ಮಗು ಕಾಯುವುದಿಲ್ಲ…

ಅಂಕಣ ಬಗೆಯೆಷ್ಟೋ ಮೊಗವಷ್ಟು : ಗಜಾನನ ಶರ್ಮಾ ಹುಕ್ಕಲು

A baby is God’s opinion that the world should go on.’ ಇದು ಅಮೆರಿಕನ್ ಕವಿ ಕಾರ್ಲ್ ಸ್ಯಾಂಡ್ಬರ್ಗನ ಮಾತು. ‘ಜಗತ್ತಿನ ಮುಂದುವರಿಕೆಯ ಕುರಿತು ದೇವರ ನಿರ್ಣಯ ಮಗು’, ಅಂದರೆ ಜೀವಕೋಟಿಯ ಮುಂದುವರಿಕೆಗಾಗಿ ದೇವರು ಮಕ್ಕಳನ್ನು ಸೃಷ್ಟಿಸುತ್ತಾನೆ. ‌ಪೀಳಿಗೆ ಮತ್ತು ಸಂಸ್ಕೃತಿಗಳೆರಡೂ ಮುಂದುವರಿಯುವುದು ಮಕ್ಕಳಿಂದ. ಹಾಗಾಗಿ ಮಕ್ಕಳನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವುದೇ ನಮ್ಮ ಪರಂಪರೆಯ ಮುಂದುವರಿಕೆ.

 


ನಮಗೆ ನೋಬೆಲ್ ಪಾರಿತೋಷಕ ವಿಜೇತೆ, ಚಿಲಿ ದೇಶದ ಧೀಮಂತ ಮಹಿಳೆ ಗಾಬ್ರಿಯೆಲಾ ಮಿಸ್ತ್ರಾಲೆ ಪ್ರಪಂಚದ ಹಿರಿಯರಿಗೆ ನೀಡಿದ ಎಚ್ಚರಿಕೆಯ ಮಾತು ಇಲ್ಲಿ ಈಗ ಪ್ರಸ್ತುತವೆನ್ನಿಸುತ್ತದೆ.
ಆಕೆ ಹೇಳುತ್ತಾಳೆ,
“We are guilty of many errors and many faults, but our worst crime to abandoning the children, neglecting the fountain of life. Many of the things we need can wait. The child can not; right now is the time his bones are being formed, his blood being made and his senses also being developed.To him we can not answer Tomorrow, His name is today….”

‘ನಾವು ಅನೇಕ ದೋಷಗೈದು ತಪ್ಪಿತಸ್ಥರಾಗಿದ್ದೇವೆ. ಅದರಲ್ಲೂ ನಮ್ಮ ಘೋರ ಅಪಕೃತ್ಯ ನಮ್ಮ ಜೀವಸೆಲೆಯಾದ ಮಕ್ಕಳನ್ನು ನಿರ್ಲಕ್ಷಿಸಿ, ಕೈಬಿಟ್ಟದ್ದು. ನಮ್ಮ ಅನೇಕ ಬಯಕೆಗಳು, ‘ಬೇಕು’ಗಳು ಕಾಯಬಲ್ಲವು. ಆದರೆ ಮಗು ಕಾಯಲಾರದು. ತತ್ ಕ್ಷಣದಲ್ಲಿ ಅದರ ಎಲುಬುಗಳು ಗಟ್ಟಿಗೊಳ್ಳುತ್ತಿವೆ. ರಸ-ರಕ್ತಗಳು ಉತ್ಪತ್ತಿಯಾಗುತ್ತಿವೆ. ಅದರ ಸಂವೇದನೆಗಳು ಜಾಗೃತಗೊಂಡು, ಅಭಿವೃದ್ಧಿ ಹೊಂದುತ್ತಿದೆ. ಅದಕ್ಕೆ ನಾವು ‘ನಾಳೆ’ ಎಂದು ಉತ್ತರಿಸಲಾಗದು. ಅದರ ಹೆಸರೇ ‘ಇಂದು’.
  

