ಶ್ರೀಕ್ಷೇತ್ರ ಗೋಕರ್ಣದ ಸರ್ವಾಂಗೀಣ ಅಭಿವೃದ್ಧಿ ಪರ್ವದಲ್ಲಿ ಹೊಸ ಶಕೆಯೊಂದು ಆರಂಭವಾಗುತ್ತಿದ್ದು, ನಾಡಿನ ಖ್ಯಾತ ಉದಯೋನ್ಮುಖ ಕಲಾವಿದರು ಶ್ರೀ ಮಹಾಬಲೇಶ್ವರನಿಗೆ ನಿರಂತರ ಕಲಾಸೇವೆ ಸಮರ್ಪಿಸಲು ಅನುವಾಗುವಂತೆ ದೇವಾಲಯದ ಆವರಣದಲ್ಲಿ “ಶಿವಪದ” ವೇದಿಕೆ ಸಿದ್ಧವಾಗಿದೆ. ಜೂ.8ರಂದು ಈ ಶಿವಪದ ವೇದಿಕೆ ಲೋಕಾರ್ಪಣೆಯಾಗುತ್ತಿದೆ. ಜಗತ್ತಿನ ಏಕೈಕ ಆತ್ಮಲಿಂಗವನ್ನು ಸ್ವತಃ ಸ್ಪರ್ಶಿಸಿ ಪೂಜಿಸಲು ಭಕ್ತರಿಗೆ ಅವಕಾಶ ಇರುವಂತೆ, ಶ್ರೀ ಸನ್ನಿಧಿಯಲ್ಲಿ ಕಲಾವಿದರು ಅನುದಿನವೂ, ಅನುಕ್ಷಣವೂ ನಾದ- ನಾಟ್ಯದ ಮೂಲಕ ಶ್ರೀಮಹಾಬಲೇಶ್ವರನನ್ನು ಆರಾಧಿಸಲು ಇದು ವೇದಿಕೆಯಾಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಟ್ಯಕ್ಕೊಲಿಯುವ ಓಂಕಾರೇಶ್ವರ
ಗೋಕರ್ಣ ಮಹಾಬಲೇಶ್ವರನು ಸೇವಾ ಸಂತುಷ್ಯ, ಶ್ರದ್ಧಾಸಂತುಷ್ಯ, ಕೋಟಿ ಹೊನ್ನು ಕಂಡು ಹರಸುವ ಹರನಲ್ಲ; ಬದಲಾಗಿ ಒಂದು ಗಾನಕ್ಕೆ, ಒಂದು ನಾಟ್ಯಕ್ಕೆ ಸುಪ್ರೀತನಾಗಿ ಒಲಿಯುವ ಓಂಕಾರೇಶ್ವರ ಎಂಬ ಪ್ರತೀತಿ. ಈ ಕಾರಣದಿಂದಲೇ ನಾಡಿನ ಕಲಾವಿದರಿಗೆ ನಿತ್ಯ ನಿರಂತರ ಕಲೋಪಾಸನೆಗೆ ಅವಕಾಶ ಕಲ್ಪಿಸುವ ಸಂಕಲ್ಪದಿಂದ ವೇದಿಕೆ ಸಜ್ಜಾಗಿದೆ.
ಜೂನ್ 8ರಂದು ಸಂಜೆ ಗಂಟೆ 5ಕ್ಕೆ ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಈ ಶಿವಪದವೇದಿಕೆಯನ್ನು ಲೋಕಾರ್ಪಣೆ ಮಾಡುವರು. ಇದಕ್ಕೂ ಮುನ್ನ ವೇದಘೋಷದೊಂದಿಗೆ ಭವ್ಯ ಮೆರವಣಿಗೆಯಲ್ಲಿ ನಟರಾಜನನ್ನು ವೇದಿಕೆಗೆ ಕರೆ ತರಲಾಗುತ್ತದೆ. ಶಿವಪದದ ಮೊದಲ ಕಲಾಸೇವೆಯಾಗಿ ಧಾರವಾಡದ ಪಂಡಿತ ವೆಂಕಟೇಶ ಕುಮಾರ್ ಸಂಗೀತ ರಸಧಾರೆ ಹರಿಸುವರು. ತಬಲಾದಲ್ಲಿ ಕೇಶವ ಜೋಶಿ ಸಹಕರಿಸುವರು.
