ಹವ್ಯಕ ಭಾಷೆ ಅಧ್ಯಯನ, ಸಂಶೋಧನೆಗೂ ಅವಕಾಶ: ರಾಘವೇಶ್ವರ ಶ್ರೀ – ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸ್ವಭಾಷಾ ಪೀಠ ಸ್ಥಾಪನೆ

ವಿದ್ಯಾಲಯ

ಗೋಕರ್ಣ: ಸ್ವಭಾಷಾ ಚಾತುರ್ಮಾಸ್ಯದ ಸವಿನೆನಪಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸ್ವಭಾಷಾ ಪೀಠ ಮತ್ತು ಹವ್ಯಕ ಅಧ್ಯಯನ ಪೀಠವನ್ನು ಆರಂಭಿಸಲಾಗುವುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಪ್ರಕಟಿಸಿದರು.

ಸ್ವಭಾಷಾ ಚಾತುರ್ಮಾಸ್ಯದ 53ನೇ ದಿನವಾದ ಭಾನುವಾರ ಮಂಗಳೂರು ಮಂಡಲದ ಮಂಗಳೂರು ಮಧ್ಯ, ಉತ್ತರ, ದಕ್ಷಿಣ, ಉಡುಪಿ, ಕುಂದಾಪುರ ಮತ್ತು ಮುಡಿಪು ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.

ಕನ್ನಡದ ಕವಿರಾಜ ಮಾರ್ಗದ ರೀತಿಯಲ್ಲಿ ಹವ್ಯಕ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗುರುರಾಜಮಾರ್ಗ ಅನುಷ್ಠಾನಕ್ಕೆ ಬರಲಿದೆ. ಚಾತುರ್ಮಾಸ್ಯದ ಬಳಿಕವೂ ಸ್ವಭಾಷಾ ಅಭಿಯಾನ ಮುಂದುವರಿಯಲಿದೆ. ತಮ್ಮತನವನ್ನು ಬಡಿದೆಬ್ಬಿಸುವ ಕಾರ್ಯ ನಿರಂತರ` ಎಂದು ಸ್ಪಷ್ಟಪಡಿಸಿದರು.

ಆರಂಭದಲ್ಲಿ ಹವ್ಯಕ, ಕನ್ನಡದ ಜತೆಗೆ ಮುಂದಿನ ದಿನಗಳಲ್ಲಿ ಎಲ್ಲ ಭಾರತೀಯ ಭಾಷೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೀಠ ಕಾರ್ಯ ನಿರ್ವಹಿಸಲಿದೆ ಎಂದು ವಿವರಿಸಿದರು. ಇದಕ್ಕೆ ಪೂರಕವಾಗಿ ಪ್ರತಿ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿರುವ ಅಪರೂಪದ ಶಬ್ದಗಳನ್ನು ದಾಖಲೀಕರಿಸಿ, ಉಳಿಸುವ ಕಾರ್ಯ ಆಗಬೇಕು ಎಂದರು.

ವಿನಾಶದ ಅಂಚಿನಲ್ಲಿರುವ ನಮ್ಮ ಭಾಷೆಯನ್ನು ಉಳಿಸುವ ಪ್ರಯತ್ನ ನಡೆಯಬೇಕು. ಹವ್ಯಕರು ತಮ್ಮ ಭಾಷೆಯಲ್ಲೇ ಮಾತನಾಡಿದರೆ ಭಾಷೆ ಉಳಿಯುತ್ತದೆ ಎಂದರು. ಮಠ ಇರುವುದೇ ನಮ್ಮತನದ ಕರ್ತವ್ಯ ಪ್ರಜ್ಞೆಯನ್ನು ನೆನಪಿಸುವ ಸಲುವಾಗಿ. ಚಾತುರ್ಮಾಸ್ಯದಲ್ಲಿ ಕೇವಲ ಸನ್ಯಾಸಿಗಳು ಮಾತ್ರವಲ್ಲದೇ ಗೃಹಸ್ಥರು ಕೂಡಾ ಅಂತರ್ಮುಖಿಯಾಗಿ ತಮ್ಮನ್ನು ಕಂಡುಕೊಳ್ಳಬೇಕು. ಇದರ ಚಿಕ್ಕ ಅಂಗ ಭಾಷೆ. ಅದರದರ ಸ್ಥಾನದಲ್ಲಿ ಎಲ್ಲವೂ ಇರಬೇಕು. ಭಾಷೆ ಕೂಡಾ ತನ್ನ ಸ್ಥಾನಕ್ಕೆ ಮರಳಬೇಕು. ಅದು ಹತ್ತು ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಬಣ್ಣಿಸಿದರು.

ಸ್ವಭಾಷೆಯ ಬಗ್ಗೆ ಪ್ರೀತಿ ಮೂಡಿಸುವ ಉದ್ದೇಶದ ಸಣ್ಣ ಪ್ರಯತ್ನ ಇದು. ಒಂದು ಹಂತದಲ್ಲಿ ಮಠದ ವಾತಾವರಣದಲ್ಲಿ ಶುದ್ಧ ಕನ್ನಡ ಬಳಕೆಯ ಪ್ರಯತ್ನ ಕಂಡುಬರುತ್ತಿದೆ ಎಂದರು. ಚಾತುರ್ಮಾಸ್ಯದಲ್ಲಿ ಸವಿಗನ್ನಡ ಮತ್ತು ಹವಿಗನ್ನಡ ಗೋಷ್ಠಿಗಳು ಅರ್ಥಪೂರ್ಣವಾಗಿ ನಡೆದಿವೆ. ಹವಿಗನ್ನಡ ಮಾಧುರ್ಯ ಮತ್ತು ಮಾಂಗಲ್ಯವೂ ಹೌದು. ಇದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದು ಆಶಿಸಿದರು.

ನಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ಪದಗಳನ್ನು ಸಂಕರ ಮಾಡಿಕೊಳ್ಳಲು ಯಾವುದೇ ಸಕಾರಣಗಳಿಲ್ಲ. ವಂಶ ಪಾರಂಪರ್ಯವಾಗಿ ಬಂದ ಅಪೂರ್ವ ಸಂಪತ್ತನ್ನು ಬಿಡಬಾರದು. ಬಿಟ್ಟ ಪದಗಳನ್ನು ಮತ್ತೆ ಚಾಲ್ತಿಗೆ ತರಬೇಕು ಎಂದು ಸೂಚಿಸಿದರು.

ಹವಿಗನ್ನಡ ಗೋಷ್ಠಿ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿಯವರ ಸ್ವಭಾಷಾ ಚಾತುರ್ಮಾಸ್ಯ ಅಂಗವಾಗಿ ಹವಿಗನ್ನಡ ಗೋಷ್ಠಿ ನಡೆಯಿತು.

ಹಿರಿಯ ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟ ಅವರು ಅಧ್ಯಕ್ಷೀಯ ಭಾಷಣದಲ್ಲಿ, ಹವ್ಯಕ ಭಾಷೆಯಲ್ಲೂ ವೈವಿಧ್ಯಮಯ ರೂಪಗಳಿದ್ದು, ಹವ್ಯಕರು ನೆಲೆಸಿರುವ ವಿವಿಧ ಕಡೆಗಳಲ್ಲಿ ಆಯಾ ಪ್ರಾಂತ್ಯಕ್ಕೆ ಸೀಮಿತವಾದ ಭಿನ್ನರೂಪಗಳು ದಕ್ಷಿಣ ಕನ್ನಡ, ಶಿರಸಿ- ಸಿದ್ದಾಪುರ, ಸಾಗರ- ಶಿವಮೊಗ್ಗಗಳಲ್ಲಿ ಬಳಕೆಯಲ್ಲಿವೆ. ಆಯಾ ಪ್ರಾಂತ್ಯಗಳಲ್ಲೂ ಸೀಮೆಗೆ ಸೀಮಿತವಾಗಿ ಭಿನ್ನತೆಗಳಿವೆ. ಇವೆಲ್ಲವನ್ನು ಒಟ್ಟುಗೂಡಿಸಿ ಸಮಗ್ರವಾಗಿ ದಾಖಲಿಸುವ ಕಾರ್ಯ ಆಗಬೇಕು ಎಂದು ಪ್ರತಿಪಾದಿಸಿದರು.

ಹವ್ಯಕರ ವಲಸೆಯಿಂದಾಗಿ ಹವಿಗನ್ನಡದ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದ ಬಗ್ಗೆ ಮಾತನಾಡಿದ ಗಾಯತ್ರಿ ರಾಘವೇಂದ್ರ ಶಿರಸಿ ಅವರು ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸ್ವಭಾಷಾ ಅಧ್ಯಯನ ಪೀಠ ಆರಂಭಿಸುವಂತೆ ಕೋರಿದರು.
ಅಳಿಯುತ್ತಿರುವ ಹವಿಗನ್ನಡ ಪದಗಳು ಎಂಬ ವಿಚಾರದಲ್ಲಿ ಲಕ್ಷ್ಮೀ ತಳಂಜೇರಿ ಮಾತನಾಡಿದರು.

ಬಂದಗದ್ದೆ ರಾಧಾಕೃಷ್ಣ ಅವರು ಹವಿಗನ್ನಡ ಉಳಿಸುವುದೆಂತು ಎಂಬ ವಿಚಾರದಲ್ಲಿ ಪ್ರಬಂಧ ಮಂಡಿಸಿದರು. ಹೊಸ ಜೀವನಶೈಲಿಗೆ ಅನುಗುಣವಾಗಿ ನಮ್ಮ ಭಾಷೆಯನ್ನು ಬಳಸಿ, ಬೆಳೆಸಬೇಕು ಎಂದು ಸಲಹೆ ಮಾಡಿದರು. ಮಕ್ಕಳೊಂದಿಗೆ ನಮ್ಮ ಭಾಷೆಯನ್ನು ಮಾತನಾಡದಿದ್ದರೆ ಭಾಷೆ ನಶಿಸುವ ಅಪಾಯವಿದೆ. ಬೆಳೆದ ಭಾಷೆಯನ್ನು ಉಳಿಸಿಕೊಳ್ಳುವುದು ನಮ್ಮ ಮುಂದಿರುವ ಸವಾಲು ಎಂದರು.

ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಜಿ.ಎಲ್.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಂಗಳೂರು ಮಂಡಲದ ನಿಕಟಪೂರ್ವ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ನೂತನ ಅಧ್ಯಕ್ಷ ರಮೇಶ್ ಭಟ್ ಸರವು, ವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನ ಕುಮಾರ್, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ.ಹಗಡೆ, ಚಾತುರ್ಮಾಸ್ಯ ತಂಡದ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ರಾಘವೇಂದ್ರ, ವಿಷ್ಣು ಬನಾರಿ, ಎಂ.ಎನ್.ಮಹೇಶ ಭಟ್ಟ ಮತ್ತಿತರರು ಹಾಜರಿದ್ದರು.

 

Leave a Reply

Your email address will not be published. Required fields are marked *