ದೀಪ ಉರಿಸಬೇಕು : ನಂದಕಿಶೋರ ಬೀರಂತಡ್ಕ

ಲೇಖನ

ದೀಪ ಉರಿಸಬೇಕು



ಚಿಕ್ಕವರಿದ್ದಾಗ ಒಲೆಯ ಬುಡದಲ್ಲಿ ಕುಳಿತು ಛಳಿ ಕಾಯಿಸಿದ ನೆನಪುಂಟೇ?


ಶಾಲಾಕಾಲೇಜಿನ ದಿನಗಳ ಪ್ರವಾಸಗಳಲ್ಲಿ campfire ಹಚ್ಚಿ ಸುತ್ತಲೂ ಕುಳಿತು ಹಾಡಿದ ಹಾಡುಗಳು ಹಾಗೂ ಕೇಳಿದ ಕಥೆಗಳು ನೆನಪಿವೆಯೇ?


ಜೀವನದಲ್ಲಿ ಇತ್ತೀಚಿಗೆ ನಡೆದಿರುವ ಹಲವಾರು ಘಟನೆಗಳು ಈಗಾಗಲೇ ಮರೆತಿದ್ದರೂ ಸಹ ಬಹಳ ಹಿಂದೆಯೇ ನಡೆದ ಆ ಘಟನೆಗಳು ಇನ್ನೂ ಮನಸ್ಸಿನ ಪಟಲದಲ್ಲಿ ಉಳಿದಿರಲು ಕಾರಣವೇನು?


ಅಗ್ನಿ. ಅದಕ್ಕೆ ಕಾರಣ ಅಗ್ನಿ.


ಉರಿಯುತ್ತಿರುವ ಅಗ್ನಿಯ ಮುಂದೆ ನಡೆದ ಘಟನೆಗಳು ಮನದಲ್ಲಿ ಅಚ್ಚೊತ್ತಲ್ಪಡುತ್ತವೆ.


ಯಜ್ಞದಲ್ಲಿ ಮಾಡಿದ ಪ್ರಾರ್ಥನೆಗಳು ಫಲಿಸಲು, ಅಗ್ನಿಯು ಕೊಟ್ಟ ಆ ಮನದ ಜಾಗೃತಿಯೇ ಕಾರಣ. ಅಗ್ನಿ ಎಂದರೆ ಪರಿಶುದ್ಧತೆ. ತಾನೂ ಶುದ್ಧವಾಗಿದ್ದು, ತನ್ನ ಒಳ ಬಂದದ್ದೆಲ್ಲವನ್ನೂ ಅದು ಶುದ್ಧ ಮೂಲಸ್ವರೂಪಕ್ಕೇ ಏರಿಸುತ್ತದೆ.


ಅಗ್ನಿಗೆ ಉರಿಯುವ ಗುಣವಿದೆ. ಅಂತೆಯೇ, ಬೆಳಗುವ ಗುಣವೂ ಇದೆ. ಅಗ್ನಿಯು ನಿಗ್ರಹವನ್ನೂ ಮಾಡಬಲ್ಲದು, ಅನುಗ್ರಹವನ್ನೂ ಮಾಡಬಲ್ಲದು. ಹಾಗಾಗಿಯೇ ಅಗ್ನಿಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನ ಇರುವುದು. ದುರ್ಗುಣಗಳನ್ನೂ ದೋಷಗಳನ್ನೂ ಕಳೆಯಬೇಕು ಮತ್ತು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಾಗಾದರೆ ಮಾತ್ರ ಜೀವನವು ಸುಂದರ ಮತ್ತು ಸಾರ್ಥಕ. ಜೀವನದ ಸಾರ್ಥಕ್ಯದ ಸಾಧನೆಗಾಗಿಯೇ ನಿತ್ಯವೂ ಮನೆಯಲ್ಲಿ ದೀಪ ಉರಿಸುವ ಪದ್ಧತಿ ನಮ್ಮಲ್ಲಿ.


ದೀಪ ಬೆಳುಗುವಾಗ ಹೇಳಬೇಕಾದ ಸಂಕಲ್ಪ ವಾಕ್ಯವೊಂದುಂಟು.

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಂ।
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋsಸ್ತುತೇ॥  

ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ಧನಃ ।
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ॥  


ಶುಭಕ್ಕಾಗಿ, ಆರೋಗ್ಯಕ್ಕಾಗಿ, ಇನ್ನೊಬ್ಬನಲ್ಲಿ ನಮಗಿರಬಹುದಾದ ವೈರಭಾವದ ನಾಶಕ್ಕಾಗಿ, ಪಾಪದ ನಾಶಕ್ಕಾಗಿ ದೀಪವನ್ನು ಹಚ್ಚುವುದು.


