ಶ್ರೀಭಾರತೀ ವಿದ್ಯಾಲಯದಲ್ಲಿ ಮಾತಾ ಪಿತೃಪೂಜೆ

ವಿದ್ಯಾಲಯ

ಹಂಪಿನಗರ: ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಶ್ರೀಭಾರತೀ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೂರಾರು ವಿದ್ಯಾರ್ಥಿಗಳು ತಮ್ಮ ಜನ್ಮದಾತರಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.

 

ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಉದ್ದೇಶದಿಂದ ಪರಮಪೂಜ್ಯ ಶ್ರೀಮಜ್ಜಗದ್ಗುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಜಗತ್ಪಾಲಕರಾದ ಪಾರ್ವತಿ ಪರಮೇಶ್ವರರಿಗೆ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳು ತಾವು ಪಾಲಕರನ್ನು ನೋಡಿಕೊಳ್ಳುವುದಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಸಂಸ್ಕಾರದ ಬೆಳಕಿನಲ್ಲಿ ಸಾಧನೆಯ ಹೆಜ್ಜೆಯನ್ನಿಡುವಂತೆ ಸಹಕರಿಸುವ ತಾಯಿ ತಂದೆಯರನ್ನು ಬದುಕಿಡೀ ಸಲಹುವ ಶಪಥವನ್ನು ಮಕ್ಕಳು ಕೈಗೊಂಡರು.

 

ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವ ಇಂತಹ ಅತ್ಯಪರೂಪದ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಪಾಲಕರು ಬಹಳ ಸಂತೋಷ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಲೇ ಇರುವಂತೆ ಸಲಹೆಯಿತ್ತರು. ಶಿಕ್ಷಣವೆಂದರೆ ಕೇವಲ ಪಠ್ಯಕ್ರಮವಲ್ಲ, ಅದು ಮಗುವಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಬೇಕು. ಪ್ರಸ್ತುತ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂತಹ ಕಾರ್ಯಕ್ರಮಗಳಿಂದ ಅವುಗಳ ಸಂಖ್ಯೆ ಕಡಿಮೆಯಾಗಲಿ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರನ್ನು ಅಭಿನಂದಿಸಿದರು.

ಶಾಲೆಯ ಅಧ್ಯಕ್ಷರಾದ ಗೋಪಾಲಕೃಷ್ಣ ಹೆಗಡೆ, ಶೈಕ್ಷಣಿಕ ಸಲಹೆಗಾರರಾದ ಡಾ.ಶಾರದಾ ಜಯಗೋವಿಂದ ಇವರು ಮಾತಾಪಿತೃಪೂಜೆಯ ಉದ್ದೇಶವನ್ನು ತಿಳಿಸಿಕೊಟ್ಟರು. ಶಾಲೆಯ ಸಂಸ್ಕೃತ ಶಿಕ್ಷಕರಾದ ಟಿ.ಜಿ.ಭಟ್ಟ ಇವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

 

ಕನ್ನಡದ ದಿನವಾದ ಇಂದು ಕನ್ನಡ ರಾಜ್ಯೋತ್ಸವವೂ ಸಹ ಸಡಗರದಿಂದ ನೆರವೇರಿತು. ಕನ್ನಡ ಧ್ವಜವನ್ನು ಹಾರಿಸಿ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಶಾಲೆಯ ಕನ್ನಡ ಶಿಕ್ಷಕರಾದ ಸತ್ಯನಾರಾಯಣ ಭಟ್ಟ ಇವರು ಮಕ್ಕಳಿಗೆ ಕನ್ನಡದ ಮಹತ್ವವನ್ನು ತಿಳಿಸಿಕೊಟ್ಟರು.

 

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು. ಉಪ ಪ್ರಾಂಶುಪಾಲರು, ಸಹ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Author Details


Srimukha

Leave a Reply

Your email address will not be published. Required fields are marked *