ಪಡಸಾಲೆಯಲ್ಲಿರುವ ಹಳೆಯದಾದ ತನ್ನ ಮರದ ಕುರ್ಚಿಯ ಮೇಲೆ ಕುಳಿತು ಪಂಚಾಂಗ ಪುಸ್ತಕದ ಪುಟಗಳನ್ನು ತಿರುವುತ್ತಿದ್ದರು ಶಾಸ್ತ್ರಿಗಳು. ಹೆಗಲ ಮೇಲೆ ಇಳಿ ಬಿಟ್ಟಿದ್ದ ಕರವಸ್ತ್ರವನ್ನು ಆಗಾಗ್ಗೆ ಕೈಯಲ್ಲೆತ್ತಿ ಬೀಸಿಕೊಳ್ಳುತ್ತಾ, ತಲೆಯ ಮೇಲೆ ನಿಧಾನವಾಗಿ ಸುತ್ತುತ್ತಿದ್ದ ಫ್ಯಾನ್ ಕಡೆ ದೃಷ್ಟಿ ಹಾಯಿಸಿ ಬೆವರೊರೆಸಿಕೊಳ್ಳುತ್ತಿದ್ದರು ಅವರು. ಸಂಕ್ರಾಂತಿಗಿನ್ನೂ ಹದಿನೈದು ದಿನಗಳಿವೆ. ಆಗಲೇ ಬಿಸಿಲ ಕಾವು ಅದೆಷ್ಟು ಏರುತ್ತಿದೆ! ಅಂಗಳದತ್ತ ದೃಷ್ಟಿ ಹಾಯಿಸಿ ಯೋಚಿಸುತ್ತಲೇ ಇದ್ದರು ಶಾಸ್ತ್ರಿಗಳು.
ಕಳೆದ ವಾರ ಬಂದ ಜ್ವರದ ಆಯಾಸ ಇನ್ನೂ ಅವರನ್ನು ಬಿಟ್ಟು ಹೋಗಿರಲಿಲ್ಲ. ಅಂಗಳದಲ್ಲಿ ನಟ್ಟ ಹೂಗಿಡಗಳಿಗೆ ನೀರುಣಿಸುವವರಿಲ್ಲದೇ ಬಾಡಿ ಹೋಗುತ್ತಲಿವೆ. ಸುತ್ತಲೂ ತುಂಬಿದ್ದ ಹಸಿರು ಬಿಸಿಲ ಬೇಗೆಗೆ ಒಣಗಿ ಹೊಂಬಣ್ಣಕ್ಕೆ ತಿರುಗಿದೆ. ಬೆಂಕಿಯಂತೆ ಸುರಿಯುತ್ತಿರುವ ಸೂರ್ಯ ರಶ್ಮಿಗಳನ್ನು ಪ್ರತಿಫಲಿಸಿ ಕಣ್ಣೆತ್ತಿ ನೋಡಲಾಗದಷ್ಟು ಪ್ರಖರತೆಯಿಂದ ಹೊಳೆಯುತ್ತಿವೆ ಅಂಗಳದ ಸುತ್ತಲೂ ಒಣಗಿ ನಿಂತ ಹುಲ್ಲು ಕಡ್ಡಿಗಳು. ಅಬ್ಬಾ ಏನಿದು ಬಿಸಿಲ ಝಳ ಎಂದೆಣಿಸಿಕೊಳ್ಳುತ್ತಾ ಗಡಿಯಾರದತ್ತ ದೃಷ್ಟಿ ಹಾಯಿಸಿದರು ಶಾಸ್ತ್ರಿಗಳು. ಹೌದಲ್ಲಾ! ಸಮಯವಾಗಲೇ ಹನ್ನೊಂದೂವರೆ ಆಗುತ್ತಲಿದೆ. ನಿತ್ಯವೂ ಈ ಹೊತ್ತಿಗೆ ನಾಲ್ಕಾರು ಗಾಡಿಗಳು ಅತ್ತಿಂದಿತ್ತ ಸುಳಿದಾಡುವ ಮನೆಯ ಮುಂಭಾಗದ ಆ ರಸ್ತೆಯಿಂದು ಸಂಚಾರಿಗಳಿಲ್ಲದೇ ಬಿಕೋ ಎಂದು ಮಲಗಿದೆ. ಇಂದಾವುದೋ ರಾಜಕೀಯ ಪಕ್ಷವು ಕರೆ ನೀಡಿದ ಬಂದ್ ಅಲ್ಲವೇ? ಸಂಚಾರಿಗಳು ಅದು ಹೇಗೆ ಇರುವುದಕ್ಕೆ ಸಾಧ್ಯ?