ದೀಪ ಹಚ್ಚಿದ ಮಾತ್ರಕ್ಕೆ ಎಲ್ಲ ದೋಷಗಳು ನಿವಾರಣೆ ಆಗುತ್ತದೆಯೇ?


ಇಲ್ಲ. ಅದಕ್ಕೆ ಸತ್ತ್ವಗುಣದ ವೃದ್ಧಿ ಆಗಬೇಕು.


ಗುಣಗಳು ಮೂರು – ನಿರ್ಮಲತ್ವ ಮತ್ತು ಜ್ಞಾನ ಇದು ಸತ್ತ್ವಗುಣದ ಲಕ್ಷಣ. ರಾಗ ಮತ್ತು ತೃಷ್ಣೆ ಇವು ರಜಸ್ಸು. ಆಲಸ್ಯ ಮತ್ತು ನಿದ್ದೆಗಳು ತಮೋರೂಪ. ನಾವು ಯಾವ ಗುಣವನ್ನು ನಮ್ಮೊಳಗೇ ಹೆಚ್ಚು ಪೋಷಿಸುತ್ತೇವೆಯೋ ಆಯಾ ಪ್ರಕಾರವಾಗಿ ನಮ್ಮ ಆಹಾರ, ನಮ್ಮ ಕೆಲಸ, ನಮ್ಮ ಪ್ರವೃತ್ತಿ ಹಾಗೂ ನಮ್ಮ ಅರಿವಿನ ಮಟ್ಟ ಮತ್ತು ಪರಿಧಿ ಬದಲಾಗುತ್ತಾ ಹೋಗುತ್ತದೆ.


ಹಾಗಾಗಿ, ಜೀವನದ ಸಕಲ ರಜೋಗುಣರೂಪದ ಪ್ರತಿನಿಧಿಯಾದ ಎಣ್ಣೆಯನ್ನು, ತಮೋಗುಣರೂಪಿ ಬತ್ತಿಯಲ್ಲಿ ಉರಿಸಿದಾಗ ಬರುವ ಸತ್ತ್ವದ ಜ್ವಾಲೆಯು ಜೀವನದ ಸತ್ಯವನ್ನು ಕಾಣಿಸಬೇಕು ಮತ್ತು ಬದುಕನ್ನು ಬೆಳಗಬೇಕು ಎಂಬುದು ಆಶಯ.


ದಿನದ ಸಂಧ್ಯಾಕಾಲಗಳಲ್ಲಿ (ಸೂರ್ಯ ಉದಯಿಸುವ ಮತ್ತು ಅಸ್ತವಾಗುವ ಸಮಯದಲ್ಲಿ) ದೀಪವನ್ನು ಬತ್ತಿಯ ಮೇಲೆ ಮುತ್ತಿನ ಮಣಿಯಷ್ಟೇ ಹಚ್ಚಿ ಇಟ್ಟು, ಅದರ ಬಳಿ ಕೆಲವು ಕಾಲ ಕುಳಿತರೆ, ಅದನ್ನೇ ಧ್ಯಾನಿಸಿದರೆ, ಅದರ ಪ್ರಭಾವ ಅಪಾರ. ಸತ್ತ್ವಗುಣದ ವೃದ್ಧಿಗೆ ಮತ್ತು ಏಕಾಗ್ರತೆಯ ಸಿದ್ಧಿಗೆ ದೀಪಪ್ರಜ್ವಲನೆ ಎಂಬುದು ಸುಲಭೋಪಾಯ.


ಹಿಂದಿನ ಕಾಲದಲ್ಲಿ ದೀಪವೇ ಬೆಳಕಿನ ಸ್ರೋತ ಆಗಿದ್ದಿದ್ದರಿಂದ ಸಂಜೆಯಾಗುತ್ತಿದ್ದಂತೆ ದೀಪ ಬೆಳಗುವುದು ಸಹಜ ಮತ್ತು ಅನಿವಾರ್ಯ ಆಗಿತ್ತು. ಈಗ ದೀಪದ ಜಾಗದಲ್ಲಿ ವಿದ್ಯುತ್ತಿನ ಬಲ್ಬುಗಳು ಬಂದಿವೆ. ಅವೆರಡೂ ಮಾಡುವ ಕೆಲಸ ಒಂದೇ, ಇದ್ದದ್ದನ್ನು ಇರುವಂತೆಯೇ ಕಾಣಲು ನಮಗೆ ಸಹಕರಿಸುವುದು. ವಿದ್ಯುತ್ತಿನ ದೀಪ ಬೆಳಗಿದರೆ ಮನೆಯೊಳಗೆ ಬೆಳಕಾಗಬಹುದು, ಮನದೊಳಗೂ ಬೆಳಕಾಗಬೇಕಾದರೆ ಇಂದಿಗೂ ದೀಪವನ್ನೇ ಬೆಳಗಬೇಕು.


