ವನಜೀವನ ಯಜ್ಞ : ಎ. ಎಸ್. ಮಹಾಬಲಗಿರಿ. ಶುಂಠಿಮನೆ, ಅರಳಗೋಡು.

ಲೇಖನ

 

ಕೆಲವು ಶಕ್ತಿಗಳೇ ಹಾಗೆ. ವ್ಯಕ್ತಿಯಾಗಿ ಜನಿಸಿದರೂ ತರುಣ ದಿನಗಳಲ್ಲೇ ಶಕ್ತಿಯಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಅಂತಹ ಶಕ್ತಿಯೊಂದಕ್ಕೆ ಉನ್ನತವಾದ ಸ್ಥಾನ ಸಿಕ್ಕಿದ್ದಾದರೆ ಆ ಸ್ಥಾನಕ್ಕೇ ಒಂದು ಗೌರವವನ್ನು, ಔನ್ನತ್ಯವನ್ನು ತಂದುಕೊಂಡಲ್ಲಿ ಶಕ್ತಿ ಖಂಡಿತಾ ಸಫಲವಾಗುವುದಲ್ಲದೇ, ತನ್ನ ಸುತ್ತಲಿನ ಪರಿಸರವನ್ನು, ಅದು ಅಲಂಕರಿಸಿದ ಸ್ಥಾನದ ಅನುಯಾಯಿ-ಅಭಿಮಾನಿಗಳನ್ನೂ ಸಹ ಆದರ್ಶದ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ಅಲ್ಲದೇ ಸಮಗ್ರ ಸಮಾಜವನ್ನೇ ತಾರತಮ್ಯ, ಜಾತಿ ಭೇದವಿಲ್ಲದೇ ವಿಷಯವಾರು ಸಂಘಟಿಸಿ ಪ್ರಪಂಚ ಪಾವನವಾಗಿಸುವತ್ತ ವೇಗವಾಗಿ ಮುನ್ನಡೆಯುತ್ತ ಮುನ್ನಡೆಸುತ್ತಾ ಸಾಗುತ್ತದೆ.

 

ಅಂತಹ ಶಕ್ತಿಯೊಂದು ಮೂರ್ತೀಭವಿಸಿ ಶ್ರೀರಾಘವೇಶ್ವರಭಾರತೀ ಹೆಸರಿನಿಂದ ಶ್ರೀರಾಮಚಂದ್ರಾಪುರ ಸಂಸ್ಥಾನ ಪೀಠಾಲಂಕರಣಗೊಂಡಾಗಲೇ ಸಂಘಟನೆಗೆ ನಾಂದಿಯಾಗಿತ್ತು. ವಿಶೇಷವೆಂದರೆ ಧಾರ್ಮಿಕ, ಆಧ್ಯಾತ್ಮಿಕ ಅನುಷ್ಠಾನಾದಿಗಳಿಗೆ ಕಿಂಚಿತ್ತೂ ಭಂಗವಾಗದಂತೆ ಸಾಮಾಜಿಕ ಕಳಕಳಿಯಿಂದ ಆರಂಭಿಸಿದ ಅದೆಷ್ಟೋ ಕಾರ್ಯಗಳು ದೇಶವ್ಯಾಪಿ ಸಂಚಲನ ಮೂಡಿಸಿ ಸಾಮಾಜಿಕ, ಧಾರ್ಮಿಕ ಹಾಗೂ ಪಾರಿಸರಿಕ ಜಾಗೃತಿ ಮೂಡಿಸಿದ್ದು ಈಗ ನಿಸ್ಸಂಶಯ.

 

ಹೀಗೆ ಕೈಗೊಂಡ ಕಾರ್ಯಗಳಲ್ಲಿ ಪರಿಸರ ಸಂರಕ್ಷಣೆ ದೃಷ್ಟಿಯಿಂದ ‘ವನಜೀವನ ಯಜ್ಞ’ ಎಂಬ ವಿನೂತನ ಕಾರ್ಯ ಶ್ರೀಗುರುಗಳ ಕನಸಿನ ಕೂಸಾಗಿ ಯೋಜಿಸಲ್ಪಟ್ಟಾಗ ಮರಗುಡಿ ಭಾಗದಲ್ಲಿ ನಾನು ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೆ. ಯೋಜನೆಯಿಂದ ನಮ್ಮ ಭಾಗದಲ್ಲಿ ಮೊದಲ ಬಾರಿಗೆ ಪರಿಸರ ಸಂಬಂಧಿ ಜಾಗರಣ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟು, ನೀರಿಂಗಿಸಿ ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮ ಯಶಸ್ವಿಯಾಗಿ, ಮೇ ತಿಂಗಳ ಕಡೆಯ ದಿನಗಳಲ್ಲಿ ಜಲಕ್ಷಾಮ ಅನುಭವಿಸುವ ಕೆಲ ಮನೆಗಳ ಭಾವಿಯಲ್ಲೂ ನೀರು ಸದಾ ಇರುವಂತಾದದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.