ಅಡುಗೆ ಕೋಣೆಯಿಂದ ಕುಕ್ಕರ್ ಸೀಟಿ ಹೊಡೆಯುತ್ತಿತ್ತು. ಜ್ವರ ವಾಸಿಯಾಗಲೆಂದು ನುಂಗಿದ ಇಂಗ್ಲೀಷ್ ಗುಳಿಗೆಗಳ ಪ್ರಭಾವವೋ ಏನೋ, ಶಾಸ್ತ್ರಿಗಳ ಹೊಟ್ಟೆ ಚುರ್ ಎನ್ನುತ್ತಿತ್ತು. “ಏನೂಂದ್ರೇ, ಗಂಜಿ ತಯಾರಾಗಿದೆ” ಎನ್ನುವ ಕರೆ ಯಾವಾಗ ಬರುವುದೋ ಎನ್ನುವ ನಿರೀಕ್ಷೆಯಲ್ಲಿದ್ದರು ಅವರು.
ಅಷ್ಟರಲ್ಲಿ ಅವರ ದೃಷ್ಟಿಯು ಗೇಟ್ ಹೊರಗಿನ ರಸ್ತೆಯ ಆ ಪಕ್ಕದಲ್ಲಿರುವ ಅರಳೀ ಮರದ ಛಾಯೆಯಲ್ಲಿ ಸುಮ್ಮನೇ ಕುಳಿತಿರುವ ಆ ಯುವಕನ ಮೇಲೆ ನೆಟ್ಟಿತು. ಬಹಳ ಹೊತ್ತಿನಿಂದ ಅಲ್ಲಿಯೇ ಕುಳಿತಿದ್ದಾನೆ ಅವನು. ಯಾರಿರಬಹುದು? ಪಡಸಾಲೆಯಿಂದ ಹೊರಗಿಳಿದು ಮುಖಮಂಟಪದ ಕಂಬಕ್ಕೆ ಆತು ನಿಂತು, ತಮ್ಮ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ಇಣುಕಿ ನೋಡಿದರು ಅವರು.
ನೋಡಿದರೆ ಈ ಊರಿನವನಂತೆ ಕಾಣಿಸುತ್ತಿಲ್ಲ ಅವನನ್ನು. ಯಾವುದೋ ಪಟ್ಟಣದಿಂದ ಬಂದಿರಬೇಕು. ತೀರಾ ಆಯಾಸಗೊಂಡವನಂತೆ ಕಾಣಿಸುತ್ತಿದ್ದಾನೆ. ದೊಡ್ಡದಾದ ತನ್ನ ಬ್ಯಾಗನ್ನು ಪಕ್ಕಕ್ಕಿರಿಸಿ ಆ ಬ್ಯಾಗ್ ಮೇಲೆಯೇ ಆತು ಅರ್ಧ ಮಲಗಿದ ಭಂಗಿಯಲ್ಲಿ ಕುಳಿತಿದ್ದಾನೆ. ಘಳಿಗೆ ಘಳಿಗೆಗೂ ಬೆವರೊರೆಸಿಕೊಳ್ಳುತ್ತಾ ಚಿಂತೆಗೊಳಗಾದವನಂತೆ ಕಾಣಿಸುತ್ತಿದ್ದಾನೆ. ಅರಳೀ ಮರದ ಎಲೆಗಳನ್ನು ಸೋಕಿ ಆಗಾಗ ಬೀಸಿ ಬರುವ ತಂಗಾಳಿಯು ಸ್ತಬ್ಧವಾದಾಗಲೆಲ್ಲಾ ತನ್ನ ಮುಖದ ಮೇಲೆ ಮುಚ್ಚಿಕೊಂಡಿದ್ದ ಹ್ಯಾಟನ್ನು ಕೈಗೆತ್ತಿ ಬೀಸಿಕೊಳ್ಳುತ್ತಿದ್ದನು ಆತ. ಬಹಳ ಹೊತ್ತಿನಿಂದ ಅಲ್ಲಿಯೇ ಸ್ತಬ್ಧವಾಗಿ ಕುಳಿತಿರುವ ಅವನನ್ನು ಗಮನಿಸಿದ ಶಾಸ್ತ್ರಿಗಳಿಗೆ ಯಾಕೋ ಅವನಾರೆಂದು ವಿಚಾರಿಸುವ ಹಂಬಲ. ಯಾಕಾಗಿ ಇಲ್ಲಿ ಕುಳಿತಿರುವನೆಂದು ತಿಳಿಯುವ ಕುತೂಹಲ. ಕರವಸ್ತ್ರವನ್ನು ಹೆಗಲ ಮೇಲೆ ಹೊದ್ದು ಅಂಗಳಕ್ಕಿಳಿದು ಗೇಟ್ ಕಡೆ ನಡೆದರು ಅವರು. ಗೇಟನ್ನು ಅರ್ಧ ತೆರೆದು ಅಲ್ಲಿಂದಲೇ “ಯಾರು ನೀವು? ಯಾಕಾಗಿ ಇಲ್ಲಿ ಕುಳಿತಿದ್ದೀರೀ?” ಎಂದು ಕೂಗಿ ಕರೆದರು. ಅವರ ಕರೆಯನ್ನು ಆ ಯುವಕ ಕೇಳಿಸಿಕೊಂಡಂತಿಲ್ಲ. ಅಲುಗಾಟವಿಲ್ಲದೇ ತನ್ನ ಬ್ಯಾಗ್ ಮೇಲೆ ಜೋತು ಬಿದ್ದಿರುವನು ಆತ. ಬಹುಶಃ ನಿದ್ರಿಸುತ್ತಿರಬೇಕು ಎಂದೆನಿಸಿದ ಶಾಸ್ತ್ರಿಗಳು ಅವನ ಬಳಿಗೇ ನಡೆದು ಹೋದರು. ಮತ್ತೆ ಕೇಳಿದರು “ಯಾರು ನೀವು?” ಊಹೂಂ. ಈಗಲೂ ಅಲುಗಾಟವಿಲ್ಲ. ಮೆಲ್ಲನೇ ಅವನ ಮುಖದ ಮೇಲೆ ಮುಚ್ಚಿಕೊಂಡಿದ್ದ ಕ್ಯಾಪನ್ನು ಸರಿಸಿದರು ಶಾಸ್ತ್ರಿಗಳು.ಕೊಂಚ ಮಿಸುಕಾಡಿದನು ಆ ಯುವಕ. ಅವನ ಹಣೆಯ ಮೇಲಿಂದ ಧಾರಾಕಾರವಾಗಿ ಬೆವರು ಒಸರುತ್ತಿದೆ. ತುಟಿಗಳು ಒಣಗಿ ಕೊಂಡಿವೆ. ಯಾಕೋ ನಿತ್ರಾಣಗೊಂಡಂತೆ ಇದ್ದಾನೆ ಎಂದೆಣಿಸಿ ಅವನ ಕೈಗಳನ್ನು ಹಿಡಿದೆತ್ತಿದರು ಶಾಸ್ತ್ರಿಗಳು. ತಣ್ಣಗಿರುವ ಅವನ ಕೈಗಳು ಅಸಾಧ್ಯವಾದ ಬಳಲಿಕೆಯಿಂದ ಜೋತು ಬಿದ್ದಿವೆ! “ಅಯ್ಯೋ ಪಾಪ” ಅನ್ನಿಸಿತು ಶಾಸ್ತ್ರಿಗಳಿಗೆ. ಅವನ ಪಕ್ಕದಲ್ಲಿಯೇ ಇರುವ ನೀರಿನ ಬಾಟಲಿಯಲ್ಲಿ ಕೊಂಚವೇ ನೀರಿತ್ತು. ಅದನ್ನು ಕೈಗೆತ್ತಿಕೊಂಡು ಅವನ ಮುಖದ ಮೇಲೆಲ್ಲಾ ಚಿಮುಕಿಸಿದರು ಶಾಸ್ತ್ರಿಗಳು.
ನಿಧಾನವಾಗಿ ಕಣ್ತೆರೆದನು ಯುವಕ. “ಯಾರು ನೀವು? ಎಲ್ಲಿಂದ ಬಂದಿರಿ? ಇಲ್ಲೇಕೆ ಕುಳಿತಿರುವಿರಿ? ಏನಾದರೂ ಸಮಸ್ಯೆ ಇದೆಯೇ?” ವಿಚಾರಿಸಿದರು ಶಾಸ್ತ್ರಿಗಳು.
“ನಾನು ಬೆಂಗಳೂರಿನಿಂದ ಬಂದಿರುವೆ. ಬಸ್ ಸಿಗಲಿಲ್ಲ. ನಡೆದು ನಡೆದು ಆಯಾಸ ಆಯ್ತು” ಅಷ್ಟು ಹೇಳಿ ಮತ್ತೆ ಕಣ್ಮುಚ್ಚಿಕೊಂಡನು ಯುವಕ. ಅಷ್ಟರೊಳಗೆ “ಏನಾಯ್ತು? ಯಾರಿವನು?” ಎನ್ನುತ್ತಾ ಶಾಸ್ತ್ರಿಗಳ ಮಡದಿ ಸಾವಿತ್ರಮ್ಮನವರೂ ಅಲ್ಲಿ ಬಂದು ಸೇರಿದರು. ಯಾಕೋ ಆ ಯುವಕನ ಮುಖವನ್ನು ನೋಡಿದರೆ ಒಳ್ಳೆಯ ಮನೆತನದಲ್ಲಿ ಹುಟ್ಟಿದವನಂತಿರುವನು. ಶಾಸ್ತ್ರಿಗಳಿಗೆ ಅದೇನನ್ನಿಸಿತೋ, “ಸಾವಿತ್ರೀ, ಸ್ವಲ್ಪ ಕೈ ಕೊಡ್ತೀಯಾ?” ಎನ್ನುತ್ತಾ ಆ ಯುವಕನನ್ನು ಹಿಡಿದೆತ್ತಿದರು ಅವರು. ಸಾವಿತ್ರಮ್ಮ ಜತೆ ಸೇರಿದರು.
