ಅರ್ಥಶಾಸ್ತ್ರ ಭವಿಷ್ಯಕ್ಕೆ ಅರ್ಥ ನೀಡುವಂಥದ್ದು: ರಾಘವೇಶ್ವರ ಶ್ರೀ

ವಿದ್ಯಾಲಯ

ಗೋಕರ್ಣ: ಅರ್ಥಶಾಸ್ತ್ರದ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅರ್ಥ ನೀಡುವಂತಿರಬೇಕು; ಜತೆಗೆ ದೇಶಕ್ಕೆ ಅರ್ಥ ಕೊಡುವ, ದೇಶದ ಸಂಪತ್ತಾಗಿ ರೂಪುಗೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವತಿಯಿಂದ ಸಿಎ, ಸಿಎಸ್ ಫೌಂಡೇಷನ್‍ಗಾಗಿ ವಿದ್ಯಾರ್ಥಿಗಳಿಗೆ ಆರಂಭಿಸಿರುವ ಉಚಿತ ಆನ್‍ಲೈನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಸಿಎ, ಸಿಎಸ್ ತರಬೇತಿ ಬೇಕು ಎಂಬ ಬೇಡಿಕೆ ಬಂದದ್ದು ವಿವಿವಿ ಗುರುಕುಲದ ವಿದ್ಯಾರ್ಥಿಗಳಿಂದ. ಮಕ್ಕಳು ಹಾಗೂ ಗೋವುಗಳು ದೇವರಿಗೆ ಸಮಾನ. ವಿದ್ಯಾರ್ಥಿಗಳ ಒತ್ತಾಸೆಯನ್ನು ಈಡೇರಿಸುವುದು ಕರ್ತವ್ಯ ಎಂಬ ದೃಷ್ಟಿಯಿಂದ ಈ ತರಬೇತಿ ಆಯೋಜಿಸಲಾಗುತ್ತಿದೆ. ವಿದ್ಯೆ ಜತೆಜತೆಗೆ ಒಳ್ಳೆತನವನ್ನೂ ನೀಡುತ್ತಿರುವುದು ವಿವಿವಿ ಹೆಗ್ಗಳಿಕೆ ಎಂದು ಹೇಳಿದರು.
ವಿದ್ಯಾರ್ಥಿಗಳು ಗುರಿ ತಲುಪಲು ಇಡುವ ಒಂದೊಂದು ಹೆಜ್ಜೆಯೂ ಮುಖ್ಯ. ಒಂದೊಂದು ಹೆಜ್ಜೆಯೂ ನಿಮ್ಮನ್ನು ಅಷ್ಟರಮಟ್ಟಿಗೆ ಗುರಿಯ ಸಮೀಪಕ್ಕೆ ಒಯ್ಯುತ್ತದೆ. ಇಂದು ಗುರುಕುಲದ ವಾಣಿಜ್ಯ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇದು ಗುರಿಯತ್ತ ಒಯ್ಯಲಿ ಎಂದು ಆಶಿಸಿದರು. ಜೀವನದಲ್ಲಿ ಎಂಥದ್ದೇ ಪರಿಸ್ಥಿತಿ ಬಂದರೂ ಎದುರಿಸಲು ನಾವು ಸಜ್ಜಾಗಬೇಕು. ವಿಷ್ಣುಗುಪ್ತನ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವಲ್ಲಿ ಈ ತರಬೇತಿ ನೆರವಾಗಲಿ ಎಂದರು.
ವಿಷ್ಣುಗುಪ್ತನ ಹೆಸರಿನ ಸಂಸ್ಥೆಯಲ್ಲಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನಕ್ಕೆ ವಿಶೇಷ ಮಹತ್ವ. ಇದು ವಿದ್ಯಾರ್ಥಿಗಳ ಬದುಕಿಗೆ ಅರ್ಥ ಕೊಡುವಂತಾಗಬೇಕು. ಚಾಣಕ್ಯನನ್ನು ಈ ನೆಲದಲ್ಲಿ ಪ್ರತಿನಿತ್ಯ ಪ್ರತಿಷ್ಠಾಪಿಸೋಣ ಎಂದು ಹೇಳಿದರು.
ಕಳೆದ 22 ವರ್ಷಗಳಿಂದ ಉಡುಪಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಿಎ ತರಬೇತಿ ನೀಡುತ್ತಿರುವ ತ್ರಿಶಾ ಸಮೂಹದ ಅಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ಭಟ್, ತರಬೇತಿಯ ರೂಪುರೇಷೆಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕøತಿ, ಸಂಸ್ಕಾರ ಸೇರಿದಂತೆ ಅಗತ್ಯ ವಾತಾವರಣವನ್ನು ಶ್ರೀರಾಮಚಂದ್ರಾಪುರಮಠದ ವಿವಿವಿ ಕಲ್ಪಿಸಿರುವುದು ಅನುಕರಣೀಯ. ಇಲ್ಲಿ ಸಜ್ಜಾಗುವ ವಿದ್ಯಾರ್ಥಿಗಳು ಸಮಾಜದ, ದೇಶದ ಆಸ್ತಿಯಾಗಿ ಬೆಳೆಯಲಿ ಎಂದು ಆಶಿಸಿದರು.
ವಿವಿವಿ ವಿದ್ಯಾ ಪರಿಷತ್ತಿನ ಅಧ್ಯಕ್ಷ ಎಂ.ಆರ್.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ವಿವಿವಿ ವ್ಯವಸ್ಥಾ ಪರಿಷತ್ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ವಿದ್ಯಾ ಪರಿಷತ್ ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಗುರುಕುಲಗಳ ಪಾರಂಪರ್ಯ ವಿದ್ಯಾ ವಿಭಾಗದ ಪ್ರಾಚಾರ್ಯರಾದ ಸತ್ಯನಾರಾಯಣ ಶರ್ಮಾ, ನೀಲಕಂಠ ಯಾಜಿ, ದತ್ತಾತ್ರೇಯ ಭಟ್, ಸುಭದ್ರಾ ಮತ್ತಿತರರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *