ಕಾವ್ಯಾರಾಮ – ಭರತಮುನಿಯ ಧ್ರುವಾ ಧಾಮ

ಅಂಕಣ ಸಂಗೀತಸುಧೆ : ಕಾಂಚನ ರೋಹಿಣಿ ಸುಬ್ಬರತ್ನಂ

‘ಕಾವ್ಯಾರಾಮ’ ವೆಂಬ  ವಾಟ್ಸಾಪ್ (ಈಗ ಫೇಸ್ಬುಕ್ ನಲ್ಲಿಯೂ) ಗ್ರೂಪೊಂದು ಮೂರ್ನಾಲ್ಕು ವರ್ಷಗಳಿಂದ ಅತ್ಯುತ್ತಮ ಮೇಧಾವಿ ಕವಿಗಳು-ಕವಯಿತ್ರಿಗಳನ್ನು ಹೊಂದಿದ್ದು ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕವಿತೆಗಳನ್ನು ಛಂದೋಬದ್ಧವಾಗಿಯೂ ಮನೋಜ್ಞ ಕಲ್ಪನೆಗಳಲ್ಲಿಯೂ ರಚಿಸುತ್ತ ಸದ್ದಿಲ್ಲದೆ ಕನ್ನಡಾಂಬೆಯ, ಸಾಹಿತ್ಯಸರಸ್ವತಿಯ ಸೇವೆಗೈಯುತ್ತಿದೆ. ಇದನ್ನು ಆರಂಭಿಸಿ ರೂಪಿಸಿದ್ದು ಹಿರಿಯ ವಿದ್ವಾಂಸರೂ, ಕವಿಗಳೂ, ಬರಹಗಾರರೂ, ರಂಗಭೂಮಿಯಲ್ಲಿ ಬಹಳವಾದ ಪರಿಶ್ರಮವಿದ್ದು ಇನ್ನೂರೈವತ್ತಕ್ಕೂ ಮಿಕ್ಕಿ ರಂಗರೂಪಕಗಳನ್ನು ರಚಿಸಿ, ಮಾಡಿಸಿದ, ಪ್ರಖ್ಯಾತ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರವರು. ಆಶುಕವಿತ್ವದಲ್ಲಿಯೂ ಈ ಗ್ರೂಪಿನ ಕವಿ-ಕವಯಿತ್ರಿಗಳು ಅನೇಕ ವಿಷಯಗಳಲ್ಲಿ ಅನನ್ಯ ಕವಿತೆಗಳನ್ನು ರಚಿಸುತ್ತ ನಮ್ಮಂತಹವರಿಗೆ ಮಾನಸೋಲ್ಲಾಸವನ್ನು ದಯಪಾಲಿಸುತ್ತಿರುತ್ತಾರೆ. ಕಾವ್ಯಾರಾಮದ ಗ್ರೂಪು, ಮುಖ್ಯವಾಗಿ ಗ್ರೂಪಿನ ಸದಸ್ಯರ ಸ್ವರಚಿತ ಕನ್ನಡ ಭಾಷೆಯ ಕವನಗಳನ್ನೆ ಹೆಚ್ಚು ಆಧರಿಸಿ, ಆದರಿಸಿ, ಪ್ರೋತ್ಸಾಹಿಸುತ್ತದೆ. ಈ ಗ್ರೂಪಿನಲ್ಲಿ ನಾನು ಭರತಮುನಿಯ ನಾಟ್ಯಶಾಸ್ತ್ರದಲ್ಲಿ ಹೇಳಲ್ಪಟ್ಟ ಧ್ರುವಾಗಳ ಕೆಲವು ವೃತ್ತಗಳನ್ನು ಅನುಸರಿಸಿ ಕನ್ನಡದಲ್ಲಿ ಧ್ರುವಾಗಳನ್ನು ರಚಿಸಿಕೊಡಬೇಕೆಂದು ಪ್ರಾರ್ಥಿಸಿದಾಗ ಸಂತೋಷದಿಂದ ಮನೋಹರವಾದ ಕನ್ನಡ ಧ್ರುವಾಗಳನ್ನು ರಚಿಸಿಕೊಟ್ಟು ನನ್ನನ್ನು ಕೃತಾರ್ಥಳನ್ನಾಗಿಸಿದ್ದಾರೆ. ಭರತಮುನಿಯು ಹೇಳಿದ ಧ್ರುವಾಗಳನ್ನು ಈಗಲೂ ಉಜ್ಜೀವಿಸಿ ನೃತ್ಯಕಲಾಕಾರರು