   

 

ಅಂದರೆ ಮಗುವಿನ ಬೇಕುಗಳನ್ನು ತಕ್ಷಣದಲ್ಲಿಯೇ ಈಡೇರಿಸದೆ ಕಾಯುತ್ತಿದ್ದರೆ ಆ ಮಗು ಅನಂತರ ಮಗುವಾಗಿ ಉಳಿದಿರುವುದಿಲ್ಲ.ಅದರ ಬೇಡಿಕೆ ಪ್ರಸ್ತುತತೆಯನ್ನೇ ಕಳೆದುಕೊಳ್ಳುತ್ತದೆ. ಜೊತೆಗೇ ಒಂದು ಇಡಿಯ ತಲೆಮಾರು ಸಂಸ್ಕೃತಿಯ ಸಾರದಿಂದ ವಂಚಿತವಾಗಿ ಬರಡಾಗುತ್ತದೆ. ಮಕ್ಕಳು ವರ್ತಮಾನದಲ್ಲಿ ಬದುಕುತ್ತವೆ. ಅವುಗಳ ಬೇಕುಗಳು ವರ್ತಮಾನದಲ್ಲಿ ಅರಳುತ್ತವೆ.

 


ಯಾವುದೇ ದೇಶ ತನ್ನ ಭವಿಷ್ಯದ ಪ್ರಗತಿಗೆ ಅಗತ್ಯವಾದ ಭೌತಿಕ ಅಭಿವೃದ್ಧಿ ಯೋಜನೆಯೊಂದನ್ನು ಮುಂದೂಡಬಹುದು. ಒಂದು ಅಣೆಕಟ್ಟೆ ಕಟ್ಟುವುದನ್ನು ಆರ್ಥಿಕ, ಸಾಮಾಜಿಕ ಕಾರಣಗಳಿಗಾಗಿ ಮುಂದೂಡಬಹುದು. ಒಂದು ವಿದ್ಯುತ್ ಯೋಜನೆಯನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕಬಹುದು. ಒಂದು ಕೈಗಾರಿಕಾ ಘಟಕದ ಸ್ಥಾಪನೆಯನ್ನು ಕೆಲವು ಕಾಲ ಸ್ಥಗಿತಗೊಳಿಸಬಹುದು. ಆದರೆ ಅದು ತಾನು ತನ್ನ ದೇಶದ ಮಕ್ಕಳ ಅಭಿವೃದ್ಧಿಗೆ ಹಮ್ಮಿಕೊಳ್ಳಬೇಕಾದ ಯೋಜನೆಯನ್ನು ಮುಂದೂಡಲಾರದು, ಮುಂದೂಡಬಾರದು. ಒಂದು ತಲೆಮಾರು ತನ್ನ ಸಾಂಸ್ಕೃತಿಕ ಬೇರನ್ನು ಕಳಚಿಕೊಂಡರೆ, ಅದು ಇಡಿಯ ಭವಿಷ್ಯವನ್ನೇ ಡೋಲಾಯಮಾನ ಸ್ಥಿತಿಗೆ ತಳ್ಳಬಹುದು. ತಲೆಮಾರಿಗೊಬ್ಬ ಗಾಂಧಿ ಬರದಿದ್ದರೆ ಬೇಡ, ಆದರೆ ನೂರಾರು ತಲೆಮಾರಿಗೊಬ್ಬ ಹಿಟ್ಲರ್, ಒಬ್ಬ ಲಾಡನ್, ಒಬ್ಬ ಮುಸಲೋನಿ ಬರುವುದು ಬೇಡ. ಹಾಗಾಗಿ ಮಕ್ಕಳ ನೈತಿಕ ತಳಹದಿಯನ್ನು ನಿರಂತರವಾಗಿ ನಿರ್ಮಿಸುತ್ತಲೇ ಸಾಗಬೇಕು. ಒಂದೇ ಒಂದು ಮಗು ಸಾಂಸ್ಕೃತಿಕ ಖಾಲಿತನಕ್ಕೆ ಈಡಾದರೆ, ಅದೊಂದರಿಂದ ಇಡೀ ಸಮಾಜ ತೊಂದರೆಗೀಡಾಗಬಹುದು. ಈ ಕಾರಣದಿಂದಲೇ ಗಾಬ್ರಿಯಲ್ ಮಿಸ್ತ್ರಾಲೆ ‘ಮಗು ಕಾಯುವುದಿಲ್ಲ’ ಎಂದು ಹೇಳಿರುವುದು. ಸಮಾಜವನ್ನು ಪರಿಪೂರ್ಣವಾಗಿ ಉದ್ಧರಿಸಲು ಒಬ್ಬ ಮಹಾತ್ಮನಿಗೆ ಸಾಧ್ಯವಾಗದಿರಬಹುದು. ಆದರೆ ಇಡೀ ಸಮಾಜವನ್ನು ಒಬ್ಬನೇ ಒಬ್ಬ ತಲೆಕೆಡುಕ ನೈತಿಕವಾಗಿ ಘಾಸಿಗೊಳಿಸಿಬಿಡಬಹುದು. ಒಬ್ಬ ಮಂಥರೆ ಇಡೀ ಅಯೋಧ್ಯೆಯನ್ನು ಅಳಿಸಬಹುದು. ಒಬ್ಬ ಕೈಕೇಯಿ ಇಡೀ ಕೋಸಲವನ್ನು ಕಂಗೆಡಿಸಬಹುದು. ಒಬ್ಬ ಹಿಟ್ಲರ್ ವಿಶ್ವನಾಶಕ್ಕೆ ಮುಂದಾಗಬಹುದು.
       

