ಸರಾಗವಾಗಿ ಚಂಡೆ, ಮದ್ದಲೆ ಬಾರಿಸುವ 9 ರ ಪೋರ!

ಅಂಕುರ

“ನಮ್ಮದು ಯಕ್ಷಗಾನ ಪರಂಪರೆ ಹೊಂದಿರುವ ಕುಟುಂಬ. ಭಾಗವತರು, ವೇಷಧಾರಿಗಳು, ಮದ್ದಳೆ ವಾದಕರು ಹೀಗೆ ಯಕ್ಷಗಾನದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡಿದ್ದ ಕುಟುಂಬ ನಮ್ಮದು. ನನ್ನ ತಂದೆ ಕೂಡಾ ಪ್ರಸಿದ್ಧ ಛಾಯಾಗ್ರಾಹಕ ಮತ್ತು ಮದ್ದಳೆ ವಾದಕ. ಹೀಗಾಗಿ ನಮ್ಮ ಮನೆಗೆ ಆಗಾಗ ಭಾಗವತರು, ಮದ್ದಳೆ ವಾದಕರು ಭೇಟಿ ನೀಡುವುದು ಅದೇ ಸಂದರ್ಭದಲ್ಲಿ ಭಾಗವತಿಕೆ, ಮದ್ದಳೆ ವಾದನ ನಡೆಯುತ್ತಿರುತ್ತದೆ. ಹೀಗೆ ಸದಾ ಯಕ್ಷಗಾನದ ವಾತಾವರಣದಲ್ಲಿ ನೆಲೆಸಿರುವುದರಿಂದ ಯಕ್ಷಗಾನದ ಚಂಡೆ, ಮದ್ದಳೆ ವಾದನ ಕಲಿಯಲು ಸ್ಪೂರ್ತಿ ಸಿಕ್ಕಿತು”. ಹೀಗೆ ಮಾತನ್ನು ಆರಂಭಿಸಿದವರು ಬಾಲ ಚಂಡೆ, ಮದ್ದಳೆ ವಾದಕ, ಅರೇಅಂಗಡಿಯ ಶ್ರೀ ಕರಿಕಾನ ಪರಮೇಶ್ವರಿ ಆಂಗ್ಲಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಮಯೂರ ಪರಮೇಶ್ವರ ಹೆಗಡೆ ಹರಿಕೇರಿ.ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಈ ಪೋರ ಚಿಕ್ಕ ವಯಸ್ಸಿನಲ್ಲಿಯೇ ಚಂಡೆ, ಮದ್ದಳೆ‌ ವಾದನದಲ್ಲಿ ಹಿಡಿತವನ್ನು ಸಾಧಿಸಿ ಗಮನ ಸೆಳೆಯುತ್ತಿದ್ದಾನೆ.ತಂದೆಯೇ ಮಾರ್ಗದರ್ಶಕ:
ಚಂಡೆ, ಮದ್ದಳೆ ವಾದನದಲ್ಲಿ ಹಿಡಿತ ಸಾಧಿಸಿರುವ ಮಯೂರ ಹೆಗಡೆಗೆ ಈತನ ತಂದೆ ಪಿ.ಕೆ. ಹೆಗಡೆ ಹರಿಕೇರಿ ಅವರೇ ಗುರು ಮತ್ತು ಮಾರ್ಗದರ್ಶಕರು. ಪ್ರಸಿದ್ಧ ಮದ್ದಳೆ ವಾದಕ ದಿಮ್ ಮಾಬ್ಲೇಶ್ವರ ಭಟ್ಟ, ಧರ್ಮಶಾಲಾ ಅವರ ಗರಡಿಯಲ್ಲಿ ಪಳಗಿರುವ ಪಿ.ಕೆ. ಹೆಗಡೆ, ತಮ್ಮಲ್ಲಿರುವ ಮದ್ದಳೆ ವಾದನದ ಜ್ಞಾನವನ್ನು ತಮ್ಮ ಮಗನಿಗೂ ಧಾರೆ ಎರೆಯುತ್ತಿದ್ದಾರೆ.ವಿವಿಧೆಡೆ ಪ್ರದರ್ಶನ:
ಕಳೆದ ಎರಡು ವರ್ಷಗಳಿಂದ ಚಂಡೆ, ಮದ್ದಳೆ ವಾದನವನ್ನು ಅಭ್ಯಸಿಸುತ್ತಿದ್ದು, ಹೊನ್ನಾವರದ ಸಿವಿಲ್ ಕೋರ್ಟ್, ಮೂರೂರು, ಅಚವೆ, ಯಲಗುಪ್ಪಾ, ಆಡುಕಳ, ಹಳದೀಪುರ, ಯಕ್ಷಗಾನ ಬಯಲಾಟ ತಾಳಮದ್ದಳೆಗಳಲ್ಲಿ ಹಾಗೂ ಹೊಸಕುಳಿಯ ಶ್ರೀಉಮಾಮಹೇಶ್ವರ ಕಲಾವರ್ಧಕ ಸಂಘದ ಕೆಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ ಹೆಗ್ಗಳಿಕೆ ಮಯೂರ ಹೆಗಡೆ ಅವರದ್ದು.ಕೇವಲ ಚಂಡೆ ಮತ್ತು ಮದ್ದಳೆ ವಾದನ ಮಾತ್ರವಲ್ಲದೆ, ಯಕ್ಷಗಾನ ನೃತ್ಯ, ಸಂಗೀತ, ಭಜನೆ ಹಾಗೂ ಕ್ರಿಕೆಟ್ ಇನ್ನಿತರ ಹವ್ಯಾಸಗಳಲ್ಲೂ ತೊಡಗಿಸಿಕೊಂಡಿದ್ದಾನೆ.ವಿದ್ಯಾಭ್ಯಾಸದ ಜೊತೆಗೆ ನನ್ನ ಎಲ್ಲಾ ಹವ್ಯಾಸಗಳಲ್ಲಿ ವಿಶೇಷ ಸಾಧನೆ ಮಾಡುವ ಗುರಿ ಇದೆ ಎನ್ನುತ್ತಾನೆ ಮಯೂರ ಹೆಗಡೆ.”ಮಗನ ಸಾಧನೆಯ ಕುರಿತು ತುಂಬಾ ಸಂತೋಷ ಇದೆ. ಶಾಲಾ ವ್ಯಾಸಂಗದ ಜೊತೆಗೆ ಈ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎನ್ನುವ ಹಾರೈಕೆ ನಮ್ಮದು” ಎಂದು ಖುಷಿ ಹಂಚಿಕೊಂಡರು ಮಯೂರ ಹೆಗಡೆಯ ತಂದೆ ಪಿ.ಕೆ. ಹೆಗಡೆ.”ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಚಿಕ್ಕವಯಸ್ಸಿನಲ್ಲೇ ಗಮನಾರ್ಹ ಸಾಧನೆ ಮಾಡುತ್ತಿರುವ ಮಯೂರ ಹೆಗಡೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗೈಯ್ಯಲಿ ಎಂಬುದು ಆಶಯ.

Leave a Reply

Your email address will not be published. Required fields are marked *