ರಂಗದಲ್ಲಿ ಅಳವಡಿಸಿಕೊಳ್ಳಬಹುದು ಎಂದೂ, ಯಾರಾದರೂ ಇವುಗಳನ್ನು ಕನ್ನಡದಲ್ಲಿ ಸುಲಲಿತವಾಗಿ ರಚಿಸಬಾರದೇ ಎಂದೂ, ಆಶಾಸೌಧಗಳನ್ನೇ ಕಟ್ಟುತ್ತಿದ್ದ ನನಗೆ ಈ ಕಲ್ಪನೆಗಳನ್ನು ಸಾಕಾರಗೊಳಿಸಿದ ಕಾವ್ಯಸರದಾರರಾದ ಕಾವ್ಯಾರಾಮದ ಕವಿಗಳಿಗೆಲ್ಲ ಅಭಿನಂದನಾಪೂರ್ವಕ ನಮನಗಳೊಂದಿಗೆ ಚಿರಋಣಿಯಾಗಿದ್ದೇನೆ. ಅಂತೆಯೇ ಇನ್ನೂ ಪ್ರಾಚೀನದಂತೆಯೇ ಯಥಾಕ್ಷರ ಪ್ರಬಂಧಗಳಿದ್ದು, ತಾಳಗಳನ್ನು ಇನ್ನೂ ಘಾತದಲ್ಲಿಯೇ ಪ್ರಯೋಗಿಸುತ್ತಿರುವ ಯಕ್ಷಗಾನ ಕಲೆಯಲ್ಲಿಯೂ ಈ ಧ್ರುವಾಗಳ ಅಳವಡಿಕೆಯ ಸಾಧ್ಯತೆಗಳನ್ನು ಕುರಿತಾದ ನನ್ನ ಕಲ್ಪನೆ ಹಾಗೂ ಅನಿಸಿಕೆಗಳನ್ನು ಸಾಕಾರಗೊಳಿಸಿದ,  ಕವಯಿತ್ರಿ ಮೋಹಿನಿ ದಾಮ್ಲೆಯವರ ಉದ್ಧತ ಧ್ರುವಾದ ಕನ್ನಡದ ರಚನೆಯನ್ನು ಪ್ರಾಯೋಗಿಕವಾಗಿ ರಾಗ ಮತ್ತು ತಾಳಗಳಿಗೆ ಸಂಯೋಜಿಸಿ ರೂಪಿಸಿ ಭರತನು ಹೇಳಿದ ಧ್ರುವಾಗಳನ್ನು ಯಕ್ಷಗಾನದಲ್ಲಿಯೂ ಉಜ್ಜೀವಿಸುವ ಸಾಧ್ಯತೆಗಳನ್ನು ಸಮರ್ಥವಾಗಿ ತೋರಿದ ಮದ್ದಲೆ ಹಾಗೂ ಮೃದಂಗದಲ್ಲಿ ವಿದ್ವಾಂಸರಾದ, ಸಂಶೋಧಕರಾದ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರಿಗೂ, ಮದ್ದಲೆವಾದಕರೂ ಭಾಗವತರೂ, ಛಂದಃಶಾಸ್ತ್ರಕಾರರೂ ಆದ, ಕಟೀಲು ಮೇಳದಲ್ಲಿ ಯಕ್ಷಗಾನ ವ್ಯವಸಾಯವನ್ನು ಮಾಡುತ್ತಿರುವ, ಈ ಉದ್ಧತ ಧ್ರುವಾವನ್ನು ಎರಡು ರಾಗಗಳಲ್ಲಿ ಗಾಯನ ಮಾಡಿದ ಶ್ರೀ ದಿನೇಶ್ ಭಟ್ ಯಲ್ಲಾಪುರ, ರವರಿಗೂ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಚಿರಋಣಿಯಾಗಿದ್ದೇನೆ. ಛಂದಸ್ಸಿನ ಇತಿಹಾಸಕಾರರೂ, ನೃತ್ಯವಿದ್ವಾಂಸರೂ, ವಾಗ್ಗೇಯಕಾರರೂ ನಾಟ್ಯಶಾಸ್ತ್ರದ ಧ್ರುವಾಗಳತ್ತ ತಮ್ಮ ಗಮನವನ್ನು ಹರಿಸಿದಲ್ಲಿ ನೃತ್ಯರೂಪಕಗಳಿಗೆ ಪುನಃ ಪ್ರಾಚೀನ ಶಾಸ್ತ್ರವೈಭವವನ್ನು ತಂದುಕೊಡಬಹುದು.

