” ಸತತ ಶ್ರೀಚರಣ ಸೇವೆ ದೊರಕಿಸೆಮಗೆ ರಾಮಾ ” : ವಿದ್ಯಾಗೌರಿ ಕುಳಮರ್ವ

ಮಾತೃತ್ವಮ್

 

” ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದ ಕಾರಣ ಮಠವೆಂದರೆ ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿಬಿಟ್ಟಿದೆ. ಪ್ರತಿದಿನವೂ ಗುರುಸ್ಮರಣೆಯೊಂದಿಗೇ ದಿನವನ್ನು ಆರಂಭಿಸುವವರು ನಾವು . ಇದೇ ಅಭ್ಯಾಸ ನಮ್ಮ ಮಕ್ಕಳಿಗೂ ದೊರಕಿದೆ ” ಎಂದು ಸತತ ಶ್ರೀಮಠದ ಸೇವೆಯಲ್ಲಿ ನಿರತವಾಗುವ ಹಂಬಲ ವ್ಯಕ್ತಪಡಿಸಿದವರು ವಿದ್ಯಾಗೌರಿ ಕುಳಮರ್ವ.

ಕುಳಮರ್ವ ಮನೆತನದ ಕೃಷ್ಣ ಭಟ್ ಹಾಗೂ ದೇವಕಿಯವರ ಪುತ್ರಿಯಾದ ವಿದ್ಯಾಗೌರಿ ತಾಳ್ತಜೆ ಮಹಾಲಿಂಗ ಭಟ್ ಅವರ ಪತ್ನಿ. ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ವಿದ್ಯಾಗೌರಿ ಅವರು ಮದುವೆಯ ನಂತರವೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು.

ಗೃಹಿಣಿಯಾಗಿರುವ ಇವರು ತಮ್ಮ ಬಿಡುವಿನ ಸಮಯಗಳಲ್ಲೆಲ್ಲ ಗಿರಿನಗರದ ಶ್ರೀರಾಮಾಶ್ರಮಕ್ಕೆ ಭೇಟಿಯಿತ್ತು ಸೇವೆ ಮಾಡುವವರು. ಬದುಕಿನಲ್ಲಿ ನೆಮ್ಮದಿ, ಶಾಂತಿ ನೆಲೆಸಿದ್ದು ಶ್ರೀಗುರು ಸೇವೆಯಿಂದ ಎಂದು ನಂಬಿರುವ ಇವರು ಅಭಯಾಕ್ಷರ ಅಭಿಯಾನದ ಸಂದರ್ಭದಲ್ಲಿ ತಮ್ಮ ತಂಡದೊಂದಿಗೆ ಅಹರ್ನಿಶಿ ಶ್ರಮಿಸಿ ಸಹಿ ಸಂಗ್ರಹ ಮಾಡಿದವರು.

” ಬಾಲ್ಯದಿಂದಲೇ ಹಸುಗಳೆಂದರೆ ತುಂಬಾ ಇಷ್ಟ. ಆದರೆ ಬೆಂಗಳೂರು ನಗರದಲ್ಲಿ ವಾಸಿಸುವ ನಮಗೆ ಮನೆಯಲ್ಲಿ ಹಸು ಸಾಕುವುದು ಸುಲಭವಲ್ಲ. ಅದಕ್ಕಾಗಿ ಶ್ರೀಮಠದ ಗೋಸೇವೆಯಲ್ಲಿ ತೊಡಗಿಸಿಕೊಂಡೆ, ಬಿಡುವಿನ ವೇಳೆಯನ್ನು ಶ್ರೀಮಠಕ್ಕೆ ತೆರಳಿ ಅಲ್ಲಿ ಸೇವೆ ಮಾಡುತ್ತಿದ್ದೇನೆ. ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀಗುರುಗಳಿಂದ ಬಾಗಿನವನ್ನೂ ಸ್ವೀಕರಿಸಿದ್ದೇನೆ. ಗೋಮಾತೆಯ ಮೇಲಿನ ಪ್ರೀತಿಯಿಂದಾಗಿಯೇ ಮಾತೃತ್ವಮ್ ಯೋಜನೆಯಲ್ಲಿ ಪಾಲ್ಗೊಂಡು ಒಂದು ವರ್ಷದ ಗುರಿ ತಲುಪಿದ್ದೇನೆ ” ಎನ್ನುವ ವಿದ್ಯಾ ಗೌರಿ ಅವರಿಗೆ ಶೀಘ್ರವಾಗಿಯೇ ಎರಡು ವರ್ಷಗಳ ಗುರಿ ತಲುಪುವ ಭರವಸೆಯಿದೆ.

