ತಾರೆ. ಆದ್ದರಿಂದ ದೇಶಕ್ಕೆ ಸಮರ್ಥ ನಾಯಕನನ್ನು ಆರಿಸುವಾಗ ನಾವು ಬಹಳ ಎಚ್ಚರವಹಿಸಬೇಕು. ‌ದೇಶಕ್ಕೆ, ದೇಶದ‌ ಯೋಧರಿಗೆ ಗೌರವ‌ ಸಿಕ್ಕಾಗ ಮಾತ್ರ ಹುತಾತ್ಮರ ತ್ಯಾಗ ಬಲಿದಾನಗಳು ಸಾರ್ಥಕ ಎನಿಸುತ್ತದೆ‌.

Author Details


Srimukha

Leave a Reply

Your email address will not be published. Required fields are marked *