 


“ಭರತನ ನಾಟ್ಯಶಾಸ್ತ್ರದ ಧ್ರುವಾಗಳು”

 


ಪ್ರಾಚೀನ ಸಂಸ್ಕೃತ ನಾಟಕಗಳಲ್ಲಿ ಕಥಾನಿರ್ವಹಣೆಗೆ ಪ್ರಯೋಗಿಸುತ್ತಿದ್ದ ಹಾಡುಗಳನ್ನು ಧ್ರುವಾ ಎಂದು ಕರೆದಿದ್ದಾರೆ. ಈ ಶಬ್ದವು ಅರ್ವಾಚೀನ ಕಾಲದಲ್ಲಿ ಅಪಭ್ರಂಶಗೊಂಡು ಈಗಿನ ದರು ಎಂದಾಗಿದೆಯೆಂದು ತೋರುತ್ತದೆ. ಭರತಮುನಿಯು ತನ್ನ ನಾಟ್ಯಶಾಸ್ತ್ರದ 32 ನೆಯ ಅಧ್ಯಾಯವನ್ನು ಇವುಗಳ ವರ್ಣನೆಗೆಂದೇ ಮೀಸಲಿಟ್ಟಿದ್ದಾನೆ. ಇವುಗಳ ವರ್ಣನೆಯು ನಮಗೆ ದೊರೆಯುವುದು ಮೊದಲು ಭರತನಿಂದಾದರೂ ಭರತನೇ ನಾರದ ಮುಂತಾದ ಮಹರ್ಷಿಗಳು ತನಗಿಂತಲೂ ಮೊದಲೇ ಹೇಳಿದ್ದಾರೆಂದು ಸೂಚಿಸಿದ್ದಾನೆ. ತಾಳಪ್ರಧಾನ ಪ್ರಬಂಧಗಳಾಗಿದ್ದ, ಬೇರೆ ಬೇರೆ ಪ್ರಮಾಣದ ಋಕ್, ಗಾಥಾ, ಪಾಣಿಕಾ ಮತ್ತು ಏಳು ತರಹದ ಗೀತಗಳನ್ನು ಧ್ರುವಾಗಳೆಂದೆ ಹೆಸರಿಸಿದ್ದಾನೆ. ಇವುಗಳ ಅಂಗಗಳನ್ನೆ ಆಯ್ದು ಅವುಗಳಿಂದ ಬೇರೆ ಬೇರೆ ಛಂದಸ್ಸು (ವೃತ್ತ)ಗಳನ್ನು ರಚಿಸಿ ಅವಕ್ಕೆ ಕಾವ್ಯತ್ವವನ್ನು ಒದಗಿಸಲಾಗಿದೆ. ಇವು ಒಳಗೊಳ್ಳುವ ಮಾತುಗಳು, ವರ್ಣಗಳು, ಅಲಂಕಾರ, ಲಯ, ಜಾತಿ ಮತ್ತು ಪಾಣಿಗಳು (=ತಾಳವ್ಯವಹಾರದಲ್ಲಿ ಕೈಗಳ ವಿಕ್ಷೇಪಗಳು, ಘಾತ ಇತ್ಯಾದಿ) ನಿಯತವಾಗಿ (ಎಂದರೆ ಹೀಗೆಯೆ, ಇಂತಿಷ್ಟೆ ಎಂದು) ಸಂಬಂಧಿಸಿ ಇರುತ್ತಿದ್ದರಿಂದ ಇವುಗಳಿಗೆ ಧ್ರುವಾಗಳೆಂಬ ಹೆಸರಾಯಿತು. ವರ್ಣನೆಯ ವಸ್ತುವು ಕನಿಷ್ಠದಲ್ಲಿ ಒಂದು, ಗರಿಷ್ಠದಲ್ಲಿ ನಾಲ್ಕು. ಇವುಗಳನ್ನು ಕ್ರಮವಾಗಿ ಧ್ರುವಾ, ಪರಿಗೀತಿಕಾ, ಮದ್ರಕ ಮತ್ತು ಚತುಷ್ಪದಾ ಎಂದು ಕರೆಯುತ್ತಿದ್ದರು. ನಾಟಕದ ಯಾವ ಸಂದರ್ಭದಲ್ಲಿ ಈ ಹಾಡುಗಳನ್ನು ಉಪಯೋಗಿಸಬೇಕಾಗಿತ್ತು ಎಂಬುದರ ಮೇಲೆ ಇವುಗಳನ್ನು ಪ್ರಾವೇಶಿಕೀ(ಪ್ರವೇಶ ಮಾಡುವಾಗ), ಆಕ್ಷೇಪಿಕೀ (ನಿರ್ದಿಷ್ಟಗೊಳಿಸುವಾಗ), ನೈಷ್ಕ್ರಾಮಿಕೀ(ನಿಷ್ಕ್ರಾಮ ಮಾಡುವುದಕ್ಕೆ), ಪ್ರಾಸಾದಿಕೀ (ಪ್ರಸನ್ನತೆಯನ್ನುಂಟುಮಾಡಲು) ಮತ್ತು ಅಂತರಾ (ಮಧ್ಯಂತರದ್ದು)ಗಳೆಂದು ವಿಂಗಡಿಸಲಾಗುತ್ತಿತ್ತು.

ಧ್ರುವಾಗಳಲ್ಲಿ ಮುಖ, ಪ್ರತಿಮುಖ, ವೈಹಾಯಸಕ, ಸಂಹರಣ, ಪ್ರಸ್ತಾರ, ಉಪವರ್ತ, ಸ್ಥಿತ, ಪ್ರವೃತ್ತ, ವಜ್ರ, ಸಂಧಿ, ಮಾಷಘಾತ, ಚತುರಶ್ರ, ಉಪಪಾತ, ಪ್ರವೇಣೀ, ಶೀರ್ಷಕ, ಸಂಪಿಷ್ಟಕ, ಅಂತಾಹರಣ ಮತ್ತು ಮಹಾಜನಿಕ ಎಂಬ ಒಟ್ಟು 18 ಅಂಗಗಳಿರುತ್ತಿದ್ದವು. ಇವುಗಳಲ್ಲಿ ಯಾವ ಅಂಗಗಳನ್ನು ಸೇರಿಸಿ ಕೂಡಿ ಧ್ರುವಾ ರಚನೆಯಾಗುತ್ತಿತ್ತು ಎಂಬುದರ ಮೇಲೆ ಪ್ರಾವೇಶಿಕೀ, ಅಡ್ಡಿತಾ, ಅವಕೃಷ್ಟಾ, ಸ್ಥಿತ ಮತ್ತು ಖಂಜ – ನಟ್ಕುಟ ಎಂಬ ಹೆಸರುಗಳನ್ನು  ಇಡುತ್ತಿದ್ದರು. ತಾಳವು ತ್ರ್ಯಶ್ರ ಅಥವಾ ಚತುರಶ್ರ ಗತಿಯಲ್ಲಿದ್ದರೆ ಅದೇ ಹೆಸರನ್ನು ಧ್ರುವಾ ಸೇರಿಸಿಕೊಳ್ಳುತ್ತಿತ್ತು. ಇಂತಿಂತಹ ವಿಷಯಗಳನ್ನು ಕುರಿತು ಧ್ರುವಾಗಳನ್ನು ರಚಿಸಬೇಕೆಂಬ ನಿಯಮವನ್ನು ಭರತಮುನಿಯೆ ಉಲ್ಲೇಖಿಸಿದ್ದಾನೆ. ಇವುಗಳನ್ನು ಇಂತಿಂತಹ ಪಾತ್ರಗಳೆ ನಿರ್ವಹಿಸಬೇಕೆಂಬ ಕಟ್ಟುಪಾಡೂ ಇತ್ತು. ಅಲ್ಲದೆ ಧ್ರುವಾಗಳನ್ನು ಇಂತಹದೆ ರಸ, ಲಯ, ಸಂದರ್ಭ, ಸಮಯ, ವೃತ್ತ, ಭಾಷೆ ಮುಂತಾದವುಗಳಲ್ಲಿ ಹಾಡಬೇಕೆಂಬ ವಿಧಿಗಳೂ ಏರ್ಪಟ್ಟಿದ್ದವು. ಹಾಗೆಂದೇ ಇವುಗಳ ಹೆಸರು ‘ಧ್ರುವಾ’. ಪ್ರಾಚೀನ ಭಾರತದಲ್ಲಿ ಧ್ರುವಾಗಳನ್ನು ನಾಟಕದಲ್ಲಿಯೂ, ನೃತ್ಯದಲ್ಲಿಯೂ ಬಳಸುತ್ತಿದ್ದರು. ನೃತ್ಯವು ಎಷ್ಟೇ ಚೆನ್ನಾಗಿರಲಿ, ತಕ್ಕ ಆಹಾರ್ಯವನ್ನು ತೊಡದಿದ್ದರೆ ಹೇಗೆ ರಂಜಿಸದೋ, ಹಾಗೆಯೇ ಧ್ರುವಾಗಳಿರದಿದ್ದ ನಾಟಕ – ನೃತ್ಯಗಳೂ ರುಚಿಸುವುದಿಲ್ಲ. ಧ್ರುವಾಗಳನ್ನು ವೀಣೆ, ಕೊಳಲು ಮುಂತಾದ ವಾದ್ಯಗಳ ಪಕ್ಕವಾದ್ಯಗಳಲ್ಲಿ ಯುವಕ – ಯುವತಿಯರು ಹಾಡುತ್ತಿದ್ದರು. ಪಾತ್ರಗಳೂ ಧ್ರುವಾಗಳನ್ನು ಹಾಡುತ್ತಿದ್ದವು. ಪಾತ್ರಗಳಲ್ಲದ ಗಾಯಕ-ಗಾಯಕಿಯರೂ ಅವರ ಪರವಾಗಿ (‘ಪ್ಲೇಬ್ಯಾಕ್ ಸಿಂಗಿಂಗ್’) ಹಾಡುತ್ತಿದ್ದುದೂ ಉಂಟು. ಇವರೆಲ್ಲರ ಗುಣದೋಷಗಳನ್ನು ಭರತಮುನಿಯು ವಿವೇಚಿಸಿದ್ದಾನೆ.