ಗೋಮಾತೆಯ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆಯಿದೆ ಎನ್ನುವ ಅವರು ತಮ್ಮ ಪರಿಚಿತರು,ನೆಂಟರು ಹಾಗೂ ಪತಿಯ ಸಹೋದ್ಯೋಗಿಗಳ ಸಹಕಾರದಿಂದ ಗುರಿ ತಲುಪಿದವರು.

ಕೆಲವು ವರ್ಷಗಳ ಹಿಂದೆ ರಾಜಸ್ಥಾನದ ಪಥಮೇಡ ಗೋಶಾಲೆಗೆ ಭೇಟಿಯಿತ್ತ ಅನುಭವವು ಅತ್ಯಂತ ಖುಷಿ ಹಾಗೂ ಅವಿಸ್ಮರಣೀಯ ಘಟನೆ ಎಂದು ನುಡಿಯುವ ವಿದ್ಯಾಗೌರಿ ಅವರಿಗೆ ಈ ಭಾಗ್ಯ ಲಭಿಸಿದ್ದು ಶ್ರೀಗುರುಗಳ ಹಾಗೂ ಶ್ರೀರಾಮ ದೇವರ ಅನುಗ್ರಹದಿಂದ ಎಂಬ ದೃಢವಾದ ನಂಬಿಕೆ.

” ಪಥಮೇಡದ ಗೋಶಾಲೆಗಳಿಗೆ ಭೇಟಿಯಿತ್ತ ಅನುಭವ ನಿಜಕ್ಕೂ ಅವರ್ಣನೀಯ. ಶ್ರೀರಾಮಚಂದ್ರಾಪುರ ಮಠದ ಶಿಷ್ಯರು ನಾವೆಂದು ತಿಳಿದಾಗ ಅಲ್ಲಿನವರಿಗೆ ನಮ್ಮ ಮೇಲೆ ವಿಶೇಷ ಗೌರವಾದರಗಳು ಮೂಡಿದವು. ಶ್ರೀಗುರುಗಳ ಅನುಗ್ರಹದಿಂದ ಇದು ಸಾಧ್ಯವಾಯಿತು ಎಂಬ ನಂಬಿಕೆ ನಮ್ಮದು. ಈಗ ಜಗತ್ತನ್ನೇ ಆವರಿಸಿರುವ ಕೊರೋನಾ ಮಾರಿಯಿಂದಾಗಿ ಹಿಂದಿನಂತೆ ಶ್ರೀಮಠಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಎಂಬ ನೋವು ಇದೆ. ಆದರೂ ಸದಾ ಶ್ರೀಮಠದ, ಗೋಮಾತೆಯ ಸೇವೆ ಮಾಡುವ ಸೌಭಾಗ್ಯವನ್ನು ಒದಗಿಸಿ ಕೊಡುವಂತೆ ಶ್ರೀರಾಮ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಇಬ್ಬರು ಮಕ್ಕಳಿಗೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯಿದೆ, ಪತಿ ಹಾಗೂ ಮಕ್ಕಳ ಸಂಪೂರ್ಣ ಸಹಕಾರದಿಂದ ನನಗೂ ಹೆಚ್ಚಿನ ಎಲ್ಲಾ ಯೋಜನೆಗಳಲ್ಲಿ ಕೈ ಜೋಡಿಸಲು ಸಾಧ್ಯವಾಗುತ್ತಿದೆ ” ಎಂದು ತುಂಬು ಹೃದಯದಿಂದ ನುಡಿಯುವ ವಿದ್ಯಾಗೌರಿ ಅವರಿಗೆ ತಮಗೆ ಸಾಧ್ಯವಿರುವಷ್ಟು ಕಾಲ ಶ್ರೀಗುರುಗಳ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲವಿದೆ , ಮಾತ್ರವಲ್ಲ ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳೂ ನಿರಂತರವಾಗಿ ಗುರು ಸೇವೆಯಲ್ಲಿ ಕೈ ಜೋಡಿಸಬೇಕು ಎಂಬ ಅಭಿಲಾಷೆಯೂ ಇದೆ.

Author Details


Srimukha

Leave a Reply

Your email address will not be published. Required fields are marked *