ಕಲಾವಿದ ದೃಷ್ಟಿಕೋನದಲ್ಲಿ ಭಿನ್ನ ವಿಭಿನ್ನವಾಗಿ ಚಿತ್ರಗಳು ರಚನೆಯಾಗುತ್ತವೆ. ಸಣ್ಣ ಸಣ್ಣ ವಸ್ತುವಿಗೂ ಆಕರ್ಷಕ ರಚನೆ ಕೊಡುವ ಶಕ್ತಿ ಇರುವುದು ಕಲಾವಿದನಿಗೆ ಮಾತ್ರ. ಹೀಗಿರುವಾಗ ಇಂದು ಚಿಗುರಿ ನಾಳೆ ಬಿದ್ದು ಹೋಗುವ ಎಲೆಯಲ್ಲಿ ಶ್ರೀಗುರುಗಳ ಚಿತ್ರ ರಚಿಸಿ ಮೆಚ್ಚುಗೆ ಪಡೆದುಕೊಂಡಿರುವುದು ಪುತ್ತೂರು ತಾಲೂಕಿನ ಕಬಕ ವಲಯದ ಕಿರಣ್ ಸಬ್ಬಣಕೋಡಿ.
ಸಮಯ ಮತ್ತು ತಾಳ್ಮೆ ಒಟ್ಟುಸೇರಿದಾಗ ಕಲಾವಿದ ಕೈಯ್ಯಲ್ಲಿ ಅದ್ಭುತವಾದ ಕೈಚಳಕ ನಡೆಯುತ್ತದೆ. ಇದಕ್ಕೆ ಸಾಕ್ಷಿ ಅಶ್ವತ್ಥ ಎಲೆಯಲ್ಲಿ ಸೂಕ್ಷ್ಮವಾಗಿ ರಚನೆ ಆಗಿರುವ ಶ್ರೀಗಳ ಚಿತ್ರ.
ಇದೊಂದು ಸೂಕ್ಷ್ಮದ ಕೆಲಸ. ಅಶ್ವತ್ಥ ಎಲೆಯಲ್ಲಿ ಶ್ರೀಗಳನ್ನ ಚಿತ್ರಿಸಬೇಕೆಂದು ನಿರ್ಧರಿಸಿದೆ. ಹೀಗಾಗಿ ಗಾತ್ರದಲ್ಲಿ ದೊಡ್ಡದಿದ್ದ ಅಶ್ವತ್ಥ ಎಲೆಯನ್ನು ಸಂಗ್ರಹಿಸಿ ರಚನೆ ಮಾಡಲು ಆರಂಭಿಸಿದೆ. ಚಿತ್ರ ಅಂದವಾಗಿ ಮೂಡಿ ಬರಲು ಮೊದಲಿನಿಂದಲೂ ಅಭ್ಯಾಸ ಮಾಡುತ್ತಿದ್ದೆ. ಹೀಗಾಗಿ ಸುಂದರವಾಗಿ ಮೂಡಿ ಬರಲು ಸಾಧ್ಯವಾಯಿತು. ರಚನೆ ಪೂರ್ಣಗೊಳ್ಳಲು ಒಂದು ತಾಸು ಸಮಯ ತೆಗೆದುಕೊಂಡೆ ಎಂದು ಹೇಳುತ್ತಾರೆ ಕಿರಣ್.
ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ವ್ಯಾಸಾಂಗ ಮಾಡುತ್ತಿರುವ ಇವರು ಕಬಕ ಸಮೀಪದ ಪದೆಂಜಾರು ನಿವಾಸಿ. ಇವರ ತಂದೆ ಪದೆಂಜಾರು ಘಟಕದ ಗುರಿಕ್ಕಾರರಾದ ಭೀಮಯ್ಯ ಎಸ್ ಹಾಗೂ ತಾಯಿ ವಾಣಿ. ಶಿಕ್ಷಣದ ಜತೆಗೆ ಚಿತ್ರಕಲೆ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತಿಯನ್ನ ಹೊಂದಿದ್ದಾರೆ.