ಶಾಸ್ತ್ರಿಗಳ ಮನೆಯ ಮುಖಮಂಟಪದಲ್ಲಿ ತಿರುಗುತ್ತಿರುವ ಫ್ಯಾನ್ ಕೆಳಗಡೆ ಹುಲ್ಲ ಚಾಪೆಯ ಮೇಲೆ ಮಲಗಿದ್ದ ಆ ಯುವಕ ಅದೆಷ್ಟೋ ಹೊತ್ತಿಗೆ ಚೇತರಿಸಿಕೊಂಡು ಕಷ್ಟಪಟ್ಟು ಎದ್ದು ಕುಳಿತನು.
ಮುಖಮಂಟಪದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಬೀಸಣಿಗೆಯಿಂದ ಗಾಳಿ ಬೀಸಿಕೊಳ್ಳುತ್ತಾ ತನ್ನತ್ತಲೇ ನೋಡುತ್ತಿದ್ದ ಶಾಸ್ತ್ರಿಗಳ ಮುಖವನ್ನು ನೋಡುತ್ತಾ ಆತ ಪ್ರಶ್ನಿಸಿದನು, “ಇಲ್ಲಿ ಹತ್ತಿರದಲ್ಲಿ ಯಾವುದಾದರೂ ಹೋಟೆಲ್ ಇದೆಯಾ? ಬೆಳಗ್ಗಿನಿಂದ ಏನೂ ತಿಂದಿಲ್ಲ. ಸ್ವಲ್ಪ ಏನಾದರೂ ಆಹಾರ ಸೇವಿಸಿ, ಜ್ಯೂಸ್ ಏನಾದರೂ ಕುಡಿದರೆ ಸರಿ ಹೋಗಬಹುದು” ಎಂದ ಅವನತ್ತ ನೋಡಿ ನಸು ನಕ್ಕರು ಶಾಸ್ತ್ರಿಗಳು, “ಹೋಟೆಲ್ ಸಿಗಬೇಕಾದರೆ ಇನ್ನೂ ಎಂಟು ಕಿಲೋಮೀಟರ್ ದೂರ ನಡೆಯಬೇಕು. ಇಂದು ಬಂದ್ ಅಲ್ಲವೇ? ಯಾವುದೇ ವಾಹನಗಳು ಸಿಗಲಾರವು” ಅಷ್ಟು ಹೇಳಿ ಸುಮ್ಮನಾದರು ಶಾಸ್ತ್ರಿಗಳು. ಯುವಕ ಇನ್ನೂ ತುಂಬಾ ಬಳಲಿಕೊಂಡಿದ್ದಾನೆ. ಅವನ ಪೂರ್ವಾಪರವನ್ನು ವಿಚಾರಿಸುವುದಕ್ಕೆ ಇನ್ನೂ ಸಮಯವಾಗಿಲ್ಲ ಎಂದನಿಸಿತ್ತು ಅವರಿಗೆ. ಭಟ್ಟರ ಮಾತು ಕೇಳಿ ನಿರುತ್ಸಾಹಗೊಂಡನು ಯುವಕ. ಏನೂ ತೋಚದವನಂತೆ ಮತ್ತೆ ಮಲಗಿಕೊಂಡನು.
ಮನೆಯ ಮುಖ್ಯದ್ವಾರದಿಂದ ಹೊರಬಂದ ಸಾವಿತ್ರಮ್ಮ, “ಗಂಜಿ ಊಟ ಮಾಡ್ತಿಯೇನಪ್ಪಾ?” ಆ ಯುವಕನನ್ನು ಉದ್ದೇಶಿಸಿ ಪ್ರಶ್ನಿಸಿದರು ಅವರು. ಸಾವಿತ್ರಮ್ಮನ ಮೊಗವನ್ನು ದಿಟ್ಟಿಸಿದ ಆ ಯುವಕನ ಕಣ್ಣುಗಳಲ್ಲಿ ಒಂದು ಹನಿ ನೀರು ಜಿನುಗಿತು. ಆ ನೋಟವನ್ನು ಅರ್ಥೈಸಿಕೊಂಡಿತು ತಾಯಿ ಕರುಳು. ತಟ್ಟೆಯಲ್ಲಿ ಹರಡಿದ ತಿಳಿ ಮಿಶ್ರಿತ ಕೆಂಪಕ್ಕಿ ಗಂಜಿ. ಅದರ ಮೇಲೆ ತೇಲಾಡುವ ಆಕಳ ತುಪ್ಪ. ಚಿಟಿಕೆಯಲ್ಲಿ ಹಿಡಿದುಕೊಂಡಿದ್ದ ಹುಡಿ ಉಪ್ಪನ್ನು ಆ ತಟ್ಟೆಯ ಮೇಲೆಲ್ಲಾ ಹರಡಿಕೊಳ್ಳುತ್ತಾ, ಆ ಯುವಕನ ಮುಂದೊಡ್ಡಿದರು ಸಾವಿತ್ರಮ್ಮ. ತಿಳಿ ಗಂಜಿಯ ಜೊತೆಯಲ್ಲಿ ಬೆರೆತ ತುಪ್ಪದ ಆ ಘಮವು ಮೂಗಿಗೆ ಬಡಿದಿದ್ದೇ ತಡ, ಲಗುಬಗೆಯಿಂದ ಎದ್ದು ಕುಳಿತನು ಯುವಕ. ಚಮಚೆಯನ್ನು ಕೈಯಲ್ಲಿ ಹಿಡಿದು ಆ ಗಂಜಿಯನ್ನು ಬಾಯಿಯವರೆಗೂ ಕೊಂಡೊಯ್ಯಲಾರದಷ್ಟು ನಡುಗುತ್ತಿವೆ ಅವನ ಕೈಗಳು. ಅರ್ಥೈಸಿಕೊಂಡ ಸಾವಿತ್ರಮ್ಮ ತನ್ನ ಬೊಗಸೆಯಿಂದ ಅವನ ಮುಖವನ್ನು ಎತ್ತಿ ಹಿಡಿದು ತನ್ನ ಕೈಯಾರೆ ಅವನಿಗೆ ಗಂಜಿಯುಣಿಸಿದರು. ಯಾಕೋ, ಅವರ ಕಣ್ಣುಗಳು ಆ ಹೊತ್ತಿಗೆ ಮಂಜಾಗಿದ್ದವು. ಜೊತೆಯಲ್ಲಿ ಆ ದೃಶ್ಯವನ್ನು ನೋಡುತ್ತಾ ಕುಳಿತ ಶಾಸ್ತ್ರಿಗಳ ಕಣ್ಣುಗಳೂ. “ಈ ವರೆಗೆ ಇಂತಹಾ ಗಂಜಿಯೂಟ ಮಾಡಿದ್ದೀಯೇನಪ್ಪಾ? ಬೆಂಗಳೂರಿನವನಲ್ಲವೇ ನೀನು?” ಕೇಳಿದರು ಸಾವಿತ್ರಮ್ಮ. ಇಲ್ಲ ಎನ್ನುವಂತೆ ತಲೆಯಾಡಿಸಿದನು ಆತ. ಗಂಜಿಯ ತಟ್ಟೆ ಖಾಲಿಯಾಗಿತ್ತು. “ಇನ್ನೂ ಸ್ವಲ್ಪ ತರಲೇನು?” ಕೇಳಿದರು ಸಾವಿತ್ರಮ್ಮ. ಬೇಕೆನ್ನುವಂತೆ ತಲೆಯಾಡಿಸಿದನು ಆತ. ಈ ಬಾರಿ ತಂದ ತಟ್ಟೆಯನ್ನು ತಾನಾಗಿಯೇ ಕೈಗೆತ್ತಿಕೊಂಡು ಖಾಲಿಯಾಗಿಸಿದ್ದನು ಆ ಯುವಕ.
ಊಟೋಪಚಾರಗಳು ಮುಗಿದಿದ್ದವು. ಸ್ವಲ್ಪ ಸಾವರಿಸಿಕೊಂಡಿದ್ದನು ಯುವಕ. ತನ್ನ ಬ್ಯಾಗ್ ಒಳಗಿಂದ ಟವೆಲ್ ಒಂದನ್ನು ಹೊರಗೆಳೆದು ತೆಗೆದು ಶಾಸ್ತ್ರಿಗಳ ಮೊಗದತ್ತ ಧನ್ಯತೆಯ ನೋಟ ಬೀರುತ್ತಾ ಆತ ಪ್ರಶ್ನಿಸಿದನು, “ನಾನು ಸ್ವಲ್ಪ ಕೈಕಾಲು ಮುಖ ತೊಳೆದುಕೊಳ್ಳಬಹುದೇ? ಬೆಂಗಳೂರಿನಿಂದ ಹೊರಟ ನಂತರ ಸ್ನಾನ ಮಾಡಲಿಲ್ಲ” ಮುಜುಗರದಿಂದಲೇ ಪ್ರಶ್ನಿಸಿದ ಅವನತ್ತ ನೋಡಿ ನಕ್ಕರು ಶಾಸ್ತ್ರಿಗಳು. “ಕೈಕಾಲು ತೊಳೆಯುವುದೇಕೆ? ಸ್ನಾನಾನೇ ಮಾಡ್ಕೊಂಡು ಬಾ ಹೋಗು. ನೋಡು, ಸಾವಿತ್ರಿ ನಿನಗಾಗಿ ಟವೆಲ್ ಇರಿಸಿದ್ದಾಳೆ” ಎನ್ನುತ್ತಾ ತನ್ನ ಪಕ್ಕದಲ್ಲಿಯೇ ಇರಿಸಿದ್ದ ಟವೆಲ್ ಅವನ ಮುಂದೊಡ್ಡಿದರು ಶಾಸ್ತ್ರಿಗಳು. “ಅಯ್ಯೋ, ಬೇಡ ಬಿಡಿ. ಟವೆಲ್ ನನ್ನ ಬಳಿ ಇದೆ” ಎಂದು ಸಂಕೋಚದಿಂದಲೇ ನುಡಿದ ಅವನಿಗೆ ಬಚ್ಚಲು