ಈ ಕೆಳಗೆ ನಾಟ್ಯಶಾಸ್ತ್ರದ ಧ್ರುವಾಗಳ ಕೆಲವೇ ಕೆಲವು ಉದಾಹರಣೆಗಳು ಹಾಗೂ ಅದಕ್ಕೆ ಪರಸ್ಪರವಾಗಿ ಕಾವ್ಯಾರಾಮದ ಕವಿಗಳು ರಚಿಸಿರುವ ಕನ್ನಡದ ಧ್ರುವಾಗಳನ್ನು ನೀಡಿದೆ.


ಭರತಮುನಿಯು ನಾಟ್ಯಶಾಸ್ತ್ರದಲ್ಲಿ ಹೇಳಿರುವ ಬೃಹತೀ ಛಂದಸ್ಸಿನ ಶಲಭಾ-ವಿಚಲಿತಾ ಅಥವಾ ಅವಿಚಾಲಿತಾ ವೃತ್ತದ ಉದ್ಧತ ಧ್ರುವಾ. (ಉದ್ಧತವೆಂದರೆ ಉತ್ತಮ ಅಥವಾ ಗಂಭೀರ ಶೈಲಿಯಲ್ಲಿ ಹಾಡುವುದು) ಪಾದದ ಒಂಭತ್ತು ಅಕ್ಷರಗಳಲ್ಲಿ ಆರನೆಯದು ಮತ್ತು ಕೊನೆಯ ಎರಡು ಗುರು.


ಉದಾಹರಣೆ :
ಶಶಿಕಿರಣಲಂಬಹಾರಾ
ಉಡುಗಣಕೃತಾವತಂಸಾ |
ಗ್ರಹಗಣಕೃತಾಂಗಶೋಭಾ
ಯುವತಿರಿವ ಭಾತಿ ರಾತ್ರಿಃ ||


[ಅನುವಾದ : ‘ಚಂದ್ರನ ಕಿರಣಗಳು ಹಾರದಂತೆ (ಜೋತು ಬಿದ್ದಿವೆ), ನಕ್ಷತ್ರಗಳೆ ತಲೆಯ ಆಭರಣಗಳಂತಿವೆ, ಗ್ರಹಗಳು ಮಿಕ್ಕ ಅವಯವಗಳ ಭೂಷಣಗಳಂತಿವೆ. (ಒಟ್ಟು) ರಾತ್ರಿಯು ಯುವತಿಯಂತೆ ಕಾಣುತ್ತಿದೆ.]

1. ಕನ್ನಡದ ಶಲಭಾ-ವಿಚಲಿತಾ ಧ್ರುವಾ ರಚನೆ – ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ.  

ಪಸರಿಸುತ ದೀಪ್ತಿಯನ್ನು
ಪೊಸ ರವಿಯು ಬಂದನೇನು

ದಿನದಿನ ನಿಸರ್ಗದತ್ತ
ದಿನಪ ಪರಿಶೀಲಿಸುತ್ತ

ಚರಿಸುವನು ಬಾನೊಳೇಕೆ
ಇರಬಹುದು ಲೋಕಶಂಕೆ

ಜಗಕವನೆ ನೇತ್ರಮಿತ್ರ
ಸೊಗಗರೆವ ನಿತ್ಯ ಮಿತ್ರ

 


