ಗೋಸ್ವರ್ಗದಲ್ಲಿ ಸವಿದ ಕುಣಿತ ಭಜನೆಯ ಸ್ವರ್ಗೀಯ ಅನುಭೂತಿ

ಲೇಖನ

” ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ ಕುಳಿತು ಪಾಡಲು ನಿಲುವ ನಿಂತು ಪಾಡಲು ನಲಿವ……” ಎಂಬ ದಾಸವಾಣಿಯನ್ನು ನಾವೆಲ್ಲ ಕೇಳಿದ್ದೇವೆ. ಹಾಗಾದರೆ ನಲಿದು ಸಂತಸದಿ ಹಾಡಿದರೆ……!!!!!

ಅನುಮಾನವೇಕೆ…..?

ಆ ದೇವನು ಭಜಕರ ಭಕ್ತಿಗೊಲಿದು ಸ್ವರ್ಗವನ್ನೇ ಧರೆಗಿಳಿಸುವ..!!!!!

ಸ್ವರ್ಗ ಧರೆಗಿಳಿದರೆ ಹೇಗಿರಬಹುದು ಎಂಬ ಕಲ್ಪನೆಯೇ..?
ಅಂತಹ ಒಂದು ಅಮೋಘದೃಶ್ಯವನ್ನು ಇತ್ತೀಚೆಗೆ ಬಾನ್ಕುಳಿಯ ಗೋಸ್ವರ್ಗದಲ್ಲಿ ಕಂಡೆ. ಆ ಸ್ವರ್ಗದ ಸೊಬಗನ್ನು ಅಕ್ಷರಗಳಲ್ಲಿ ಹಿಡಿದಿಡಲು ಆಗುತ್ತಿಲ್ಲ ಎಂಬುದು ಮಾತ್ರ ಅಕ್ಷರಶಃ ಸತ್ಯ…..!!!!

ನಿಜ ಸ್ವರ್ಗದ ಸೊಬಗನ್ನು ವರ್ಣಿಸಲು ಸಾವಿರ ನಾಲಿಗೆಯ ಆದಿಶೇಷನಿಗೂ ಅಸಾಧ್ಯ…! ಅದೇ ರೀತಿಯಲ್ಲಿ ಸ್ವರ್ಗ ಧರೆಗಿಳಿದಂತಹ ಈ ವಿಶಿಷ್ಟ ಅನುಭೂತಿಯ ವರ್ಣನೆಯೂ ಅಸಾಧ್ಯ..!

ಆದರೆ ಇಂತಹ ಹೃದಯಂಗಮ ದೃಶ್ಯವನ್ನು ಕಂಡಾಗ ಮನಸ್ಸು ತುಂಬಿ ಬರುತ್ತದೆ, ಹೃದಯ ಭಾವಪೂರ್ಣವಾಗುತ್ತದೆ. ಮನಸ್ಸಿನ ದುಗುಡ ದುಮ್ಮಾನಗಳೆಲ್ಲ ಅಳಿಸಿಹೋಗಿ ಅಲ್ಲಿ ನೆಮ್ಮದಿ ಶಾಂತಿ ಮನೆಮಾಡುತ್ತದೆ ಎನ್ನುವುದು ಸುಳ್ಳಲ್ಲ.

ಇಂತಹ ಒಂದು ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಬಾನ್ಕುಳಿಯ ಗೋಸ್ವರ್ಗ.

“ಅಂಬಾ..ಅಂಬಾ..” ಎನ್ನುವ ಹಸುಗಳ ಮಂದೆ ಸ್ವಚ್ಛಂದವಾಗಿ ವಿಹರಿಸುವ ತಾಣ, ಸಪ್ತಸನ್ನಿಧಿಯ ಪಾವನ ಸಲಿಲದ ಸಂಗಮಸ್ಥಾನದಲ್ಲಿ ಭಜಕರು ಕೇವಲ ಭಕ್ತಿಯೊಂದನ್ನೇ ಮನದಲ್ಲಿರಿಸಿಕೊಂಡು ನೂರಾರು ಭಜಕರು ” ತೋಳು ತೋಳು ತೋಳು ರಂಗಾ..ತೋಳನ್ನಾಡೈ…” ಎಂಬ ಹಾಡಿಗೆ ತಮ್ಮ ಭಜನೆಯ ಗುರುಗಳ ಜೊತೆ ದನಿಸೇರಿಸಿ ತಾಳತಟ್ಟುತ್ತಾ ಹೆಜ್ಜೆ ಹಾಕಿ ಮೈಮರೆತು ನಲಿಯುವಾಗ ನೋಡುವರೇ ರೋಮಾಂಚನಗೊಂಡರು.

