ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೪೧

ಅರಿವು-ಹರಿವು
ಹಿಂದಿನ ಸಂಚಿಕೆಯಿಂದ..
ಪರಮ ಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀ(೮) ಶ್ರೀಗಳವರಿಂದ ಆಯ್ಕೆಯಾದ ರಾಮಭದ್ರ ತನ್ನ ಕೊನೆಯುಸಿರಿನವರೆಗೂ ವಿಮುಖನಾಗದೆ ಗುರುಗಳ ಜೊತೆಗೇ ಇದ್ದ ಸೇವಕಾಗ್ರಣಿ.
ಒಮ್ಮೆ ಪರಮಪೂಜ್ಯ ಶ್ರೀಗಳು ಶ್ರೀಸಂಸ್ಥಾನದ ಎಲ್ಲಾ ರಾಜಲಾಂಛನಗಳೂ, ಬಿರುದು, ಬಾವಲಿಗಳೊಡನೆ ದಕ್ಷಿಣಕನ್ನಡ, ಕೊಡಗು ಸೀಮೆಗಳ ಸಂಚಾರದಲ್ಲಿದ್ದಾಗ ಮಾರ್ಗದಲ್ಲಿ ಶ್ರೀಮಠದ ವಿರೋಧಿಗಳು  ದರೋಡೆಖೋರರ ಜೊತೆ ಸೇರಿ ದಾಳಿ ನಡೆಸಿದರು. ಆಗ ಚತುರಮತಿಯವನಾದ ಆನೆಯ ಮಾವುತ ರಾಮಭದ್ರನ ಸೊಂಡಿಲಿನಲ್ಲಿ ಬಲಿಷ್ಠವಾದ ಸರಪಳಿಯನ್ನು ನೀಡಿ ಅದನ್ನು ಸುತ್ತಲೂ ಬೀಸುತ್ತಾ ಹೋಗಲು ಆಜ್ಞೆ ನೀಡಿದ. ಅಂತೆಯೇ ರಾಮಭದ್ರ ಶತ್ರುವಿನ ಮೇಲೆರಗಿದ. ಆಗ ಪ್ರತ್ಯಾಕ್ರಮಣವನ್ನು ತಾಳಲಾರದೇ ದರೋಡೆಖೋರರು ಓಡಿ ಹೋದ ಘಟನೆ ಸ್ಮರಣೀಯ. ಹಿಂದೆ ಗುರುಗಳು ಆನೆಯ ವಾಂಛೆಯನ್ನು ಪ್ರಸ್ತಾಪಿಸಿದ್ದು ಎಂತಹ ಸಮಂಜಸವೆಂಬುದು ಇಲ್ಲಿ ಸ್ಪಷ್ಟವಾಗುತ್ತದಲ್ಲವೆ..? ಗುರುವಿನ ಸಂಕಲ್ಪಗಳು ಪ್ರಪಂಚದ ಒಳಿತಿನ ಬೇಡಿಕೆಗಳಾಗಿರುತ್ತದೆಂಬುದು ನಮಗೆಲ್ಲ ಇಂತಹ ಘಟನೆಗಳಿಂದ  ಅರ್ಥವಾಗುತ್ತದಲ್ಲವೆ.. ?
 ಹೊಸನಗರದ ರಾಮಚಂದ್ರಾಪುರ ಮಠದ ಈಗಿನ ಶಿಲಾಮಯ ಕಟ್ಟಡವು ಪೂಜ್ಯ ರಾಘವೇಶ್ವರಭಾರತೀ ಶ್ರೀಗಳವರ (೮) ಕಾಲದಲ್ಲಿಯೇ ನಿರ್ಮಿತಿಗೊಂಡಿದೆ. ಇತಿಹಾಸವು ಸಹ ಇವರನ್ನು ಪರಮ ತಪೋನಿಧಿಗಳು, ಮಹಾಶಿಷ್ಯವಾತ್ಸಲ್ಯ ಉಳ್ಳವರು ಎಂದೇ ಗುರುತಿಸಿದೆ.