  1. ಕೆಳಗಿನ ಉದ್ಧತ ಧ್ರುವಾ ರಚನೆ – ಭಾವನಾ (ಮೋಹಿನಿ ದಾಮ್ಲೆ)

    ಇಳಿಬೆಳಕ ಛಾಯೆಯಲ್ಲೀ
    ಸುಳಿದೊಲವ ಮಾಯೆಯಲ್ಲೀl
    ಬಳಸಿರಲು ತೋಳಿನಲ್ಲೀ
    ಸೆಳವಿಹುದು ಬಾಳಿನಲ್ಲೀll

    ಹೊಸಗನಸ ಗುಂಗಿನಲ್ಲೀ
    ನಸುನಗೆಯ ರಂಗಿನಲ್ಲೀl
    ಮುಸುಕುತಿಹ ಕೆಂಪಿನಲ್ಲೀ
    ರಸವಿಹುದು ಪೆಂಪಿನಲ್ಲೀll

    ದಿನಕರನ ರಾಗದಲ್ಲೀ
    ಮಧುಕರನ ಭೋಗದಲ್ಲೀl
    ಮನಸುಮವು  ಸೋಲುತಿಲ್ಲೀ
    ಹದುಳದಲಿ ತೇಲಿತಿಲ್ಲೀll

    3.ಅವಿಚಾಲಿತಾ ವೃತ್ತದ ಕೆಳಗಿನ ಮೂರು (ಶಲಭಾ-ವಿಚಲಿತಾ ವೃತ್ತದ ಉದ್ಧತ ಧ್ರುವಾದ) ರಚನೆಗಳು – ಕವಿ ಶ್ರಿ ವಿಶ್ವನಾಥ್. ಕೆ.

    ಚಂದ್ರ
    ಗಗನದೊಳು ಚಂದಮಾಮಾ
    ನಗುಮೊಗದಿ ನಿಂದ ಸೋಮಾ
    ಸೊಗಕೊಡುವ ಯಾಮಿನೀಶಾ
    ಜಗದೊಳಗೆ ಸಸ್ಯಪೋಷಾ

    4. ಇನಕುಲದ ಕೋಸಲೇಂದ್ರಂ
    ತನುಜನಹ ರಾಮಚಂದ್ರಂ
    ವನದೊಳದೆ ಪೋದನೆಂದುಂ
    ಮನದೊಳಗೆ ಬೆಂದು ನೊಂದಂ||
    ತನುವಳಿಯೆ ನಾಕಕೈದುಂ

    5. ಲಯವಿದನು ಚೆಂದದಲ್ಲಿ
    ಭಯವಿರದೆ ಹಾಡಿರಿಲ್ಲಿ
    ಸುಲಭದಲಿ ಬಂಧಮಿರ್ಕುಂ
    ಲಲಿತವಹ ಛಂದವಕ್ಕುಂ

    ನಾಟ್ಯಶಾಸ್ತ್ರದಲ್ಲಿ ಪಙ್ಕ್ತೀ ಛಂದಸ್ಸಿನ ‘ವಿಪುಲ – ಭುಜ’ ವೃತ್ತದ ಧ್ರುವಾ ರಚನೆ. ಪಾದದ ಹತ್ತು ಅಕ್ಷರಗಳಲ್ಲಿ ಐದನೆಯದು, ಎಂಟನೆಯದು, ಒಂಭತ್ತನೆಯದು ಮತ್ತು ಕೊನೆಯದು ಗುರು.


ಉದಾಹರಣೆ :
ಜಲಧರನಾದಸಮುದ್ವಿಗ್ನಃ
           ಪ್ರಗಲಿತಗಂಡಮಹಾನಾದಃ |
ವನಗಹನಂ ಕುಪಿತೋ ಹಸ್ತೀ
           ಸರಭಸಗರ್ವಿತಕಂ ಯಾತಿ ||


[ಅನುವಾದ : ಬಕಪಕ್ಷಿಗಳ ಹಿಂಡಿನಿಂದ ಸುತ್ತುಗಟ್ಟಲ್ಪಟ್ಟ ಮೇಘ ಸಮೂಹವು ಸಿಡಿಲನ್ನು ಮಿಂಚಿಸುವುದ ಕಂಡು ರೋಷಾವೇಷದಿಂದ ಭಯಂಕರವಾಗಿ ಘರ್ಜಿಸುತ್ತ ಈ ಆನೆ ಒಣಗಿದ ಈ ವನದಲ್ಲಿ ಧಾವಿಸುತ್ತಿದೆ.]