ಅಭಿವೃದ್ಧಿ ಪಥ ; ಶ್ರೀಕ್ಷೇತ್ರ ಗೋಕರ್ಣ
ಶ್ರೀರಾಮಚಂದ್ರಾಪುರಮಠದ ಆಡಳಿತಕ್ಕೆ ಒಳಪಟ್ಟ ಬಳಿಕ ಕಳೆದೊಂದು ದಶಕದಲ್ಲಿ ಅಪಾರ ಅಭಿವೃದ್ಧಿ ಕಾರ‍್ಯಗಳು ನಡೆದಿದ್ದು, ಶ್ರೀಕ್ಷೇತ್ರದಲ್ಲಿ ಪುರಾಣಕಾಲದ ಗತವೈಭವ ಮರುಕಳಿಸಿದೆ. ಜಗದೀಶ್ವರನ ಸುಪ್ರಸನ್ನತೆ, ಭಕ್ತರ ಮನಃಸಂತೋಷ ಹಾಗೂ ಆಶ್ರಿತರಿಗೆ ಹಿತ ಎಂಬ ಮೂರು ಧ್ಯೇಯಗಳನ್ನು ಕೇಂದ್ರೀಕರಿಸಿ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆಯುತ್ತಿವೆ.
ಧಾರ್ಮಿಕ, ಸಾಮಾಜಿಕ, ದೇಗುಲ ಪರಿಸರ ಹೀಗೆ ವಿಭಿನ್ನ ಆಯಾಮಗಳಲ್ಲಿ ಗಣನೀಯ ಸುಧಾರಣೆಗಳು ಆಗಿವೆ. ಧಾರ್ಮಿಕವಾಗಿ ಗೋಕರ್ಣ ಗೌರವ ಎಂಬ ವಿಶೇಷ ಕಾರ್ಯಕ್ರಮದಡಿ ದೇಶದ ಮೂಲೆ ಮೂಲೆಗಳಿಂದ ಯತಿಗಳನ್ನು ಆಮಂತ್ರಿಸಿ ದಿನಕ್ಕೊಬ್ಬರು ಯತಿಗಳಿಂದ ವಿಶೇಷ ಪೂಜೆಗಳು ನಿರಂತರ 600 ದಿನ ನಡೆದಿದ್ದು ವಿಶೇಷ. ಸಮಸ್ತ ಭಕ್ತಕೋಟಿಯ ಈ ಅಪೂರ್ವ ಶ್ರದ್ಧಾ-ಭಕ್ತಿಯ ಕೇಂದ್ರದಲ್ಲಿ ಕೈಯಲ್ಲಿ ಚಿಕ್ಕಾಸು ಇಲ್ಲದವರು ಕೂಡಾ ಧರ್ಮದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಾ ಗರ್ಭಗುಡಿಯಲ್ಲಿ ಆತ್ಮಲಿಂಗವನ್ನು ಸ್ಪರ್ಶಿಸಿ ಧನ್ಯತಾ ಭಾವದಿಂದ ಮನಃಶಾಂತಿ ಪಡೆಯುವಂತಾಗಬೇಕು ಎಂಬ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಆಶಯ ಸಾಕಾರಗೊಂಡಿದೆ.