 

ಅಡಿಕೆ ತೋಟಗಳಿಗೆ ಹಸಿ ಸೊಪ್ಪು ಕಡಿದು ಹಾಕುತ್ತಿದ್ದರಿಂದ ಅರಣ್ಯನಾಶವಾಗುತ್ತಿತ್ತು. ವನಜೀವನ ಯಜ್ಞ ಯೋಜನೆಯ ದ್ವಾರಾ ಜಾಗರಣ ಮೂಡಿಸಿದ್ದರಿಂದ ಈಗಿನ ದಿನಗಳಲ್ಲಿ ಯಾವ ಭಾಗಾಯ್ತುದಾರನೂ ಸೊಪ್ಪು ಕಡಿಯದೇ ಉದುರಿದ ದರಕು ಸಂಗ್ರಹಿಸಿ, ತೋಟಕ್ಕೆ ಹಾಕುವುದರಿಂದ ಸೊಪ್ಪಿನ ಬೆಟ್ಟಗಳು ನಿತ್ಯಹರಿದ್ವರ್ಣಕಾಡುಗಳಾಗಿ ಕಂಗೊಳಿಸುತ್ತಿವೆ. ಈ ಅರಣ್ಯ ರಕ್ಷಣೆಯನ್ನು ಅರಣ್ಯ ಇಲಾಖೆಯೇ ಮನಗಂಡಿದೆ. ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ಶಿಬಿರಗಳನ್ನು ಏರ್ಪಡಿಸಿದ್ದರಿಂದ ಅದೆಷ್ಟೋ ಅಪರೂಪದ (ಬಿಳಿ ಮುರುಗಲು, ಕಿರುಗೊಡಸ, ನೀರಟ್ಟೆ ಇತ್ಯಾದಿ) ಸಸ್ಯಗಳ ಸಂರಕ್ಷಣೆ ಸಮಾಜದ ಹಾಗೂ ರೈತ ಸಮುದಾಯದ ಸದಸ್ಯರಿಂದ ಆಗುತ್ತಿದೆಯೆಂದರೆ ಅದಕ್ಕೆ ವನಜೀವನ ಯಜ್ಞವೇ ಕಾರಣ.

 

ಶ್ರೀಸಂಸ್ಥಾನದವರ ವಿಶೇಷತೆಯೆಂದರೆ ಯಾವುದೇ ಯೋಜನೆ ಜಾರಿಗೊಳಿಸದರೆ ಅದರ ಆಗು-ಹೋಗುಗಳ ಬಗ್ಗೆ ಸ್ವತ: ಶ್ರೀಪೀಠವೇ ಪರಿವೀಕ್ಷಣೆ ನಡೆಸುವುದು ಮತ್ತು ಆಗಾಗ ಪ್ರಗತಿಯ ಹಂತಗಳ ಬಗ್ಗೆ ಮಾಹಿತಿ ಪಡೆಯುವುದು. ಹಿಂದುಳಿದ ಭಾಗಕ್ಕೆ ಹೆಚ್ಚಿನ ಒತ್ತುಕೊಟ್ಟು ಪ್ರಗತಿಯತ್ತ ಸಾಗಿಸುವುದಲ್ಲದೇ ಪ್ರೀತಿಯ ಪ್ರೋತ್ಸಾಹದ ನುಡಿಗಳಿಂದ ಪ್ರೇರೇಪಿಸುವುದು. ಅಲ್ಲದೇ ಶ್ರೀಮಠದ ಯೋಜನೆಗಳ ಆಚೆಯಲ್ಲಿ ಕೂಡ ಪಾರಿಸರಿಕ ಹಾನಿಗೆ ಕಾರಣವಾದ ಯಾವುದೇ ಕಾರ್ಯವಿರಲಿ, ಅದನ್ನು ವಿರೋಧಿಸಿ ಧ್ವನಿ ಎತ್ತಿದ್ದಾರೆ ಶ್ರೀಸಂಸ್ಥಾನದವರು. ಉದಾಹರಣೆಗೆ, ಅಂಬಾರಗುಡ್ಡದಂತಹ ಸಸ್ಯಸಂಜೀವಿನಿ ಪರ್ವತ ಪ್ರದೇಶದಲ್ಲಿ, ವ್ಯವಸ್ಥೆಯ ಅಡಿಯಲ್ಲಿಯೇ ಗಣಿಗಾರಿಕೆ ಸಿದ್ಧತೆ ನಡೆದಾಗ ಶ್ರೀಗಳ ಪರಿಸರಪ್ರಜ್ಞೆ ಸಕಾಲಿಕವಾಗಿ ಕೆಲಸಮಾಡಿತು. ಅಂಬಾರಗುಡ್ಡ ಗಣಿ ವಿರೋಧಿ ಪಡೆಗೆ ಸಂರಕ್ಷಕರಾಗಿ ನಿಂತು ‘ಜೀವತೆತ್ತೇವು! ಆದರೆ ಅಂಬಾರಗುಡ್ಡ ಬಿಡಲಾರೆವು’ ಎಂಬ ಘೋಷವಾಕ್ಯದೊಂದಿಗೆ ಶ್ರೀಗಳೇ ನೇರವಾಗಿ ಮುಂದೆ ನಿಂತು ಹೋರಾಟ ಪ್ರಾರಂಭಿಸಿದಾಗ ಪ್ರಾರಂಭದಲ್ಲಿಯೇ ಗಣಿಗಾರಿಕೆ ನಿಂತುಹೋದದ್ದು ಶ್ರೀಗಳ ಪಾರಿಸರಿಕ ತಾದಾತ್ಮ್ಯಕ್ಕೊಂದು ದಿವ್ಯ ನಿದರ್ಶನ.

