ಗಜಾನನ ಶರ್ಮರ ಹೊಸ ಕಾದಂಬರಿ ಕುರಿತು ಅವರದೇ ಮಾತು

ಪ್ರಕಟಣೆ

ಸ್ನೇಹಿತರೇ,
” ಪುನರ್ವಸು” ಎಂದರೆ ಒಂದು ನಕ್ಷತ್ರ. ಅದರ ಶಬ್ಧಾರ್ಥ, ಮತ್ತೆ ಮತ್ತೆ ಭಾಗ್ಯವನ್ನು ಕೊಡುವುದು ಎಂಬುದು. “ಪುನರ್ವಸು” ವಿನ ಕುರಿತು ಒಂದು ಉಪನಿಷತ್ ಕತೆಯಿದೆ.

 

ಜೀವಸಂಕುಲದ ಒತ್ತಡಕ್ಕೆ ಸಿಕ್ಕು ಒಮ್ಮೆ ವಸುಂಧರೆ ರಸಹೀನಳಾಗಿ, ಗಂಧಹೀನಳಾಗಿ, ಫಲಪುಷ್ಪರಹಿತಳಾಗಿ ಬಂಜರಾದಳಂತೆ. ವಸುಧೆ ಶುಷ್ಕಳಾದ ಪರಿಣಾಮ ಜೀವಕೋಟಿ ಪರಿತಪಿಸತೊಡಗುತ್ತವೆ. ಆಗ ದೇವತೆಗಳ ತಾಯಿ ಅದಿತಿ , ದೇವಗುರು ಬೃಹಸ್ಪತಿಯ ಸಲಹೆಯ ಮೇರೆಗೆ ಪುನರ್ವಸು ಎಂಬ ನಕ್ಷತ್ರಲೋಕದಲ್ಲಿ ವಿಶಿಷ್ಟ ಯಾಗವೊಂದನ್ನು ಕೈಗೊಳ್ಳುತ್ತಾಳೆ. ತತ್ಪರಿಣಾಮ ಭೂಮಿ ಮತ್ತೆ ರಸವತಿಯಾಗಿ, ಗಂಧವತಿಯಾಗಿ, ಫಲಪುಷ್ಪ ಧರಿಸಿ ಜೀವನ್ಮುಖಿಯಾಗುತ್ತಾಳೆ.

 

ಪ್ರಾಯಶಃ ಪ್ರಗತಿಯ ಹುಚ್ಚು ಲಾಲಸೆಯಲ್ಲಿ ಮುನ್ನುಗ್ಗುತ್ತ, ಪ್ರಕೃತಿಯನ್ನು ಹಾಳುಗೆಡುವುತ್ತಿರುವ ಇಂದಿನ ಈ ಅವ್ಯವಸ್ಥೆ ಸರಿದಾರಿಗೆ ಬರಲು ಅಂತಹುದೇ ಒಂದು ವಿಶಿಷ್ಟ ಪರಿಹಾರ ಬೇಕೇನೋ ಎಂಬುದು ಕಾದಂಬರಿಯ ಅಂತರಂಗ.

ಪ್ರಗತಿ ಮತ್ತು ಪರಿಸರಗಳ ನಡುವಿನ ತಾಕಲಾಟವನ್ನು ಬಿಂಬಿಸುವುದು ಕಾದಂಬರಿಯ ಪ್ರಯತ್ನ. ಇಂದು ಇಡೀ ಸಮಾಜ ದ್ವಂದ್ವದಲ್ಲಿದೆ. ಒಂದೆಡೆ ಇತರ ದೇಶಗಳೊಡನೆ ಸರಿಸಮಾನವಾಗಿ ತಲೆಯೆತ್ತಿ ನಿಂತು ಅಭಿವೃದ್ಧಿ ಪಥದಲ್ಲಿ ಸಾಗಬೇಕಿದೆ. ದೇಶದ ನೆಲ ಜಲ, ಭಾಷೆ, ಸಂಸ್ಕೃತಿಗಳನ್ನು ರಕ್ಷಿಸಿಕೊಳ್ಳಬೇಕಿದೆ. ದೇಶದ ನೂರಿಪ್ಪತ್ತೈದು ಕೋಟಿ ಹೊಟ್ಟೆಗಳಿಗೆ ಅನ್ನವಿಕ್ಕಬೇಕಿದೆ, ಇನ್ನೂರೈವತ್ತು ಕೋಟಿ ಕೈಗಳಿಗೆ ಉದ್ಯೋಗ ನೀಡಬೇಕಿದೆ.

ಇನ್ನೊಂದೆಡೆ ಗ್ಲೋಬಲ್ ವಾರ್ಮಿಂಗ್, ಅರಣ್ಯನಾಶ, ನೀರ್ಗಲ್ಲುಗಳ ಕರಗುವಿಕೆ, ಕುಸಿಯುತ್ತಿರುವ ಪರ್ವತಗಳು, ಏರುತ್ತಿರುವ ಸಮುದ್ರಮಟ್ಟ, ಅನಿಶ್ಚಿತ ಮಳೆ, ಜಲಕ್ಷಾಮ..
ಈ ಸಮಸ್ಯೆಗಳು ಇದ್ದಕ್ಕಿದ್ದಂತೆ ಈಗ ದುತ್ತೆಂದು ಎದ್ದು ನಿಂತವುಗಳೇನಲ್ಲ. ಮನುಷ್ಯ ಎಂದು ಪ್ರಗತಿ ಪಥದಲ್ಲಿ ಹೆಜ್ಜೆಯಿಡಲು ಆರಂಭಿಸಿದನೋ ಅಂದಿನಿಂದಲೂ ಈ ದ್ವಂದ್ವ , ಈ ಅಸಮತೋಲನ ಮುಂದುವರಿದೇ ಇದೆ.

 

ಕಾದಂಬರಿ ಬಿಚ್ಚಿಡಲು ಹೊರಟಿರುವುದೂ ಈ ಸತ್ಯವನ್ನೇ. ಯಾವುದೇ ಯೋಜನೆ ಸಮಸ್ಯೆಗಳಿಂದ ಹೊರತಾಗಿಲ್ಲ. ಅಲ್ಲಿ ಒಳಿತೂ ಇದೆ, ಕೆಡಕೂ ಇದೆ. ಶರಾವತಿ ಯೋಜನೆ ನಮ್ಮ ದೇಶದಲ್ಲಿ ಅನುಷ್ಟಾನಗೊಂಡ ಅತ್ಯುತ್ತಮ ವಿದ್ಯುತ್ ಯೋಜನೆಗಳಲ್ಲಿ ಒಂದು ಎಂಬುದನ್ನು ಒಪ್ಪಿಕೊಳ್ಳುತ್ತಲೇ ಅದು ಶರಾವತಿ ಕಣಿವೆಯಲ್ಲಿ ತಲೆತಲಾಂತರದಿಂದ ಬದುಕಿದ ಅಮಾಯಕರ ಬದುಕನ್ನು ಛಿದ್ರಗೈದಿತು ಎಂಬ ಸತ್ಯವನ್ನೂ ಮನಗಾಣಬೇಕಿದೆ.