ಮನವು ಬೆಳಕಾದರೆ, ಜೀವನದಲ್ಲಿ ಇರುವುದೆಲ್ಲವೂ ಇರುವಂತೆಯೇ ಕಾಣುತ್ತದೆ; ಆಗ ದೀಪಪ್ರಜ್ವಲನದ ಸಂಕಲ್ಪವಾಕ್ಯವು ಹಂತಹಂತವಾಗಿ ಸಾಧಿಸಲ್ಪಡುತ್ತದೆ.


ನಿತ್ಯವೂ ಮನೆಯಲ್ಲಿ ದೀಪ ಇಡುವುದೆಂದರೆ ಅದು ಸಂಪ್ರದಾಯವೂ ಶಿಷ್ಟಾಚಾರವೂ ಮಾತ್ರವಲ್ಲ, ಅದೊಂದು ಶಿಸ್ತು. ಸಕಲ ಸೌಭಾಗ್ಯಗಳೂ ದೀಪಪ್ರಜ್ವಲನೆಯಿಂದ ಪ್ರಾಪ್ತವಾಗುತ್ತವೆ ಎಂಬುದು ಅತಿಶಯೋಕ್ತಿ ಅಲ್ಲ.

 


ಹಾಗಿದ್ದರೆ, ಅನ್ಯಾನ್ಯ ಕಾರಣಗಳಿಂದ ಮನೆಯ ದೀಪವನ್ನು ಉರಿಸಲು ಆಗದೇ ಹೋದರೆ, ಕೆಡುಕಾಗುವುದೇನು?


ಹಾಗೇನು ಇಲ್ಲ.
ಆದರೆ, ‘ರಕ್ಷಣೆ ಆಗಬೇಕು. ಶುಭವಾಗಬೇಕು’ ಎಂಬ ಸಂಕಲ್ಪದೊಂದಿಗೆ ನಮಗಾಗಿ ದೀಪವೊಂದು ಉರಿಯುತ್ತಿದ್ದರೆ,

– ನಮಗದು ಕ್ಷೇಮ.
– ನಮ್ಮ ಬಾಳಿಗೊಂದು ಬೆಳಕು.
– ನಮ್ಮ ಜೀವಶಕ್ತಿಗದು ಸ್ರೋತ.
– ನಮ್ಮಲ್ಲಿನ ಕೆಡುಕುಗಳಿಗೊಂದು ಕೊನೆ.
– ನಮ್ಮ ದುರಿತಗಳಿಗಲ್ಲದಕ್ಕೆ ಒಂದು ಪರಿಹಾರ.

 

ದೀಪ ಸದಾ ಉರಿಯುತ್ತಿರಲಿ. ಬದುಕಿನ ದಾರಿ ಸದಾ ಬೆಳಕಿನಿಂದ ಕೂಡಿರಲಿ.  


‘ರಕ್ಷಣೆ ಆಗಬೇಕು. ಶುಭವಾಗಬೇಕು’ ಎಂಬ ಸಂಕಲ್ಪದೊಂದಿಗೆ ಮನೆಯಲ್ಲಿ ದೀಪವು ಸದಾ ಉರಿಯುತ್ತಿರಬೇಕು, ಆ ಮೂಲಕ, ಬದುಕಿನ ದಾರಿ ಸದಾ ಬೆಳಗಿರಬೇಕು. ಇದು ದೀಪಪ್ರಜ್ವಲನದ ಆಶಯ. ಸ್ವಂತಕ್ಕೆ ಒತ್ತು ಇಲ್ಲವಾಗಿಸಿ, ತಮ್ಮ ತಪಸ್ಸನ್ನೆಲ್ಲ ಧಾರೆಯೆರೆದು ಸಮಾಜವನ್ನು ಎತ್ತಲು ಶ್ರಮಿಸುತ್ತಿರುವ ಎಲ್ಲ ಸಂತ-ಸದ್ಗುರುಗಳ ಜೀವಿತದ ಆಶಯವೂ ಅದೇ. ಶಿಷ್ಯಕೋಟಿಯ ಬಾಳು ಬೆಳಕಾಗಬೇಕು ಎಂಬುದು. ಗುರುವೆಂದರೆ ತಾನು ಉರಿದು, ಸಮಾಜಕ್ಕೆ ಬೆಳಕು ಕೊಡುವ ದೀಪ.