ಮನೆಯತ್ತ ದಾರಿ ತೋರಿಸಿದರು ಶಾಸ್ತ್ರಿಗಳು. ಬಿಸಿನೀರಿನ ಹಂಡೆಯಿಂದ ನೀರನ್ನೆತ್ತಿ ಹದಗೊಳಿಸುತ್ತಿದ್ದರು ಸಾವಿತ್ರಮ್ಮ ಅಲ್ಲಿ. “ನೋಡಪ್ಪಾ, ತಣ್ಣೀರು ಇನ್ನೂ ಬೇಕೆಂದರೆ ಪಕ್ಕದಲ್ಲಿರುವ ಆ ಹಂಡೆಯಿಂದ ಸೇರಿಸಿಕೋ” ಪ್ರೀತಿಯಿಂದಲೇ ನುಡಿಯುತ್ತಿದ್ದ ಸಾವಿತ್ರಮ್ಮನತ್ತ ಮುಜುಗರದಿಂದ ನೋಡಿ ನಕ್ಕನು ಆತ. “ನಾನು ನಿಮಗೆ ತುಂಬಾನೇ ತೊಂದರೆ ಕೊಡ್ತಾ ಇದ್ದೇನೆ” ಎಂದು ಅವನಂದಾಗ, ”ಹಾಗೇನೂ ಇಲ್ಲ ಬಿಡಪ್ಪಾ. ಇಲ್ಲಿ ಯಾರೇ ಅತಿಥಿಗಳು ಬಂದ್ರೂ ನಾವು ಇದನ್ನೆಲ್ಲಾ ಮಾಡ್ತೇವೆ” ಅಂದರು ಸಾವಿತ್ರಮ್ಮ.
ಸ್ನಾನ ಮುಗಿಸಿ ಬರುವ ಆ ಯುವಕನಿಗಾಗಿಯೇ ಕಾದಿದ್ದರು ಶಾಸ್ತ್ರಿಗಳೂ, ಸಾವಿತ್ರಮ್ಮನವರೂ.
ತಲೆಯೊರೆಸಿಕೊಳ್ಳುತ್ತಾ ಬಂದ ಆ ಯುವಕ ಈಗ ಬಹಳಷ್ಟು ಚೇತರಿಸಿಕೊಂಡಿದ್ದನು. ಬಂದವನೇ ಶಾಸ್ತ್ರಿಗಳನ್ನು ಉದ್ದೇಶಿಸಿ ದೈನ್ಯತೆಯಿಂದ ನುಡಿಯತೊಡಗಿದನು. “ನೀವೆಲ್ಲಾ ನನಗಾಗಿ ತುಂಬಾ ತೊಂದರೆ ತೆಗೆದುಕೊಂಡಿರಿ. ನಿಮ್ಮ ಈ ಉಪಕಾರವನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ಈ ಹೊತ್ತಿಗೆ ಟ್ಯಾಕ್ಸಿ ಏನಾದರೂ ಸಿಗಬಹುದೇ? ನಾನು ಸುಬ್ಬಯ್ಯ ಶಾಸ್ತ್ರಿಗಳ ಮನೆಗೆ ಹೋಗಬೇಕು. ಅವರೇನಾದ್ರೂ ನಿಮಗೆ ಗೊತ್ತೇ?” ಯುವಕನ ಮಾತನ್ನು ಕೇಳಿದ ಶಾಸ್ತ್ರಿಗಳೂ, ಸಾವಿತ್ರಮ್ಮನವರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು.
“ಈ ಊರಿನಲ್ಲಿರುವವರು ಒಬ್ಬರೇ ಸುಬ್ಬಯ್ಯ ಶಾಸ್ತ್ರಿಗಳು. ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರಲ್ಲಿ ನಿಮಗೇನು ಕೆಲಸ?” ಸಂಶಯ, ಕುತೂಹಲ ಮಿಶ್ರಿತ ಸ್ವರದಲ್ಲಿ ಕೇಳಿದರು ಶಾಸ್ತ್ರಿಗಳು.
ಉತ್ತರಿಸುವುದಕ್ಕೆ ತಡವರಿಸಿದನು ಆ ಯುವಕ. ಶಾಸ್ತ್ರಿಗಳೇ ಮತ್ತೆ ಪ್ರಶ್ನಿಸಿದರು, “ಅವರನ್ನು ನಿಮಗೆ ಹೇಗೆ ಪರಿಚಯ? ಯಾಕಾಗಿ ನೀವು ಅವರನ್ನು ನೋಡಬೇಕು?”
