ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಕಾರ್ಯಕ್ರಮವು ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಸಂಪನ್ನವಾಯಿತು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಉತ್ಸವ ಮೂರ್ತಿಗೆ ಧಾರ್ಮಿಕವಿಧ್ಯುಕ್ತ ಕ್ರಮದಂತೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಇಂದು ಶಾಂತಿಘಟಾದ್ಯಭಿಷೇಕ, ರಥ ಸಂಪ್ರೋಕ್ಷಣ, ದಂಡ ಬಲಿ, ಭೂತಬಲಿ, ಗ್ರಾಮಬಲಿ ಮುಂತಾದ ಧಾರ್ಮಿಕ ವಿಧಿವಿಧಾನಗಳು ಉಪಾಧಿವಂತರ ನೇತೃತ್ವದಲ್ಲಿ ನಡೆಯಿತು. ಆನಂತರ ಮಧ್ಯಾಹ್ನ 2.30 ಶ್ರೀಮನ್ಮಹಾರಥೋತ್ಸವ ವೈಭವಯುತವಾಗಿ ಸಂಪನ್ನವಾಯಿತು. ಉತ್ತರಕರ್ನಾಟಕ, ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ರಾಜ್ಯ ಹೊರರಾಜ್ಯಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಕೃತಾರ್ಥರಾದರು. ಮಹಾರಥವನ್ನು ಎಳೆಯುವಾಗ ಭಕ್ತರ ‘ಹರ ಹರ ಮಹಾದೇವ’ ಉದ್ಘೋಷವು ಮುಗಿಲುಮುಟ್ಟಿತ್ತು.
ಪ್ರೆಬ್ರವರಿ 28 ರಂದು ಆರಂಭವಾದ ಒಂಬತ್ತು ದಿನಗಳ ಮಹಾಶಿವರಾತ್ರಿ ಉತ್ಸವವು 8-3-19 ರ ಚೂರ್ಣೋತ್ಸವ, ಜಲಯಾನೋತ್ಸವ, ಅವಭೃತ, ಮಹಾಪೂರ್ಣಾಹುತಿ ಕಾರ್ಯಕ್ರಮಗಳ ಮೂಲಕ ಮಂಗಲ ಕಾಣಲಿದೆ.