ಅನ್ಯಾನ್ಯ ಕಾರಣಗಳಿಂದ ದೀಪ ಉರಿಸಲಾಗದ ಪರಿಸ್ಥಿತಿಯು ಮನೆಗಳಲ್ಲಿ ಉದ್ಭವಿಸಿದರೂ ಸಹ, ಸದಾಕಾಲವೂ ಶಿಷ್ಯರ ಕ್ಷೇಮವನ್ನೇ ಸಂಪ್ರಾರ್ಥಿಸುತ್ತಾ, ದೀಪವೊಂದು ಅನಾದಿಕಾಲದಿಂದಲೂ ಶ್ರೀರಾಮಚಂದ್ರಾಪುರಮಠದಲ್ಲಿ ಅನಾಹತವಾಗಿ, ಅವಿಚ್ಛಿನ್ನವಾಗಿ ಉರಿಯುತ್ತಲೇ ಇದೆ.


ನಮ್ಮದೇ ಕ್ಷೇಮಕ್ಕಾಗಿ ತಾನು ಉರಿದು ನಮ್ಮನ್ನು ಬೆಳಗುವ ಆ ದೀಪದ ರಕ್ಷಣೆ-ಪೋಷಣೆಯ ಜವಾಬ್ದಾರಿ ನಮ್ಮದೇ. ಮಠದಲ್ಲಿ ಉರಿಯುವ ಆ ದೀಪದ ಎಣ್ಣೆಗಾಗಿ ಪ್ರತಿ ಶಿಷ್ಯಮನೆಯೂ ಪ್ರತಿ ವರ್ಷ ಒಂದು ಸಣ್ಣ ಸಾಂಕೇತಿಕ ಕಾಣಿಕೆಯನ್ನು ಕೊಡುವುದುಂಟು. ಅದೇ ದೀಪಕಾಣಿಕೆ. ಅದು, ನೂರ ಒಂದು ರೂಪಾಯಿ ಮಾತ್ರ. ಬಡವನಿಗೂ ಅಷ್ಟೇ, ಬಲ್ಲಿದನಿಗೂ ಅಷ್ಟೇ. ಪಂಡಿತನಿಗೂ ಅಷ್ಟೇ, ಪಾಮರನಿಗೂ ಅಷ್ಟೇ.


ಬೆಳಕನ್ನು ಹೊರಗಷ್ಟೇ ಅಲ್ಲದೆ ಒಳಗೂ ಬಯಸುವ ಶ್ರೀಮಠದ ಎಲ್ಲ ಪರಂಪರಾಗತ ಶಿಷ್ಯರೂ ದೀಪಕಾಣಿಕೆಯನ್ನು ವರ್ಷಂಪ್ರತಿ ಸಮರ್ಪಿಸುವುದು ಸಂಪ್ರದಾಯ. ದೀಪಕಾಣಿಕೆಯು ಕೃತಜ್ಞತೆಯ ಕುರುಹು. ದೀಪಕಾಣಿಕೆಯು ಬದ್ಧತೆಯ ಸಂಕೇತ.


ಒಂದೇ ಮನೆಯ ಸದಸ್ಯರು ಎರಡು ಕಡೆ ವಾಸ್ತವ್ಯವಿದ್ದರೆ, ಅಡಿಗೆಯನ್ನು ಎರಡಾಗಿ ಮಾಡಿದಂತೆಯೇ ದೀಪಕಾಣಿಕೆಯನ್ನೂ ಎರಡಾಗಿ ಕೊಡುವುದು ನಿರ್ದೇಶಿತವಾದಂತಹ ಕ್ರಮ.