ಯುವಕ ಉತ್ತರಿಸಿದನು, “ಅವರಾರೋ? ಹೇಗಿರುವರೋ? ನನಗೆ ಪರಿಚಯವಿಲ್ಲ. ಆದರೂ ನನಗೆ ತುಂಬಾ ಬೇಕಾದವರು”. “ಬೇಕಾದವರು ಅಂದ್ರೆ?” ಕುತೂಹಲದ ಪರಾಕಾಷ್ಠೆಯಿಂದ ಒಂದೇ ಉಸಿರಿನಲ್ಲಿ ಪ್ರಶ್ನಿಸಿದರು ಸಾವಿತ್ರಮ್ಮ. “ಅವರು..ಅವರು ನನ್ನ ತಾತ” ಅಷ್ಟು ಹೇಳುವಷ್ಟರಲ್ಲಿ ಆ ಯುವಕನ ಸ್ವರವು ಗದ್ಗದಿತವಾಗಿತ್ತು.
ಗರಬಡಿದಂತೆ ಒಬ್ಬರ ಕೈಯನ್ನೊಬ್ಬರು ಹಿಡಿದು ನಿಂತಿದ್ದರು ಶಾಸ್ತ್ರಿಗಳೂ ಸಾವಿತ್ರಮ್ಮನವರೂ.
“ಅಂದ್ರೇ… ನೀನು… ನೀನು ವಿಶಾಲಾಕ್ಷಿಯ ಮಗನೇ?” ಸಂದೇಹ ಮಿಶ್ರಿತ ಸ್ವರದಲ್ಲಿ ಕೇಳುವ ಹೊತ್ತು ಶಾಸ್ತ್ರಿಗಳ ಎದೆಬಡಿತ ಜೋರಾಗಿತ್ತು. “ಹೌದು. ನಿಮಗೆ ನನ್ನ ತಾಯಿಯನ್ನು ಗೊತ್ತೇ?” ಬಿಕ್ಕಿ ಬಿಕ್ಕಿ ಅಳುತ್ತಲೇ ಕೇಳಿದನು ಆ ಯುವಕ. “ಅವಳ ಬಗ್ಗೆ ನಾವು ತಿಳಿದಷ್ಟು ಇನ್ನಾರು ತಿಳಿಯಲು ಸಾಧ್ಯ ಮಗನೇ? ಅವಳು ಈ ಉದರದಲ್ಲಿಯೇ ಹುಟ್ಟಿದವಳು. ಈ ಬಾಹುಗಳ ಬಂಧನದಲ್ಲಿಯೇ ಬೆಳೆದು ದೊಡ್ಡವಳಾದವಳು. ಆದರೆ ಕೊನೆಗೊಂದು ದಿನ…” ಎಂದು ಹೇಳುತ್ತಾ ಮಾತು ಮುಂದುವರೆಸಲಾಗದೇ ಬಿಕ್ಕಿ ಬಿಕ್ಕಿ ಅಳುತ್ತಲೇ ಕುಸಿದು ಕುಳಿತರು ಸಾವಿತ್ರಮ್ಮ.
“ನೀನು ಅರಸಿ ಬಂದಿರುವ ಸುಬ್ಬಯ್ಯ ಶಾಸ್ತ್ರಿಗಳು ನಾನೇ ಕಣೋ. ನಿನ್ನ ತಾಯಿ ಹುಟ್ಟಿ ಬೆಳೆದಿರುವುದು ಈ ಮನೆಯಲ್ಲಿಯೇ. ಹೋಗಲಿ ಈಗ ಅವಳೆಲ್ಲಿ ಇರುವಳು? ನೀನೇಕೆ ನಮ್ಮನ್ನರಸಿ ಇಲ್ಲಿಗೆ ಬಂದೆ?” ತಾನೂ ಅಳುತ್ತಲೇ ಸಾವಿತ್ರಮ್ಮನ ತೋಳುಗಳನ್ನು ಹಿಡಿದೆತ್ತಿ, ಆಕೆಯನ್ನು ತನ್ನ ಎದೆಯ ಮೇಲೆ ಒರಗಿಸಿಕೊಳ್ಳುತ್ತಾ ಪ್ರಶ್ನಿಸಿದರು ಶಾಸ್ತ್ರಿಗಳು.