ಅನುಷ್ಟುಪ್ ಜಾತಿಯ ‘ನದೀ’ ವೃತ್ತ (ಭನಲಗ)
ತ್ರಿಷ್ಟುಪ್ ಜಾತಿಯ ‘ವಿಮಲ’ ವೃತ್ತ(ಸಮನಲಗ)
ಪಙ್ಕ್ತೀ ಛಂದಸ್ಸಿನ ‘ವಿಪುಲ-ಭುಜ’ ವೃತ್ತ(ನಜಯಗ)ಗಳಲ್ಲಿ ಧ್ರುವಾಗಳು. [ನದೀ ಮತ್ತು ವಿಮಲದ ಲಕ್ಷಣಗಳನ್ನು  ಬೇರೆ ಧ್ರುವಾಗಳಲ್ಲಿ ಕೊಟ್ಟಿದೆ]
ರಚನೆ – ಕವಯಿತ್ರಿ ಇಂದಿರಾಜಾನಕಿ. (ಈಕೆ ಸುಪ್ರಸಿದ್ಧ ದೇರಾಜೆ ಸೀತಾರಾಮಯ್ಯನವರ ಪುತ್ರಿ)

ಕೆಟ್ಟ ಮನಸಿನವನೂ
ದುಷ್ಟ ಕುರುತನುಜನೂ
ರಟ್ಟೆಯನು ಹಿಡಿಯುತಾ
ಕಟ್ಟಿದ ತುರುಬೆಳೆದಾ ||

ತುರುಬಿಂಗೇ ಕೈಯಿಕ್ಕಿದ ಅಧಮಾ
ಪರಿಧಾನಕ್ಕೂ ಕೈ ತಗುಲಿಸಲೂ
ಹರಿಯೆನ್ನಾ ಕಾಪಾಡಲೆನುತಲೀ
ಮೊರೆಯಿಟ್ಟಾ ಪಾಂಚಾಲಿ ಕರೆದಳೂ ||

ಕುಲವಧು ಗೌರವವನ್ನೂ ಆ
ಖಳ ಸಭೆಯಲ್ಲಿಯೆ ಹಾಳ್ಮಾಡೇ
ಸೆಳೆಯಲು ಕೃಷ್ಣೆಯ ಸೌಶೀಲ್ಯಾ
ತಳುವದೆ ಬಂದನು ಗೋವಿಂದಾ ||

ನಾಟ್ಯಶಾಸ್ತ್ರದಲ್ಲಿ ಹೇಳಿದ ಅನುಷ್ಟುಭ್ ವರ್ಗಕ್ಕೆ ಸೇರಿದ ಪ್ರಾವೇಶಿಕೀ ಧ್ರುವಾದ ವೃತ್ತಗಳಲ್ಲಿ ಒಂದಾದ ‘ನದೀ’  ವೃತ್ತ. ಎಂಟು ಅಕ್ಷರಗಳಲ್ಲಿ ಮೊದಲನೆಯದು, ಕೊನೆಯದು ಗುರು.


ಉದಾಹರಣೆ :
ಹಂಸಕುಲಸಂಮುದಿತೇ ಸಾರಸರುತಮುಖರೇ |
ಮತ್ತಮಧುಕರಗಣೇ ಹಿಂಡತಿ ಮಧುಕರಿಕಾ |


[ಅನುವಾದ : ಹಂಸಗಳ ಗುಂಪಿನಿಂದ ಉತ್ಸಾಹಿತವಾದ, ಸಾರಸಗಳು ಮಾಡುವ ನಿಬಿಡ ಸದ್ದುಳ್ಳ ಮತ್ತು ಭೃಂಗಗಳ ಗುಂಪು ಇದ್ದಲ್ಲಿ ಮಧುಕರಿಕೆ (ಹೆಣ್ಣು ಭೃಂಗ) ಗುಂಜಾಡುತ್ತಿದೆ.]

ಕನ್ನಡದಲ್ಲಿ ನದೀ ವೃತ್ತದ ಧ್ರುವಾ – ಇದನ್ನು ವೃತ್ತಕ್ಕೆ ಹೇಳಿದ ನಿಯಮದಂತೆ ರಚಿಸಿದೆ. ಉದಾಹರಣೆಯಂತಲ್ಲ. ರಚನೆ – ಕವಯಿತ್ರಿ ಮೋಹಿನಿ ದಾಮ್ಲೆ [ಭಾವನಾ]