ಈ ಹಿಂದೆ, ಪ್ರತಿ ವರ್ಷ ದೀಪಕಾಣಿಕೆಯ ಹಣವನ್ನು ಕೂಡಿಟ್ಟು, ಶ್ರೀಗುರುಗಳ ಸವಾರಿಯು ತಮ್ಮ ತಮ್ಮ ಊರಿಗೆ ಚಿತ್ತೈಸಿದಾಗ ಒಟ್ಟಾಗಿ ಅವರಿಗೇ ಸಮರ್ಪಣೆ ಮಾಡುವುದು ರೂಢಿಯಲ್ಲಿ ಇತ್ತಂತೆ. ಅದು ಆ ಕಾಲದ ಅನಿವಾರ್ಯತೆ. ಇದೀಗ ಕಾಲ ಬದಲಾಗಿದೆ, ತಂತ್ರಜ್ಞಾನ-ವಿಜ್ಞಾನಗಳು ಅಭಿವೃದ್ಧಿ ಹೊಂದಿದೆ. ಸರಕಾರಗಳು-ನ್ಯಾಯವ್ಯವಸ್ಥೆ, ಕರ-ದಂಡಸಂಹಿತೆಗಳು ಹೊಸತಾಗಿವೆ. ಹಾಗೆಯೇ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ಶ್ರೀಮಠವೂ ಹೊಸತನಕ್ಕೆ ತೆರೆದುಕೊಂಡಿದೆ. ಲೆಕ್ಕಪತ್ರವು ತಂತ್ರಜ್ಞಾನಚಾಲಿತವಾಗಿದೆ, ಆಡಳಿತವು ಕಾಗದಮುಕ್ತ ಆಗುವತ್ತ ಸಾಗುತ್ತಿದೆ.


ಬದಲಾದ ಕಾಲದಲ್ಲಿ, ದೀಪಕಾಣಿಕೆಯ ಸಮರ್ಪಣೆ-ಸಂಗ್ರಹಗಳಿಗೆ ಹೊಸವಿಧಾನ ಮತ್ತು ಕಾಲಮಿತಿಗಳು ಈಗಿನ ಅಗತ್ಯಗಳಲ್ಲಿ ಒಂದು. ಶ್ರೀಮಠದ ನಿಷ್ಠ ಶಿಷ್ಯರಿಗೆ ಮಕರಸಂಕ್ರಮಣದ ಅನಂತರದ 16 ದಿನಗಳು ದೀಪಕಾಣಿಕೆಯ ಸಮರ್ಪಣಾ ಪರ್ವಕಾಲ.


ಅಂದರೆ, ಪ್ರತಿ ವರ್ಷ ಜನವರಿ 15ರಿಂದ ಜನವರಿ 31ರ ಒಳಗಾಗಿ, ಪ್ರತೀ ಗುರಿಕ್ಕಾರರ ಸುಪರ್ದಿಯ ಎಲ್ಲ ಮನೆಗಳು ಒಟ್ಟಾಗಿ, ಗುರುವಂದನೆ ನಡೆಸಿ, ಶ್ರೀಗುರುಗಳ ಚಿತ್ರಪಟದಲ್ಲಿ ಅವರ ದಿವ್ಯಸಾನ್ನಿಧ್ಯವನ್ನು ಕಲ್ಪಿಸಿ, ದೀಪಕಾಣಿಕೆಯ ಮೊತ್ತವನ್ನು ಸಮರ್ಪಿಸುವುದು ಈಗಿನ ಕ್ರಮ. ಶ್ರೀಗಳ ನೇರ ಪ್ರತಿನಿಧಿಗಳೇ ಆದ ಗುರಿಕ್ಕಾರರು, ಈ ಕ್ರಮದಲ್ಲಿ ಸಂಗ್ರಹ ಆದ ಮೊತ್ತವನ್ನು ಶ್ರೀಕೋಶಕ್ಕೆ ತಲುಪಿಸುತ್ತಾರೆ.


ಈ ಪ್ರಕಾರವಾಗಿ, ಒಂದು ವೇಳೆ, ಮನೆಯಲ್ಲಿ ದೀಪ ಬೆಳಗದಿದ್ದರೂ ಮನೆಯ ದೀಪವು ಆರದಂತೆ, ಕೃಪೆಯಿಟ್ಟು ಉರಿಯುವ ದೀಪಕ್ಕೆ ಕಿಂಚಿತ್ತು ಕಾಣಿಕೆ ತಾನೂ ಕೊಟ್ಟ ಧನ್ಯತಾಭಾವ ಎಲ್ಲ ಶಿಷ್ಯರದ್ದೂ ಆಗುತ್ತದೆ.


ಹಾಗಾಗಿ, ದೀಪಕಾಣಿಕೆ ಕೊಡಬೇಕು. ಅದು ಸೌಭಾಗ್ಯ.

 

  • ನಂದಕಿಶೋರ ಬೀರಂತಡ್ಕ

 

 

Author Details


Srimukha

Leave a Reply

Your email address will not be published. Required fields are marked *