ಹೊಸನಗರದ ಶ್ರೀ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಹಾಸಂಕಲ್ಪದ ಸಾಕಾರ ರೂಪವಾದ ವಿಶ್ವದ ಏಕೈಕ ಗೋಸ್ವರ್ಗದಲ್ಲಿ ಜರಗಿದ ಗೋ ಹಬ್ಬದ ಸಂಭ್ರಮದ ಕೊನೆಯ ದಿನ ಮಾತೃತ್ವಮ್ ಸಮಾವೇಶದ ಅನುಪಮ ಕ್ಷಣದಲ್ಲಿ ಶ್ರೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ, ಖ್ಯಾತ ಗಾಯಕರಾದ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ತರಬೇತಿ ಪಡೆದ ಸುಮಾರು ಮುನ್ನೂರಕ್ಕೂ ಹೆಚ್ಚು ಭಜಕರು ಮುಂಜಾವದಿಂದಲೇ ಆರಂಭಿಸಿದ ಭಜನಾ ಸೇವೆಗೆ ಮಂಗಳ ಹಾಡುತ್ತಾ ಈ ನೃತ್ಯ ಭಜನಾಸೇವೆಯನ್ನು ನಡೆಸಿಕೊಟ್ಟು ಎಲ್ಲರ ಮನ ಗೆದ್ದರು.

ಸಪ್ತಸನ್ನಿಧಿಯ ಪಥದಲ್ಲಿ ಅರಿಶಿನ ಕುಂಕುಮ ಬಣ್ಣದ ಸೀರೆಯುಟ್ಟ ಮಾತೆಯರ ವೃಂದ ಕುಣಿತ ಭಜನೆಯಲ್ಲಿ ಪಾಲ್ಗೊಳ್ಳುವಾಗ ತಿಳಿನೀರಿನಲ್ಲಿ ಅವರ ಪ್ರತಿಬಿಂಬ ಬಹಳ ಮನೋಹರವಾಗಿ ಕಂಗೊಳಿಸುತ್ತಿತ್ತು.
ಭಜನಾತಂಡದಲ್ಲಿ ಅಬಾಲವೃದ್ಧರೆಲ್ಲರೂ ಪೂರ್ಣ ಮನದಿಂದ ತಲ್ಲೀನರಾಗಿ ಭಜಿಸುವಾಗ ನೋಡುಗರ ಮೈಮನವೆಲ್ಲ ಈ ವಿಶೇಷ ಸಂಭ್ರಮದಿಂದ ಮೈ ನವಿರೆದ್ದಿತು.‌

ರಾಮಕೃಷ್ಣ ಕಾಟುಕುಕ್ಕೆಯವರ ಶಿಷ್ಯವೃಂದದವರಾದ ಹದಿಮೂರು ಭಜನಾ ತಂಡದ ಮುನ್ನೂರಕ್ಕೂ ಅಧಿಕ ಭಜಕರು ಈ ಸೇವೆಯಲ್ಲಿ ಪಾಲ್ಗೊಂಡು ಅಲ್ಲಿ ನೆರೆದ ಸಾವಿರಾರು ಮಂದಿಯ ಮನ ಗೆದ್ದರೂ ನಮ್ಮ ಕಂಬಾರು ಶ್ರೀ ದುರ್ಗಾಪರಮೇಶ್ವರಿ ತಂಡದ ಬಗ್ಗೆ ಅವರೆಲ್ಲರ ಅಭಿಪ್ರಾಯ ನಿಜಕ್ಕೂ ಹೆಮ್ಮೆ ತರಿಸುವಂತಿತ್ತು.

ಈ ಮನೋಹರವಾದ ಕುಣಿತ ಭಜನೆಯ ಒಂದು ಪುಟ್ಟ ತುಣುಕನ್ನು ಇದರ ಜೊತೆಗೆ ಹಾಕಿರುವೆ. ಅಕ್ಷರಗಳಲ್ಲಿ ಸೆರೆ ಹಿಡಿಯಲಾಗದ ಸುಂದರ ಕ್ಷಣಗಳು ಸ್ವರ್ಗಾನುಭೂತಿಯನ್ನು ಒಂದು ಕ್ಷಣವಾದರೂ ನೋಡಿ ಕಣ್ತುಂಬಿಕೊಳ್ಳಬಹುದು

Leave a Reply

Your email address will not be published. Required fields are marked *