ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೨೮

ಅರಿವು-ಹರಿವು
ಅರಿವಿನ ಬೆಳಕನ್ನು ನೀಡಿ ಅಂತರಂಗವನ್ನು ಪ್ರಕಾಶಗೊಳಿಸುವುದೇ ಉದ್ದೇಶವಾದ ಅವಿಚ್ಛಿನ್ನ ಗುರುಪರಂಪರೆಯು ಹದಿಮೂರನೆಯ ಪೀಠಾಧೀಶರಾಗಿ ಶ್ರೀ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಯೋಗಪಟ್ಟವನ್ನಿತ್ತಿತ್ತು. ಹಿಂದಿನ ಎಲ್ಲಾ ಗುರುಗಳಂತೆಯೇ ಬ್ರಹ್ಮವಿದ್ಯಾನಿಷ್ಠರೂ, ತಪೋನಿಧಿಗಳೂ ಆಗಿದ್ದ ಪೂಜ್ಯ ಶ್ರೀಗಳ ಮಾರ್ಗದರ್ಶನವನ್ನು ಕೆಳದಿ, ಇಕ್ಕೇರಿ, ಹಂಪೆ ಮೊದಲಾದ ಸಂಸ್ಥಾನಗಳ ಅರಸರು ಪಡೆಯುತ್ತಿದ್ದರು. ಪರಮಪೂಜ್ಯ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕಾಲದಲ್ಲಿ  ವಿಜಯನಗರದ ವೀರನರಸಿಂಹರಾಯನು  ಪರಮಾರಾಧ್ಯಮೂರ್ತಿ ಶ್ರೀರಾಮಚಂದ್ರ ದೇವರ ಅಮೃತಪಡಿ ಮತ್ತು ಶ್ರೀರಾಮಚಂದ್ರಾಪುರ  ಅಗ್ರಹಾರಕ್ಕೆ ಭೂದಾನವಾಗಿ ಸಹಿರಣ್ಯೋದಕ ಪೂರ್ವಕವಾಗಿ ದಾನ ನೀಡುತ್ತಾನೆ (ಕ್ರಿ.ಶ ೧೫೦೭).
ಈ ಹದಿಮೂರನೆಯ ಗುರುಗಳಾದ ಶ್ರೀ ಶ್ರೀ ಅಭಿನವ ರಾಘವೇಶ್ವರಭಾರತೀ ಮಹಾಸ್ವಾಮಿಗಳ ನಂತರ ಪರಂಪರೆಯು ಹದಿನಾಲ್ಕನೆಯವರಾಗಿ ಶ್ರೀ ರಾಮಯೋಗೀಂದ್ರ ಭಾರತೀ ಶ್ರೀಗಳ ಮುಖಾಂತರ ಮುಂದುವರೆಯಿತು. ಇವರು ವೇದಾಂತ ಹಾಗೂ ಯೋಗಶಾಸ್ತ್ರಗಳಲ್ಲಿ ಅಪ್ರತಿಮವಾದ ಪಾಂಡಿತ್ಯವನ್ನು ಗಳಿಸಿದ್ದರು. ‘ವಿದ್ಯಾಸಮುದ್ರ’ ಎಂದೇ ಶ್ರೀಗಳು ಪ್ರಖ್ಯಾತರಾಗಿದ್ದರು.
ಅವಿಚ್ಛಿನ್ನ ಅರಿವಿನ ಪರಂಪರೆಯಲ್ಲಿ ಹದಿನೈದನೆಯ ಗುರುಗಳಾಗಿ ಬಂದವರು ಶ್ರೀ ಶ್ರೀ ನೃಸಿಂಹಭಾರತೀ ಮಹಾಸ್ವಾಮಿಗಳು. ಶ್ರೀಗಳು ಪೂರ್ವಾಚಾರ್ಯರ ಪರಂಪರೆಯ ವಿದ್ವತ್ತು, ದಕ್ಷತೆ, ನಿಗ್ರಹಾನುಗ್ರಹ ಸಾಮರ್ಥ್ಯ, ತಪೋವೃದ್ಧತೆ ಮೊದಲಾದ ವಿಷಯಗಳಲ್ಲಿ ಕಿಂಚಿತ್ತೂ ಊನವಾಗದಂತೆ ನೋಡಿಕೊಂಡರಲ್ಲದೆ ಶ್ರೀಮಠದ ಘನತೆ ಗೌರವಗಳನ್ನು ವಿಸ್ತರಿಸಿದರು. ಪರಂಪರಾನುಗತವಾದ ರೀತಿಯಲ್ಲಿ ಶಿಷ್ಯಸ್ವೀಕಾರವನ್ನು ಮಾಡಿ ಶ್ರೀ ಶ್ರೀ ಅನಂತೇಂದ್ರ ಭಾರತೀ ಎಂಬ ಅಭಿಧಾನವನ್ನಿತ್ತು ಶ್ರೀಮಠೀಯವಾದ ಎಲ್ಲಾ ಅಧಿಕಾರವನ್ನಿತ್ತು ಬ್ರಹ್ಮೀಭೂತರಾದರು.
Reference : ಶ್ರೀರಾಮಚಂದ್ರಾಪುರ ಮಠದ ರಾಜಮಾನ್ಯ ಇತಿಹಾಸ ವೈಭವ ಸಂಪುಟ – ೧
ಪುಟ ಸಂಖ್ಯೆ – ೨೨-೪೦

Author Details


Srimukha

Leave a Reply

Your email address will not be published. Required fields are marked *