“ಪುನರ್ವಸು” ಈ ಸಮಸ್ಯೆಯನ್ನು ಪ್ರಗತಿ ಮತ್ತು ಪರಂಪರೆ ಎರಡೂ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡಿದೆ. ಇದರಲ್ಲಿ ಜೋಗದ ಇತಿಹಾಸ, ಪ್ರಾಜೆಕ್ಟಿನ ಚರಿತ್ರೆ, ಜೋಗದ ಮೊದಲ ಸರ್ವೆ, ಜಲಪಾತದ ಎತ್ತರದ ಮಾಪನ, ಜಲಪಾತದ ಧಾರೆಗಳಿಗೆ ಹೆಸರು ಬಂದದ್ದು, ಹಿಂದೆ ಜೋಗದ ಐಬಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವಟ್ಟಕ್ಕಿ ಜೈನ ಮನೆತನದ ವಿವರ, ಅಂದಿನ ಬೊಂಬಾಯಿ ಸರ್ಕಾರದ ಜೊತೆ ಜಲಪಾತದ ಸೌಂದರ್ಯ ರಕ್ಷಣೆ ಮಾಡುತ್ತೇವೆ ಎಂದು ಮೈಸೂರು ಸಂಸ್ಥಾನ ಒಪ್ಪಂದ ಮಾಡಿಕೊಂಡದ್ದು, ಈಗ ಲಿಂಗನಮಕ್ಕಿ ನೀರಿನಾಳದಲ್ಲಿ ಮುಳುಗಿದ ಹಿರೇಭಾಸ್ಕರ ಡ್ಯಾಮಿನ ನಿರ್ಮಾಣದ ಸಂಗತಿ, ಕೃಷ್ಣರಾವ್, ಕಡಾಂಬಿಯಂತಹ ಇಂಜಿನಿಯರುಗಳ ನಿಸ್ವಾರ್ಥ ಸೇವೆ, ರೆಡ್ಡಿಯಂತಹ ಇಂಜಿನಿಯರುಗಳ ಭ್ರಷ್ಟತೆ, ಇತಿಹಾಸದ ಸಂಶೋಧಕಿ ವಸುಧಾ ಸಂಗ್ರಹಿಸಿದ ಭಾರಂಗಿ ಸೀಮೆಯ ಗ್ರಾಮೀಣ ಬದುಕು, ಶರಾವತಿ ನದಿಯಲ್ಲಿ‌ ದೋಣಿ ನಡೆಸುತ್ತಿದ್ದ ದೋಣಿ ರಾಮನಂತಹ ಮುಗ್ಧ ಪ್ರಾಜೆಕ್ಟಿನ ನಿರ್ದಯ ಕಠೋರತೆಗೆ ಬಲಿಯಾದುದು, ಪ್ರಾಜೆಕ್ಟಿಗಾಗಿ ಪ್ರಾಣಾರ್ಪಣೆ ಮಾಡಿದ ತರುಣ ಇಂಜಿನಿಯರ್ ಮುಜೀಬನ ವಿವರ, ಎಲ್ಲಕ್ಕಿಂತ ಮುಖ್ಯವಾಗಿ ೧೯೪೦ರ ದಶಕದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ, ಇಡೀ ದೇಶ ಎರಡನೇ ಮಹಾಯುದ್ದದ ಬಿಸಿಯಲ್ಲಿ ಬಸವಳಿದದ್ದು, ಆ ಕಾಲದಲ್ಲಿ ಸಂಭವಿಸಿದ ಕ್ಷಾಮ, ಅನ್ನ ವಸ್ತ್ರಗಳ ಮೇಲೆ ಸರ್ಕಾರದ ನಿಯಂತ್ರಣ, ಅಂದಿನ ಕಂದಾಯ ಇಲಾಖೆಯ ಅಧಿಕಾರಿಗಳ ಭ್ರಷ್ಟತೆ ಜನರನ್ನು ಕಾಡಿದ್ದು, ಶರಾವತಿ ಕಣಿವೆಯಂತಹ ಕಠಿಣ ಪ್ರದೇಶದಲ್ಲಿ ಬೃಹತ್ ವಿದ್ಯುತ್ ಸ್ಥಾವರವನ್ನು ಕಟ್ಟಿ ನಿಲ್ಲಿಸುವಲ್ಲಿ ಇಂಜಿನಿಯರುಗಳು ಮತ್ತು ಕಾರ್ಮಿಕರು ತಮ್ಮ ಜೀವ- ಜೀವನವನ್ನು ಒತ್ತೆಯಿಟ್ಟು ಅವಿರತವಾಗಿ ದುಡಿದದ್ದು, ಹಲವರು ಪ್ರಾಣಾರ್ಪಣೆ ಮಾಡಿದ್ದು…… ಎಲ್ಲವನ್ನೂ ಕಾದಂಬರಿ ಹೇಳುತ್ತದೆ. ಯೋಜನೆಯೊಂದರ ಹಿಂದೆ ಎಷ್ಟೆಲ್ಲ ತ್ಯಾಗಗಳಿರುತ್ತವೆ ಎಂಬುದನ್ನು ಎತ್ತಿ ತೋರಿಸುವುದೂ ಈ ಕಾದಂಬರಿಯ ಉದ್ದೇಶಗಳಲ್ಲೊಂದು.

 

ಇಡೀ ಕಾದಂಬರಿಯ ಕೇಂದ್ರ ಪಾತ್ರ, ಭಾರಂಗಿ ದತ್ತಪ್ಪ ಹೆಗಡೆ ಮುಳುಗಡೆಯ ವಿರುದ್ಧ ಹೋರಾಡುತ್ತ ಬದಲಾದ ಸನ್ನಿವೇಶಗಳಿಗೆ, ಮೌಲ್ಯಗಳ ಕುಸಿತಕ್ಕೆ ನೊಂದು, ಶರಾವತಿಯ ಮೇಲೆ ನಡೆದ ಅತ್ಯಾಚಾರಕ್ಕೆ ನಲುಗಿ, ಕಾಲದೇಶಗಳಿಂದ ಹೊರತಾಗಿ ಒಂಟಿಯಾಗಿ ಸೋಲುತ್ತ ಹೋಗಿ ನಿರ್ಲಿಪ್ತಿಯತ್ತ ಜಾರಿದುದರ ಒಳನೋಟ ಈ ಕಾದಂಬರಿಯ ಅಂತಃಸ್ರೋತ.

ಈ ಕಾದಂಬರಿಯಲ್ಲಿ ಕಲ್ಪಿತ ಪಾತ್ರಗಳ ಜೊತೆಗೆ ಸರ್ ಎಂ ವಿಶ್ವೇಶ್ವರಯ್ಯ, ಎಸ್ ಜಿ ಫೋರ್ಬ್ಸ್, ಎಸ್ ಕಡಾಂಬಿ, ಮೊಹಮದ್ ಹಯಾತ್, ಕೃಷ್ಣರಾವ್, ಅಶ್ವತ್ಥ ನಾರಾಯಣ ಶೆಟ್ಟಿ, ರಂಗನಾಥ್, ಸರ್ ಮಿರ್ಜಾ ಮುಂತಾದ ನೈಜ ವ್ಯಕ್ತಿಗಳೂ ಪಾತ್ರವಾಗಿ ಬರುತ್ತಾರೆ.

 

ಇದರಲ್ಲಿ ಜೋಗದ ಚರಿತ್ರೆಯ ಜೊತೆ ಜೊತೆಗೇ ಶರಾವತಿ ಎಡದಂಡೆಯ ಗ್ರಾಮೀಣ ಬದುಕು ಹೇಗೆ ಈ ಯೋಜನೆಯಿಂದಾಗಿ ಶಿಥಲಗೊಂಡಿತು ಎಂಬುದನ್ನು ಚಿತ್ರಿಸುವ ಗಂಭೀರ ಪ್ರಯತ್ನ ಮಾಡಲಾಗಿದೆ.

 

ಇದು, ೫೫೦ ಪೇಜುಗಳ ಬೃಹತ್ ಕಾದಂಬರಿ. ಈ ಕ್ಷೇತ್ರದಲ್ಲಿ ನನ್ನ ಮೊದಲ ಪ್ರಯತ್ನ. ದಯವಿಟ್ಟು ಕಾರ್ಯಕ್ರಮಕ್ಕೆ ಬಂದು ಬೆನ್ನುತಟ್ಟಿ ಪ್ರೋತ್ಸಾಹಿಸಲು ಸವಿನಯ ಪ್ರಾರ್ಥನೆ.

Author Details


Srimukha

Leave a Reply

Your email address will not be published. Required fields are marked *