ಅಮ್ಮನ ಬಳಸಿನಲೀ
ಗುಮ್ಮನ ಭಯಗಳಲೀl
ಸುಮ್ಮನೆ ಕುಳಿತಿರುವೀ
ನಮ್ಮನೆ ಮಗು ಚೆಲುವೀll

ಘಮ್ಮೆನುವೊಲವಿನಲೀ
ನಮ್ಮನೆ ಬೆಳಗಿದಳೀl
ರಮ್ಮೆಯು ಸೊಬಗಿನಲೀ
ಚಿಮ್ಮುವ ನಗುವಿನಲೀll

ಅಂಬೆಯ ಮಮತೆಯಲೀ
ಗೊಂಬೆಯೊಲಿಹ ಮಗಳೀl
ಸಂಭ್ರಮಗಳ ಲಹರೀ
ತಂಬೆಲರೊಲೆವ ಪರೀll

ನಾಟ್ಯಶಾಸ್ತ್ರದಲ್ಲಿ ತ್ರಿಷ್ಟುಭ್ ವರ್ಗದ, ವಿಮಲ  ವೃತ್ತದ ಧ್ರುವಾ (ಪಾದದ ಹನ್ನೊಂದು ಅಕ್ಷರಗಳಲ್ಲಿ 3,4,5,6 ಮತ್ತು ಕೊನೆಯದು ಗುರು – ಸಗಣ ಮಗಣ ನಗಣ ಲಘು ಗುರು-ಈ ವಿನ್ಯಾಸ ಇದೆ.)


ಉದಾಹರಣೆ ಇಂತಿದೆ.
ಕುಸುಮಾಕೀರ್ಣೇ ನಿರ್ಮಲಸಲಿಲೇ
        ನಲಿನೀಖಂಡೇ ಷಟ್ಪದಮುಖರೇ |
ಸವಧೂಮಧ್ಯೇ ಸಾರಸಮುದಿತೇ
        ಸಮದೋ ಹಸ್ತೀ ಏಷ ವಿಚರಿತಃ ||


[ಅನುವಾದ – ಈ ಮದ್ದಾನೆಯು ಚದುರಿದ ಹೂಗಳಿದ್ದ ನಿರ್ಮಲ ನೀರಿನಲ್ಲಿ, ಭೃಂಗಗಳ ಗುಂಜಾರವದ, ಕಮಲಗಳ ಗುಂಪಿನಲ್ಲಿ, ಸಾರಸಪಕ್ಷಿಗಳು ವಧುಗಳ ಮಧ್ಯದಲ್ಲಿ ಆನಂದದಲ್ಲಿದ್ದಾಗ, ತಿರುಗಾಡುತ್ತಿದೆ.]

ಕನ್ನಡದ ವಿಮಲ ವೃತ್ತದ ಧ್ರುವಾ. ರಚನೆ – ಕವಿ ವಿಶ್ವನಾಥ್

ಬಳಿದುಂ ನೇಸರ್ ಬಣ್ಣವ ನಭದೊಳ್
ಬೆಳಗಾಯ್ತಾಗಳ್ ಹಕ್ಕಿಯ ದನಿಯೊಳ್
ಇಳೆಗೆಂಪಿಂದಂ ರಂಗಾಗಿಹುದೈ
ಕಳೆಯಲ್ ಕತ್ತಲ್ ಸಂಭ್ರಮವಹುದೈ

ಭರದಿಂದೋಡೋಡಲ್ ವ್ರಜದೆಡೆಗಾ
ತರುಣರ್ ಕಂಡರ್ ಕೃಷ್ಣನ ಮೊಗವಂ
ಕರೆವರ್ ಕಾಳಿಂದೀ ಮಡುವೆಡೆಗೆ
ಹರಿ ಕಾಪಾಡಲ್ ಧಾವಿಸಿರುವನೈ

ಖಲ ಕಾಳಿಂಗಾವಾಸದದೆಸೆಯೊಳ್
ಜಲವೇ ನಂಜಿಂ ದೂಷಿತವೆನಿಸಲ್
ನೆಲೆಯಿಲ್ಲೆಂದೆಂಬರ್ ವ್ರಜಜನಗಳ್
ಹಲಿ ಮೇಣ್ ಶೌರಿಂಗಾರ್ತಿಯರುಹಿದರ್

ಕುಣಿದಂ ಕಣ್ಣಂ ಹಾವಿನಹೆಡೆಯೊಳ್
ಭಯದಿಂ ನೋಳ್ಪರ್ ಗೊಲ್ಲರಹುಡುಗರ್
ಮಣಿಯಲ್ ಕಾಳಿಂಗಂ ಪೊಡಮಡುವಂ
ಹೊರಟರ್ ಗೋಪರ್ ರಂಗನ ಬಳಿಯೊಳ್

Leave a Reply

Your email address will not be published. Required fields are marked *