 

ಹಾಗಾಗಿ ಮಕ್ಕಳ ನೈತಿಕ ತಳಹದಿ ನಿರ್ಮಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಅವರ ಬಾಲ್ಯವನ್ನು ಶ್ರೀಮಂತಗೊಳಿಸುವ ಏಕೈಕ ಮಾರ್ಗವೆಂದರೆ ಅದು ನೈತಿಕ ಶಿಕ್ಷಣದ ಸಾರ್ವತ್ರೀಕರಣ. ಬಾಲ್ಯದಲ್ಲಿ ಎಲ್ಲ ಮಕ್ಕಳಿಗೂ ಸಮರ್ಥ ಶಿಕ್ಷಣವನ್ನು ನೀಡುತ್ತಾ, ಆ ಶಿಕ್ಷಣದ ಮೂಲಕ ಸತ್ಪ್ರಜೆಗಳನ್ನು ಸೃಷ್ಟಿಸುತ್ತಾ ಸಾಗಿದರೆ ಭವಿಷ್ಯದ ಸಾಂಸ್ಕೃತಿಕ ದುರಂತವನ್ನು ತಪ್ಪಿಸಬಹುದು.
       

 

ಇದನ್ನು ನಮ್ಮ ಪರಂಪರೆ ಬಹು ಸಮರ್ಥ ಸಂಕೇತದ ಮೂಲಕ ನಮಗೆ ತಿಳಿಸಿಕೊಡುತ್ತದೆ.
ಅದನ್ನೇ ಅಲ್ಲವೇ ಮಹಾಪ್ರಳಯದ ಅನಂತರ ಮೈದೋರುವ ಬಾಲಮುಕುಂದ ಮೌನದ ಮುಗಳ್ನಗೆಯ ಮೂಲಕ  ನಮಗೆ ಹೇಳಿಕೊಡುವುದು.
            

 

ಅರಳಿ ಎಲೆಯ ಮೇಲೆ ಮರಳಿ ತೇಲುತ್ತ ಬಾಯಲ್ಲಿ ಕಾಲ ಹೆಬ್ಬರಳಿಟ್ಟು ಮಲಗಿದ ಮುಕುಂದ, ನಮಗೆ ಸೂಚಿಸುವುದು ಕೇವಲ ಹುಟ್ಟು ಸಾವಿನ ಚಕ್ರಗತಿಯನ್ನು ಮಾತ್ರವಲ್ಲ, ಪರಂಪರೆಯ ಮುಂದುವರಿಕೆ  ಮಗುವಿನಿಂದ ಎಂದು ಕೂಡ. ದೇವರು ಮಗುವಾಗಿಯೇ ಅರಳಿ ಎಲೆಯ ಮೇಲೆ ತೇಲಬೇಕಿರಲಿಲ್ಲ. ಚತುರ್ಭುಜನಾಗಿಯೇ ಮೈದೋರಬಹುದಿತ್ತು. ಆದರೆ ಆತನಿಗೆ ನಮಗೆ ಹೇಳಬೇಕಿತ್ತು – ‘Child is the father of man’ ಎಂದು.

Author Details


Srimukha

Leave a Reply

Your email address will not be published. Required fields are marked *