ಒಮ್ಮೆ ಅಕಾಸ್ಮಾತ್ತಾಗಿ ಮೈಲಿ ರೋಗದಿಂದ ಇವರ ಒಂದು ಕಣ್ಣು ಶಕ್ತಿ ಹೀನವಾಯಿತು. ಇದರಿಂದ ಸಮಾಜದ ಮೇಲಾಗುವ ವೈಪರೀತ್ಯವನ್ನರಿತ  ಪೂಜ್ಯರು ಪುನಃ ಮಠಕ್ಕೆ ಬರುವುದಾದರೆ ದೃಷ್ಟಿ ಶಕ್ತಿಯನ್ನು ಪಡೆದುಕೊಂಡೇ ಎಂದು ನಿಶ್ಚಯಿಸಿ ಕೊಡಚಾದ್ರಿ ಪರ್ವತದ ಚಿತ್ರಮೂಲದಲ್ಲಿ ಆರು ತಿಂಗಳ ಕಾಲ ಗುಪ್ತವಾಗಿ ಅತ್ಯುಗ್ರ ತಪಸ್ಸನ್ನಾಚರಿಸಿ ಕಳೆದು ಹೋಗಿದ್ದ ಕಣ್ಣನ್ನು ಪಡೆದುಕೊಂಡ ಮಹಾಮಹಿಮರು. ಆದ್ದರಿಂದಲೇ ‘ದುರವಾಪತಪಃ ಪ್ರಾಪ್ತ ಚಕ್ಷುಷೇ ಪ್ರಥಿತಾತ್ಮನೇ’ ಎಂದು ಪ್ರಶಂಸಿತರಾದುದು.
ಇವರ ಕಾಲದಲ್ಲಿ ಮಂಗಳೂರು ಪ್ರಾಂತದಲ್ಲಿ  ಮಠದ ಒಂದು ಶಾಖೆಯನ್ನು ಪ್ರಾರಂಭಿಸಲು ಆಶಿಸಿದ್ದರು. ಆಗೊಮ್ಮೆ ಮಂಗಳೂರು ಪ್ರಾಂತದಲ್ಲಿ ಸಂಚಾರ ಮಾಡುತ್ತಿದ್ದಾಗ ಐದುನೂರು ಹವ್ಯಕ ಕುಟುಂಬದವರು ಶ್ರೀಮಠದಿಂದ ಬಹಿಷ್ಕೃತನಾಗಿದ್ದ ಒಬ್ಬ ವ್ಯಕ್ತಿಯ ನೇತೃತ್ವದಲ್ಲಿ ಶ್ರೀಮಠದ ಶಿಷ್ಯತ್ವವನ್ನು ತ್ಯಜಿಸಿ ಅನ್ಯ ಮಠಕ್ಕೆ ಸೇರಿಕೊಂಡರು. ಆದರೆ ಮೈಸೂರಿನ ಶ್ರೀಮನ್ಮಹಾರಾಜರವರ ವಿದ್ವತ್ತ್ ಸಭೆಯಲ್ಲಿ ಶಂಕರಾಚಾರ್ಯರ ಜ್ಯೇಷ್ಠ ಶಿಷ್ಯ ಪರಂಪರೆಯಿಂದ ಬಂದ  ರಾಮಚಂದ್ರಾಪುರಮಠದ ಶಿಷ್ಯತ್ವವನ್ನು ಬಿಟ್ಟು ಅನ್ಯ ಮಠಕ್ಕೆ ಸೇರುವುದು ನ್ಯಾಯವಲ್ಲ ಎಂದು ತೀರ್ಮಾನವಾಯಿತು. ಅಲ್ಲದೇ ಮದರಾಸು ಉಚ್ಛನ್ಯಾಯಾಲಯದಲ್ಲಿ    ಶ್ರೀರಾಮಚಂದ್ರಾಪುರ ಮಠದಿಂದ ಬಹಿಷ್ಕೃತರಾದವರು ಇನ್ನಾವುದೋ ಮಠದಲ್ಲಿ ತೀರ್ಥ ತೆಗೆದುಕೊಂಡರೆ ಶುದ್ಧರಾಗುವುದಿಲ್ಲ ಎಂಬ ತೀರ್ಪು ಬಂತು. ತದನಂತರದಲ್ಲಿ ಬಹಿಷ್ಕೃತನ ಹಿಂದೆ ಹೋಗಿ ಪಕ್ಷ ಕಟ್ಟಿದ್ದ ಆ  ಕುಟುಂಬದವರು