ಸೈನಿಕರನ್ನು, ನಿವೃತ್ತ ಯೋಧರಿಗೆ ವಿಶೇಷ ಗೌರವ ಸಲ್ಲಿಸುವ ಮೇಲ್ಪಂಕ್ತಿಯನ್ನು ಶ್ರೀಕ್ಷೇತ್ರ ಹಾಕಿಕೊಟ್ಟಿದ್ದು, ದೇಶಕಾಯುವ ಕಾಯಕಯೋಗಿಗಳಿಗೆ ನೇರವಾಗಿ ದರ್ಶನ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ದೇಶದ ವಿವಿಧೆಡೆಗಳಿಂದ ಪ್ರತಿದಿನ ಆಗಮಿಸುವ ಗಣ್ಯಮಾನ್ಯರು, ನ್ಯಾಯಮೂರ್ತಿಗಳು, ಭಕ್ತರಿಗೆ ಕಲ್ಪಿಸಿರುವ ಸೌಲಭ್ಯದ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಸಂದರ್ಶಕರ ಅಭಿಪ್ರಾಯದಲ್ಲಿ ದಾಖಲಿಸಿರುವುದು ಇಲ್ಲಿನ ಅಚ್ಚುಗಟ್ಟುತನಕ್ಕೆ ದೊರಕಿರುವ ಐಎಸ್‌ಓ ಮಾನ್ಯತೆಗಿಂತಲೂ ದೊಡ್ಡ ಪ್ರಮಾಣಪತ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.
ಆದಿಗೋಕರ್ಣ ಸಂರಕ್ಷಣಾ ಪುನರ್ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ನಂದಿಮಂಟಪದಲ್ಲಿ ವಿಸ್ತಾರ ರಜತಪ್ರವೇಶದ್ವಾರದ ಮೊದಲ ಹಂತದ ಕಾಮಗಾರಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಅಂತೆಯೇ ಗರ್ಭಗುಡಿಗೆ ಕೂಡಾ ಅಷ್ಟೇ ವೆಚ್ಚದಲ್ಲಿ ರಜತಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ.
ಅತ್ಯಾಧುನಿಕ ಬಾಯ್ಲರ್ ವ್ಯವಸ್ಥೆ ಕಲ್ಪಿಸಿ, ಶುಚಿ ರುಚಿಯಾದ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, 40 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದ್ದಾರೆ. ಮಧ್ಯಾಹ್ನ ಹಾಗೂ ರಾತ್ರಿ ಹೀಗೆ ಎರಡು ಹೊತ್ತು ಉಚಿತ ಪ್ರಸಾದ ಭೋಜನ ಇರುವ ಜಿಲ್ಲೆಯ ಪ್ರಥಮ ದೇಗುಲ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸಾಮಾಜಿಕವಾಗಿಯೂ ಹತ್ತುಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 75 ಲಕ್ಷಕ್ಕೂ ಅಧಿಕ ಬಡವಿದ್ಯಾರ್ಥಿಗಳಿಗೆ ವಿದ್ಯಾಪ್ರೋತ್ಸಹಧನ ನೀಡಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮಗಳ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿ ಜೀವಜಲ ಉಚಿತ ವಿತರಣಾ ಸೇವೆ ಒದಗಿಸಲಾಗುತ್ತಿದೆ. ಸ್ಥಳೀಯ ಅನಾರೋಗ್ಯಪೀಡಿತರಿಗೆ ವೈದ್ಯಕೀಯ ನೆರವು, ಆರ್ಥಿಕವಾಗಿ ಹಿಂದುಳಿದ ವಧೂವರರಿಗೆ ಉಚಿತ ವಿವಾಹ ವ್ಯವಸ್ಥೆ ಶ್ರೀಕ್ಷೇತ್ರದ ಮಾನವೀಯ ಕಾರ್ಯಗಳಿಗೆ ಕೆಲ ನಿದರ್ಶನವಾಗಿದೆ ಎಂದು
ಗೋಕರ್ಣ ದೇವಾಲಯದ ಪದನಿಮಿತ್ತ ಆಡಳಿತಾಧಿಕಾರಿ ಜಿ.ಕೆ.ಹೆಗಡೆ, ಶಿವಪದ ವೇದಿಕೆ ಪದಾಧಿಕಾರಿಗಳಾದ ಡಾ.ಶೀಲಾ ಹೊಸಮನೆ, ಡಾ.ಎಂ.ಜಿ.ಉಪಾಧ್ಯಾಯ, ಮಹೇಶ್ ಶೆಟ್ಟಿ, ರಮೇಶ್ ಪಂಡಿತ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.