 

ಪರಿಸರ ಉಳಿಸುವುದಷ್ಟೇ ಅಲ್ಲ. ಪ್ರತಿ ವರ್ಷ ನಿರ್ದಿಷ್ಟ ದಿನದಂದು ಶ್ರೀಮಠದ ಶಿಷ್ಯಕೋಟಿಯ ಎಲ್ಲ ಮನೆಗಳಲ್ಲಿ ಮನೆಗೆರಡು ಗಿಡ ನೆಡುವ ಸಂಕಲ್ಪ ಮಾಡಿಸಿ, ಸ್ವತ: ತಾವೂ ಸಹ ಶ್ರೀಹಸ್ತದಿಂದ ಪ್ರತಿ ವರ್ಷ ಗಿಡನೆಟ್ಟು ಪೋಷಿಸಿ, ಕೇವಲ ಪರಿಸರ ಪ್ರೇಮದ ಮಾತಲ್ಲದೆ ಕೃತಿಯಲ್ಲಿಯೂ ಅದನ್ನು ಮಾಡುತ್ತಿರುವ ಕಾಯಕಯೋಗಿ ಅವರು. ಕೃಷಿಗೆ ಪೂರಕವಾಗಿ ಹಸಿರು ರಕ್ಷಣೆ, ಸಾವಯವ ಕೃಷಿ, ದೇಸೀ ತಳಿಗಳ ಅಭಿವೃದ್ಧಿ ಹೀಗೆ ನಮ್ಮ ಪರಿಸರ, ನಮ್ಮ ಸಂಸ್ಕೃತಿ ಉಳಿಸುವಲ್ಲಿ ಕೆಲಸ ಮಾಡುತ್ತಿದೆ, ನಮ್ಮ ಗುರುಗಳ ಹಲವು ವಿಶಿಷ್ಟ ಯೋಜನೆಗಳಲ್ಲೊಂದಾದ ‘ವನಜೀವನ ಯಜ್ಞ’.

 

ಹೀಗೆ ಹತ್ತು ಹಲವು ಸಾಮಾಜಿಕ ಅಭಿವೃದ್ಧಿ, ಪರಿಸರ ನೈರ್ಮಲ್ಯ, ಪರಿಸರ ರಕ್ಷಣೆಯಂತಹ ಕಾರ್ಯಗಳನ್ನು ಮಾಡುತ್ತಿರುವಂತಹ ಈ ದಿವ್ಯಶಕ್ತಿಗೆ ಇವರ ವೇಗ ತಾಳಲಾರದ ಕೆಲವು ವ್ಯಕ್ತಿಗಳು ವ್ಯಕ್ತಿಗತ ವಿರೋಧ, ಮಿಥ್ಯಾರೋಪ ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ಕೂಡ ಯಾವುದು ಹೆಚ್ಚು ವೇಗವಾಗಿ ಚಲಿಸುತ್ತದೆಯೋ ಅದಕ್ಕೆ ತೀವ್ರ ಘರ್ಷಣೆ ಹಾಗೂ ವಿರೋಧ ಅನುಭವಕ್ಕೆ ಬರುತ್ತದೆ ಎಂಬ ಸೂತ್ರವಿದೆ. ಆದರೆ ಇಲ್ಲಿ ವಿರೋಧ ತಾತ್ತ್ವಿಕವಾಗಿರದೇ, ಕೇವಲ ಸ್ವಾರ್ಥ ಹಾಗೂ ಕ್ರೌರ್ಯದಿಂದ ಕೂಡಿದೆ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿದೆ. ಈ ವಿರೋಧದಿಂದ ಸಮಾಜಕ್ಕೆ, ದೇಶಕ್ಕೆ ದೊಡ್ಡ ಹಾನಿಯೆಂಬುದನ್ನು ಅರಿತು ಸಾಮಾಜಿಕ ಪರಿಸರವನ್ನು ಕೆಡಿಸದಂತೆ ವಿರೋಧಿಗಳಿಗೆ ಸದ್ಬುದ್ಧಿಯನ್ನು ನೀಡುವಂತೆ ಶ್ರೀಚರಣಗಳಲ್ಲಿಯೇ ಬೇಡಿಕೊಳ್ಳುತ್ತೇನೆ.

 

Author Details


Srimukha

Leave a Reply

Your email address will not be published. Required fields are marked *