ಅವನ ಹಿಂದೆ ಹೋಗಿದುದಕ್ಕೆ ಪಶ್ಚಾತ್ತಾಪಗೊಂಡು ಪುನಃ ಶ್ರೀಮಠಕ್ಕೇ ಶರಣು ಬಂದು ತಪ್ಪು ದಂಡವ ತೆತ್ತು ಸೇರ್ಪಡೆಯಾದರು. ಇಂತಹವೆಲ್ಲ ಘಟನೆಗಳೆಲ್ಲದರಿಂದ ತಿಳಿದು ಬರುವುದೇನೆಂದರೆ, ಶಿಷ್ಯರನ್ನು ಅರಿವಿನ ಗುರಿಗಾಗಿ ಮುಖ್ಯವಾಹಿನಿಗೆ   ಕರೆತರುವಾಗ ನಿಗ್ರಹಾನುಗ್ರಹಗಳು ಸಹಜವೆಂದು.. ಅರಿವಿನ ನೆಲೆಗೆ ತುಡಿಯಲು  ಶಿಷ್ಯಸ್ತೋಮವನ್ನು ಪ್ರೇರೇಪಿಸಲು ಅವತಾರವಾದ ಗುರುಗಳು ನಾಟಕರಂಗದಲ್ಲಿ ಸ್ವಯಂ ಪಾತ್ರಧಾರಿಯಾಗಿ ಆದರ್ಶವಾಗುವುದು ಅವರಿಗೆ ಸಹಜವೂ ನಮಗೆಲ್ಲ
 ಪೂಜ್ಯವೂ ಆಗಿದೆ. ಇತಿಹಾಸವು ಸಹ ಇವರನ್ನು ಪರಮ ತಪೋನಿಧಿಗಳು, ಮಹಾಶಿಷ್ಯವಾತ್ಸಲ್ಯ ಉಳ್ಳವರು ಎಂದೇ ಗುರುತಿಸಿದೆ.
ಪೂಜ್ಯ ಶ್ರೀಗಳ ಕಾಲದಲ್ಲಿಯೇ ತೀರ್ಥಹಳ್ಳಿಯ ಮಠದ ವಿಚಾರದಲ್ಲಿ ಸರ್ಕಾರದೊಂದಿಗೆ ಜಗಳವಾಗಿ ತೀರ್ಥಹಳ್ಳಿ ಮಠವು ಸರ್ಕಾರದ ವಶಕ್ಕೆ ಅಕಾರಣವಾಗಿ, ಅನಾವಶ್ಯಕವಾಗಿ ಹೋಗುವ ಸಂಭವವುಂಟಾದಾಗ ಅದನ್ನು ತಪ್ಪಿಸಿ ತೀರ್ಥಹಳ್ಳಿ ಮಠವನ್ನು ಉಳಿಸಿದ ಕೀರ್ತಿ ‘ಅವರದ್ದು.
ಶ್ರೀಗಳು “ಉತ್ತರ ಸಹ್ಯಾದ್ರಿ ಖಂಡದೊಳಗಿನ ಹವ್ಯಕ ದ್ರಾವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸ” ಎಂಬ ಪುಸ್ತಕವನ್ನು ಬರೆದಿದ್ದಾರೆ.