ಮರು ಮಾತನಾಡಲಿಲ್ಲ ಯುವಕ. ಧನ್ಯತೆಯಿಂದ ಅವರೀರ್ವರ ಕಾಲಿಗೆರಗಿ ವಂದಿಸಿದನು. ಬಳಿಕ ತನ್ನ ಬ್ಯಾಗ್ ಒಳಗಿಂದ ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟ ಒಂದೆರಡು ಮಡಿಕೆಗಳನ್ನು ಹೊರತೆಗೆಯುತ್ತಾ, “ಈ ಪರಿಸ್ಥಿತಿಯಲ್ಲಿ ನಿಮ್ಮ ಬಳಿ ಇದನ್ನು ಹೇಗೆ ಹೇಳಬೇಕೋ ಗೊತ್ತಿಲ್ಲ. ನನ್ನ ಅಪ್ಪ, ಅಮ್ಮ ಇಬ್ಬರೂ ಇಂದು ಈ ಮಡಿಕೆಯೊಳಗಿರುವರು, ಬೂದಿಯಾಗಿ. ಇಪ್ಪತ್ತು ದಿನಗಳ ಹಿಂದೆ ನಡೆದ ಒಂದು ಅಪಘಾತ. ಈರ್ವರೂ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ನಡೆದು ಹೋದರು. ನನಗಿನ್ನಾರೂ ಇಲ್ಲ. ಪ್ರತಿ ದಿನವೂ ಅಮ್ಮ ನಿಮ್ಮಿಬ್ಬರ ಬಗ್ಗೆ ಹೇಳುತ್ತಿದ್ದ ಕಥೆಯನ್ನು ಕೇಳಿಯೇ ಬೆಳೆದವನು ನಾನು. ನಿಮ್ಮನ್ನು ನೆನೆದು ಅಮ್ಮ ಪಶ್ಚಾತ್ತಪಿಸದ ದಿನಗಳಿಲ್ಲ. ಇಂದು ಆ ಅಮ್ಮನ ಬಯಕೆಯನ್ನು ಈಡೇರಿಸುವುದಕ್ಕಾಗಿಯೇ ನಿಮ್ಮನ್ನರಸಿ ಬಂದಿರುವೆನು ನಾನು. ನಿಮ್ಮ ವೃದ್ಧಾಪ್ಯದಲ್ಲಿ ನಿಮಗೊಂದು ಆಸರೆಯಾಗಬೇಕೆಂಬ ಹಂಬಲದಿಂದ ಬಂದಿರುವೆ. ಯಾರೂ ಇಲ್ಲದ ನನಗೆ ಆಸರೆಯಾಗಿ ನೀವಿರುವಿರೆಂಬ ಹಂಬಲದಿಂದ ಬಂದಿರುವೆ. ನನಗೊಂದು ಪುಟ್ಟ ಜಾಗವನ್ನು ನೀವಿಲ್ಲಿ ಕೊಡಲಾರಿರಾ?” ಎಂದು ಹೇಳಿ ಗೋಳೋ ಎಂದು ಅತ್ತನು ಯುವಕ.
ಸುಮಾರು ಅರ್ಧ ಗಂಟೆಗಳ ಕಾಲ ಶಾಸ್ತ್ರಿಗಳ ಮನೆಯೊಳಗೆ ಭೋರ್ಗರೆದು ಉಕ್ಕಿದ ಅಳು ಮತ್ತೆ ನಿಧಾನವಾಗಿ ಶಾಂತವಾಯಿತು. ಮರು ಘಳಿಗೆಯಲ್ಲಿಯೇ ಯುವಕ ಅವರೀರ್ವರ ಬಾಹುಗಳಲ್ಲಿ ಬಂಧಿಯಾಗಿದ್ದನು. ದಿನಗಳುರುಳಿದವು. ಆ ಮನೆಯೊಳಗೆ ಕವಿದಿದ್ದ ಮಂಕು ಮರೆಯಾಯಿತು. ಆ ಜಾಗದಲ್ಲಿ ನಗುವು ಮೆರೆದಾಡಿತು.
ಒಂದೆರಡು ವರ್ಷಗಳು ಹಾಗೆಯೇ ಕಳೆದಿರಬೇಕು. ಪಕ್ಕದ ಮನೆಯ ಆ ಹುಡುಗಿ ಯಾಕೋ ಈಗೀಗ ತಮ್ಮ ಮನೆಯ ಗೇಟ್ ಮುಂದೆ ಹೆಚ್ಚಾಗಿಯೇ ಸುಳಿದಾಡುತ್ತಿದ್ದಾಳೆ ಅನ್ನಿಸಿತು ಶಾಸ್ತ್ರಿಗಳಿಗೆ. ತಮ್ಮ ಮೊಮ್ಮಗನನ್ನು ಬಳಿ ಕರೆದ ಅವರು ಅವನ ಕಿವಿಯಲ್ಲಿ ಹೀಗೆ ಉಸುರಿದರು. “ಆ ಹುಡುಗಿಯ ಬಳಿ ಹೇಳು. ಸಮಯ ಬಂದಾಗ ನಾನೇ ಅವಳ ತಂದೆ ತಾಯಿಯ ಬಳಿ ಮಾತನಾಡುತ್ತೇನೆ. ನಿನ್ನ ಅಪ್ಪ ಅಮ್ಮ ಮಾಡಿದ ತಪ್ಪನ್ನು ನೀವಿಬ್ಬರು ಪುನರಾವರ್ತಿಸಬಾರದು.” ತಾತನ ಮಾತನ್ನು ಕೇಳಿ ನಾಚಿಕೆಯಿಂದ ನೀರಾಗಿ ನಿಂತಿದ್ದ ಅವನ ಕೆನ್ನೆಯನ್ನು ತುಂಟತನದಿಂದ ಚಿವುಟಿ ದೊಡ್ಡದಾಗೊಮ್ಮೆ ನಕ್ಕರು ಶಾಸ್ತ್ರಿಗಳು.
–ಶುಭಂ–