ಒಮ್ಮೆ ಸವಾರಿ ಹೋದಾಗ ಮದವೇರಿದ ರಾಮಭದ್ರನನ್ನು ಮಾವುತನಿಂದಲೂ ಅಂಕೆಯಲ್ಲಿಡಲು ಸಾಧ್ಯವಾಗದೇ ಜನರೆಲ್ಲ ದಿಕ್ಕೆಟ್ಟು ಕಂಗಾಲಾಗಿ ಓಡುವಾಗ  ಅದ್ಹೇಗೋ ಪೂಜ್ಯರಿಗೆ ತಿಳಿದು ಬಂದು,, ಗಜರಾಜನ ಬಳಿ ಧಾವಿಸಿ ರಾಮಭದ್ರಾ ಇದೇಕೆ ಹೀಗೆ ಮಾಡುತ್ತಿರುವೆ ಎಂದು ಕೇಳಿ  ಸಾಂತ್ವಾನಗೊಳಿಸಿ ಕೇವಲ ತಮ್ಮ ಕೈಯಲ್ಲಿದ್ದೊಂದು ಕಾವಿಶಾಟಿಯಿಂದಲೇ ಎಳೆಗರುವನ್ನು ಕಟ್ಟಿ ಹಾಕುವಂತೆ ಕಟ್ಟಿದ್ದರು. ತಮ್ಮ ಮಹಾಪ್ರಸ್ಥಾನದ ಸಮಯದಲ್ಲಿ  ಶ್ರೀಗಳು ಗೋಕರ್ಣಕ್ಕೆ ಹೊರಟು ನಿಂತಾಗ  ತಮ್ಮ ಸ್ವಾಮಿಯನ್ನು ಬಿಟ್ಟಿರಲಾರೆ ಎಂಬಂತೆ ಘೀಳಿಡುತ್ತಾ ಶೋಕದಲ್ಲಿದ್ದಾಗ ಗುರುಗಳೇ ಸಂತೈಸಿ ಹೋದರೂ   ಆಹಾರವನ್ನೇ ತ್ಯಜಿಸಿ ಕೊನೆಯುಸಿರೆಳೆದಿತ್ತು.
ಪೂಜ್ಯರು ತಮ್ಮ ಇಹ ಜೀವನವನ್ನು ಮುಗಿಸಬಯಸಿ ತಮ್ಮ ಉತ್ತಾರಧಿಕಾರಿಗಳಿಗೆ ಶ್ರೀರಾಮಚಂದ್ರಾಪುರ ಮಠದಲ್ಲಿರುವಂತೆ ಆದೇಶಿಸಿ ಎಲ್ಲರಿಗೂ ಕೊನೆಯ ಮಂತ್ರಾಕ್ಷತೆಯನ್ನಿತ್ತು ಶ್ರೀರಾಮಮುದ್ರಿಕೆಯನ್ನು ನಂಬಿ ಬದುಕಿ ಎಂದು ಅಪ್ಪಣೆ ಮಾಡಿ ಕೀಲಕ ಸಂವತ್ಸರದ ಆಶ್ವಯುಜ ಶುಕ್ಲದ್ವಾದಶಿಯಂದು ಗೋಕರ್ಣದೆಡೆಗೆ ತೆರಳಿದರು. ೧೮೩೧ನೇ ಶಾಲಿವಾಹನಶಕವರ್ಷ ಮಾರ್ಗಶೀರ್ಷ ಶುಕ್ಲಪಂಚಮಿಯಂದು ಮುಕ್ತರಾದರು. ಇವರ ಸಮಾಧಿಯು ಕೋಟಿತೀರ್ಥದ ಆದ್ಯ ರಘೂತ್ತಮ ಮಠದ ರಾಮದೇವರ ಬಲಭಾಗದಲ್ಲಿ ಸ್ಥಾಪಿತವಾಗಿದೆ.        “ಅವಿಚ್ಛಿನ್ನ ಗುರುಪರಂಪರೆಯ ಅರಿವು ಹರಿವು” ಈ ಸಂಚಿಕೆಗೆ ವಿರಾಮವನ್ನಿಡುತ್ತಿದ್ದೇವೆ.

Author Details


Srimukha

Leave a Reply

Your email address will not be published. Required fields are marked *